ಲಂಚದ ಆರೋಪದ ಮೇಲೆ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ವಿರುದ್ಧ ದೃಢ ಪುರಾವೆ ಲಭ್ಯವಾಗುವವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಗುರುವಾರ ಹೇಳಿದ್ದಾರೆ.
ಅದಾನಿ ಗ್ರೂಪ್ ವಿರುದ್ಧ ಈಗಾಗಲೇ ಹಿಂಡನ್‌ಬರ್ಗ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಆರೋಪಗಳನ್ನು ಮಾಡಿದೆ. ಇದಾದ ಬೆನ್ನಲ್ಲೇ ಅದಾನಿ ಗ್ರೀನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ನ್ಯಾಯಾಲಯ ದೋಷಾರೋಪಣೆ ಮಾಡಿದೆ.
ಇದನ್ನು ಓದಿದ್ದೀರಾ? ₹371 ಕೋಟಿ ಭಾರೀ ಹಗರಣ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಇಡಿಯಿಂದ ಕ್ಲೀನ್ ಚಿಟ್
ಅಮೆರಿಕನ್ ಹೂಡಿಕೆದಾರರನ್ನು ವಂಚಿಸಿದ, ಅಧಿಕಾರಿಗಳಿಗೆ ಲಂಚ ನೀಡಿದ, ಫೆಡರಲ್ ಸೆಕ್ಯುರಿಟೀಸ್ ಕಾನೂನುಗಳನ್ನು ಉಲ್ಲಂಘಿಸಿದ ದೋಷಾರೋಪಣೆಯನ್ನು ಅದಾನಿ ಗ್ರೀನ್ ಮೇಲೆ ಮಾಡಲಾಗಿದೆ.
ಇದಾದ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಅದಾನಿ ಗ್ರೀನ್ ಹೂಡಿಕೆಯನ್ನು ನಿರಾಕರಿಸಿದೆ. ಆದರೆ ಎನ್‌ಡಿಎ ಕೂಟದಲ್ಲಿರುವ ಆಂಧ್ರಪ್ರದೇಶದ ಟಿಡಿಪಿ ಸರ್ಕಾರ ಮಾತ್ರ ಅದಾನಿ ಸಂಸ್ಥೆಯಿಂದ ದೂರವಾಗುತ್ತಿಲ್ಲ. ಈ ಮೂಲಕ ವಿಪಕ್ಷಗಳ ವಾಗ್ದಾಳಿಗೆ ಒಳಗಾಗಿದೆ.
ಇದನ್ನು ಓದಿದ್ದೀರಾ? ಅದಾನಿ ಸಮೂಹ ಘೋಷಿಸಿದ್ದ 100 ಕೋಟಿ ರೂ. ದೇಣಿಗೆ ತಿರಸ್ಕರಿಸಿದ ತೆಲಂಗಾಣ ಸರ್ಕಾರ
ಅದಾನಿ ಸಂಸ್ಥೆ ಬಗ್ಗೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಚೇರಿಯಲ್ಲಿ ಮಾತನಾಡಿದ ನಾಯ್ಡು “ಸರಿಯಾದ ಪುರಾವೆ ಲಭ್ಯವಾಗದೆ ನಾವು ಒಪ್ಪಂದಗಳಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ದೃಢ ಪುರಾವೆ ಸಿಗುವವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ. ನಮಗೆ ಹೆಚ್ಚಿನ ಪುರಾವೆ ಬೇಕು” ಎಂದು ಹೇಳಿಕೊಂಡಿದ್ದಾರೆ.
“ನಾವು ಯುಎಸ್ಎಯಲ್ಲಿ ನಡೆಯುತ್ತಿರುವ ಪ್ರಕರಣದ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ದೃಢವಾದ ಪುರಾವೆ ದೊರೆತರೆ ಮಾತ್ರ ಕ್ರಮಕೈಗೊಳ್ಳಲಾಗುವುದು” ಎಂದಿದ್ದಾರೆ.
