ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್‌ನಿಂದ ವ್ಯವಸ್ಥಿತ ದಾಳಿ?

Date:

Advertisements
ಖರ್ಗೆಯವರ ವಿಚಾರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಗಂಭೀರವಾಗಿ ಮೇಲೆ ಬಿದ್ದು 10 ವರ್ಷಗಳಿಗೂ ಹೆಚ್ಚು ಕಾಲವೇ ಆಗಿದೆ. ಅವರು ಕಾಂಗ್ರೆಸ್ಸಿನಲ್ಲಿ ದೊಡ್ಡ ನಾಯಕರಾಗುವುದು ಬಿಜೆಪಿ-ಆರೆಸ್ಸೆಸ್‌ಗೆ ಬಹಳ ಕಷ್ಟ. ಇದುವರೆಗೂ ದೇಶದಲ್ಲಿ ಆರೆಸ್ಸೆಸ್‌ ಜೀರ್ಣಿಸಿಕೊಳ್ಳಲು ಆಗದೇ ಇರುವುದು ದಲಿತ ಸಮುದಾಯದ ಈ ಧಾರೆಯನ್ನೇ. ಇದೆಲ್ಲವೂ ಬಿಜೆಪಿ ಮತ್ತು ಆರೆಸ್ಸೆಸ್‌ಗೆ 'ಖರ್ಗೆಯವರ ಅಪಾಯ'ವನ್ನು ಹೆಚ್ಚಿಸಿದಂತಿದೆ. ಹಣಿಯಲು ಹವಣಿಸುತ್ತಲೇ ಸಾಗಿದೆ...

ಈ ಸದ್ಯ ಕರ್ನಾಟಕದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ ಬಹಳ ವ್ಯವಸ್ಥಿತವಾಗಿ ಇಬ್ಬರು ನಾಯಕರನ್ನು ಗುರಿಯಾಗಿಟ್ಟುಕೊಂಡು ತನ್ನ ರಾಜಕಾರಣವನ್ನು ನಡೆಸುತ್ತಿರುವುದು ಎದ್ದು ಕಾಣುತ್ತಿದೆ. ಒಬ್ಬರು ಸಿದ್ದರಾಮಯ್ಯ, ಇನ್ನೊಬ್ಬರು ಪ್ರಿಯಾಂಕ್‌ ಖರ್ಗೆ.

ಸಿದ್ದರಾಮಯ್ಯನವರ ಮೇಲೆ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಿನಿಂದ ಬಿಜೆಪಿ ಮತ್ತು ಅದರ ಮಾಧ್ಯಮ ಯಂತ್ರಾಂಗವು ಅತ್ಯಂತ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮುಗಿಬೀಳುತ್ತಿತ್ತು. ಅದರಲ್ಲಿ ಮೀನು ತಿಂದು ದೇವಸ್ಥಾನಕ್ಕೆ ಹೋದರು ಥರದ ಸಂಗತಿಗಳೇ ಹೆಚ್ಚಿದ್ದವು. ಎರಡನೇ ಅವಧಿಯಲ್ಲಿ ಅಂತಹ ಯಾವ ವಿಚಾರವೂ ಇರಲಿಲ್ಲ; ಮುಡಾ ಸೈಟಿನ ವಿಚಾರ ಇಟ್ಟುಕೊಂಡು ಪ್ರಭುತ್ವದ ವಿವಿಧ ಅಂಗಗಳನ್ನೂ ಶಾಮೀಲು ಮಾಡಿಸಿಕೊಂಡು ನಡೆಸಿದ ಕಾರ್ಯಾಚರಣೆಯಲ್ಲಿ ಸ್ಥಳೀಯ ನಾಯಕರೆಲ್ಲಾ ಆಟದ ಕಾಯಿಗಳಷ್ಟೇ ಆಗಿದ್ದರು. ಬಹಳ ಮೇಲಿನಿಂದ ನಡೆಸಿದ ಈ ಆಪರೇಷನ್‌ ಇನ್ನೂ ಮುಗಿದಿಲ್ಲ. ಮೂರು ಉಪಚುನಾವಣಾ ಫಲಿತಾಂಶವು ಅದಕ್ಕೆ ಸ್ವಲ್ಪ ಮಟ್ಟಿಗಿನ ಕಡಿವಾಣ ಹಾಕಿದೆ ಎನ್ನುವುದನ್ನು ಬಿಟ್ಟರೆ, ಇನ್ನೂ ಯಾವ ಹಂತಕ್ಕೆ ಮುಡಾ ವಿಚಾರವನ್ನು ಕೊಂಡೊಯ್ಯಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಖರ್ಗೆಯವರ ವಿಚಾರದಲ್ಲಿ ಬಿಜೆಪಿಯು ಅತ್ಯಂತ ಗಂಭೀರವಾಗಿ ಮೇಲೆ ಬಿದ್ದು 10 ವರ್ಷಗಳಿಗೂ ಹೆಚ್ಚು ಕಾಲವೇ ಆಗಿದೆ. ಯಾವುದೇ ರಾಜಕೀಯ ಪಕ್ಷವು ತನ್ನ ವಿರುದ್ಧ ಇರುವ ಪಕ್ಷಗಳ ವಿರುದ್ಧ ಸೈದ್ಧಾಂತಿಕವಾದ ಅಥವಾ ರಾಜಕೀಯವಾದ ತಂತ್ರ, ಪ್ರತಿತಂತ್ರ ಹೂಡುವುದು ಸಾಮಾನ್ಯ. ಕೆಲವು ನಾಯಕರನ್ನು ಗುರಿ ಮಾಡುವುದೂ ಅಪರೂಪವೇನಲ್ಲ. ಆದರೆ, ಅದು ಯಾರನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತದೆ ಮತ್ತು ಅದನ್ನು ನಡೆಸುವ ವಿಧಾನವೇನು ಎಂಬುದನ್ನು ಗಮನಿಸಿದರೆ, ನಮಗೆ ಆಶ್ಚರ್ಯಕರವಾದ ಹಾಗೂ ಕೆಲವೊಮ್ಮೆ ಆತಂಕಕ್ಕೀಡು ಮಾಡುವ ಸಂಗತಿಗಳು ಗೋಚರವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಅವರ ಕುಟುಂಬದ ಮೇಲೆ ನಡೆಸುತ್ತಿರುವ ದಾಳಿಗೆ ಅಂತಹ ಹಲವು ಆಯಾಮಗಳಿವೆ. ಇದಕ್ಕಾಗಿ ಆರೆಸ್ಸೆಸ್‌ ಮತ್ತು ಬಿಜೆಪಿಗಳು ಆರಿಸಿಕೊಳ್ಳುವ ಸಮಯ, ವಿಧಾನ ಮತ್ತು ಹತಾರಗಳು ಭಾರತದ ಸಾಮಾಜಿಕ ಹಾಗೂ ರಾಜಕೀಯ ಸಂದರ್ಭಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Advertisements

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಆಡಳಿತ ಪಕ್ಷದಿಂದ ಸೀದಾ, ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನೂ ಹೊಂದಿರದ ದುಸ್ಥಿತಿಗೆ ತಲುಪಿತ್ತು. ಆ ಹೊತ್ತಿಗೆ ರಾಹುಲ್‌ ಗಾಂಧಿಯವರೂ ಸಹ ಈಗಿನಷ್ಟು ಆತ್ಮವಿಶ್ವಾಸದಿಂದ ಪಕ್ಷವನ್ನು ಮುನ್ನಡೆಸಲು ಮುಂದೆ ಬಂದಿರಲಿಲ್ಲ. ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಆಗ ಆಯ್ಕೆ ಮಾಡಿದ್ದು, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿ ಬಂದಿದ್ದ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು. ಸ್ವಂತ ಕ್ಷೇತ್ರದಲ್ಲಿ ಗೆದ್ದು ಬರುವುದು ಖರ್ಗೆಯವರಿಗೆ ವಿಷಯವೇ ಆಗಿರಲಿಲ್ಲ. ಈ ಲೇಖನದ ಲೇಖಕ ಕೆಲವು ವರ್ಷಗಳ ಹಿಂದೆ ಅವರನ್ನು ಸಂದರ್ಶನ ಮಾಡಿದಾಗ, ‘ನೀವು ಗುರುಮಿಟ್ಕಲ್‌ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದಿದ್ದಿರಿ’ ಎಂದು ಕೇಳುತ್ತಿದ್ದಂತೆ, ‘ಏಳಲ್ಲ, ಎಂಟು ಬಾರಿ’ ಎಂದು ತಿದ್ದಿದ್ದರು. ಆ ನಂತರ 2008ರಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದವರು, 2009ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾದರು.

ಹೀಗೆ ಅವಿರತವಾಗಿ ಗೆಲ್ಲುತ್ತಾ ಬಂದವರು, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾಗ 2019ರ ಚುನಾವಣೆಯಲ್ಲಿ ಸ್ವಂತ ಕ್ಷೇತ್ರದಲ್ಲಿ ಸೋತಿದ್ದು ಸಾಮಾನ್ಯ ವಿದ್ಯಮಾನದ ಭಾಗವಾಗಿರಲಿಲ್ಲ. ಬದಲಿಗೆ 2015ರಿಂದ ಆರಂಭಿಸಿ ಬಹಳ ವ್ಯವಸ್ಥಿತವಾದ ಪ್ರಚಾರ, ತಂತ್ರ – ಕುತಂತ್ರ ಹಾಗೂ ಪ್ರಯತ್ನದ ಭಾಗವಾಗಿ ಆ ಸೋಲಾಗಿತ್ತು. ಈ ತಂತ್ರ ಹೆಣೆದಿದ್ದು ಸ್ಥಳೀಯ ಬಿಜೆಪಿ ನಾಯಕರಾಗಿರಲಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‌ನ ನಾಯಕತ್ವಕ್ಕೆ ಖರ್ಗೆಯವರು ಲೋಕಸಭೆಯಲ್ಲಿ ಗಟ್ಟಿಯಾಗಿ ನರೇಂದ್ರ ಮೋದಿಯವರ ವಿರುದ್ಧ ದನಿಯೆತ್ತಿದರು ಎಂಬುದೇ ಅದಕ್ಕೆ ಕಾರಣ ಎಂದು ಹಲವರು ಹೇಳುತ್ತಾರೆ. ಖರ್ಗೆಯವರ ಕುಟುಂಬದ ಮೇಲೆ ನಡೆಯುತ್ತಿರುವ ಬಹುಮುಖಿ ದಾಳಿಯನ್ನು ನೋಡಿದರೆ ಅದೊಂದೇ ಕಾರಣ ಎನಿಸುವುದಿಲ್ಲ.

ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್‌ ಖರ್ಗೆಯವರು ಸ್ವಾತಂತ್ರ್ಯೋತ್ತರ ಭಾರತದ ಎರಡು ವಿದ್ಯಮಾನಗಳನ್ನು ಪ್ರತಿನಿಧಿಸುತ್ತಾರೆ. ಕಲಬುರ್ಗಿಯಲ್ಲಿ ಮಿಲ್‌ ಕಾರ್ಮಿಕರಾಗಿದ್ದ ಖರ್ಗೆಯವರಿಗೆ ಮೊದಲ ಸಾರಿ ವಿಧಾನಸಭಾ ಚುನಾವಣೆಯ ಸೀಟನ್ನು ನೀಡಿದ್ದರಲ್ಲಿ ಕಾಂಗ್ರೆಸ್‌ ಪಕ್ಷದ ಕೊಡುಗೆ ಇತ್ತು ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲಿಂದಾಚೆಗೆ ಎಂಎಲ್‌ಎ ಆಗಿ ಸತತ ಗೆದ್ದು ಬಂದಿದ್ದು, ಸಚಿವ ಸ್ಥಾನದ ಜವಾಬ್ದಾರಿ ಸಿಕ್ಕಾಗ ಅದನ್ನು ನಿಭಾಯಿಸುತ್ತಾ ಬಂದ ಖರ್ಗೆಯವರು ಮೀಸಲಾತಿಯ ಬಲದಿಂದಷ್ಟೇ ನಾಯಕರಾಗಿರಲಿಲ್ಲ. 1996ರಲ್ಲೊಮ್ಮೆ ವಿರೋಧ ಪಕ್ಷದ ನಾಯಕರಾಗಿದ್ದವರು, ನಂತರ ಕೆಪಿಸಿಸಿ ಅಧ್ಯಕ್ಷರಾದರು ಮತ್ತು 2009ರಲ್ಲಿ ಗೆದ್ದು ಲೋಕಸಭೆಗೆ ಹೋಗುವ ಮುಂಚೆಯೂ ವಿರೋಧ ಪಕ್ಷದ ನಾಯಕರಾಗಿದ್ದರು. ದಲಿತ ಮುಖ್ಯಮಂತ್ರಿ ಎಂಬ ಪ್ರಶ್ನೆ ಬಂದಾಗಲೂ, ‘ನಾನು ಅರ್ಹನೆಂದು ಮುಖ್ಯಮಂತ್ರಿಯಾಗಬೇಕೇ ಹೊರತು, ದಲಿತ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ಮಾತ್ರ ಅಲ್ಲ’ ಎಂದು ಗತ್ತಿನಿಂದ ಹೇಳಲು ಸಾಧ್ಯವಾಗಿದ್ದು, ದೀರ್ಘಕಾಲದ ಆಡಳಿತಾನುಭವ ಇದ್ದುದರಿಂದಲೇ ಆಗಿತ್ತು. ಒಕ್ಕೂಟ ಸರ್ಕಾರದಲ್ಲಿ ರೈಲ್ವೇ ಮತ್ತು ಕಾರ್ಮಿಕ ಮಂತ್ರಿಯಾಗಿದ್ದಾಗಲೂ ಇದೇ ಆಡಳಿತಾತ್ಮಕ ಅನುಭವದ ಹಿನ್ನೆಲೆಯಿದ್ದುದರಿಂದಲೇ ತಮ್ಮ ದಕ್ಷತೆಯನ್ನು ತೋರಿಸಿದ್ದರು ಮತ್ತು ಕೇಂದ್ರ ಸಂಪುಟದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಉಪಸಮಿತಿಯ ಭಾಗವೂ ಆಗಿದ್ದರು. ಇಷ್ಟೇ ಆಗಿದ್ದರೂ ಅವರು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುತ್ತಿರಲಿಲ್ಲ. ದಲಿತ ಸಮುದಾಯಕ್ಕೆ ಸೇರಿದವರು ಬಲಾಢ್ಯ ಜಾತಿಗಳಿಗೆ ಅಡಿಯಾಳಾಗಿ ಇದ್ದಷ್ಟು ಕಾಲ ಅವರು ಬಹಳ ಸಮಸ್ಯೆ ಎಂದು ಬಿಜೆಪಿಯಂತಹ ಪಕ್ಷ ಭಾವಿಸುವುದಿಲ್ಲ. ಆದರೆ, ಸ್ವಾಭಿಮಾನದಿಂದ ತಲೆಯೆತ್ತಿ ನಡೆದರೆ ಅದು ಭಾರೀ ಅಪಾಯವಾಗಿರುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?

ಬಿ.ಶ್ಯಾಮಸುಂದರ್‌ ರಂತಹ ಆಗಿನ ಕ್ರಾಂತಿಕಾರಿ ದಲಿತ ನಾಯಕರಿಂದ ಸಾರ್ವಜನಿಕ ಬದುಕಿನ ಆರಂಭದ ದೀಕ್ಷೆ ಪಡೆದಿದ್ದ ಖರ್ಗೆಯವರು ದಲಿತ ಚಳವಳಿ ಆರಂಭವಾಗುವ ಮುಂಚೆಯೇ ಅಂಬೇಡ್ಕರ್‌ ಚಿಂತನೆಯ ಪ್ರಭಾವದಲ್ಲಿದ್ದವರು (ಕರ್ನಾಟಕದ ದಲಿತ ಚಳವಳಿಯ ಜೊತೆಗೆ ಖರ್ಗೆಯವರ ಸಂಬಂಧ ಅಷ್ಟೇನೂ ಹತ್ತಿರದ್ದಾಗಿರದ್ದಕ್ಕೆ ಇಂತಹ ಕೆಲವು ಕಾರಣಗಳೂ ಇರಬಹುದು). ಉತ್ತರ ಕರ್ನಾಟಕದಲ್ಲೇ ಕರ್ನಾಟಕದ ದಲಿತ ಸಮುದಾಯ ಹೆಚ್ಚು ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾಗಿದ್ದೂ ಅಂಬೇಡ್ಕರ್‌ ಪ್ರಭಾವದಿಂದಲೇ. ಕಲಬುರಗಿಯಲ್ಲಿ ದೊಡ್ಡ ಬೌದ್ಧವಿಹಾರವನ್ನು ಖರ್ಗೆಯವರು ಕಟ್ಟಿಸಿದ್ದನ್ನು ಗಮನಿಸಬೇಕು. ತಮ್ಮ ಮಕ್ಕಳಿಗೆಲ್ಲರಿಗೂ ಬೌದ್ಧ ಹೆಸರುಗಳನ್ನೇ (ಪ್ರಿಯಾಂಕ್‌, ಪ್ರಿಯದರ್ಶಿನಿ, ರಾಹುಲ್‌ ಮತ್ತು ಮಿಲಿಂದ್‌) ಇಡುವ ಮಟ್ಟಿಗೆ ಅವರು ಬುದ್ಧಿಸ್ಟ್‌.

ಹೀಗಿರುವ ಖರ್ಗೆಯವರು ಕಾಂಗ್ರೆಸ್ಸಿನಲ್ಲಿ ದೊಡ್ಡ ನಾಯಕರಾಗುವುದು ಬಿಜೆಪಿ ಆರೆಸ್ಸೆಸ್‌ಗೆ ಬಹಳ ಕಷ್ಟ. ಇದುವರೆಗೂ ದೇಶದಲ್ಲಿ ಆರೆಸ್ಸೆಸ್‌ ಜೀರ್ಣಿಸಿಕೊಳ್ಳಲು ಆಗದೇ ಇರುವುದು ದಲಿತ ಸಮುದಾಯದ ಈ ಧಾರೆಯನ್ನೇ. ಅದನ್ನು ಜೀರ್ಣಿಸಿಕೊಳ್ಳದೇ ಅಬಾಧಿತವಾದ ಅಧಿಕಾರವೂ ಕಷ್ಟ; ಹಿಂದೂಗಳೆಲ್ಲಾ ಒಂದು ಹೇಳುವುದೂ ಮನುಸ್ಮೃತಿ ಪ್ರಣೀತ ಸಾವರ್ಕರ್‌ ಹಿಂದುತ್ವವೂ ಅಲ್ಲಾಡುತ್ತದೆ. ಖರ್ಗೆಯವರು ಯಾವುದಕ್ಕೆ ಸಂಕೇತವೋ ಅದನ್ನು ಅಮಾನ್ಯಗೊಳಿಸುವುದು ಬಿಜೆಪಿಗೆ ಅತ್ಯಂತ ಅಗತ್ಯ. ಹಾಗೆ ನೋಡಿದರೆ, ತಮ್ಮ ಬದುಕಿನಲ್ಲಿ ಇವನ್ನೆಲ್ಲಾ ಇಟ್ಟುಕೊಂಡ ಖರ್ಗೆಯವರು ಅಂತಹ ದೊಡ್ಡ ನಾಯಕರು, ಕಾರ್ಯಕರ್ತರು ಮತ್ತು ತತ್ವಬದ್ಧ ಕೇಡರ್‌ ಬೆಳೆಸಿದ ಉದಾಹರಣೆ ಇಲ್ಲ. ನಂತರದಲ್ಲಿ ಆರೆಸ್ಸೆಸ್‌ ಚೆಡ್ಡಿ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಹೊರಟ ಛಲವಾದಿ ನಾರಾಯಣಸ್ವಾಮಿಯವರೂ ಮೂಲ ಖರ್ಗೆಯವರ ಬಳಗದಲ್ಲೇ ಇದ್ದವರು. ಇಂತಹ ಹಲವಾರು ಕೊರತೆಗಳನ್ನು ಅವರಲ್ಲಿ ಗುರುತಿಸಬಹುದಾದರೂ, ವ್ಯಕ್ತಿಯಾಗಿ ಅವರು ಬಿಜೆಪಿಗೆ ಕಷ್ಟದ ಎದುರಾಳಿ.

ಇವೆಲ್ಲಾ ಕಾರಣಗಳಿಂದ, 2015ರ ಸುಮಾರಿಗೆ ಅವರನ್ನು ಅಮಾನ್ಯಗೊಳಿಸಲು ಸತತ ಪ್ರಯತ್ನ ಶುರುವಾಯಿತು. ಖರ್ಗೆಯವರಿಗೆ ಕೊಡಗಿನಿಂದ ಶುರು ಮಾಡಿ ಕೊರಿಯಾದವರೆಗೆ 50,000 ಕೋಟಿ ರೂ. ಆಸ್ತಿ ಇದೆ ಎಂಬ ನಿರಂತರ ವಾಟ್ಸ್ಯಾಪ್‌ ಸುಳ್ಳು ಪ್ರಚಾರವು ಯಾವ ಪ್ರಮಾಣದಲ್ಲಿ ಇತ್ತೆಂದರೆ, ಬಹುಶಃ ವಾಟ್ಸ್ಯಾಪ್‌ ಇರುವ ಪ್ರತಿಯೊಬ್ಬರೂ ಅದನ್ನು ಒಮ್ಮೆಯಾದರೂ ನೋಡಿರುತ್ತಾರೆ. ಈ ರೀತಿ ಆರೆಸ್ಸೆಸ್ಸಿನ ಪ್ರಚಾರಯಂತ್ರ ಹೀಗೆ ಹಬ್ಬಿಸುತ್ತದೆ ಎಂಬುದಷ್ಟೇ ಅದಕ್ಕೆ ಕಾರಣವಲ್ಲ. ದಲಿತ ಸಮುದಾಯಕ್ಕೆ ಸೇರಿದವರೊಬ್ಬರು ಆಸ್ತಿವಂತರಾದರೆ (ಈ 50,000 ಕೋಟಿಯ ಸುಳ್ಳನ್ನು ಬಿಡಿ, 50 ಕೋಟಿ ಆಸ್ತಿವಂತರಾದರೂ) ಸಮಾಜ ಅದನ್ನು ನೇರವಾಗಿ ಸ್ವೀಕರಿಸುವುದಿಲ್ಲ. ಹಾಗಾಗಿ ಸುಳ್ಳುಗಳು ಬೇಗ ಹಬ್ಬಿದವು. ಇಂಥದ್ದೇ ಒಂದು ಪ್ರಕರಣ ನಂತರದಲ್ಲಿ ಪ್ರಿಯಾಂಕ್‌ ಖರ್ಗೆಯವರ ವಿರುದ್ಧವೂ ನಡೆಯಿತು. ಅವರು ಕಲಬುರ್ಗಿ ದಲಿತರಲ್ಲ, ಬೆಂಗಳೂರಿನ ದಲಿತರು ಅಂತ. ಹೇಳಿದವರು ತನ್ನನ್ನು ತಾನು ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ವ್ಯಕ್ತಿಯೆಂದು ಹೇಳಿಕೊಳ್ಳುವ ಆರೆಸ್ಸೆಸ್‌ ಬಿಜೆಪಿಯ ಸುನಿಲ್‌ ಕುಮಾರ್‌. ತಾನು ಬೆಂಗಳೂರು ದಲಿತ ಅಷ್ಟೇ ಅಲ್ಲ, ಕಾಸ್ಮೋಪಾಲಿಟನ್‌ ದಲಿತ, ಏನೀಗ? ಎಂದು ಪ್ರಿಯಾಂಕ್‌ ಅವರು ಅಬ್ಬರಿಸಿದ್ದರು.

ಈ ಪ್ರತಿ ಏಟೇ ಬ್ರಾಹ್ಮಣಶಾಹಿ ಯಜಮಾನಿಕೆಗೆ ತೊಡಕು. ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರಿಂದ ಸೋಲಿಸುವುದು ಕಷ್ಟವೆಂದು ಅರಿತ ಬಿಜೆಪಿ ಸರಿಯಾದ ತಂತ್ರ ಹೆಣೆದಿತ್ತು. ಕೇವಲ ಹಣದಿಂದ ಮಾತ್ರ ಆದ ಪ್ರಯತ್ನ ಅದಲ್ಲ; ಖರ್ಗೆಯವರ ವಿರುದ್ಧ ಅಪಪ್ರಚಾರ, ಪ್ರಿಯಾಂಕ್‌ ಖರ್ಗೆಯವರ ಅಹಂಕಾರ(ಅಂದರೆ ಇತರ ಜಾತಿಗಳಿಗೆ ತಗ್ಗಿಬಗ್ಗಿಯೇ ನಡೆಯಬೇಕೆಂಬ ಫ್ಯೂಡಲ್‌ ಸಮಾಜದ ಎದುರು ಎದೆಯೆತ್ತಿ ನಡೆಯುವುದು)ವೇ ಸಮಸ್ಯೆ ಇತ್ಯಾದಿಗಳ ಜೊತೆಗೆ ಜಾತಿ ಸಮೀಕರಣವನ್ನೂ ಮಾಡಲಾಯಿತು. ಕಾಂಗ್ರೆಸ್ಸಿನಲ್ಲೇ ಇದ್ದ ಲಂಬಾಣಿ ಸಮುದಾಯದ ಉಮೇಶ್‌ ಜಾಧವ್‌ ಎಂಬ ವೈದ್ಯರನ್ನು ‘ಆಪರೇಷನ್‌’ ಮಾಡಲಾಯಿತು.

ಕಾರ್ಮಿಕ ಸಚಿವರಾಗಿದ್ದಾಗ ಕಲಬುರ್ಗಿಗೆಂದೇ ದೊಡ್ಡ ಇಎಸ್‌ಐ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜು ತಂದಿದ್ದ ಖರ್ಗೆಯವರು, ರೈಲ್ವೇ ಸಚಿವರಾಗಿದ್ದಾಗಲೂ ಕಲಬುರಗಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈ ಭಾಗಕ್ಕೆ ಆದ ಬಹುದೊಡ್ಡ ಅನುಕೂಲವೆಂದರೆ, 371 ಜೆ ಮೂಲಕ ಹೈದ್ರಾಬಾದ್‌ ಕರ್ನಾಟಕಕ್ಕೆ ಸಾಂವಿಧಾನಿಕ ವಿಶೇಷ ಸ್ಥಾನಮಾನ. ಆ ಸ್ಥಾನಮಾನದ ಅನುಕೂಲವನ್ನು ಕಲಬುರಗಿಯ ಜನತೆ 2019ರ ಹೊತ್ತಿಗಾಗಲೇ ಕಂಡೂ ಆಗಿತ್ತು. ಇಷ್ಟೆಲ್ಲಾ ಇದ್ದರೂ, ಬಹಳ ವ್ಯವಸ್ಥಿತ ಪ್ರಯತ್ನ ಮಾಡಿ ಖರ್ಗೆಯವರು ಸೋಲುವಂತೆ ಆಗಿತ್ತು. ಈ ಹೊತ್ತಿಗೆ ಖರ್ಗೆಯವರ ಸಾಮರ್ಥ್ಯವನ್ನು ದೆಹಲಿ ಕಂಡು ಆಗಿತ್ತು. ಹಾಗಾಗಿ, ಅವರನ್ನು ರಾಜ್ಯಸಭೆಗೆ ಕರೆಸಿಕೊಂಡ ಕಾಂಗ್ರೆಸ್‌ ನಂತರ ಎಐಸಿಸಿ ಅಧ್ಯಕ್ಷರನ್ನಾಗಿಯೂ ಆರಿಸಿಕೊಂಡಿತು.

ಇದೆಲ್ಲವೂ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ‘ಖರ್ಗೆಯವರ ಅಪಾಯ’ವನ್ನು ಹೆಚ್ಚಿಸಿದಂತಿದೆ. ರಾಜ್ಯಸಭೆಯಲ್ಲಿ ಅರ್ಧ ಜೋಕರ್‌ ನಂತೆ ಕಾಣುವ, ಆದರೆ, ಸಂಸದೀಯ ನಡವಳಿಕೆಯ ಲಜ್ಜೆಯನ್ನೆಲ್ಲಾ ಗಾಳಿಗೆ ತೂರಿರುವ ಅಧ್ಯಕ್ಷರನ್ನು ಬಿಜೆಪಿ ಕೂರಿಸಿದೆ. ಲಂಗೋಟಿಯನ್ನಾದರೂ ಕಟ್ಟಿಕೊಂಡು ಬಂದರೆ ಕುಸ್ತಿಯಾಡಬಲ್ಲ ಖರ್ಗೆಯವರ ಎದುರು, ಯಾವ ಲಜ್ಜೆಯೂ ಇಲ್ಲದ ಸಾಂವಿಧಾನಿಕ ಸ್ಥಾನವೊಂದು ಎದುರಾಗುವಂತೆ ನೋಡಿಕೊಳ್ಳಲಾಗಿದೆ. ಅದನ್ನು ಹೊರತುಪಡಿಸಿದರೆ ಅವರ ಮೇಲೆ ಹೆಚ್ಚಿನ ದಾಳಿ ನಡೆಸಲು ಈಗೇನೂ ಉಳಿದಿಲ್ಲ.

ಹಾಗಾಗಿಯೂ, ಬಿಜೆಪಿಯ ದಾಳಿಯು ಪ್ರಿಯಾಂಕ್‌ ಖರ್ಗೆಯವರನ್ನು ಗುರಿ ಮಾಡಿದೆ. ಸ್ವತಃ ಪ್ರಿಯಾಂಕ್‌ ಅವರು ತನ್ನ ಪಾಡಿಗೆ ತಾನು ಅಧಿಕಾರ, ಕ್ಷೇತ್ರ ನೋಡಿಕೊಂಡು ಇರುವ ಸ್ವಭಾವದವರಲ್ಲ. ನೇರವಾಗಿ ತನ್ನ ಪಕ್ಷದ ನೀತಿಯ ವಿರುದ್ಧದ, ಬಿಜೆಪಿಯನ್ನು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಎದುರಿಸಲು ತೊಡೆ ತಟ್ಟುತ್ತಿರುತ್ತಾರೆ. ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ, ಕಾಂಗ್ರೆಸ್ಸಿನ ಮೀಡಿಯಾ ವಿಭಾಗದ ಮುಖ್ಯಸ್ಥರಾಗಿ ಪ್ರಿಯಾಂಕ್‌ ಅವರಿದ್ದರು. ಆಗೊಮ್ಮೆ ಈಗೊಮ್ಮೆ ಪತ್ರಿಕಾಗೋಷ್ಠಿ ನಡೆಸುತ್ತಾ ಸುಮ್ಮನಿರದೇ, ಆ ಸಂದರ್ಭದಲ್ಲಿ ಹೊರಬಂದ ಹಲವು ಹಗರಣಗಳನ್ನು ತಾವೇ ಮುಂದೆ ನಿಂತು ಬಿಚ್ಚಿಡಲು ಶುರು ಮಾಡಿದರು. ಪಿಎಸ್‌ಐ ಹಗರಣವಂತೂ ಕಲಬುರ್ಗಿಯಿಂದಲೇ ಹೊರಬಂದಿತು. ಬಿಟ್‌ ಕಾಯಿನ್‌ ಹಗರಣ ಯಾರಿಗೂ ಏನೆಂದು ಅರ್ಥವಾಗುವುದೇ ಕಷ್ಟವಿತ್ತು. ಅದನ್ನು ಬಿಡಿಸಿಟ್ಟರು. ವಿಧಾನಸೌಧದಲ್ಲಿ ಸಾವರ್ಕರ್‌ ಫೋಟೋ ಹಾಕುವುದು ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ದನಿಯೆತ್ತಿದ್ದರು. ಕೆಕೆಆರ್‌ಡಿಬಿ ಹಣವನ್ನು ಆರೆಸ್ಸೆಸ್‌ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡುವುದನ್ನು ವಿರೋಧಿಸಿದ್ದರು.

ಇದನ್ನು ಓದಿದ್ದೀರಾ?: ಬೌದ್ಧ ಬಿಕ್ಕುಗಳ ಆತ್ಮಾಹುತಿ ಪ್ರೀತಿಯ ಪ್ರತೀಕ: ಮಾರ್ಟಿನ್ ಲೂಥರ್ ಕಿಂಗ್‌ರನ್ನು ಬೋಧಿಸತ್ವ ಎಂದ ಥಿಚ್

ಮಲ್ಲಿಕಾರ್ಜುನ ಖರ್ಗೆಯವರ modern versionನಂತೆ ಬಿಜೆಪಿ ಹಾಗೂ ಆರೆಸ್ಸೆಸ್‌ ಮೇಲೆ ಬೀಳುವ ಪ್ರಿಯಾಂಕ್‌ ಖರ್ಗೆ ಈಗ ಬಿಜೆಪಿಯ ಆಕ್ರಮಣಕ್ಕೆ ಗುರಿಯಾಗಿರುವ ಪ್ರಮುಖ ನಾಯಕರಲ್ಲೊಬ್ಬರಾಗಿದ್ದಾರೆ. ಇದೂ ಸಹಾ ಈಗಲೇ ಶುರುವಾದದ್ದಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅದು ಹೊರಕ್ಕೆ ಕಾಣಲಾರಂಭಿಸಿತ್ತು. ಇವೆಲ್ಲದರ ಪರಿಣಾಮವಾಗಿ ಇಡೀ ರಾಜ್ಯದಲ್ಲಿ ಸೋಲುವುದು ಗ್ಯಾರಂಟಿಯಾಗಿದ್ದ ಬಿಜೆಪಿಯು ಆಯ್ದ ಕೆಲವು ಕ್ಷೇತ್ರಗಳಿಗೆ ವಿಶೇಷ ಗಮನ ಕೊಟ್ಟಿತ್ತು. ಸಿದ್ದರಾಮಯ್ಯನವರ ವರುಣಾಕ್ಕೆ ಸೋಮಣ್ಣರನ್ನು ಕಳಿಸಿ, ಡಿ.ಕೆ.ಶಿವಕುಮಾರ್‌ ಅವರ ಕನಕಪುರಕ್ಕೆ ಆರ್‌.ಅಶೋಕ್‌ರನ್ನು ಕಳಿಸಿ, ಹಾಸ್ಯಾಸ್ಪದ ಪ್ರಯೋಗವನ್ನು ಮಾಡಿದ್ದ ಬಿಜೆಪಿ, ಪ್ರಿಯಾಂಕ್‌ ಖರ್ಗೆಯವರ ಚಿತ್ತಾಪುರಕ್ಕೆ ಮಾತ್ರ ದೀರ್ಘಕಾಲದ ತಯಾರಿ ನಡೆಸಿತ್ತು. ಚಕ್ರವರ್ತಿ ಸೂಲಿಬೆಲೆಯೂ ಚಿತ್ತಾಪುರಕ್ಕೇ ಹೋಗುವುದು, ಅರುಣ್‌ ‘ಜಿ’ ಎಂಬಾತನನ್ನು ಅಲ್ಲಿಗೇ ವಿಶೇಷ ಅಸೈನ್‌ಮೆಂಟಿಗೆ ಕಳಿಸುವುದು, ರಾಜ್ಯದ ಬೇರೆಲ್ಲೂ ಹೆಚ್ಚು ಹೋಗದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಚಿತ್ತಾಪುರದಲ್ಲೇ ಸಮಾವೇಶ ನಡೆಸುವುದು ಎಲ್ಲವೂ ನಡೆದು ಹೋಯಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶವೂ ನಿಗದಿಯಾಗಿ ನಂತರ ರದ್ದಾಗಿತ್ತು.

2009ರ ಉಪಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆಯವರನ್ನು 1,600 ಮತಗಳಲ್ಲಿ ಸೋಲಿಸಿದ್ದ ಬಿಜೆಪಿಯ ವಾಲ್ಮೀಕಿ ನಾಯಕ್‌, ಆ ನಂತರದ ಎರಡು ಚುನಾವಣೆಗಳಲ್ಲಿ ಸೋತಿದ್ದರು. ಅವರು 2021ರಲ್ಲಿ ತೀರಿಕೊಂಡ ನಂತರ ಅಲ್ಲಿನ ಸಹಜ ಆಯ್ಕೆ ಆರೆಸ್ಸೆಸ್‌ ಮೂಲದ ಜಿ.ಪಂ ಸದಸ್ಯ ಅರವಿಂದ ಚೌಹಾಣ್‌ ಎಂದು ಭಾವಿಸಲಾಗಿತ್ತು. ಆದರೆ ಪ್ರಿಯಾಂಕ್‌ ಖರ್ಗೆಯವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಬಿಜೆಪಿಯು, ತನ್ನದೇ ಸರ್ಕಾರದಲ್ಲಿ ಗಡೀಪಾರು ಮಾಡಿದ್ದ, 45 ಕ್ರಿಮಿನಲ್‌ ಕೇಸುಗಳನ್ನು ಮೈಮೇಲೆ ಹೊದ್ದುಕೊಂಡಿದ್ದ ಮಣಿಕಂಠ ರಾಥೋಡ್‌ ಎಂಬಾತನನ್ನು ತಂದು ಅಭ್ಯರ್ಥಿಯನ್ನಾಗಿಸಿತ್ತು. ಇದರಿಂದ ಚಿತ್ತಾಪುರದಲ್ಲಿ ಭಾರೀ ಜಿದ್ದಾಜಿದ್ದಿಯ ವಾತಾವರಣ ಏರ್ಪಟ್ಟಿತಾದರೂ, ಇದೇ ಪ್ರಿಯಾಂಕ್‌ ಅವರ ಗೆಲುವಿಗೂ ಕಾರಣವಾಯಿತು. ಬಿಜೆಪಿ ಯಾವ ಪರಿ ಖರ್ಗೆಯವರ ಬೆನ್ನು ಬಿದ್ದಿತ್ತೆಂದರೆ, ಅವರದ್ದೇ ಪರಿವಾರದಲ್ಲಿದ್ದ, ಟಿಕೆಟ್‌ ವಂಚಿತನಾಗಿ ಕಾಂಗ್ರೆಸ್‌ ಸೇರಿದ್ದ ಅರವಿಂದ್‌ ಚೌಹಾಣ್‌ ಮನೆ ಮೇಲೆ ಐಟಿ ರೇಡ್‌ ಮಾಡಿಸಿದ್ದರು!

ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರವನ್ನು ಬಿಜೆಪಿಯು ಹಣಾಹಣಿ ಕ್ಷೇತ್ರವಾಗಿಸಿದ್ದ ಅದೇ ಸಂದರ್ಭದಲ್ಲಿ ಖರ್ಗೆಯವರ ಕುಟುಂಬದಲ್ಲಿ ಅತಿ ಹತ್ತಿರದ ಇಬ್ಬರು ತೀವ್ರ ಅನಾರೋಗ್ಯದಲ್ಲಿ ಇದ್ದರು. ಅದೇ ಪರಿಸ್ಥಿತಿಯಲ್ಲಿ ಈಗಲೂ ಇದ್ದಾಗಲೇ ಇನ್ನೊಮ್ಮೆ ಪ್ರಿಯಾಂಕ್‌ ಅವರನ್ನು ಗುರಿಯಾಗಿಸಿ ಒಂದು ಅಭಿಯಾನವನ್ನೇ ಬಿಜೆಪಿ ಕೈಗೆತ್ತಿಕೊಂಡಿದೆ. ತಮ್ಮ ಕುಟುಂಬಸ್ಥರ ಅನಾರೋಗ್ಯವನ್ನು ಸಾರ್ವಜನಿಕ ವಿಷಯವನ್ನಾಗಿಸದೇ ಘನತೆಯಿಂದ ಖರ್ಗೆಯವರು ನಡೆದುಕೊಳ್ಳುತ್ತಿದ್ದರೆ, ಕುಟುಂಬದಲ್ಲಿ ರಾಜಕಾರಣದಲ್ಲೇ ಇಲ್ಲದ ವ್ಯಕ್ತಿಗಳ ವಿರುದ್ಧವೂ ಪ್ರಚಾರದ ದಾಳಿಯು ನಡೆಯಿತು. ಖರ್ಗೆಯವರ ಇನ್ನೊಬ್ಬ ಮಗ, ತನ್ನ ವೃತ್ತಿಯಾಚೆಗೆ ಎಲ್ಲೂ ತಲೆ ಹಾಕದಿದ್ದವರು ಇಂಥದ್ದರ ಸಹವಾಸವೇ ಬೇಡವೆಂದು ಸರ್ಕಾರದಿಂದ ಮಂಜೂರಾಗಿದ್ದ ನಿವೇಶನವನ್ನು ಹಿಂತಿರುಗಿಸಿ ಕೈ ತೊಳೆದುಕೊಂಡು ಬಿಟ್ಟರು.

ಇದರಾಚೆಗೆ ಕರ್ನಾಟಕದ ರಾಜಕೀಯದಲ್ಲಿ ಅಥವಾ ದಲಿತ ಸಮುದಾಯದ ಸಬಲೀಕರಣದ ವಿಚಾರದಲ್ಲಿ ಖರ್ಗೆಯವರು ಮಹತ್ತರವಾದ ಭಾರೀ ಬದಲಾವಣೆಗೆ ಕಾರಣರಾದರೆಂದು ಹೇಳಲಾಗುವುದಿಲ್ಲ. ಅವರು ಇತರ ರಾಜಕಾರಣಿಗಳಿಗೆ ಅನ್ವಯಿಸುವ ಮಾನದಂಡಗಳಿಗಿಂತ ಹೊರತೆಂದೂ ಸರ್ಟಿಫಿಕೇಟು ಕೊಡಬೇಕಿಲ್ಲ. ಆದರೆ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದು, ತನ್ನದೇ ಸಾಮರ್ಥ್ಯ, ಸಜ್ಜನಿಕೆ, ಕೆಲವು ಮೌಲ್ಯಗಳಿಗೆ ಬದ್ಧತೆಯ ಮೂಲಕ ದೇಶದಲ್ಲಿ ಉನ್ನತ ಸ್ಥಾನವೊಂದನ್ನು ಕಟ್ಟಿಕೊಂಡಿರುವ ಅವರನ್ನು ಇದ್ದಂತೆಯೇ ಗ್ರಹಿಸುವುದೂ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ದೇಶವನ್ನು ವೈದಿಕಶಾಹಿ ಸಿದ್ಧಾಂತವೊಂದು ಕಪಿಮುಷ್ಟಿಗೆ ತೆಗೆದುಕೊಂಡು ಸಾಂವಿಧಾನಿಕ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರುತ್ತಿರುವ ಹೊತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರಂತಹ ವ್ಯಕ್ತಿತ್ವದ ಪಾತ್ರದ ಕುರಿತೂ ಚಿಂತಿಸಬೇಕು.

ಇದನ್ನು ಓದಿದ್ದೀರಾ?: ಗುತ್ತಿಗೆದಾರರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದೇ ರಾಜ್ಯ ಸರ್ಕಾರ?

ಈಗಿನ ಬೆಳವಣಿಗೆಯಲ್ಲಿ ಬೀದರಿನ ಸಚಿನ್‌ ಪಾಂಚಾಳ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟ ಡೆತ್‌ ನೋಟ್‌ನಿಂದ ಪ್ರಿಯಾಂಕ್‌ ಖರ್ಗೆಯವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಭಿಯಾನ ಹಮ್ಮಿಕೊಂಡಿದೆ. ಸಚಿನ್‌ ಪಾಂಚಾಳ್‌ ಮೊದಲ ದರ್ಜೆ ಗುತ್ತಿಗೆದಾರನೆಂದೂ, ಪ್ರಿಯಾಂಕ್‌ ಅವರ ಆಪ್ತನೆಂದು ಹೇಳಲಾದ ರಾಜು ಕಪ್ನೂರ್‌ ಎಂಬ ಕಲಬುರ್ಗಿಯ ಮಾಜಿ ಕಾರ್ಪೋರೇಟರ್‌ ಒಂದು ಕೋಟಿಗೆ ಬೇಡಿಕೆ ಇರಿಸಿ ಜೀವ ಬೆದರಿಕೆ ಹಾಕಿದ್ದರಿಂದ ತಾನು ಸಾಯುತ್ತಿದ್ದೇನೆಂದು ಆ ಡೆತ್‌ ನೋಟ್‌ನಲ್ಲಿದೆ ಎಂಬುದೇ ಸಾರಾಂಶ. ಈಗಾಗಲೇ ಹೊರಬಂದಿರುವ ಅಂಶವೆಂದರೆ, ಸದರಿ ಸಚಿನ್‌ ಪಾಂಚಾಳ್‌ ಗುತ್ತಿಗೆದಾರನಾಗಿರಲಿಲ್ಲ; ಆತನ ಬಳಿ ಗುತ್ತಿಗೆ ಲೈಸೆನ್ಸೂ ಇರಲಿಲ್ಲ; ಆತನ ಯಾವುದೇ ಬಿಲ್‌ ಸರ್ಕಾರದ ಯಾವುದೇ ಇಲಾಖೆಯಲ್ಲಿ ಬಾಕಿ ಇರಲಿಲ್ಲ. ಪ್ರಿಯಾಂಕ್‌ ಖರ್ಗೆಯವರು ನೇರವಾಗಿ ಯಾವುದಾದರೂ ರೀತಿಯಲ್ಲಿ ತನಗೆ ತೊಂದರೆ ಕೊಟ್ಟಿದ್ದಾರೆಂದೂ ಆ ಪತ್ರದಲ್ಲಿಲ್ಲ. ಸಚಿನ್‌ ಪಾಂಚಾಳ್‌ ಯಾವ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರೋ, ಅದೇ ಕಂಪೆನಿಯವರ ಮೇಲೂ ಆತನ ಆರೋಪವಿದೆ. ಇದರಾಚೆಗೆ ಶ್ರೀರಾಮಸೇನೆಯ ಮುಖ್ಯಸ್ಥನನ್ನು ಮತ್ತು ಬಿಜೆಪಿ ಶಾಸಕರನ್ನು ರಾಜು ಕಪ್ನೂರ್‌ ಇತ್ಯಾದಿಗಳು ಕೊಲ್ಲಲು ಸಿದ್ಧತೆ ನಡೆಸಿದ್ದಾರೆಂಬ ರೀತಿಯಲ್ಲಿ ಹಲವು ಆರೋಪಗಳು ಆ ನೋಟ್‌ನಲ್ಲಿವೆ ಎಂದು ಹೇಳಲಾಗಿದೆ.

ಖರ್ಗೆ 23

26 ವರ್ಷದ ಭಾಲ್ಕಿ ತಾಲೂಕಿನ ಸಾಧಾರಣ ಕುಟುಂಬದ ವ್ಯಕ್ತಿ ಕಲಬುರಗಿಯಲ್ಲಿ ಮೊದಲ ದರ್ಜೆ ಗುತ್ತಿಗೆದಾರ, ಆತನಿಗೆ 1 ಕೋಟಿ ಕೇಳಿದರು ಇತ್ಯಾದಿ ಹಲವು ಮೇಲ್ನೋಟಕ್ಕೆ ಹೊಂದಿಕೆಯಾಗದ ಸಂಗತಿಗಳು ಇದರಲ್ಲಿವೆ. ಅದೇನೇ ಇದ್ದರೂ ರಾಜು ಕಪ್ನೂರ್‌ ಎಂಬಾತ ಮತ್ತಿತರರನ್ನು ವಿಚಾರಣೆ ನಡೆಸಬೇಕಿರುವುದು ಪೊಲೀಸರ ಕರ್ತವ್ಯ. ಅದರಲ್ಲಿ ವಿಳಂಬವಾಗಿದ್ದಂತೆಯೂ ಮತ್ತು ಕುಟುಂಬಸ್ಥರ ಅಹವಾಲನ್ನು (ಅದು ಎಷ್ಟೇ ರಾಜಕೀಯ ಪ್ರೇರಿತವಾಗಿದ್ದಾಗ್ಯೂ) ತಾಳ್ಮೆಯಿಂದ ಕೇಳಿ ಸಹಾನುಭೂತಿಯಿಂದ ವರ್ತಿಸಬೇಕಾದ್ದು ಪೊಲೀಸರ ಜವಾಬ್ದಾರಿಯಾಗಿತ್ತು. ಅದರಲ್ಲಿ ಲೋಪವಾಗಿದ್ದರೆ ಅದೂ ತನಿಖೆಯಾಗಬೇಕು.

ಆದರೆ, ಈ ಪ್ರಕರಣವನ್ನು – ಈಶ್ವರಪ್ಪನವರ ನೇರ ಹೆಸರು ಬರೆದಿಟ್ಟು ಸತ್ತ ಸಂತೋಷ್‌ ಪಾಟೀಲ್‌ ಎಂಬ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರನ ಆತ್ಮಹತ್ಯೆಗೆ ಹೋಲಿಸಿ, ಪ್ರಿಯಾಂಕ್‌ ಖರ್ಗೆಯವರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಏತಕ್ಕೆ? ಅವರನ್ನು ಸುಪಾರಿ ಕೊಡುವವರು ಎಂಬಂತೆಲ್ಲಾ ಚಿತ್ರಿಸಿ ಇದನ್ನು ಅತಿರೇಕಕ್ಕೆ ಕೊಂಡೊಯ್ಯುತ್ತಿರುವುದೇಕೆ? ಅದಕ್ಕೆ ಕಾರಣ ಈ ಘಟನೆಯೂ ಅಲ್ಲ; ವಿರೋಧ ಪಕ್ಷದವರು ಅಧಿಕಾರಸ್ಥರ ತಪ್ಪುಗಳನ್ನು ಖಂಡಿಸಬೇಕು ಎನ್ನುವ ಕಾರಣಕ್ಕೂ ಅಲ್ಲ. ಖರ್ಗೆಯವರು ಮತ್ತು ಅವರ ಕುಟುಂಬದ ಕುರಿತಾಗಿ ಇರುವ ವಿರೋಧ ಹೊಸದಲ್ಲ ಮತ್ತು ಅದಕ್ಕೆ ಪಕ್ಷ ರಾಜಕೀಯ ವಿರೋಧಕ್ಕಿಂತಲೂ ತೀವ್ರವಾದ ಕಾರಣಗಳಿವೆ ಎಂಬ ಕಾರಣಕ್ಕೆ.

ಹಾಗಾಗಿಯೇ ಸಾಮಾನ್ಯವಾಗಿ ಒಂದು ಆಗ್ರಹ ಅಥವಾ ನಿಷ್ಪಕ್ಷಪಾತ ತನಿಖೆಗೆ ಒತ್ತಾಯದ ಮೂಲಕ ಮುಗಿದುಹೋಗಬೇಕಿದ್ದ ಅನುಮಾನಾಸ್ಪದ ಪ್ರಕರಣವೊಂದನ್ನು, ರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಹೊರಟಿದ್ದಾರೆ. ಇಡೀ ಮಾಧ್ಯಮ ಯಂತ್ರಾಂಗವು ಪಕ್ಷಪಾತಿಯಾಗಿರುವ ಸಂದರ್ಭದಲ್ಲಿ, ಕರ್ನಾಟಕದ ಶೋಷಿತ ಸಮುದಾಯದ ಹಿನ್ನೆಲೆಯ ನಾಯಕರೊಬ್ಬರ ವಿಚಾರದಲ್ಲಿ, ಸತ್ಯವನ್ನು ನೇರವಾಗಿ ಹೇಳಬೇಕಾದ ಜರೂರಿದೆ. ಉಳಿದದ್ದು ತನಿಖೆಯಿಂದ ಹೊರಬರಲಿ.

Dr Vasu HV
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X