ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಸಾವಿನಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಕೆಲಸವಿಲ್ಲ. ಸಚಿನ್ ಪಾಂಚಾಳ್ ಸಾವಿನ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವವರಿಗೆ ಮಾನ, ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ʼಸಚಿವ ಪ್ರಿಯಾಂಕ್ ಖರ್ಗೆಯವರು ಬಿಜೆಪಿಯವರ ಮನೆಯ ದೇವರು ಇದ್ದ ಹಾಗೆ. ಅವರನ್ನು ನೆನೆಯದಿದ್ದರೆ ಅವರಿಗೆ ಬದುಕಲು ಆಗಲ್ಲ ಮತ್ತು ಅನ್ನ ಜೀರ್ಣವಾಗಲ್ಲ. ಇವರಿಗೆ ಕನಸು ಮನಸಿನಲ್ಲೂ ಪ್ರಿಯಾಂಕ್ ಖರ್ಗೆಯವರೇ ಕಾಣುತ್ತಾರೆ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಮುಖಂಡರ ನಿದ್ದೆ ಗೆಡಿಸುವ ಕೆಲಸ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯವರ ಬಣ್ಣ ಬಯಲು ಮಾಡುತ್ತಿದ್ದಾರೆ. ಹೀಗಾಗಿಯೇ ಬಿಜೆಪಿಯವರು ಖರ್ಗೆಯವರ ಹೆಸರು ಜಪಿಸುತ್ತಿದ್ದಾರೆʼ ಎಂದು ಅರಳಿ ಆರೋಪಿಸಿದ್ದಾರೆ.
ʼಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖರ್ಗೆಯವರು ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಗುತ್ತಿಗೆದಾರ ಸಂತೋಷ ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಂಡಾಗ ಅವರು ಬರೆದಿದ್ದ ಡೆತನೋಟ್‌ನಲ್ಲಿ ಕೆ.ಎಸ್.ಈಶ್ವರಪ್ಪನವರ ಹೆಸರು ಉಲ್ಲೇಖಿಸಿದ್ದರು. ಅವರೇ ನಂಬರ್ ಒನ್ ಆರೋಪಿಯಾಗಿದ್ದರು. ಆದರೆ, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರಿಲ್ಲ. ವಿನಾಕಾರಣ ಅವರ ಹೆಸರು ತಂದು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆʼ ಎಂದಿದ್ದಾರೆ.
ರಾಜು ಕಪನೂರ ಅವರು ಪ್ರಿಯಾಂಕ್ ಖರ್ಗೆ ಅವರ ಫಾಲೋವರ್ ಇದ್ದಾರೆ. ಆದರೆ, ಅಷ್ಟಕ್ಕೆ ರಾಜೀನಾಮೆ ಕೊಡಬೇಕಾ?. ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೆಸರು ಇದೆ. ಅವರ ಸ್ವಂತ ಮಗ ವಿಜಯೇಂದ್ರ ರಾಜೀನಾಮೆ ಕೊಟ್ಟಿದ್ದಾರೆಯೇ? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಸಹೋದರ ಟಿಕೆಟ್ ಕೊಡಿಸುತ್ತೇನೆಂದು ಮೋಸದ ಪ್ರಕರಣದಲ್ಲಿ ಜೋಶಿಯವರು ರಾಜೀನಾಮೆ ಕೊಟ್ಟಿದ್ದಾರೆಯೇ? ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ ಪ್ರಕರಣ ದಾಖಲಾದಾಗ ಅವರ ಆಪ್ತ ಪ್ರಧಾನಿ ನರೇಂದ್ರ ಮೋದಿಯವರು ರಾಜೀನಾಮೆ ಕೊಟ್ಟರೆ ಎಂದು ಪ್ರಶ್ನಿಸಿದರು.
ಗುತ್ತಿಗೆದಾರ ಸಚಿನ್ ಪಾಂಚಾಳ್ ಅತ್ಮಹತ್ಯೆ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆ ಅವರಿಗೂ ಸಂಬಂಧವಿಲ್ಲ. ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲ. ಅದರೂ, ಅವರ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ, ಸುಪಾರಿ ನೀಡಿದ್ದಾರೆ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಗೆ ಅಪಮಾನ ಮಾಡಿದ ಬಿಜೆಪಿರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಸತ್ಯ ಬಹಿರಂಗಪಡಿಸಿ, ಮೃತ ಸಚಿನ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದೇ ರಾಜ್ಯ ಸರ್ಕಾರ?
ಸ್ವತಃ ಪ್ರಿಯಾಂಕ್ ಅವರೇ ತನಿಖೆಗೆ ಆಗ್ರಹಿಸಿದ್ದಾರೆ. ಹೀಗಿರುವಾಗಲೂ ರಾಜಕೀಯ ಮಾಡುತ್ತಿರುವುದು ಸಲ್ಲದು. ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರಿಂದಲೇ ಹಲವು ರಾಜಕೀಯ ಹುದ್ದೆಗಳನ್ನು ಅನುಭವಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಇಲ್ಲ-ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅವರು ಸುಮ್ಮನಿರಬೇಕು. ಇಲ್ಲವಾದಲ್ಲಿ ಅವರ ಬಣ್ಣ ಬಯಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.