ಸರಕಾರಿ ಶಾಲೆ ಮುಚ್ಚಲು ಅಧಿಕಾರಿಗಳಿಂದಲೇ ಹನ್ನಾರ ನಡೆಯುತ್ತಿದೆ. ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದ ಕಿರಿಯ ಸರಕಾರಿ ಶಾಲೆಯನ್ನು ಉದ್ದೇಶಪೂರ್ವಕವಾಗಿ ಅಧಿಕಾರಿಗಳು ಮುಚ್ಚುವ ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ಆಟವಾಡುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ಕನಕಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಟಿ.ಬೇಕುಪ್ಪೆ ಗ್ರಾಮಸ್ಥರೊಡನೆ ಕಚೇರಿಗೆ ಮುತ್ತಿಗೆ ಹಾಕಿದ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಟಿ.ಬೇಕುಪ್ಪೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಪುಣ್ಯಶ್ರೀ, ಎರಡನೆ ತರಗತಿಯಲ್ಲಿ ಸೌಮ್ಯ, ಒಂದನೇ ತರಗತಿ ಯಲ್ಲಿ ಪ್ರಶಾಂತ್ ಎಂಬ ವಿದ್ಯಾರ್ಥಿ ಓದುತ್ತಿದ್ದಾರೆ, ಆದರೆ ಕ್ಲಸ್ಟರ್‌ನ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಪಟ್ಟಭದ್ರ ಹಿತಾಸಕ್ತಿಗಳೊಡನೆ ಶಾಮೀಲಾಗಿ ಶಾಲೆ ಮುಚ್ಚುವ ದುರುದ್ದೇಶದಿಂದ ಶೂನ್ಯ ದಾಖಲಾತಿ ಹೊಂದಿದ ಕಾರಣ ಶಾಲೆಯನ್ನು ಮುಚ್ಚಬೇಕೆಂದು ಇಲಾಖೆಗೆ ವರದಿ ನೀಡಿದ್ದು, ಇತರ ಶಾಲೆಗಳು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರೆ, ಇಲ್ಲಿನ ಶಿಕ್ಷಕಿ ನಿರ್ಮಲಾ, ಪರೀಕ್ಷಾ ಕಾಲದಲ್ಲಿ ಡಿಸೆಂಬರ್ 6 ರಿಂದ ಶಾಲೆ ಮುಚ್ಚಿ ಪೋಷಕರಿಗೆ ಬಲವಂತವಾಗಿ ವರ್ಗಾವಣೆ ಪ್ರಮಾಣಪತ್ರ ಪಡೆಯಲು ಒತ್ತಡ ಹೇರುತ್ತಿದ್ದಾರೆ.
ಸರ್ಕಾರದ ಶಾಲೆಗಳ ಮುಚ್ಚುವ ದುರುದ್ದೇಶದಿಂದ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಸಮುದಾಯ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ. ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ, ಹೆಚ್ಚುವರಿ ಶಿಕ್ಷಕರನ್ನು ನೇಮಕಾತಿ ಮಾಡುವ ಯಾವುದೇ ಕಾರ್ಯ ಯೋಜನೆಗಳು ನಡೆಯುತ್ತಿಲ್ಲ. ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಿಸುವ ಅಭಿಯಾನಗಳನ್ನು ಇಲಾಖೆ ಮಾಡುವ ಮೂಲಕ ಶಾಲಾ ದಾಖಲಾತಿ ಗಳನ್ನು ಹೆಚ್ಚಿಸುವ ಯಾವ ಇಚ್ಚಾಶಕ್ತಿಯು ಇಲಾಖೆಯಲ್ಲಿ ಕಾಣುತ್ತಿಲ್ಲ. ಮಾನ್ಯ ಉಪ ಮುಖ್ಯಮಂತ್ರಿಗಳ ತವರಲ್ಲೇ ಈ ರೀತಿಯ ಘಟನೆ ಅಕ್ಷಮ್ಯ ಎಂದರು.
ಇದನ್ನು ನೋಡಿದ್ದೀರಾ? ಗದಗ | ಮನೆ ಹಂಚಿಕೆಯಲ್ಲಿ ತಾರತಮ್ಯ ಆರೋಪ
ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಇಲಾಖೆ ಆಟವಾಡುತ್ತಾ ಮಕ್ಕಳ ಶಿಕ್ಷಣದ ಹಕ್ಕಿನ ಧಮನ ಮಾಡುತ್ತಿದೆ. ಬಡವರು, ರೈತರು ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಾಗಿ ಶಾಲೆಯಲ್ಲಿ ಕಲಿಸುತ್ತಾ ಇಲಾಖೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ಮಾತನಾಡಿ, ಸರ್ಕಾರಿ ಶಾಲೆಗಳು ಗ್ರಾಮೀಣ ಜನರ ಜೀವಾಳ, ಅಸ್ತಿತ್ವವಾಗಿವೆ. ತಮ್ಮ ಊರಿಗೆ ಶಾಲೆಯ ಕನಸನ್ನು ನನಸಾಗಿಸಲು ಅದೆಷ್ಟೋ ಜೀವಗಳು ಶ್ರಮಿಸಿವೆ. ಏಕಾಏಕಿ ಮಕ್ಕಳ ಸಂಖ್ಯೆ, ಶಾಲೆ ವೀಲಿನದ ಹೆಸರಲ್ಲಿ ಶಾಲೆ ಮುಚ್ಚಿದರೆ ಅವರ ಹೋರಾಟಕ್ಕೆ ಮಸಿ ಬಳಿದಂತೆ. ಪ್ರತಿ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಗ್ರಾಮಸ್ಥರು ಕೈಜೋಡಿಸಿ ಸರ್ಕಾರಿ ಶಾಲೆ ಉಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಕನಕಪುರ | ಜಗದ ಅಂತ್ಯದವರೆಗೂ ಕುವೆಂಪು ಚಿರಸ್ಥಾಯಿಯಾಗಿ ಇರುತ್ತಾರೆ : ಚಿಕ್ಕಮರೀಗೌಡ
ದೂರು ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ನಾಳೆಯಿಂದಲೇ ಶಿಕ್ಷಕರನ್ನು ನಿಯೋಜಿಸಿ ಶಾಲೆ ತೆರೆದು, ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದರು.
ಟಿ. ಬೇಕುಪ್ಪೆ ಗ್ರಾಮದ ದಿವ್ಯ, ಸುಮಿತ್ರ, ಲಕ್ಷ್ಮೀ, ಮರಿದೇವರು, ರತ್ನಮ್ಮ, ರಾಜಣ್ಣ, ಉಮೇಶ,ರೈತ ಸಂಘದ ಪುಟ್ಟಮಾದೇಗೌಡ, ವೆಂಕಟೇಶ್, ರವಿ, ಮುಂತಾದವರು ಹಾಜರಿದ್ದರು.