ಉತ್ತರ ಪ್ರದೇಶದ ಬುದಾನ್‌ನಲ್ಲಿ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಹೋಟೆಲ್‌ನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಅರ್ಷದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಗ್ರಾ ಮೂಲದ ಕುಟುಂಬವು ಡಿಸೆಂಬರ್ 30 ರಿಂದ ಲಖನೌದ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಬಂಧಿತ ಅರ್ಷದ್ ತನ್ನ ತಾಯಿ ಅಸ್ಮಾ, ಸಹೋದರಿಯರಾದ ಅಲಿಯಾ(9), ಅಕ್ಸಾ(16), ಅಲೀಶಾ(19) ಹಾಗೂ ರಹಮೀನ್(18) ಎಂಬುವವರನ್ನು ಉಸಿರುಗಟ್ಟಿಸಿ ಹಾಗೂ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ನಾಲ್ವರನ್ನು ಕೊಲೆ ಮಾಡಲು ತಂದೆಯ ಸಹಾಯವನ್ನು ಪಡೆದುಕೊಂಡಿದ್ದ. ಆದರೆ ತನ್ನ ಕುಟುಂಬದವರನ್ನು ಕೊಲೆ ಮಾಡಲು ನೆರೆಹೊರೆಯವರ ಕಿರುಕುಳ ಸೇರಿದಂತೆ ನಾನಾ ಕಾರಣಗಳು ಮುನ್ನಲೆಗೆ ಬರುತ್ತಿವೆ. ಅರ್ಷದ್ ಮಾತನಾಡಿರುವ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದ್ದು, ಇದರಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿವೆ.
“ನನ್ನ ಸಹೋದರಿಯರು ಮಾರಾಟವಾಗುವುದಕ್ಕೆ ಇಷ್ಟವಿರಲಿಲ್ಲ. ನೆರೆಹೊರೆಯವರು ಹಾಗೂ ಲ್ಯಾಂಡ್ ಮಾಫಿಯಾ ಬುದಾನ್‌ನಲ್ಲಿರುವ ನನ್ನ ಮನೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಲ್ಲದೆ ನನ್ನ ಸಹೋದರಿಯರನ್ನು ಕಳ್ಳ ಸಾಗಣೆ ಮಾಡಲು ಸಂಚು ಹೂಡಿದ್ದರು. ನೆರೆಹೊರೆಯವರ ಕಿರುಕುಳದಿಂದಾಗಿ ನನ್ನ ತಾಯಿ ಹಾಗೂ ಸಹೋದರಿಯರನ್ನು ಕೊಲ್ಲುವ ನಿರ್ಧಾರಕ್ಕೆ ಬರಬೇಕಾಯಿತು” ಎಂದು ತಿಳಿಸಿದ್ದಾನೆ.
“ಪೊಲೀಸರು ಈ ವಿಡಿಯೋವನ್ನು ನೋಡಿದ ನಂತರ ಈ ದುರಂತಕ್ಕೆ ಸ್ಥಳೀಯರು ಹೊಣೆಯೆಂಬುದನ್ನು ಅರಿತುಕೊಳ್ಳಲಿದ್ದಾರೆ. ಅವರು ನಮ್ಮನ್ನು ಹಿಂಸೆಗೊಳಪಡಿಸಿ ಮನೆಯನ್ನು ಕಿತ್ತುಕೊಂಡಿದ್ದರು. ನಾವು ಈ ಬಗ್ಗೆ ಧ್ವನಿ ಎತ್ತಿದರೂ ಯಾರೋಬ್ಬರೂ ಕೇಳಿಸಿಕೊಳ್ಳಲಿಲ್ಲ. ನಾವು 15 ದಿನಗಳಿಂದ ಬೀದಿಯಲ್ಲಿ ಮಲಗಿದ್ದೆವು. ಕಡು ಚಳಿಯಲ್ಲಿ ತಿರುಗಾಡಿದೆವು. ನಮಗೆ ಸಹೋದರಿಯರು ಚಳಿಯಲ್ಲಿ ತಿರುಗಾಡಲು ಇಷ್ಟವಿರಲಿಲ್ಲ. ನಮ್ಮ ಮನೆಯನ್ನು ಕಿತ್ತುಕೊಂಡಿದ್ದರು. ಮನೆಯ ದಾಖಲೆ ಅವರ ಬಳಿಯಿತ್ತು” ಎಂದು ಅರ್ಷದ್ ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ…
“ನಮ್ಮ ಕುಟುಂಬ ಧರ್ಮಾಂತರಗೊಳ್ಳಲು ಹಾಗೂ ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಲು ಬಯಸಿದ್ದೆವು. ನಮ್ಮ ಸಾವಿಗೆ ರಾನು, ಅಫ್ತಾಬ್, ಅಲೀಮ್ ಖಾನ್, ಸಲೀಮ್, ಆರೀಫ್, ಅಹಮದ್ ಹಾಗೂ ಅಜರ್ ಕಾರಣಕರ್ತರು. ಅವರದು ಲ್ಯಾಂಡ್ ಮಾಫಿಯಾ, ನಮ್ಮ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಬಯಸಿದ್ದರು. ಸುಳ್ಳು ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸಿ ನಮ್ಮ ಸಹೋದರಿಯರನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು. ನನಗೆ ಇದು ಇಷ್ಟವಿಲ್ಲದ ಕಾರಣ ನಾನು ಬಲವಂತವಾಗಿ ನನ್ನ ತಾಯಿ ಹಾಗೂ ಸಹೋದರಿಯರನ್ನು ಉಸಿರುಗಟ್ಟಿ ಹಾಗೂ ಕತ್ತು ಸೀಳಿ ಕೊಂದೆ” ಎಂದು ತಿಳಿಸಿದ್ದಾನೆ.
“ನನ್ನ ತಂದೆಯೊಂದಿಗೆ ಸೇರಿ ಅವರನ್ನು ಕೊಂದಿದ್ದೇನೆ. ನನಗೆ ಬೇರೆ ಆಯ್ಕೆಗಳಿರಲಿಲ್ಲ. ನಾವು ತೊಂದರೆಗೊಳಗಾದ ಬಗ್ಗೆ ಹಲವರ ಬಳಿ ಸಹಾಯ ಬೇಡಿದೆ. ಆದರೆ ಯಾರೊಬ್ಬರು ನಮ್ಮ ನೋವನ್ನು ಆಲಿಸಲಿಲ್ಲ. ನಮ್ಮ ಪರಿಸ್ಥಿತಿಗೆ ಕಾರಣರಾದವರ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು” ವಿಡಿಯೋದಲ್ಲಿ ಅರ್ಷದ್ ಆಗ್ರಹಿಸಿದ್ದಾನೆ.
