ಅಕ್ರಮವಾಗಿ ಮದ್ಯ(ಮಿಲಿಟರಿ, ಗೋವಾ ನಿರ್ಮಿತ ಮತ್ತು ಸುಂಕ ಮುಕ್ತ) ಮಾರಾಟ ಮತ್ತು ಸೇವನೆಯನ್ನು ನಿಯಂತ್ರಿಸಿದ ದಕ್ಷಿಣ ಕನ್ನಡ ಅಬಕಾರಿ ಇಲಾಖೆ ಈ ಡಿಸೆಂಬರ್‌ನಲ್ಲಿ ಉತ್ತಮ ಮಾರಾಟದ ನಿರೀಕ್ಷೆಯಲ್ಲಿತ್ತು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು, ಮದ್ಯ ಮತ್ತು ಬಿಯರ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.
ಡಿಸೆಂಬರ್ 31ರವರೆಗೆ, ಕೇವಲ 2,36,036 ಬಾಕ್ಸ್ ಭಾರತೀಯ ನಿರ್ಮಿತ ವಿದೇಶಿ ಮದ್ಯ ಮಾರಾಟವಾಗಿದೆ ಎಂಬುದು ಡೇಟಾದಿಂದ ತಿಳಿದುಬಂದಿದೆ. ಆದರೆ ಡಿಸೆಂಬರ್ 2024ರಲ್ಲಿ 2.76 ಲಕ್ಷ ಬಾಕ್ಸ್ ಮಾರಾಟದ ನಿರೀಕ್ಷೆಯಿತ್ತು. ಇದು ಕಳೆದ ಡಿಸೆಂಬರ್‌ನಲ್ಲಿ 2,41,034 ಬಾಕ್ಸ್‌ಗಳಿಗಿಂತ ಕಡಿಮೆಯಾಗಿದೆ. ಇದರ ನಡುವೆ ಡಿಸೆಂಬರ್ 2022ರಿಂದ 2023ರ ಅಂತ್ಯದವರೆಗೆ ಸುಮಾರು ಶೇ.12.67ರಷ್ಟು ಬೆಳವಣಿಗೆಯನ್ನು ಕಂಡ ಬಿಯರ್ 2,23,124 ಬಾಕ್ಸ್‌ಗಳಿಗೆ ಇಳಿದಿದೆ. ಕಳೆದ ವರ್ಷ 2,58,663 ಬಾಕ್ಸ್‌ಗಳ ಬಿಯರ್ ಮಾರಾಟವಾಗಿತ್ತೆಂದು ತಿಳಿದುಬಂದಿದೆ.
“ಮಂಗಳೂರು ಉಪವಿಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ಇತರ ಎಲ್ಲ ಜಿಲ್ಲೆಗಳು ಉತ್ತಮವಾಗಿ ಮದ್ಯ ಮಾರಾಟ ಸಾಧಿಸಿದ್ದರೆ, ದಕ್ಷಿಣ ಕನ್ನಡ ಮದ್ಯ ಮಾರಾಟದಲ್ಲಿ ಹಿಂದುಳಿದಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಹೆಚ್ಚಿನ ಬೆಳವಣಿಗೆ ಕಾಣುತ್ತಿದ್ದ ಮದ್ಯ ಮಾರಾಟ ಈ ಬಾರಿ ನಕಾರಾತ್ಮಕ ಮಾರಾಟವಾಗಿದೆ. ಈ ಬಗ್ಗೆ ನಮಗೂ ಖಚಿತವಿಲ್ಲ” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತ ಟಿ ಎಂ ಶ್ರೀನಿವಾಸ್ ಹೇಳಿದ್ದಾರೆ.
“ಕರಾವಳಿ ಜಿಲ್ಲೆಯಲ್ಲಿ ಪ್ರತಿವರ್ಷ ಮತ್ತು ಪ್ರತಿತಿಂಗಳು ಹೆಚ್ಚಿ ಬಿಯರ್ ಮಾರಾಟವಾಗುತ್ತಿತ್ತು. ಹೆಚ್ಚಾಗಿ ಯುವಕರು ಬಿಯರ್ ಖರೀದಿ ಮಾಡುತ್ತಿದ್ದರು. ಈ ಬಾರಿಯ ಬಿಯರ್ ಮಾರಾಟ ಕುಸಿತದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ” ಎಂದು ಶ್ರೀನಿವಾಸ್ ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಮದ್ಯ ಮಾರಾಟ ಕುಸಿದಿದೆ. ಕಾರ್ಮಿಕ ಚಟುವಟಿಕೆಗಳು ಕಡಿಮೆಯಾಗಿದೆ ಮತ್ತು ಈ ಹಿಂದೆ ಕೇರಳದಿಂದ ಬರುತ್ತಿದ್ದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿರಬಹುದೆಂದು ಅಂದಾಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಆನೇಕಲ್ | ಜಿಗಣಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ; ಮೀನುಗಾರರಿಗೆ ಎಚ್ಚರಿಕೆ ನೀಡಿದ ಪುರಸಭೆ
ಕರ್ನಾಟಕ ಮತ್ತು ಕೇರಳದಲ್ಲಿ ಮದ್ಯದ ಬೆಲೆ ಒಂದೇ ಆಗಿರುವುದರಿಂದ ಇದೀಗ ನೆರೆಯ ರಾಜ್ಯದ ಜನರು ಗಡಿ ಪ್ರದೇಶಗಳಲ್ಲಿನ ಮದ್ಯದಂಗಡಿಗಳಿಗೆ ಹೆಚ್ಚಾಗಿ ಬರುತ್ತಿಲ್ಲ. ಮೀನುಗಾರಿಕೆ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿದ್ದು, ಸುಮಾರು ಅರ್ಧದಷ್ಟು ಮೀನುಗಾರಿಕಾ ದೋಣಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿವೆಯೆಂದು ತಿಳಿದುಬಂದಿದೆ. ಇದರಿಂದಲೂ ಮದ್ಯ ಮಾರಾಟ ಕುಸಿತ ಕಂಡ ಸಾಧ್ಯತೆಯಿದೆ. ಆದರೂ ಮಗರ ಪ್ರದೇಶಗಳಲ್ಲಿ ಮದ್ಯ ಮಾರಾಟ ಸಕಾರಾತ್ಮಕವಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಒಪ್ಪತ್ತಿನ ಊಟಕ್ಕೆ ಕಷ್ಟಪಟ್ಟು ದುಡಿಯುವ ಜನರು ಮದ್ಯದ ಅಮಲಿಗೆ ಮುಳುಗಿ ಕುಟುಂಬಗಳನ್ನೇ ಸರ್ವನಾಶ ಮಾಡಿಕೊಂಡರೂ ಕಳವಳಗೊಳ್ಳದ ಅಧಿಕಾರಿಗಳು, ʼಕಾರ್ಮಿಕ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ಮದ್ಯ ಮಾರಾಟ ಅನರೀಕ್ಷಿತವಾಗಿ ಕುಸಿತ ಕಂಡಿದೆʼಯೆಂದು ಬಾಲಸುಟ್ಟ ಬೆಕ್ಕಿನಂತಾಡುತ್ತಿದ್ದಾರೆಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.