ವಿದ್ಯಾರ್ಥಿಯೊಬ್ಬನಿಗೆ ಶಾಲೆ ಬ್ಯಾಗ್ ತರುವಂತೆ ಹೇಳಿದ್ದನ್ನು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಸಹಪಾಠಿಗಳು ವಿದ್ಯಾರ್ಥಿಗೆ ಮಾರಕಾಸ್ತ್ರ(ಚಾಕು)ದಿಂದ ಇರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.
ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ಓರ್ವ ವಿದ್ಯಾರ್ಥಿಯ ಕುತ್ತಿಗೆ, ಕೈ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾದ ವಿದ್ಯಾರ್ಥಿ ಪ್ರದೀಪ ಎಂದು ಗುರುತಿಸಲಾಗಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಪ್ರದೀಪ ಬಂಡಿವಡ್ಡರ ಎಂಬಾತನಿಗೆ ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತಿದ್ದ ಮೂವರು ಸಹಪಾಠಿಗಳು ಸಂಜೆ ಶಾಲೆ ಬಿಟ್ಟ ನಂತರ ಆತನ ಬ್ಯಾಗ್ ತರುವಂತೆ ಹೇಳಿದ್ದಾರೆ. ಆತ ಬ್ಯಾಗ್ ತರಲು ನಿರಾಕರಿಸಿದ ಕಾರಣಕ್ಕೆ ಚಾಕು ಇರಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಸಿಲೆಂಡರ್ ಸ್ಫೋಟದಲ್ಲಿ ಮೃತಪಟ್ಟ 8 ಮಂದಿ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ನರಳಾಡುತಿದ್ದ ಗಾಯಾಳು ಪ್ರದೀಪ್‌ನನ್ನು ಸ್ಥಳೀಯ ಶಿಕ್ಷಕರು ಗೋಕಾಕ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಪೊಲೀಸರು ಆಸ್ಪತ್ರೆಗೆ ದೌಢಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದು, ಗೋಕಾಕ್ ನಗರ ಠಾಣೆಯಲಿ ಪ್ರಕರಣ ದಾಖಲಾಗಿದೆ.