ದೇಶದಲ್ಲಿ ಉಲ್ಬಣಿಸುತ್ತಿರುವ ಕ್ರೈಸ್ತರ ಮೇಲಿನ ಹಿಂಸಾಚಾರವನ್ನು ತಡೆಯಲು ತಕ್ಷಣದ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ 400ಕ್ಕೂ ಹೆಚ್ಚು ಕ್ರೈಸ್ತ ನಾಯಕರು ಮತ್ತು 30 ಚರ್ಚ್‌ಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಹಿಂಸಾಚಾರವನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ದೇಶಾದ್ಯಂತ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ಕನಿಷ್ಠ 14 ಹಿಂಸಾಚಾರ, ಬೆದರಿಕೆ ಘಟನೆಗಳು ನಡೆದಿವೆ. ಅಲ್ಲದೆ, 2024ರ ಜನವರಿಯಿಂದ ಡಿಸೆಂಬರ್‌ವರೆಗೆ ದೇಶಾದ್ಯಂತ ಕ್ರೈಸ್ತರ ಮೇಲೆ 720ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಪತ್ರವು ಗಮನ ಸೆಳೆದಿದೆ.
2023ರ ಮೇನಿಂದ ಈವರೆಗೆ ಮಣಿಪುರ ಒಂದರಲ್ಲಿಯೇ ನಡೆದ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 360 ಚರ್ಚ್‌ಗಳನ್ನು ನಾಶಪಡಿಸಲಾಗಿದೆ. ಸಾವಿರಾರು ಮಂದಿ ಸ್ಥಳಾಂತರಗೊಂಡಿರುವ ಮಣಿಪುರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸುವಲ್ಲಿ ಪ್ರಧಾನಿಯವರು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಮತಾಂತರ-ವಿರೋಧಿ ಕಾನೂನುಗಳ ದುರುಪಯೋಗ, ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಬೆದರಿಕೆಗಳು, ದ್ವೇಷ ಭಾಷಣೆಗಳ ಹೆಚ್ಚಳ ಹಾಗೂ ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನಿರಾಕರಿಸುವ ಮತ್ತು ಬಹಿಷ್ಕಾರಿಸುವ ಧೋರಣೆಗಳು ಸೇರಿದಂತೆ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯವನ್ನು ಪತ್ರವು ಎತ್ತಿ ತೋರಿಸಿದೆ.
ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಘಟನೆಗಳ ಬಗ್ಗೆ ತ್ವರಿತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು. ಅಲ್ಪಸಂಖ್ಯಾತ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂವಾದಗಳನ್ನು ಆರಂಭಿಸಬೇಕು. ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ತಡೆಯಲು ಅಗತ್ಯವಿರುವ ಎಲ್ಲ ರೀತಿಯ ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಭಾರತದ ನೈತಿಕ ರಚನೆ, ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಏಕತೆಗೆ ಒಳಗೊಳ್ಳುವಿಕೆ ಮತ್ತು ಸಾಮರಸ್ಯ ಅತ್ಯಗತ್ಯವಾದದ್ದು ಎಂದೂ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಸೌಹಾರ್ದತೆಯ ಸೋಗು ಹಾಕಿದ ಕೋಮುವಾದಿ ಮೋದಿ
ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪಡೆದ ಪತ್ರದಲ್ಲಿ ಪ್ರಮುಖ ಕ್ರೈಸ್ತ ಸಮುದಾಯದ ನಾಯಕರಾದ ಥಾಮಸ್ ಅಬ್ರಹಾಂ, ಡೇವಿಡ್ ಒನೆಸಿಮು, ಜೋಬ್ ಲೋಹರಾ, ರಿಚರ್ಡ್ ಹೋವೆಲ್, ಮೇರಿ ಸ್ಕೇರಿಯಾ, ಸೆಡ್ರಿಕ್ ಪ್ರಕಾಶ್ ಎಸ್.ಜೆ., ಜಾನ್ ದಯಾಲ್, ಪ್ರಕಾಶ್ ಲೂಯಿಸ್ ಎಸ್.ಜೆ., ಜೆಲ್ಹೌ ಕೀಹೋ, ಇ.ಹೆಚ್. ಖಾರ್ಕೊಂಗೊರ್, ಅಲೆನ್ ಬ್ರೂಕ್ಸ್, ಕೆ. ಲೊಸಿ ಮಾವೊ, ಅಖಿಲೇಶ್ ಎಡ್ಗರ್, ಮೈಕೆಲ್ ವಿಲಮ್ಸ್, ಎ.ಸಿ. ಮೈಕೆಲ್ ಮತ್ತು ವಿಜಯೇಶ್ ಲಾಲ್ ಸಹಿ ಹಾಕಿದ್ದಾರೆ.
ಗಮನಾರ್ಹವಾಗಿ, ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್)ನ ಅಂಕಿಅಂಶಗಳ ಪ್ರಕಾರ, 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚಾಗಿವೆ. ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ವರ್ಷ 2014ರ ಜುಲೈನಿಂದ ಡಿಸೆಂಬರ್‌ವರೆಗೆ ಭಾರತದಲ್ಲಿ ಕ್ರಿಶ್ಚಿಯನ್ನರ ಮೇಲಿನ 127 ದಾಳಿ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ, ಕ್ರಿಶ್ಚಿಯನ್ನರ ವಿರುದ್ಧ 327 ಹಿಂಸಾತ್ಮಕ ದೌರ್ಜನ್ಯಗಳು ನಡೆದಿವೆ. 2022ರಲ್ಲಿ, 115 ದೈಹಿಕ ಹಿಂಸೆ ಮತ್ತು 357 ಬೆದರಿಕೆ (ಒಟ್ಟು 486) ಪ್ರಕರಣಗಳು ದಾಖಲಾಗಿವೆ. ಗಂಭೀರ ವಿಚಾರವೆಂದರೆ, ಈ ವರ್ಷ, 2024ರ ಜನವರಿಯಿಂದ ನವೆಂಬರ್ ಅಂತ್ಯದವರೆಗೆ ಬರೋಬ್ಬರಿ 745 ದಾಳಿ ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ, ಅನೇಕ ಘಟನೆಗಳಲ್ಲಿ ಚರ್ಚುಗಳು ಮತ್ತು ಕ್ರೈಸ್ತ ಸಂಸ್ಥೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. 2021ರಲ್ಲಿ, ದೇಶಾದ್ಯಂತ ಕನಿಷ್ಠ 15 ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ. 2022ರಲ್ಲಿ, ಹಿಂದುತ್ವ ಕೋಮುವಾದಿಗಳು ದೆಹಲಿಯ ಚರ್ಚ್ ಸೇರಿದಂತೆ ಹಲವಾರು ಚರ್ಚ್‌ಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿವೆ. 2023ರ ಮೇನಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ, ಅದನ್ನೇ ನೆಪವಾಗಿಟ್ಟುಕೊಂಡು ಸುಮಾರು 260ಕ್ಕೂ ಹೆಚ್ಚು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.