ಬಡ ದಲಿತ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ವಿರೋಧಿಸಿ ಜನವರಿ 3 ರಿಂದ ನಗರದ ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಎದುರು ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಜೈಭೀಮ ದಳದ ಅಧ್ಯಕ್ಷ ಮಾರುತಿ ಕಂಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ʼನಗರದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆʼ ಎಂದರು.
1978-79ರಿಂದ ದಲಿತ ಸಮುದಾಯದ ರೈತರು ಜಮೀನು ಉಳುಮೆ ಮಾಡುತ್ತಿದ್ದಾರೆ. ಸ್ವತಃ ಸರ್ಕಾರವೇ ಅವರಿಗೆ ಭೂಮಿ ಹಂಚಿಕೆ ಮಾಡಿದೆ. ಹೀಗಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ಎಷ್ಟು ಸರಿ. ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿ ಹೋಟೆಲ್, ರೇಸ್ಟೊರೆಂಟ್, ಶಾಲಾ-ಕಾಲೇಜು, ಶಾಪಿಂಗ್ ಮಾಲ್ ನಡೆಸುವ ಬಲಾಢ್ಯರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮುಂದಾಗುತ್ತಿಲ್ಲʼ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಚಲಿಸುತ್ತಿದ್ದ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು
ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರಾದ ತುಕಾರಾಮ ಗೌರೆ, ಹಣಮಂತ ಮಟ್ಟೆ ಹಾಗೂ ಭೀಮ ಟೈಗರ್ ಸೇನೆಯ ಜಿಲ್ಲಾಧ್ಯಕ್ಷ ನರಸಿಂಗ್ ಸಾಮ್ರಾಟ್ ಹಾಗೂ ರತಿನ್ ಕಮಲ್, ಅಂಬೇಡ್ಕರ್ ಸಾಗರ್, ರಮೇಶ ಗೌಡ ಸಾಗರ್ ಸೇರಿದಂತೆ ಮತ್ತಿತರಿದ್ದರು.