ವಿರೋಧ ಪಕ್ಷದಲ್ಲಿದ್ದಾಗ ಎಲ್ಲ ಪಕ್ಷಗಳು ಬೆಲೆ ಏರಿಕೆಯ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತವೆ. ಅದೇ ಪಕ್ಷಗಳು ಅಧಿಕಾರಕ್ಕೆ ಬಂದಾಗ ಮತ್ತದೇ ಬೆಲೆ ಏರಿಕೆಯ ಚಾಳಿಯನ್ನು ಮುಂದುವರೆಸುತ್ತವೆ. ಇದು ಹಲವಾರು ವರ್ಷಗಳಿಂದ ನಡೆಯುತ್ತಲೇ ಇರುವ ವಿದ್ಯಮಾನ. ಸದ್ಯ, ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು 15% ಏರಿಕೆ ಮಾಡಲು ಸಚಿವ ಸಂಪುಟ ತೀರ್ಮಾನ ಮಾಡಿದೆ. ಜನವರಿ 5ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಟಿಕೆಟ್ ದರ ಏರಿಕೆ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ತೋರಿಕೆಯ ಪ್ರತಿಭಟನೆ ನಡೆಸಿದೆ.
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಬೆಲೆ ಏರಿಕೆಯ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ಆಡಳಿತಾರೂಢ ಸರ್ಕಾರಗಳು ವಿಪಕ್ಷಗಳೂ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಮಾಡಿದ್ದವು. ಈಗ ಪ್ರತಿಭಟನೆ ಮಾಡುತ್ತಿವೆ ಎಂಬ ಉದ್ಧಟತನದ ವಾದ ಮಾಡುತ್ತಿವೆ. ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುತ್ತಿವೆ. ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡ ಅದನ್ನೇ ಹೇಳುತ್ತಿದೆ.
ಒಂದೆಡೆ, ನಂದಿನಿ ಹಾಲಿನ ಬೆಲೆ ಏರಿಕೆಗೆ ಸರ್ಕಾರದ ಮುಂದೆ ಕೆಎಂಎಫ್ ಪ್ರಸ್ತಾವನೆ ಇಟ್ಟಿದೆ. ಹಾಲಿನ ಬೆಲೆ ಏರಿಕೆಯಾಗಬಹುದು ಎಂಬ ಆತಂಕದ ನಡುವೆಯೇ ಸರ್ಕಾರ ಏಕಾಏಕಿ ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆಯನ್ನು ನಿರ್ಧರಿಸಿದೆ. ಪರಿಷ್ಕೃತ ದರದಂತೆ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮಗಳು ಜನವರಿ 5ರಿಂದ 15% ಪ್ರಯಾಣ ದರವನ್ನು ಹೆಚ್ಚಿಸಲಿವೆ. ಸದ್ಯ, ಶಕ್ತಿ ಯೋಜನೆ ಜಾರಿಯಲ್ಲಿದ್ದು, ಮಹಿಳೆಯರಿಗೆ ದರ ಏರಿಕೆ ಪರಿಣಾಮ ಬೀರುವುದಿಲ್ಲ. ಆದರೆ, ಪುರುಷರ ಮೇಲೆ ಪರಿಣಾಮ ಬೀರಲಿದೆ. ಆ ಕಾರಣಕ್ಕಾಗಿಯೇ, ಶಕ್ತಿಯೋಜನೆ ಹಣ ಸರಿದೂಗಿಸಲು ಸರ್ಕಾರ ಇಂತಹ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಮೊದಲಿನಿಂದಲೂ ಆರೋಪಿಸುತ್ತಿದೆ.
ಆದರೆ, ನಿರ್ದಿಷ್ಟವಾಗಿ ಈ ಆರೋಪವನ್ನು ಕಾಂಗ್ರೆಸ್ ಅಲ್ಲಗಳೆಯುತ್ತಲೇ ಬಂದಿದೆ. ಶಕ್ತಿ ಯೋಜನೆಯನ್ನು ನಾವು ಭರವಸೆ ಕೊಟ್ಟಂತೆ ಜಾರಿಗೆ ಮಾಡಿದ್ದೇವೆ. ಇಂತಹ ಜನಪ್ರಿಯ ಯೋಜನೆಯ ವಿರುದ್ಧ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಶಕ್ತಿ ಯೋಜನೆಯಂತಹ ಯೋಜನೆಗಳು ಜಾರಿಯಲ್ಲಿಲ್ಲದ ರಾಜ್ಯಗಳೂ ಬೆಲೆ ಏರಿಕೆ ಮಾಡುತ್ತವೆ. ಶಕ್ತಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ ಮಾಡಿರುವ ಸಾಲದ ಹೊರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿಯನ್ನು ಮೌನವಾಗಿಸಲು ಬಿಜೆಪಿ ಆಡಳಿತದ ಅವಧಿಯಲ್ಲಿ ಸಾರಿಗೆ ನಿಗಮಗಳ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಜಾಹೀರಾತು ನೀಡಲು ಕಾಂಗ್ರೆಸ್ ಮುಂದಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಅದನ್ನೇ ಹೇಳಿದ್ದು, ”ಬಿಜೆಪಿ ಅವರು ಸಾವಿರಾರು ಕೋಟಿ ಸಾಲ ಉಳಿಸಿ ಹೋಗಿದ್ದಾರೆ. ಅವರು ಆಡಳಿತದಿಂದಾಗಿ ಸಾರಿಗೆ ಸಂಸ್ಥೆಗಳು ಬಿಕ್ಕಟ್ಟು ಎದುರಿಸುತ್ತಿವೆ. ಆ ಬಿಕ್ಕಟ್ಟು ನಿವಾರಣೆಗೆ ಶಕ್ತಿ ಯೋಜನೆ ಜೀವ ತುಂಬಿದೆ. ಆದರೂ, ಸಾಲದ ಹೊರೆಯಿಂದ ಸಾರಿಗೆ ನಿಗಮಗಳು ಹೊರಬರಲು, ಸಾರಿಗೆ ಸಂಸ್ಥೆಗಳು ಉಳಿಯಲು ಟಿಕೆಟ್ ದರ ಏರಿಕೆ ಮಾಡಬೇಕಾಗಿದೆ.”
2015ರಲ್ಲಿ ಸಾರಿಗೆ ನಿಗಮಗಳ ದಿನನಿತ್ಯದ ಡಿಸೇಲ್ ವೆಚ್ಚ 9.16 ಕೋಟಿ ರೂ. ಇತ್ತು. ಈಗ, 13.21 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರತಿ ದಿನ ದಿನ ಸಿಬ್ಬಂದಿಗಳ ವೆಚ್ಚವು 12.85 ಕೋಟಿ ರೂ. ಇದ್ದದ್ದು, ಈಗ 18.36 ಕೋಟಿ ರೂ.ಗೆ ಏರಿಕೆಯಾಗಿದೆ. ಹೆಚ್ಚಿನ ಹೊರೆಯನ್ನು ನಿಭಾಯಿಸಲು ಬೆಲೆ ಏರಿಕೆ ಅಗತ್ಯವಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ಅಂದಹಾಗೆ, ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಟಿಕೆಟ್ ದರವನ್ನು ಹೆಚ್ಚಿಸಿ ಸುಮಾರು 10 ವರ್ಷಗಳಾಗಿವೆ. ಉಳಿದ ಮೂರು ನಿಗಮಗಳು (ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಆರ್‌ಟಿಸಿ) ಪ್ರಯಾಣ ದರ ಹೆಚ್ಚಿಸಿ 5 ವರ್ಷಗಳಾಗಿವೆ. ಬಿಎಂಟಿಸಿ 2014ರಲ್ಲಿ 17% ದರ ಏರಿಕೆ ಮಾಡಿತ್ತು. ಆ ನಂತರ, 2015ರಲ್ಲಿ 2% ಕಡಿಮೆ ಮಾಡಿತ್ತು. ಇನ್ನು, ರಾಜ್ಯದ ಇತರ ಮೂರು ನಿಗಮಗಳು 2020 ಫೆಬ್ರವರಿ 26ರಂದು 12% ದರ ಏರಿಕೆ ಮಾಡಿದ್ದವು.
ಅಂದಿನಿಂದ ಮತ್ತೆ ದರ ಏರಿಕೆ ಆಗಿರಲಿಲ್ಲ. ಇದೀಗ, ನಿರಂತರವಾಗಿ ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ, ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬಿಎಂಟಿಸಿ 42%, ಎನ್‌ಡಬ್ಲ್ಯೂಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ 28% ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ಹೇಳಲಾಗಿದೆ.
ಅಲ್ಲದೆ, ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡಿಸೆಂಬರ್ 30ರಂದು ಪ್ರತಿಭಟನೆ ನಡೆಸಿದ್ದಾರೆ. ’38 ತಿಂಗಳ ಬಾಕಿಹಣ ಪಾವತಿಸಬೇಕು, ಶಕ್ತಿ ಯೋಜನೆಯ ಸಂಪೂರ್ಣ ಅನುದಾನವನ್ನು ಕೂಡಲೇ ಪಾವತಿಸಬೇಕು, ನೌಕರರು ಪ್ರಸಕ್ತ ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂಬ ಬೇಡಿಕೆಗಳೂ ಸೇರಿವೆ.
ನೌಕರರ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸದಿದ್ದರೂ, ನೌಕರರ ಬಾಕಿ ಹಣವನ್ನು ಪಾವತಿಸುವುದು ಸರ್ಕಾರ ಅಥವಾ ನಿಗಮಗಳಿಗೆ ಅನಿವಾರ್ಯವಾಗಿದೆ. ಹೀಗಾಗಿ, ಆ ಹಣವನ್ನು ಶಕ್ತಿ ಯೋಜನೆಗಾಗಿ ಸರ್ಕಾರ ಪಾವತಿಸುವ ಹಣ ಮತ್ತು ಸಾರಿಗೆ ನಿಗಮಗಳೇ ಸಂಗ್ರಹಿಸುವ ಹಣದಿಂದ ಭರಿಸಬೇಕಿದೆ. ಅದಕ್ಕಾಗಿ, ನಿಗಮಗಳು ದರ ಏರಿಕೆಗೆ ಪಟ್ಟು ಹಿಡಿದಿದ್ದವು ಎಂದು ಹೇಳಲಾಗುತ್ತಿದೆ.
ಇದೀಗ, ಸಾರಿಗೆ ನಿಗಮಗಳ ಒತ್ತಾಯಕ್ಕೆ ಮಣಿದು ಸರ್ಕಾರ ಸರ್ಕಾರಿ ಬಸ್‌ಗಳ ಟಿಕೆಟ್ ದರವನ್ನು 15% ಹೆಚ್ಚಿಸಿದೆ. ಆದರೆ, ಸರ್ಕಾರದ ನಿರ್ಧಾರದ ವಿರುದ್ಧ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಸಾರಿಗೆ ನಿಗಮಗಳನ್ನು ಸಾಲದಿಂದ ಹೊರ ತರಲು ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹೇರುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕೆಪಿಎಸ್‌ಸಿ ಕರ್ಮಕಾಂಡ | ಮರುಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಎಡವಟ್ಟು: ಬೇಜವಾಬ್ದಾರಿ ಅಧಿಕಾರಿಗಳ ತಲೆದಂಡವೇ ಸೂಕ್ತ ಕ್ರಮ?
ಸಾರಿಗೆ ಬಸ್‌ಗಳ ಟಿಕೆಟ್ ದರ ಏರಿಕೆಯ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಚನ್ನರಾಯಪಟ್ಟಣದ ರೈತ ಪ್ರಭಾಕರ್, ”ಈಗಾಗಲೇ ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಆದರೆ, ರೈತರು ಬೆಳೆಯುವ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಬೆಳೆ ನಷ್ಟ, ಸರಿಯಾಗಿ ಬೆಲೆ ಸಿಗದೇ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ, ಬಸ್ ಟಿಕೆಟ್ ದರವನ್ನೂ ಹೆಚ್ಚಿಸಿದರು. ರೈತರು ಓಡಾಡುವುದಾದರೂ ಹೇಗೆ? ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು” ಎಂದು ಒತ್ತಾಯಿಸಿದ್ದಾರೆ.
ಕೆ.ಆರ್ ಪೇಟೆ ತಾಲೂಕಿನ ಮಂಜಪ್ಪ ಮಾತನಾಡಿ, ”ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅನುಕೂಲವಾಯಿತು. ಇದರಿಂದ, ಪುರುಷರಿಗೂ ಸಹಾಯವಾಗಿದೆ. ಆದರೆ, ಈಗ ಟಿಕೆಟ್ ದರ ಏರಿಕೆ ಮಾಡುವುದು ಈ ಹಿಂದೆ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಪ್ರಯಾಣ ಮಾಡುವಾಗ ಎಷ್ಟು ವೆಚ್ಚವಾಗುತ್ತಿತ್ತೋ, ಅಷ್ಟೇ ವೆಚ್ಚ ಈಗ ಮತ್ತೆ ಆಗಲಿದೆ. ಶಕ್ತಿ ಯೋಜನೆಯ ಉಪಯೋಗ ಕುಟುಂಬಗಳಿಗೆ ಇದ್ದರೂ, ಇಲ್ಲದಂತಾಗುತ್ತದೆ. ಜೊತೆಗೆ, ಯೋಜನೆಯ ಘನತೆಯನ್ನೂ ತಗ್ಗಿಸುತ್ತದೆ. ಹೀಗಾಗಿ, ಬೆಲೆ ಏರಿಕೆ ಮಾಡಬಾರದು” ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ವಿಚಾರವೆಂದರೆ, ತಮಿಳುನಾಡಿನಲ್ಲಿ ಈ ಹಿಂದೆ ಇದ್ದ ಎಐಎಡಿಎಂಕೆ ಸರ್ಕಾರ 2018ರಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡಿತ್ತು. ಅದೂ, ಬರೋಬ್ಬರಿ 35%ನಿಂದ 55% ವರೆಗೆ ಹೆಚ್ಚಿಸಿತ್ತು. ಆ ಬಳಿಕ ವ್ಯಕ್ತವಾದ ವಿರೋಧದಿಂದಾಗಿ 15% ಕಡಿಮೆ ಮಾಡಿತ್ತು. ಕಳೆದ 7 ವರ್ಷಗಳಿಂದ ಮತ್ತೆ ತಮಿಳುನಾಡಿನಲ್ಲಿ ಟಿಕೆಟ್ ದರ ಏರಿಕೆಯಾಗಿಲ್ಲ. ಅಲ್ಲದೆ, ತಮಿಳುನಾಡಿನ ಎಲ್ಲ ಪಟ್ಟಣಗಳಲ್ಲಿಯೂ ನಗರ ಸಾರಿಗೆಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ. ಕೇರಳದಲ್ಲಿ 2020ರ ಮೇ ತಿಂಗಳಿನಲ್ಲಿ ಕೊರೋನ ಆಕ್ರಮಣದ ನಡುವೆಯೂ ಟಿಕೆಟ್ ದರವನ್ನು 50% ಹೆಚ್ಚಿಸಲಾಗಿತ್ತು.