ಬೆಳ್ತಂಗಡಿ | ಅವ್ಯವಸ್ಥೆಯ ಆಗರವಾಗಿರುವ ‘ವೇಣೂರು ಸಂತೆ ಮಾರ್ಕೆಟ್’: ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯತ್!

Date:

Advertisements

ಅಲ್ಲಿ ಕಟ್ಟಡ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಉಳಿದಿರುವುದು ಕೇವಲ ಕೆಲವು ಹೆಂಚಿನ ತುಂಡುಗಳು ಹಾಗೂ ಕಟ್ಟಡದ ಅಡಿಪಾಯ ಅಷ್ಟೇ. ಈಗ ಏನಿದೆ? ಏನಿಲ್ಲ ಎಂಬುದನ್ನು ನೋಡಬೇಕಾದರೆ ಸ್ಥಳಕ್ಕೆ ಭೇಟಿ ನೀಡಿದಾಗಲಷ್ಟೇ ತಿಳಿಯಬಹುದು. ಹೌದು. ನಾವು ಹೇಳೋದಕ್ಕೆ ಹೊರಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಪ್ರದೇಶವಾದ ವೇಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ‘ವೇಣೂರು ಸಂತೆ ಮಾರ್ಕೆಟ್’ನ ಬಗ್ಗೆ.

ವೇಣೂರು ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರೋದು ಇತಿಹಾಸ ಪ್ರಸಿದ್ಧ ಬಾಹುಬಲಿಯ ಮೂರ್ತಿ. 12 ವರ್ಷಕ್ಕೊಮ್ಮೆ ಇಲ್ಲಿ ಜೈನ ಸಮುದಾಯದವರಿಂದ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ವೇಣೂರು ಬಾಹುಬಲಿ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಸಿದ್ಧ ವೇಣೂರು ನದಿಯ ತಟದಲ್ಲಿರುವ ವೇಣೂರು ಸಂತೆ ಮಾರ್ಕೆಟ್.

ವೇಣೂರು ಸಂತೆ ಮಾರ್ಕೆಟ್‌ನಲ್ಲಿ ಪ್ರತಿ ಮಂಗಳವಾರದಂದು ತರಕಾರಿ, ಮೀನು, ಮನೆಯ ಅಗತ್ಯ ಸಾಮಗ್ರಿಗಳನ್ನು ಮಾರಾಟ ಮಾಡುವುದಕ್ಕೋಸ್ಕರ ದೂರದ ಊರುಗಳಿಂದ ಅನೇಕ ವ್ಯಾಪಾರಸ್ಥರು ಬಂದು ತಮ್ಮ ಕಿಸೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ ಕಾರಣ ಸಂತೆ ಮಾರುಕಟ್ಟೆಯ ಕಟ್ಟಡದ ಅವ್ಯವಸ್ಥೆ ಎಂದರೆ ತಪ್ಪಲ್ಲ.

Advertisements
WhatsApp Image 2025 01 02 at 12.14.19 PM

ಕಾರಣ, ಇಲ್ಲಿರುವ ಕಟ್ಟಡದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳೇ ಇಲ್ಲ.‌ ಹೌದು.‌ ಕಟ್ಟಡ ಸಂಪೂರ್ಣ ಕುಸಿಯುವುದಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಆದರೆ, ಇದರ ಮೇಲುಸ್ತುವಾರಿ, ನಿರ್ವಹಣೆ ಮಾಡುತ್ತಿರುವ ವೇಣೂರು ಗ್ರಾಮ ಪಂಚಾಯತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ವೇಣೂರು ಸಂತೆ ಮಾರ್ಕೆಟ್ ಕಟ್ಟಡದಲ್ಲಿ ಪ್ರತಿದಿನ ಎಂಬಂತೆ ‘ಪರ್ಮನೆಂಟ್’ ಎಂಬ ನೆಲೆಯಲ್ಲಿ ಒಟ್ಟು ಆರು ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದೆ. ಈ ಪೈಕಿ ಎರಡು ಗೂಡಂಗಡಿ, ಒಂದು ಹಸಿಮೀನಿನ ಅಂಗಡಿ, ಒಂದು ಒಣಮೀನಿನ ಅಂಗಡಿ, ಒಂದು ಗುಜರಿ ಅಂಗಡಿ ಹಾಗೂ ಒಂದು ಸೈಕಲ್ ರಿಪೇರಿ ಮತ್ತು ಸರ್ವಿಸ್ ಅಂಗಡಿಗಳಿವೆ.

ಕಟ್ಟಡ ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದ್ದರೂ ಜೀವಭಯದಿಂದ ಇಲ್ಲಿರುವ ಅಂಗಡಿ ಮಾಲೀಕರು ದಿನದೂಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ‌ ಸಲ್ಲಿಸಿದ್ದರೂ ಕೂಡ ಈವರೆಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸ್ಥಳೀಯರು ಗ್ರಾಮ ಪಂಚಾಯತ್‌ನ ಕಾರ್ಯವೈಖರಿಯ ಈದಿನ ಡಾಟ್ ಕಾಮ್ ಸಹಾಯವಾಣಿಯನ್ನು ಸಂಪರ್ಕಿಸಿ, ದೂರು ನೀಡಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?

ಮೂಲಭೂತ ಸೌಕರ್ಯಗಳೇ ಇಲ್ಲ!

ವೇಣೂರು ಸಂತೆ ಮಾರ್ಕೆಟ್ ಎಷ್ಟು ಅವ್ಯವಸ್ಥೆಯಿಂದ ಕೂಡಿದೆ ಎಂದರೆ ಇಲ್ಲಿ ಅಗತ್ಯವಾಗಿ ಇರಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲ.

ಸಂತೆ ಮಾರ್ಕೆಟ್ ಕಟ್ಟಡಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದರೂ, ಈವರೆಗೆ ಇಲ್ಲಿ ಸರಿಯಾದ ನೀರಿನ ವ್ಯವಸ್ಥೆಯಾಗಲೀ, ಶೌಚಾಲಯದ ವ್ಯವಸ್ಥೆಯಾಗಲೀ‌ ಇಲ್ಲ. ದೇಶಕ್ಕೆ ವಿದ್ಯುತ್ (ಕರೆಂಟ್) ವ್ಯವಸ್ಥೆ ಬಂದು ಹಲವಾರು ವರ್ಷಗಳೇ ಕಳೆದಿದ್ದರೂ ವೇಣೂರು ಸಂತೆ ಮಾರ್ಕೆಟ್ ಕಟ್ಟಡಕ್ಕೆ ಇನ್ನೂ ಆ ಭಾಗ್ಯ ದೊರಕಿಲ್ಲ. ಇಲ್ಲಿರುವ ‘ಪರ್ಮನೆಂಟ್ ವ್ಯಾಪಾರಸ್ಥ’ರಿಗೆ ಸಂಜೆ ವೇಳೆ ಹೆಚ್ಚುವರಿ ಕೆಲಸ ಮಾಡಲು ಮನಸ್ಸಿದ್ದರೂ ಕೂಡ ಕರೆಂಟ್ ವ್ಯವಸ್ಥೆ ಇಲ್ಲದಿರುವುದರಿಂದ ಸೂರ್ಯ ಮುಳುಗುವ ವೇಳೆಯಲ್ಲಿಯೇ ಅಂಗಡಿ ಬಂದ್ ಮಾಡಿ, ಮನೆಗೆ ತೆರಳಬೇಕಾದ ಸಂಕಷ್ಟ ಇದೆ.

WhatsApp Image 2025 01 01 at 6.39.55 AM

ಸಂತೆ ಮಾರ್ಕೆಟ್ ಅವ್ಯವಸ್ಥೆಯ ಬಗ್ಗೆ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ಹೆಸರು ಹೇಳಲಿಚ್ಛಿಸದ ವ್ಯಾಪಾರಸ್ಥರೋರ್ವರು, “ಸಂತೆ ಮಾರ್ಕೆಟ್ ಕಟ್ಟಡದ ಬಗ್ಗೆ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಸ್ಪಂದಿಸಿಲ್ಲ. ಕೇಳಿದರೆ, ಇದು ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಮಂಜೇಶ್ವರ ದೇವಸ್ಥಾನವೊಂದರ ಜಮೀನು.‌ ಈ ಜಮೀನು ವಿವಾದದಲ್ಲಿರುವುದರಿಂದ ಇನ್ನೂ ಕೂಡ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ತಿಳಿಸುತ್ತಾರೆ.‌ ಆದರೆ, ಸುಂಕ ವಸೂಲಿಗೆಂದು ಪಂಚಾಯತ್ ಟೆಂಡರ್ ಪಡೆದಿದ್ದೇವೆ ಎಂದು ಹೇಳಿಕೊಂಡು ಕೆಲವರು ಬರ್ತಾ ಇರ್ತಾರೆ” ಎಂದು ತಿಳಿಸಿದ್ದಾರೆ.

“ಕಟ್ಟಡ ಸಂಪೂರ್ಣವಾಗಿ ಬೀಳುವ ಹಂತಕ್ಕೆ ತಲುಪಿತ್ತು. ಆಗಲೂ ಸಂಬಂಧಿಸಿದವರ ಗಮನಕ್ಕೆ ತರಲಾಗಿತ್ತು. ಸ್ಪಂದಿಸದ ಕಾರಣದಿಂದಾಗಿ ಈ ಹಿಂದೆ ಮಳೆಗಾಲ ಆರಂಭಕ್ಕೂ ಮುನ್ನ ನಮ್ಮ ಕೈಯಿಂದಲೇ ಹಣ ಹಾಕಿ, ನಾವೇ ರಿಪೇರಿ ಮಾಡಿಸಿಕೊಂಡಿದ್ದೇವೆ.‌ ಶೌಚಾಲಯಕ್ಕೆ ಅಕ್ಕಪಕ್ಕದ ಖಾಸಗಿ ಕಟ್ಟಡಗಳನ್ನು ಅವಲಂಬಿಸಿದ್ದೇವೆ. ಒಂದು ವೇಳೆ ಜಮೀನು ವಿವಾದವೇ ಆಗಿದ್ದರೂ ದಯವಿಟ್ಟು ಅದನ್ನು ಪರಿಹರಿಸಿ, ಹೊಸ ಕಟ್ಟಡ ನಿರ್ಮಿಸಿ” ಎಂದು ಮನವಿ‌ ಮಾಡಿಕೊಂಡಿದ್ದಾರೆ.

venoor market
ವಾರದ ಸಂತೆ ‘ಮಂಗಳವಾರ’ದಂದು ಕಟ್ಟಡಕ್ಕೆ ಮೇಲ್ಛಾವಣಿ ಇಲ್ಲದ್ದರಿಂದ ಟಾರ್ಪಾಲ್ ಹಾಕಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು

ವಾರದ ಸಂತೆ ‘ಮಂಗಳವಾರ’ದಂದು ಸಂತೆಗೆ ಆಗಮಿಸಿದ್ದ ವ್ಯಾಪಾರಿಯೋರ್ವರು ಮಾತನಾಡುತ್ತಾ, “ಈ ಹಿಂದೆ ವೇಣೂರು ಸಂತೆ ಮಾರ್ಕೆಟ್ ಎಂದರೆ ಜನರಿಂದ ತುಂಬಿ ತುಳುಕುತ್ತಿತ್ತು. ಯಾಕೆಂದರೆ ಅಷ್ಟೊಂದು ವ್ಯಾಪಾರಸ್ಥರು ಬರ್ತಾ ಇದ್ದರು. ‌ಕಟ್ಟಡ ಸರಿ‌ ಇಲ್ಲದಿರುವುದರಿಂದ ಯಾರೂ ಬರ್ತಾ ಇಲ್ಲ.‌ ಈ ಬಗ್ಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಕೂಡ ಗಮನ ಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

ಈ ಎಲ್ಲ ಅವ್ಯವಸ್ಥೆಯ ನಡುವೆಯೇ ಕೆಲವು ತಿಂಗಳ ಹಿಂದೆ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ರಮೇಶ್ ಪೂಜಾರಿ ಎಂಬ ಖಾಸಗಿ ವ್ಯಕ್ತಿಯೋರ್ವರಿಗೆ 81,000₹ ರೂಪಾಯಿಗಳಿಗೆ ಟೆಂಡರ್ ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಟೆಂಡರ್ ನೀಡಿರುವುದರಲ್ಲಿಯೂ ಅಕ್ರಮ ನಡೆದಿರುವ ಬಗ್ಗೆಯೂ ಕೆಲವು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಜಮೀನು ವಿವಾದ ಕೋರ್ಟಿನಲ್ಲಿರುವಾಗ ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿರುವುದು ಸರಿಯೇ? ಎಂದು ಕೇಳಿದ್ದಾರೆ.

ಸಂತೆ ಮಾರ್ಕೆಟ್ ಅವ್ಯವಸ್ಥೆಯ ಬಗ್ಗೆ ಈದಿನ ಡಾಟ್ ಕಾಮ್ ವೇಣೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ, “”ಮಾರುಕಟ್ಟೆಯ ಜಮೀನು ವಿವಾದ ಕೋರ್ಟಿನಲ್ಲಿದೆ. ಅದು ಎಲ್ಲರಿಗೂ ಗೊತ್ತಿದೆ.‌ ಮಂಜೇಶ್ವರದವರ ಹೆಸರಿನಲ್ಲಿದೆ. ಜಮೀನು ವಿವಾದ ಇನ್ನೂ ಬಗೆಹರಿದಿಲ್ಲ” ಎಂದು ತಿಳಿಸಿದ್ದಾರೆ.

WhatsApp Image 2025 01 02 at 12.14.19 PM 2

ಜಮೀನು ವಿವಾದದ ನಡುವೆಯೇ ಖಾಸಗಿ ವ್ಯಕ್ತಿಗೆ ಟೆಂಡರ್ ಕೊಟ್ಟಿರುವುದರ ಬಗ್ಗೆ ಪಂಚಾಯತ್ ಅಧ್ಯಕ್ಷರಲ್ಲಿ ಪ್ರಶ್ನಿಸಿದಾಗ, “ಜಮೀನು ವಿವಾದ ಕೋರ್ಟಿನಲ್ಲಿರುವುದು ನಿಜ. ಆದರೆ, ಗ್ರಾಮ ಪಂಚಾಯತಿ ಜೊತೆಗೆ ಅವರಿಗೆ ಮನಸ್ಥಾಪ ಇಲ್ಲ. ನಮಗೆ ಯಾವುದೇ ಅಬ್ಜೆಕ್ಷನ್ ಹಾಕಿಲ್ಲ. ಲೀಸ್‌ಗೆ ಕೊಡುವ ಬಗ್ಗೆ ಮಾತುಕತೆ ನಡೆಸುತ್ತೇವೆ. ಇದಕ್ಕಾಗಿ ಪ್ರಯತ್ನ ಮಾಡುತ್ತೇವೆ.‌ ಯಾರೂ ಕೂಡ ಆಕ್ಷೇಪಣೆ ಸಲ್ಲಿಸಿಲ್ಲ‌.‌ ಆದ್ದರಿಂದ ಪ್ರತಿವರ್ಷವೂ ಟೆಂಡರ್ ಕೊಡುತ್ತಿದ್ದೇವೆ.‌ ಈ ಬಾರಿ ನಾನು ಮಹಿಳೆ ಆದ ಕಾರಣ ಒಬ್ಬರಿಗೆ ಕರವಸೂಲಿ ಮಾಡಲು ಟೆಂಡರ್ ಕೊಟ್ಟೆ” ಎಂದು ಸಮರ್ಥನೆ ನೀಡಿದ್ದಾರೆ.

ಟೆಂಡರ್ ತೆಗೆದುಕೊಂಡವರು ಈ ಸಮಸ್ಯೆಯನ್ನು ಬಗೆಹರಿಸುತ್ತಾರಾ ಎಂದು ಪ್ರಶ್ನೆ ಮಾಡಿದಾಗ, “ಮಾರ್ಕೆಟ್ ಸಮಸ್ಯೆ ಬಗ್ಗೆ ಅಲ್ಲಿರುವ ಅಂಗಡಿ ಮಳಿಗೆಯವರು, ಟೆಂಡರ್ ಪಡೆದವರು ಸೇರಿದಂತೆ ಎಲ್ಲರಿಗೂ ಗೊತ್ತಿದೆ” ಎಂದಾಗ, “ಕಟ್ಟಡ ಒಂದು ವೇಳೆ ಬಿದ್ದರೆ ಯಾರು ಜವಾಬ್ದಾರಿ?” ಎಂದು ಕೇಳಿದಾಗ, “ಈ‌ ಬಗ್ಗೆ ಮಾತುಕತೆ ನಡೆಸುತ್ತೇವೆ” ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಮ ಪಂಚಾಯತಿ ಕಟ್ಟಡದ ಅವ್ಯವಸ್ಥೆಯ ಬಗ್ಗೆ ವೇಣೂರು ಗ್ರಾಮ ಪಂಚಾಯತಿ ಪಿಡಿಓ ರಾಘವೇಂದ್ರ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, “ಈ ಜಮೀನು ಸರ್ವೆ ನಂಬರ್ 2/6p1 ನಲ್ಲಿದೆ. ಜಮೀನಿನ ಸಮಸ್ಯೆಯ ಹಲವಾರು ವರ್ಷಗಳಿಂದ ಇದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿದೆ ಎಂಬುದು ನಮಗಿರುವ ಮಾಹಿತಿ. ನಾನು ವೇಣೂರು ಪಂಚಾಯ್ತಿಯಲ್ಲಿ ಸೇವೆಗೆ ಸೇರಿ ಒಂದು ವರ್ಷ ಆಯಿತಷ್ಟೇ. ಸಮಸ್ಯೆ ಏನು ಎಂಬುದು ನನಗೂ ಈವರೆಗೆ ಗೊತ್ತಿಲ್ಲ. ದಾಖಲೆಗಳನ್ನು ನೋಡಬೇಕಷ್ಟೇ. ಜಮೀನು ವಿವಾದದದ ಬಗ್ಗೆ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಇಟ್ಟಾಗ ಎಂದು ಮೊದಲಿದ್ದ ಸ್ಥಿತಿಯಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿತ್ತು” ಎಂದು ಈ ದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಮೀನು ವಿವಾದ ಏನೆಂಬುದೇ ಸರಿಯಾದ ಮಾಹಿತಿ ಪಂಚಾಯತಿಗಿಲ್ಲ!

ಜಮೀನು ವಿವಾದದ ಬಗ್ಗೆ ಈ ದಿನ ಡಾಟ್ ಕಾಮ್ ಪಂಚಾಯತ್‌ನ ಅಧ್ಯಕ್ಷರು ಸೇರಿದಂತೆ ಸಂಬಂಧಪಟ್ಟವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸರಿಯಾದ ಮಾಹಿತಿ ನೀಡಲು ಕೂಡ ಹಿಂದೇಟು ಹಾಕಿದ್ದಾರೆ. ಯಾಕೆಂದರೆ, ಜಮೀನು ವಿವಾದ ಏನೆಂಬುದೇ ಸರಿಯಾದ ಮಾಹಿತಿ ಪಂಚಾಯತಿಗಿಲ್ಲ ಎಂಬುದೇ ವಿಚಿತ್ರ ಸಂಗತಿ.

venur

ವೇಣೂರು ಹೋಬಳಿಯ ಜಮೀನು ಸರ್ವೆ ನಂಬರ್ 2/6p1 ನಲ್ಲಿರುವ ಸಂತೆ ಮಾರ್ಕೆಟ್‌ನ ನೈಜ ಜಮೀನಿನ ಸಮಸ್ಯೆ ತಮಗೆ ಗೊತ್ತಿಲ್ಲದಿದ್ದರೂ, ಕೇಳಿದವರಲ್ಲಿ, ‘ಅದು ಕೋರ್ಟಲ್ಲಿದೆ, ಮಂಜೇಶ್ವರದವರ ಹೆಸರಿನಲ್ಲಿದೆ’ ಎಂದಷ್ಟೇ ಬಾಯಲ್ಲಿ ಉತ್ತರಿಸಿ, ಪ್ರಶ್ನಿಸಿದವರನ್ನು ಸುಮ್ಮನಿಸಲಾಗುತ್ತಿದೆ ಎಂಬ ವಿಚಾರವೂ ಗೊತ್ತಾಗಿದೆ. ಸಮಸ್ಯೆಗಳು ಇರುವ ನಡುವೆಯೇ ಅಂಗಡಿ ಮಳಿಗೆ ಹೊಂದಿರುವವರಿಂದ ಕರ ವಸೂಲಿ ಮಾಡಲು ಖಾಸಗಿ ವ್ಯಕ್ತಿಯೋರ್ವರಿಗೆ 81,000₹ ರೂಪಾಯಿಗಳಿಗೆ ಟೆಂಡರ್ ಕೊಟ್ಟಿರುವುದರ ಬಗ್ಗೆಯೂ ಸಂಬಂಧಪಟ್ಟ ಹಿರಿಯ ಸರ್ಕಾರಿ ಅಧಿಕಾರಿಗಳೇ ಉತ್ತರ ನೀಡಬೇಕಿದೆ.

ಒಂದು ಕಾಲದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ವೇಣೂರಿನ ಮಂಗಳವಾರದ ಸಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದಾಗಿ ಕಳೆಗುಂದಿರುವುದಂತೂ ನಿಜ. ಇದಕ್ಕೆ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಈ ಬಗ್ಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ತಹಶೀಲ್ದಾರ್, ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಾ? ಜಮೀನು ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಿ, ಮೂಲಭೂತ ಸಮಸ್ಯೆಯಿಂದ ಬಳಲುತ್ತಿರುವ ವೇಣೂರು ಸಂತೆ ಮಾರುಕಟ್ಟೆಗೆ ಕಾಯಕಲ್ಪ ನೀಡಿ, ಹೊಸ ಕಟ್ಟಡ ನಿರ್ಮಾಣ ಮಾಡಿ, ಹಳೆಯ ಗತವೈಭವವನ್ನು ಮರುಕಳಿಸುವಂತೆ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 01 03 at 7.26.22 AM
WhatsApp Image 2025 01 03 at 7.26.21 AM
WhatsApp Image 2025 01 03 at 7.26.21 AM 1
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X