ದಲಿತ, ಅಹಿಂದ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ವೇಳೆ ಹೂ ಮಾರಾಟಕ್ಕೆಂದು ಬಂದಿದ್ದ ಹೂ ವ್ಯಾಪಾರಿ ಉಮಾ ಸಿಂಗಾಡೆಯವರಿಗೆ ಆಗಿದ್ದ ಹಾನಿಯನ್ನು ಭರಿಸುವಲ್ಲಿ ದಲಿತ ವಿದ್ಯಾರ್ಥಿ ಪರಿಷತ್(ಡಿವಿಪಿ) ಯಶಸ್ವಿಯಾಗಿದೆ.
ವಿಜಯಪುರ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ಬಳಿ ಮಹಿಳೆಯೊಬ್ಬರು ಮಾರಾಟಕ್ಕೆ ತಂದಿದ್ದ ಹೂವನ್ನು ರಸ್ತೆ ಮೇಲೆ ಚೆಲ್ಲುವ ಮೂಲಕ ಪ್ರತಿಭಟನಾಕಾರರು ಅಟ್ಟಹಾಸ ಮೆರೆದಿದ್ದರು. ಹೂ ರಸ್ತೆ ಪಾಲಾಗಿದ್ದರಿಂದ ಆ ಮಹಿಳೆ ಕಣ್ಣೀರಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಮಹಿಳೆಗೆ ನಷ್ಟವಾದ ಹಿನ್ನೆಲೆಯಲ್ಲಿ ಸ್ಪಂದಿಸಿದ ದಲಿತ ಮುಖಂಡರು ಮಂಗಳವಾರ ಸಂತ್ರಸ್ತೆಯ ಬಳಿ ಹೋಗಿ ಆಗಿರುವ ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಉಂಟಾಗಿದ್ದ ನಷ್ಟವನ್ನು ಭರಿಸಿದ್ದಾರೆ. ಜತೆಗೆ ಬೀದಿಬದಿ ಹೂ ಮಾರುತ್ತಿದ್ದ ಸಹೋದರಿಯ ಹೂಗಳನ್ನು ಬೀದಿಗೆ ಚೆಲ್ಲಿ ಅವರ ಆ ದಿನದ ಬಂಡವಾಳ ನಾಶಮಾಡಿದ್ದ ಮಹಾದೇವ ಕಾಂಬಳೆ ಅವರನ್ನೂ ಕೂಡಾ ಜತೆಯಲ್ಲಿ ಕರೆದುಕೊಂಡು ಬಂದು ಕ್ಷಮೆ ಕೇಳುವಂತೆ ದಲಿತ ವಿದ್ಯಾರ್ಥಿ ಪರಿಷತ್ ಕ್ರಮ ಕೈಗೊಂಡಿದೆ.
ಮಹಿಳೆಗೆ ನಗದು ಸಹಾಯ ಮಾಡಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ, “ಮಹಿಳೆಗೆ
ಆದ ನಷ್ಟವನ್ನು ನಾವೇ ಭರಿಸಿದ್ದೇವೆ. ಅವರ ದಿನದ ವ್ಯಾಪಾರಕ್ಕೆ ಧಕ್ಕೆಯಾಗದಂತೆ ನೊಡಿಕೊಳ್ಳುವ ಜವಾಬ್ದಾರಿ ನಮ್ಮದು. ನೀವು ನಗುಮೊಗದೊಂದಿಗೆ ವ್ಯಾಪಾರ ಮಾಡಿರಿ” ಎಂದು ಧೈರ್ಯ ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ಶಾಲೆ ಶಿಕ್ಷಕಿ ನಿವೃತ್ತಿ; ಅಂಬೇಡ್ಕರ್ ಫೋಟೋ ನೀಡಿ, ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ಕ್ಷಮೆ ಕೇಳಿದ ಕಾಂಬಳೆ : “ಬಂದ್ ವೇಳೆ ಆವೇಶದಲ್ಲಿದ್ದ ನಾನು ಹಾಗೆ ಮಾಡಬಾರದಿತ್ತು. ಮಹಿಳೆಯ ಹೂ ಚೆಲ್ಲಿದ್ದು ನಂತರ ನನಗೆ ತುಂಬಾ ನೋವಾಯಿತು. ಹಾಗಾಗಿ ನಾನು ಸಹೋದರಿಯ ಕ್ಷಮೆ ಕೇಳುತ್ತೇನೆ” ಎಂದು ಹೂ ಚೆಲ್ಲಿದ್ದ ಮಹಾದೇವ ಕಾಂಬಳೆ ಕ್ಷಮೆ ಯಾಚಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ನಾಗವರ್ಬಣ್ಣ, ಜಿಲ್ಲಾ ಸಂಚಾಲಕ ಚನ್ನು ಕಟ್ಟಿಮನಿ, ಮಾನವ ಬಂದತ್ವ ವೇದಿಕೆ ಜಿಲ್ಲಾ ಮುಖಂಡ ಪ್ರಭುಗೌಡ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಕ್ಷಯಕುಮಾರ ಅಜಮನಿ, ಯಮನಪ್ಪ ಮಾದರ, ಜಕ್ಕಪ್ಪ ಯಡವೆ ಸೇರಿದಂತೆ ಇತರರು ಇದ್ದರು.