ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಕೊಡಿಸುವುದಾಗಿ ₹1ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ, ಮುಂಗಡವಾಗಿ ₹15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಂತೋಷ್ ರಾಮಚಂದ್ರ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಎಫ್‌ಡಿಎ ಶಿಲ್ಪಾ ಅವರನ್ನು ಬಂಧಿಸಿದ್ದಾರೆ.
ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿತ್ತು. ಸಹಾಯಕಿ ಹುದ್ದೆ ಕೊಡಿಸಲು ಶಿಲ್ಪಾ ಅವರು ಸಂತೋಷ್ ಅವರಿಗೆ ₹1 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಮೊದಲನೇ ಹಂತದಲ್ಲಿ ₹30 ಸಾವಿರ ಲಂಚ ಪಡೆದಿದ್ದರು. ಈ ಬಗ್ಗೆ ಸಂತೋಷ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಗುರುವಾರ ನೇಮಕಾತಿಯ ಆದೇಶ ಪತ್ರ ನೀಡುವಾಗ ಸಂತೋಷ ಅವರಿಂದ ₹15 ಸಾವಿರ ಲಂಚ ಪಡೆಯುತ್ತಿದ್ದಾಗ ಶಿಲ್ಪಾ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಪ್ರತಿ ಆಕಾಂಕ್ಷಿಯೊಬ್ಬರಿಂದ ₹500, ₹1000 ಪಡೆಯುತ್ತಿದ್ದ ದಲ್ಲಾಳಿ ದೇವಪ್ಪ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿಯ ವೇಳೆ ಲೋಕಾಯುಕ್ತ ಪೊಲೀಸ್ ಸಿಬ್ಬಂದಿಯೊಂದಿಗೆ ಅತಿರೇಕದಿಂದ ವರ್ತಿಸಿದ್ದರು. ನನಗೆ ರಾಜಕೀಯ ಮುಖಂಡರು ಗೊತ್ತಿದ್ದಾರೆ ದೇವಪ್ಪ ಎಂದು ಹೆದರಿಸುವ ಪ್ರಯತ್ನ ಮಾಡಿದರು ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ : ದಂಪತಿ ಸಾವು
ಲೋಕಾಯುಕ್ತ ಎಸ್ಪಿ ಉಮೇಶ ಬಿ.ಕೆ. ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಸಿಬ್ಬಂದಿ ಮಲ್ಲಿನಾಥ್, ಮಸೂದ್, ಬಸವರಾಜ, ಸಂತೋಷಿ, ಮಧುಮತಿ, ಪ್ರಮೋಧ್ ತಂಡ ದಾಳಿ ನಡೆಸಿತ್ತು.