ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವ ರಾಷ್ಟ್ರದ್ರೋಹಿ ಅಮಿತ್ ಶಾನನ್ನು ದೇಶದಿಂದ ಗಡಿಪಾರು ಮಾಡಿ, ಕೇಂದ್ರ ಗೃಹಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಂವಿಧಾನ ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಡಾ ಬಿ ಆರ್ ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನ ಮೇಲೆ ಸಂಸತ್ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅವರು ಕೊಟ್ಟಂತಹ ಎಲ್ಲ ರಾಜಕೀಯ ಅಧಿಕಾರಿವನ್ನು ಮರೆತು ಮಹಾನ್ ಮಾನವತಾವಾದಿ ಅಂಬೇಡ್ಕರ್ ಬಗ್ಗೆ ಲಘವಾಗಿ ಮಾತನಾಡಿದ ಅಮಿತ್ ಶಾನನ್ನು ಕೇಂದ್ರದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ದೇಶದಿಂದ ಗಡಿಪಾರು ಮಾಡಬೇಕು. ಅಲ್ಲದೆ ಪದೇಪದೆ ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಿರುವ ಕೆಲವು ಲೋಕಸಭಾ ಸಂಸದರನ್ನೂ ದೇಶದಿಂದ ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು.

“ಚಹಾ ಮಾರುವ ವ್ಯಕ್ತಿ ಇವತ್ತು ಪ್ರಧಾನ ಮಂತ್ರಿ ಹುದ್ದೆಗೆ ಹೋಗುತ್ತಾರೆಂದರೆ ಅದು ಬಾಬಾ ಸಾಹೇಬ್‌ರು ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಹೊರತು, ನಿನ್ನ ದೇವರಿಂದಲ್ಲ. ಕೊಟ್ಟಿದ್ದನ್ನು ಮರೆತು ಕಾಲ್ಪನಿಕ ದೇವರುಗಳನ್ನು ಸ್ಮರಿಸುವಂತೆ ಹೇಳುವ ಮೂಢತನಕ್ಕೆ ದಿಕ್ಕಾರವಿರಲಿ” ಎಂದು ಮರಿಯಪ್ಪ ಸಾಲೋನಿ ಆಕ್ರೋಶ ವ್ಯಕ್ತಪಡಿಸಿದರು.
ಸಿರಾಜ್ ಅಹ್ಮದ್ ಅವರು ಮಾತನಾಡಿ, “ಸಂವಿಧಾನದ ಅಡಿಯಲ್ಲಿ ಎಲ್ಲರೂ ಅಧಿಕಾರದ ಗದ್ದುಗೆ ಏರಿ, ಈಗ ಬಾಬಾ ಸಾಹೇಬ್ ಹೆಸೆರು ಒಂದು ವ್ಯಸನವೆಂದು ಹೇಳುತ್ತಿದ್ದಾರೆ. ಇದು ಅಂಬೇಡ್ಕರ್ ಅವರಿಗೆ, ಶೋಷಿತ ಸಮುದಾಯಗಳ ಅಸ್ಮಿತೆಗೆ ಮಾಡಿದ ಅಪಮಾನ. ಮನುವಾದಿ ನಿರಂತರ ಸಂವಿಧಾನವನ್ನು ಹರಿಯುತ್ತಿದ್ದಾರೆ. ಅದು ನಮಗೆ ಅರ್ಥವಾಗುತ್ತಿಲ್ಲ. ಇವತ್ತು ನಾವು ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವದ ಅವನತಿಯಾಗುವ ಕಾಲ ಸಮೀಪ ಬರುತ್ತಿದೆ. ಸಂವಿಧಾನದ ಮೂಲ ಆಶಯವನ್ನು ಬದಲಾಯಿಸುವ ಎಲ್ಲ ತಂತ್ರಗಾರಿಕೆಗಳೂ ನಡೆಯುತ್ತಿವೆ. ಆದ್ದರಿಂದ, ಈಗಿಂದಲೇ ತೀವ್ರ ಹೋರಾಟಕ್ಕೂ ನಾವು ಸಜ್ಜಾಗಬೇಕಿದೆ” ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ಕರೆಕೊಟ್ಟರು.

ಯಲ್ಲಪ್ಪ ಕಟ್ಟಿಮನಿ ಮಾತನಾಡಿ, “ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಅಮಿತ್ ಶಾ ಅವರು ಬೇಕಾದರೆ ತಮ್ಮ ರಾಮನ ಜಪ ಮಾಡಿ ಸ್ವರ್ಗಕ್ಕೆ ಹೋಗಲಿ. ನಮಗೆ ಅಂಬೇಡ್ಕರ್ ಒಬ್ಬರೇ ಸಾಕು. ಅವರ ಹೆಸರಲ್ಲೇ ಸಮಾನತೆ ಇದೆ, ಜಾಗೃತಿ, ಅರಿವು, ಉಳಿವು ಎಲ್ಲವೂ ಇದೆ. ‘ಸ್ವರ್ಗ ಹೋದರೂ ಹೋಗಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ ನಮಗಿರಲಿ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮನುಸ್ಮೃತಿ, ಆರೆಸ್ಸೆಸ್ ಕುರಿತು ಅಂಬೇಡ್ಕರ್ ಕಠಿಣವಾಗಿ ಟೀಕಿಸಿದ್ದರು: ಮಾಜಿ ಶಾಸಕ ರಾಜು ಆಲಗೂರ
ವೀರನಗೌಡ ಮಾಲಿ ಪಾಟೀಲ್ ಮಾತನಾಡಿ, “ದೇವರು-ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಕೇಂದ್ರ ಸರ್ಕಾರದ ನಾಯಕರಿಗೆ ಅಂಬೇಡ್ಕರ್ ಶಕ್ತಿಯ ಬಗ್ಗೆ ಗೊತ್ತಿಲ್ಲ. ಇವರಿಗೆ ದಲಿತರು, ಶೋಷಿತರ ನೋವುಗಳೂ ಗೊತ್ತಿಲ್ಲ. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ಕಂದಕ ಸೃಷ್ಟಿಸಿ ಕೋಮುದ್ವೇಷ ಹರಡಿ ದೇಶದ ಜನತೆಯ ನೆಮ್ಮದಿ, ಶಾಂತಿಯನ್ನು ಹಾಳುಮಾಡಿದ್ದಾರೆ. ಈಗ ಮತ್ತೆ ವಿಶ್ವಜ್ಞಾನಿಯಾದ ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿ ಅವರಿಗೆ ಅವಮಾನಿ ಮಾಡಿರುವ ಗೃಹಮಂತ್ರಿಯ ಹೇಳಿಕೆಯನ್ನು ಖಡಾಖಂಡಿತವಾಗಿ ಖಂಡಿಸುತ್ತೆವೆ” ಎಂದರು.
ಮರಿಯಪ್ಪ ಸಾಲೋನಿ, ಖಾಜಾಹುಸೇನ್ ಮುಲ್ಲಾ, ಎಸ್ ಡಿ ಮಂಜಪ್ಪ, ಯಲ್ಲಪ್ಪ ಕಟ್ಟಿಮನಿ, ವೀರನಗೌಡ ಬೂದಗುಂಪ, ಅಜ್ಮೀರ್ ಎಸ್‌ಡಿಪಿಐ, ಸೋಮಶೇಖರ್ ಮೈಲಾಪೂರ, ಅನಂದ, ಉಮ್ಮೇಶ ವಕೀಲರು, ವೀರನಗೌಡ ಮಾಲಿ ಪಾಟೀಲ್ ಸೇರಿದಂತೆ ಇತರರು ಇದ್ದರು.