ವಿಶೇಷ ಸಂದರ್ಶನ | ಸಿಪಿಎಂನ ನೂತನ ರಾಜ್ಯ ಕಾರ್ಯದರ್ಶಿ ಕಾಂ. ಡಾ. ಪ್ರಕಾಶ್ ಮುಂದಿರುವ ಸವಾಲುಗಳೇನು?

Date:

Advertisements

ಪರಿಚಯ : ಡಾ. ಪ್ರಕಾಶ್ ಕೆ. ಮೂಲತಃ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದವರು. ಬೆಂಗಳೂರು ವಿವಿಯಿಂದ ಇತಿಹಾಸ ವಿಷಯದಲ್ಲಿ ಎಂ.ಎ. , ಹಂಪಿಯ ಕನ್ನಡ ವಿವಿಯಿಂದ ʼಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿಯ ಇತಿಹಾಸʼ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ನಿರುದ್ಯೋಗ, ಭಯೋತ್ಪಾದನೆ – ಹಿಂದುತ್ವ, ಸಿಐಎ ಮತ್ತು ಜಿಹಾದ್, ಫಿಡೆಲ್ ಕ್ಯಾಸ್ಟ್ರೋ, ಆಧುನಿಕೋತ್ತರ ವಾದ (ಭಾಷಾಂತರ), ಸಮಬಾಳಿನ ಸಂಘರ್ಷ (ಪಿಹೆಚ್‌ಡಿ)ಪ್ರಮುಖ ಕೃತಿಗಳು. 1994ರಿಂದ 1999ರವರೆಗೆ SFI ರಾಜ್ಯ ಕಾರ್ಯದರ್ಶಿ, ಅಖಿಲ ಭಾರತ ಸಹ – ಕಾರ್ಯದರ್ಶಿ, 2001ರಿಂದ 2013ರವರೆಗೆ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ, 2001ರಿಂದ ರಾಜ್ಯ ಸಮಿತಿ ಸದಸ್ಯ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, 2025ರಿಂದ 3 ವರ್ಷಗಳ ಅವಧಿಗೆ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಈ ದಿನ ಡಾಟ್‌ಕಾಂ ಪ್ರಕಾಶ್‌ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ನೀವು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಮ್ಯುನಿಸ್ಟ್‌ ಚಳವಳಿ ಮತ್ತು ಸಿಪಿಎಂ ಪಕ್ಷದ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಎಂದು ನಿಮಗನ್ನಿಸುತ್ತದೆ?

ಸಮಾಜದ ಒಳಗಡೆ ಕಮ್ಯುನಿಸ್ಟ್‌ ಪಕ್ಷಗಳನ್ನು ಗುರುತಿಸುವುದು, ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ ನೋಡಿದರೆ, ಖಂಡಿತವಾಗಿ ಕಮ್ಯುನಿಸ್ಟ್‌ ಮತ್ತು ಸಿಪಿಎಂ ಎದ್ದು ಕಾಣುವ ರೀತಿಯಲ್ಲಿ ಇಲ್ಲ ಎಂಬುದು ಯಾರಿಗಾದರೂ ಅನಿಸುತ್ತದೆ. ಆದರೆ ಚಳವಳಿಯ ದೃಷ್ಟಿಯಿಂದ ಗಮನಿಸಿದಾಗ ಕಮ್ಯುನಿಸ್ಟ್‌ ಪಕ್ಷಗಳು ಈಗಲೂ ಹೆಚ್ಚು ಕ್ರಿಯಾಶೀಲವಾಗಿವೆ. ಬೇರೆ ಅಧಿಕಾರಸ್ಥ ರಾಜಕೀಯ ಪಕ್ಷಗಳಿಗಿಂತ ಅತ್ಯಂತ ವ್ಯಾಪಕ ಚಳವಳಿಗಳನ್ನು ನಡೆಸುತ್ತಿವೆ. ಮಹಿಳೆಯರು, ದಲಿತರು, ರೈತರು, ಕಾರ್ಮಿಕರ, ಅಲ್ಪಸಂಖ್ಯಾತರ ಪ್ರಶ್ನೆಗಳು… ಹೀಗೆ ಎಲ್ಲ ವಿಚಾರಗಳಲ್ಲೂ ನಿರಂತರವಾದ ಕ್ರಿಯಾಶೀಲತೆ ಇದೆ. ಅವರ ಪ್ರಶ್ನೆಗಳನ್ನು ವ್ಯಾಪಕವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಜನರ ಪ್ರಶ್ನೆಗಳ ಮೇಲೆ ಆಂದೋಲನ ನಡೆಸೋ ಶಕ್ತಿ ಕಮ್ಯುನಿಸ್ಟರಿಗೆ ಇದೆ. ಆದರೆ ಸಮಸ್ಯೆ ಏನಾಗಿದೆ ಅಂತಂದ್ರೆ, ಎಷ್ಟೇ ದೊಡ್ಡ ಮಟ್ಟದ ಚಳವಳಿ ಮಾಡಿದರೂ ಅದನ್ನು ಚುನಾವಣಾ ಫಲಿತಾಂಶವಾಗಿ ರೂಪಿಸಲು ಸಾಧ್ಯವಾಗಿಲ್ಲ. ಈ ದೌರ್ಬಲ್ಯ ಮೀರುವುದೇ ಕಮ್ಯುನಿಸ್ಟ್‌ ಪಕ್ಷಗಳ ಮುಂದಿರುವ ಬಹಳ ದೊಡ್ಡ ಸವಾಲು.

Advertisements

ಚುನಾವಣಾ ರಾಜಕಾರಣದ ವಿಷಯಕ್ಕೆ ಬಂದರೆ, ಬಹುಶಃ ಈ ಅವಧಿಯಲ್ಲೇ ಸಿಪಿಎಂ ಅತ್ಯಂತ ಕೆಳಗಿನ ಹಂತದಲ್ಲಿದೆ. ಈ ವಿಚಾರದಲ್ಲಿ ಸಿಪಿಎಂ ಪಕ್ಷದ ಮುಂದಿನ ನಡೆ ಏನಿರಬಹುದು?

ಎಲ್ಲರಿಗೂ ಗೊತ್ತೇ ಇರುವಂತೆ ಚುನಾವಣೆಗಳು ನಿಜವಾದ ಪ್ರಜಾಸತ್ತೆಯ ಸ್ವರೂಪವನ್ನು ಮೀರಿಯಾಗಿದೆ. ಸಹಜವಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಡೆಯುತ್ತಿಲ್ಲ, ಚುನಾವಣಾ ಪದ್ಧತಿಯಲ್ಲೇ ಬಹಳ ದೊಡ್ಡ ದೋಷವಿದೆ. ದೊಡ್ಡ ಪ್ರಮಾಣದ ಹಣ ಮತ್ತು ಜಾತಿ ಪ್ರಧಾನ ಪಾತ್ರ ವಹಿಸುವಂತಾಗಿದೆ. ಈ ಎರಡೂ ವಿಚಾರದಲ್ಲಿ ಕಮ್ಯುನಿಸ್ಟ್‌ ಪಕ್ಷಗಳು ಈ ಪ್ರಶ್ನೆಗಳನ್ನು ಮುಂದೆ ಮಾಡಿ ಚುನಾವಣೆ ಎದುರಿಸಿಲ್ಲ. ಅದೇ ಈಗ ದೊಡ್ಡ ತೊಡಕಾಗಿದೆ. ಹಾಗಾಗಿ ಚುನಾವಣೆಗಳಲ್ಲಿ ಭಾಗವಹಿಸಬೇಕು, ಜನರನ್ನು ಕಮ್ಯುನಿಸ್ಟ್‌ ಪಕ್ಷದ ಪರವಾಗಿ ಒಲವು ತೋರಿ ಮತ ಹಾಕುವಂತೆ ಮಾಡಬೇಕು ಎಂಬ ಪ್ರಶ್ನೆ ಇರುವಾಗಲೇ ಚುನಾವಣಾ ಪದ್ಧತಿಯಲ್ಲಿ ಮೂಲಭೂತ ಬದಲಾವಣೆ ಬೇಕು ಎಂದು ಕಮ್ಯುನಿಸ್ಟ್‌ ಪಕ್ಷಗಳು ಕೇಳುತ್ತಿವೆ. ದುರಂತವೆಂದರೆ ಅದಕ್ಕೆ ಬದಲಾಗಿ ಬಿಜೆಪಿ ಸರ್ಕಾರ ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದು ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಹೊರಟಿದೆ. ಪ್ರಶ್ನೆ ಜಟಿಲವಾದುದು. ಆದರೆ ಕಮ್ಯುನಿಸ್ಟ್‌ ಪಕ್ಷಗಳಿಗೆ ಸ್ಪಷ್ಟತೆಯಿದೆ. ಈ ಸಮಸ್ಯೆ ಇರುವುದರಿಂದಲೇ ಅದನ್ನು ಮೀರಿದಂತೆ ಒಂದು ಸಂಘಟನಾ ಚೌಕಟ್ಟನ್ನು ಮತ್ತು ಸಾಮಾಜಿಕ ರಾಜಕೀಯ ಚಳವಳಿಗಳನ್ನು ಹೊಸ ರೀತಿಯಲ್ಲಿ ಕಟ್ಟಬೇಕು ಎಂಬುದು ಎಡ ಪಕ್ಷಗಳಿಗೆ ಅನಿವಾರ್ಯವಾಗಿದೆ. ಜೊತೆಗೆ ಯಾರು ನಮ್ಮ ಜೊತೆಗೆ ಬರುತ್ತಿದ್ದಾರೋ, ಎಲ್ಲ ವಿಭಾಗದ ಜನರು ಕಮ್ಯುನಿಸ್ಟ್‌ ಪಕ್ಷ ಕೊಡುವ ನಾಯಕತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಬರುತ್ತಾರೋ ಚುನಾವಣೆಯಲ್ಲಿ ಅವರನ್ನು ರಾಜಕೀಕರಣಗೊಳಿಸುವುದು ಮುಖ್ಯವಾಗಿದೆ ಎಂದು ನಾವು ಪರಿಗಣಿಸಿದ್ದೇವೆ. ಪೊಲಿಟಿಸೈಝ್‌ ಮಾಡದೇ, ಇಂದಿನ ಜಾತಿ- ಹಣ ಬಲದಿಂದ ಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಕಮ್ಯುನಿಸ್ಟ್‌ ಪಕ್ಷಗಳಿಗೆ ವೋಟ್‌ ಹಾಕುವಂತೆ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ.

ಕಮ್ಯುನಿಸ್ಟ್‌ ಪಕ್ಷಗಳಲ್ಲೇ ಸಿಪಿಎಂ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಸಹಜವಾಗಿ ನಿಮ್ಮ ಕಡೆಗೇ ಎಡಪಂಥೀಯರ ಮತ್ತು ಪ್ರಜಾತಂತ್ರವಾದಿಗಳ ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುವ ಕ್ರಮಗಳೇನು?

CPM ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದೆ. ಇವತ್ತಿನ ಈ ರಾಜಕೀಯ ಸವಾಲುಗಳನ್ನು ಎದುರಿಸುವುದು ಕೇವಲ ಸಿಪಿಎಂನಿಂದ ಮಾತ್ರ ಸಾಧ್ಯ ಎಂದು ನಾವು ಭಾವಿಸಿಲ್ಲ. ಎರಡು ರೀತಿಯ ಸವಾಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಆರ್ಥಿಕ ನೀತಿಯ ವಿಚಾರಕ್ಕೆ ಬಂದಾಗ ಎರಡೂ ಪಕ್ಷಗಳು ಆಕ್ರಮಣಕಾರಿಯಾದ ನವ ಉದಾರವಾದದ ಬಂಡವಾಳಗಾರರ ಪರವೇ ಇವೆ. ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ, ಆರೋಗ್ಯ ನೀತಿಯ ವಿಚಾರ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್‌ ಭಿನ್ನವಾಗಿದೆ ಎಂದುಕೊಳ್ಳುವಂತಿಲ್ಲ. ಉದಾಹರಣಗೆ ಕೇಂದ್ರ ಸರ್ಕಾರದ ವಿರುದ್ಧ ರೈತರು ದೊಡ್ಡ ಮಟ್ಟದ ಹೋರಾಟ ನಡೆಸಿದರು. ಮೂರು ಕೃಷಿ ಕಾಯಿದೆಯನ್ನು ವಾಪಸ್‌ ಪಡೆದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಇದ್ದ ಬಿಜೆಪಿ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ತಂದ್ರೆ , ಅದರ ವಿರುದ್ಧ ನಮ್ಮ ಪ್ರಚಾರದ ಲಾಭವನ್ನು ಕಾಂಗ್ರೆಸ್‌ ಪಡೆಯಿತು. ಆದರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಆ ತಿದ್ದುಪಡಿಯನ್ನು ವಾಪಸ್‌ ಪಡೆಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಮತ್ತಷ್ಟು ಭೂಮಿಯನ್ನು ನಾಶ ಮಾಡುವ ಕ್ರಮವನ್ನೇ ಕೈಗೊಳ್ಳುತ್ತಿದೆ.

ಬಿಜೆಪಿಯ ಸಮಸ್ಯೆ ಕೋಮುವಾದ. ಕಾಂಗ್ರೆಸ್‌ಗೆ ಬೆಂಬಲಿಸುವ ಪ್ರಗತಿಪರರು, ಬರಹಗಾರರು ಕೋಮುವಾದವನ್ನು ಪ್ರತ್ಯೇಕವಾಗಿ ಗಮನಿಸುತ್ತಿದ್ದಾರೆ. ಸಿಪಿಎಂ ಏನು ಹೇಳುತ್ತಿದೆ ಅಂದ್ರೆ “ಅದನ್ನು ಪ್ರತ್ಯೇಕವಾಗಿ ನೋಡಬೇಡಿ, ಅದು ಆರ್ಥಿಕ ನೀತಿಯ ಫಲಿತಾಂಶ. ಹಿಂದೆ ಕಾಂಗ್ರೆಸ್‌ ಜಾರಿಗೆ ತಂದ ಆರ್ಥಿಕ ನೀತಿಯನ್ನು ಬಿಜೆಪಿ ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಆ ನೀತಿಗಳ ಬಿಕ್ಕಟ್ಟಿನ ಭಾಗವಾಗಿ ಕೋಮುವಾದ ಬೆಳೆಯುತ್ತಿದೆ. ಹೀಗಾಗಿ ಕೋಮುವಾದ ಮತ್ತು ಜನವಿರೋಧಿ ಆರ್ಥಿಕ ನೀತಿಯ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳದೇ ಕೋಮುವಾದವನ್ನು ಎದುರಿಸಲು ಸಾಧ್ಯವಿಲ್ಲ” ಎಂಬುದನ್ನು ಸಿಪಿಎಂ ಸ್ಪಷ್ಟವಾಗಿ ಹೇಳುತ್ತಿದೆ. ಈ ಸ್ಪಷ್ಟತೆಯ ಸಮಸ್ಯೆಯೇ ಸಾಕಷ್ಟು ಸಂಖ್ಯೆಯ ಪ್ರಜಾಸತ್ತಾತ್ಮಕ ವಾದಿಗಳು, ಪ್ರಗತಿಪರರು ಹೆಚ್ಚೆಚ್ಚು ಜನ ಕಾಂಗ್ರೆಸ್‌ ಅನ್ನು ಪರ್ಯಾಯ ಎಂದು ಭಾವಿಸುವ ಸಮಸ್ಯೆಯಿದೆ. ಎಡಪಕ್ಷಗಳು ಪರ್ಯಾಯ ಎಂದು ಅವರು ಯಾಕೆ ಯೋಚಿಸುತ್ತಿಲ್ಲ ಎಂದರೆ, ಅವರು ಕಾಂಗ್ರೆಸ್‌ನ ಆರ್ಥಿಕ ನೀತಿಯನ್ನು ಮರೆತು ಕೋಮುವಾದವನ್ನು ಮಾತ್ರ ಯೋಚಿಸುತ್ತಿದ್ದಾರೆ. ನಿಜ, ಚುನಾವಣಾ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣಕ್ಕಾಗಿ ಎಡ ಮತ್ತು ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಬೇಕು ಎಂಬ ಪ್ರಶ್ನೆ ಬಂದಾಗ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಎಡ ಪಕ್ಷಗಳು ಗೆಲ್ಲಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ. ನಾವು ಅವರಿಗೆ ವಿನಂತಿಸುವುದೇನೆಂದರೆ, ಎಷ್ಟು ವರ್ಷಗಳ ಕಾಲ ಹೀಗೆ ಕಾಂಗ್ರೆಸನ್ನು ಅವಲಂಬಿಸುತ್ತೀರಿ? ಕಾಂಗ್ರೆಸ್‌ನಲ್ಲಿ ಗೆದ್ದವರು ಬಿಜೆಪಿಗೆ ಹೋಗುತ್ತಾರೆ. ಅಧಿಕಾರದ ಪ್ರಶ್ನೆ ಬಂದರೆ ಅವರು ಯಾರ ಜೊತೆಗೂ ಹೋಗಲು ರೆಡಿ ಇರುತ್ತಾರೆ. ಚೆನ್ನಪಟ್ಟಣದ ಉದಾಹರಣೆ ನೋಡಿದರೆ ಗೊತ್ತಾಗುತ್ತದೆ. ಹಾಗಾಗಿ ನಾವು ವಿನಂತಿ ಮಾಡಿಕೊಳ್ಳುವುದು ಏನೆಂದರೆ ಎಡಪಕ್ಷಗಳನ್ನು ಕೆಲವು ಕಡೆಗಳಲ್ಲಾದರೂ ಬೆಂಬಲಿಸಿ. ಕಾಂಗ್ರೆಸ್‌ನ ಸ್ವರೂಪವನ್ನು ಅರ್ಥ ಮಾಡಿಕೊಳ್ಳಿ, ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ. ಈ ಅಂಶಗಳನ್ನು ಅರ್ಥ ಮಾಡಿಸುವ ಸವಾಲು ನಮ್ಮ ಮುಂದಿದೆ. ಅದಕ್ಕಾಗಿ ʼಎಡ ಪ್ರಜಾಸತ್ತಾತ್ಮಕ ರಂಗ (LDF)ʼ ಸ್ಥಾಪಿಸುವ ತೀರ್ಮಾನ ಸಿಪಿಎಂ ಮಾಡಿದೆ. ಈ ನಿಟ್ಟಿನಲ್ಲಿ ಮುಂದೆ ಗಂಭೀರವಾಗಿ ಕೆಲಸ ಮಾಡುತ್ತೇವೆ.

ಕಮ್ಯುನಿಸ್ಟ್‌ ಪಕ್ಷಗಳು ಒಂದರಲ್ಲೇ ವಿಲೀನವಾಗುವ ವಿಚಾರ ನಿಮ್ಮ ಕೇಂದ್ರ ಸಮಿತಿಗೆ ಸಂಬಂಧಿಸಿದ್ದು. ಆದರೂ, ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತಲೇ ಇರುತ್ತದೆ. ರಾಜ್ಯ ಕಾರ್ಯದರ್ಶಿಯಾಗಿ ನೀವು ಆಯ್ಕೆಯಾಗಿರುವ ಹೊತ್ತಿನಲ್ಲಿ, ಆ ವಿಚಾರದಲ್ಲಿ ಏನು ಹೇಳಬಯಸುತ್ತೀರಿ?

ವಿಲೀನದ ವಿಚಾರ ಕೇಂದ್ರದ ಸಮಿತಿಗೆ ಸಂಬಂಧಿಸಿದ್ದು. ಆದರೆ, ಮೂಲಭೂತವಾಗಿ ಕಮ್ಯುನಿಸ್ಟ್‌ ಪಕ್ಷಗಳು ಬೇರೆಯಾಗಿದ್ದು, ಭಿನ್ನವಾಗಿದ್ದು ಏಕೆ ಎಂದು ಬೇರೆ ರಾಜಕೀಯ ಪಕ್ಷಗಳ ರೀತಿಯಲ್ಲಿ ವಿಶ್ಲೇಷಣೆ ಮಾಡಲು ಆಗಲ್ಲ. ಸೈದ್ಧಾಂತಿಕ ಕಾರಣಗಳಿಗೆ ಆಗಿದೆ. ಈ ಸೈದ್ಧಾಂತಿಕ ಕಾರಣಗಳ ಭಿನ್ನತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ, ಅಂತರವನ್ನು ಕಡಿಮೆ ಮಾಡುತ್ತಾ ಈಗಿನ ಸವಾಲನ್ನು ಐಕ್ಯತೆಯಿಂದ ಎದುರಿಸಲು ಏನು ಮಾಡಬೇಕು ಎಂದು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಕೇಂದ್ರದಲ್ಲೂ ಕೆಲವು ಕ್ರಮ ಕೈಗೊಳ್ಳಲಾಗಿದೆ. ಪಕ್ಷ ಪಕ್ಷದ ನಡುವಿನ ಐಕ್ಯತೆಯನ್ನು ಸಾಧಿಸಲು ಒಟ್ಟೊಟ್ಟಾಗಿ ಚಳವಳಿಗಳನ್ನು, ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಾ ಹೋಗುವುದು; ಅದರ ಮೂಲಕ ಪ್ರಾಯೋಗಿಕ ಐಕ್ಯತೆ ರೂಪಿಸುವುದು. ಎರಡನೆಯದಾಗಿ ನಮ್ಮ ಸಾಮೂಹಿಕ ಸಂಘಟನೆಗಳು, ರೈತರ ಸಂಘ, ಕಾರ್ಮಿಕರ ಸಂಘಗಳ ನಡುವೆ ಐಕ್ಯತೆ ರೂಪಿಸಲು ವೇದಿಕೆಗಳನ್ನು ನಿರ್ಮಾಣ ಮಾಡುವುದು. ಈಗ ದೆಹಲಿಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚ ನಡೆಸುತ್ತಿರುವ ರೈತರ ಹೋರಾಟದಲ್ಲಿ ಹಲವು ಸ್ವತಂತ್ರ ರೈತ ಸಂಘಟನೆಗಳಿವೆ, ಎಡಪಕ್ಷದ ನಾಯಕತ್ವದ ಸಂಘಟನೆಗಳಿವೆ. ಹೀಗೆ ನೂರಾರು ರೈತ ಸಂಘಟನೆಗಳಿವೆ. ಅದರಲ್ಲಿ ಎಡಪಕ್ಷಗಳು ಕ್ರಿಯಾಶೀಲ ಪಾತ್ರ ವಹಿಸುತ್ತಿವೆ. ಕಾರ್ಮಿಕರ ಪ್ರಶ್ನೆ ಬಂದಾಗ ಜೆಸಿಟಿಯು (JCTU) ಅಂತಿದೆ. ಅದು ವಿಭಿನ್ನ ಎಡ ಪಕ್ಷಗಳ ಎಲ್ಲಾ ಕಾರ್ಮಿಕ ಸಂಘಟನೆಗಳ ಒಂದು ಜಂಟಿ ವೇದಿಕೆ. ಅದರ ಮುಖಾಂತರ ಇಡೀ ದೇಶದಲ್ಲಿ ಕಾರ್ಮಿಕರ ಪ್ರಶ್ನೆಗಳ ಮೇಲೆ ಕೆಲಸ ಮಾಡುತ್ತಾ ಮಾಡುತ್ತಾ ಒಂದು ಐಕ್ಯತೆ ಸಾಧಿಸುತ್ತಾ ಹೋಗುವುದು. ಈ ಪ್ರಕ್ರಿಯೆಯ ಒಳಗಡೆ ಮೂಡಿ ಬರುವ ಸರಿಯಾದ ತಿಳಿವಳಿಯ ಆಧಾರದಲ್ಲಿ ಹೆಚ್ಚು ಒಟ್ಟೊಟ್ಟಿಗೆ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗುತ್ತದೆ. ಆಗ ಈ ವಿಲೀನದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಅದನ್ನು ಕರ್ನಾಟಕದಲ್ಲೂ ನಾವು ಗಂಭೀರವಾಗಿ ಮಾಡುತ್ತೇವೆ.

ಬೇರೆಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಸಿಪಿಎಂನ ಸ್ಟ್ರಕ್ಚರ್ ವಿಭಿನ್ನವಾಗಿದೆ. ರಾಜ್ಯಗಳಿಗೆ ಕಾರ್ಯದರ್ಶಿಗಳಿರುತ್ತಾರೆ. ಬಹಳ ಮಹತ್ವದ ಜವಾಬ್ದಾರಿ ಕಾರ್ಯದರ್ಶಿಗಳಿಗೆ ಇರುತ್ತದೆ. ಅವರ ಆಯ್ಕೆ ಪ್ರಕ್ರಿಯೆಯೂ ಎಲ್ಲರ ಒಳಗೊಳ್ಳುವಿಕೆಯ ಮೂಲಕ ಆಗುತ್ತದೆ. ಅದರ ಬಗ್ಗೆ ಹೇಳಿ.

ನಮ್ಮ ಪಕ್ಷದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಇರಲ್ಲ. ಸೆಕ್ರೇಟರಿ, ಸೆಕ್ರೇಟರೇಟ್‌ ಅಂತ ಮಾತ್ರ ಇರುತ್ತದೆ. ಇದು ಕಲೆಕ್ಟಿವ್‌ ಲೀಡರ್‌ಶಿಪ್‌ ಅನ್ನು ರೆಪ್ರೆಸೆಂಟ್ ಮಾಡುವ ವಿಧಾನ. ಏಕವ್ಯಕ್ತಿಯ ಅಂತಿಮ ತೀರ್ಮಾನಕ್ಕೆ ಇಲ್ಲಿ ಅವಕಾಶ ಇಲ್ಲ. ಸಾಮೂಹಿಕ ನಾಯಕತ್ವಕ್ಕೆ ಕಾರ್ಯದರ್ಶಿ ಮಂಡಲಿ, ಆಲ್‌ ಇಂಡಿಯಾ ಮಟ್ಟದಲ್ಲಿ ಪಾಲಿಟ್‌ ಬ್ಯೂರೊ, ಅದನ್ನು ಮುನ್ನಡೆಸಲು ಕಾರ್ಯದರ್ಶಿ ಎಂಬ ಜವಾಬ್ದಾರಿ ಇರುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಸಮ್ಮೇಳನದಲ್ಲಿ ಚರ್ಚೆ ನಡೆದು, ಪ್ರಜಾಸತ್ತಾತ್ಮಕವಾಗಿ ಚುನಾವಣೆಯಾಗಿ ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ. ಕಮ್ಯುನಿಸ್ಟ್‌ ಪಕ್ಷಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂಬ ಆರೋಪ ಮಾಡಲಾಗುತ್ತದೆ. ಅದು ಎಷು ಸುಳ್ಳು ಎಂದು ನಮ್ಮ ಸಮ್ಮೇಳನಗಳ ಉದಾಹರಣೆಯನ್ನೇ ನೋಡಬಹುದು. ಬೇರೆ ಪಕ್ಷಗಳಲ್ಲಿ ಸಮ್ಮೇಳನ ನಡೆಯಲ್ಲ. ನಮ್ಮಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಸಮ್ಮೇಳನದಲ್ಲಿ ಹಿಂದಿನ ವರ್ಷಗಳ ಚಟುವಟಿಕೆಗಳ ಚರ್ಚೆ, ತಪ್ಪು -ಸರಿಗಳ ವಿಮರ್ಶೆ ನಡೆಯುತ್ತದೆ. ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಗಳ ಬಗ್ಗೆ ತೀರ್ಮಾನವಾಗುತ್ತದೆ. ಇದು ನಿಜಕ್ಕೂ ಇಂಟರ್ನಲ್‌ ಡೆಮಾಕ್ರಸಿ ಇದೆ ಎಂಬುದಕ್ಕೆ ಉದಾಹರಣೆ. ಬಂಡವಾಳಶಾಹಿ ಪಕ್ಷಗಳಂತೆ ನಡೆಯಲ್ಲ. ಚಳವಳಿಯ ಮಹತ್ವ ಅಲ್ಲಿನ ಚರ್ಚೆಗಳನ್ನು ಗಮನಿಸಿ ಆಯ್ಕೆ ನಡೆಯುತ್ತದೆ.

ಇದನ್ನೂ ಓದಿ ಕ್ರೈಸ್ತರ ಮೇಲೆ ಹಿಂಸಾಚಾರ | ರಾಷ್ಟ್ರಪತಿಗೆ ಪತ್ರ ಬರೆದ 400ಕ್ಕೂ ಹೆಚ್ಚು ಕ್ರಿಶ್ಚಿಯನ್ ನಾಯಕರು

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X