‘ಭಾರತದಲ್ಲಿ ಹಿಂದುತ್ವವಾದಿ, ಕೋಮುವಾದಿ ಭಯೋತ್ಪಾದಕತೆ ಹೆಚ್ಚುತ್ತಿದೆ. ಸಂಘಪರಿವಾರವು ಹಿಂದುತ್ವದ ಹೆಸರಿಲ್ಲಿ ಕೋಮುವಾದಿ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ. ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರ್, ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಸೇರಿದಂತೆ ಹಲವಾರು ಚಿಂತಕರ ಹತ್ಯೆಯ ಹಿಂದೆ ಸಂಘಪರಿವಾರದ ಸಂಚು ಇದೆ’ ಎಂಬ ಆರೋಪಗಳಿವೆ. ಇಂತಹ ಆರೋಪಗಳಿಗೆ ಪುಷ್ಠಿಕೊಡುವಂತಹ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 186 ಹಿಂದುತ್ವವಾದಿ ಕಾರ್ಯಕರ್ತರಿಗೆ ಶ್ರೀರಾಮ ಸೇನೆಯು ಬಂದೂಕು ತರಬೇತಿ ನೀಡಿದೆ ಎಂದು ತಿಳಿದುಬಂದಿದೆ.
ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಆರು ದಿನಗಳ ಕಾಲ ಕಾರ್ಯಕರ್ತರಿಗೆ ಶೂಟಿಂಗ್ ತರಬೇಕಿ ನೀಡಲಾಗಿದೆ. ಬಂದೂಕುಗಳನ್ನು ಹೇಗೆ ಬಳಸಬೇಕು. ಟಾರ್ಗೆಟ್ ಸೆಟ್ ಮಾಡಿಕೊಂಡು ಗುರಿ ಇಟ್ಟು ಹೊಡೆಯುವ ಕುರಿತು ತರಬೇತಿ ನೀಡಲಾಗಿದೆ.
ಸದ್ಯ, ದೇಶಾದ್ಯಂತ ಕೋಮು ಹಿಂಸಾಚಾರಗಳು ಹೆಚ್ಚುತ್ತಿವೆ. ಪ್ರಧಾನಿ ಮೋದಿಯೂ ಸೇರಿದಂತೆ ಹಲವಾರು ಬಲಪಂಥೀಯರ ರಾಷ್ಟ್ರ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ, ದ್ವೇಷ ಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ. ಹಲ್ಲೆ, ದಾಳಿಗಳ ಬಗ್ಗೆಯೂ ಕೆಲವು ಹಿಂದುತ್ವವಾದಿ ಮುಖಂಡರು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ಬಳಿಕ ಕೆಲವು ಹಿಂದುತ್ವವಾದಿಗಳು ತಮ್ಮ ಮುಂದಿನ ಗುರಿ ಕಾಶಿ, ಮಥುರಾ, ಸಂಭಲ್, ಶ್ರೀರಂಗಪಟ್ಟಣದಲ್ಲಿರುವ ಮಸೀದಿಗಳು ಎಂದು ಹೇಳಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಶ್ರೀರಾಮ ಸೇನೆಯು ತನ್ನ ಕಾರ್ಯಕರ್ತರಿಗೆ ಬಂದೂಕು ಬಳಕೆಯ ಬಗ್ಗೆ ತರಬೇತಿ ನೀಡಿರುವುದು ಕೋಮು ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಿರುವುದರ ಸಂಚಿನ ಭಾಗವೆಂದು ಆರೋಪಿಸಲಾಗಿದೆ.
ಆದಾಗ್ಯೂ, ತರಬೇತಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಗಂಗಾಧರ ಕುಲಕರ್ಣಿ, “ಏರ್‌ಗನ್ ಮೂಲಕ ಸ್ವ-ರಕ್ಷಣೆ ತರಬೇತಿ ನೀಡಿದ್ದೇವೆ. ಪ್ರತಿವರ್ಷ ಆಯ್ದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ಸವಾಲು ಎದುರಿಸಲು ಯುವಕರನ್ನು ಸಜ್ಜು ಮಾಡಿದ್ದೇವೆ. ಸ್ವ-ಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಲಾಗಿದೆ” ಎಂದು ಹೇಳಿಕೊಂಡಿದ್ದಾರೆ.