- ಉತ್ತರ ಕರ್ನಾಟಕದ ನೀರಿನ ಬವಣೆ ತಗ್ಗಿಸಲು ಮಹಾರಾಷ್ಟ್ರದ ಮೊರೆ ಹೋದ ಸರ್ಕಾರ
- ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದು ನದಿಗಳಿಗೆ ನೀರು ಹರಿಸುವಂತೆ ಕೇಳಿಕೊಂಡ ಸಿಎಂ
ಬಿರು ಬೇಸಿಗೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ನೀರಿನ ಬವಣೆ ನೀಗಿಸಲು ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಸುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ವಾರ್ನಾ/ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ವಿನಂತಿಸುವುದಾಗಿ ಕೋರಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಪತ್ರ ಸಾರಾಂಶ ಹೀಗಿದೆ:
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಮಾರ್ಚ್ 2023 ರಿಂದ ತೀವ್ರ ಬೇಸಿಗೆಯಿಂದಾಗಿ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿದೆ.
ಈ ಬೇಸಿಗೆಯಲ್ಲಿ ಕರ್ನಾಟಕ ಸರ್ಕಾರವು ಮಾನವ ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಂಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಮತ್ತು ಬಿಡುಗಡೆ ಮಾಡಬೇಕೆಂದು ಕರ್ನಾಟಕ ಸರ್ಕಾರವು ಈ ಹಿಂದೆ ಮನವಿ ಮಾಡಿತ್ತು.
ಅದರಂತೆ ಮಹಾರಾಷ್ಟ್ರ ಸರ್ಕಾರ ಮನವಿ ಪರಿಗಣಿಸಿ ಮೇ 2023 ರ ಮೊದಲ ಹದಿನೈದು ದಿನಗಳಲ್ಲಿ ಕೃಷ್ಣಾ ನದಿಗೆ 1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ.
ಈ ಸುದ್ದಿ ಓದಿದ್ದೀರಾ?:ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಿ: ಅಧಿಕಾರಿಗಳಿಗೆ ಸಿಎಂ ತಾಕೀತು
ಈ ನಡುವೆ ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಬೇಸಿಗೆಯ ತೀವ್ರ ಪರಿಸ್ಥಿತಿ ಇನ್ನೂ ಚಾಲ್ತಿಯಲ್ಲಿದೆ, ಹೀಗಾಗಿ ಜನ ಮತ್ತು ಜಾನುವಾರುಗಳ ಕುಡಿಯಲು ಹಾಗೂ ಗೃಹಬಳಕೆಗಾಗಿ ನೀರಿನ ಅವಶ್ಯಕತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಮುಂಗಾರು ಆರಂಭವಾಗಿಲ್ಲ.
ಈ ಕಾರಣಗಳಿಂದಾಗಿ ಈ ಭಾಗದ ಜನರ ಅಗತ್ಯತೆ ಅನುಸಾರವಾಗಿ ಮರಳಿ ವಾರ್ನಾ/ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2.00 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನಾನು ವಿನಂತಿಸುತ್ತೇನೆ, ಎಂದಿದ್ದಾರೆ.