ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ಟ್ಯೂಷನ್ ಶಿಕ್ಷಕನಿಗೆ 111 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಕೇರಳದ ತಿರುವನಂತಪುರಂನ ನ್ಯಾಯಾಲಯ ತೀರ್ಪು ನೀಡಿದೆ.
ಐದು ವರ್ಷಗಳ ಹಿಂದೆ, 2019ರ ಜುಲೈ 2ರಂದು ಅಪ್ರಾಪ್ತ ಬಾಲಕಿ, ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಟ್ಯೂಷನ್ ಶಿಕ್ಷಕ ಮನೋಜ್ ಎಂಬಾತ ಅತ್ಯಾಚಾರ ಎಸಗಿದ್ದ. ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಅಪರಾಧಿ ಶಿಕ್ಷಕನಿಗೆ 111 ವರ್ಷಗಳ ಜೈಲು ಶಿಕ್ಷೆ ಮತ್ತು 1.05 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿ ಮಾಡದಿದ್ದರೆ, ಅಪರಾಧಿಗೆ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿಯೇ ಹೇಳಿದೆ.
ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮನೋಜ್ ಮನೆಯಲ್ಲಿ ಟ್ಯೂಷನ್‌ಗೆ ತೆರಳುತ್ತಿದ್ದರು. ವಿಶೇಷ ತರಗತಿಗೆಂದು ವಿದ್ಯಾರ್ಥಿಯನ್ನು ಮಾತ್ರವೇ ಕರೆಸಿಕೊಂಡಿದ್ದ ಮನೋಜ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಕೃತ್ಯದ ವಿಡಿಯೋ ಮತ್ತು ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಅತ್ಯಾಚಾರಕ್ಕೊಳಗಾದ ಬಾಲಕಿ ಟ್ಯೂಷನ್‌ಗೆ ಹೋಗುವುದನ್ನು ನಿಲ್ಲಿಸಿದ್ದರು. ಆಗ, ಕೃತ್ಯದ ಫೋಟೋಗಳನ್ನು ಮನೋಜ್ ಹರಿಬಿಟ್ಟಿದ್ದ ಎಂದು ಆರೋಪಿಸಲಾಗಿತ್ತು.
ಕೃತ್ಯದ ಫೋಟೋಗಳು ಹೊರಬಂದ ಬಳಿಕ, ಬಾಲಕಿ ಮೇಲಾಗಿರುವ ಕೃತ್ಯದ ಬಗ್ಗೆ ತಿಳಿದ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ, ಆರೋಪಗಳು ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ.
ಬಾಲಕಿಯ ಮೇಲೆ ಮನೋಜ್ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ತಿಳಿದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.