ಈ ದಿನ ಸಂಪಾದಕೀಯ | ಅನುದಾನಿತ ಪಿಯು ಕಾಲೇಜು ಉಪನ್ಯಾಸಕರನ್ನು ಕೆಲಸದಿಂದ ತೆಗೆಯುವ ನಿರ್ಧಾರ ಸಲ್ಲದು

Date:

Advertisements

ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿಲ್ಲ. ಹಣವಿದ್ದವರು ಅಡ್ಡ ದಾರಿಯಿಂದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ನೇಮಕಾತಿಗಳಲ್ಲೂ ರಾಜಕಾರಣಿಗಳ ಪ್ರಭಾವದಿಂದ ಬಡವರು, ದುರ್ಬಲರಿಗೆ ಅನ್ಯಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರೆ ಸರ್ಕಾರಿ ಉದ್ಯೋಗವೂ ಅತಂತ್ರವಾದರೆ ಅವರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಸದಾ ಅತಂತ್ರ ಅನಿಶ್ಚಯತೆಯಡಿ  ದಿನದೂಡುತ್ತಿದ್ದಾರೆ ಅತಿಥಿ ಉಪನ್ಯಾಸಕರು. ಕಡಿಮೆ ವೇತನಕ್ಕೆ ಹೆಚ್ಚು ದುಡಿಯುವ ‘ಜೀತದಾಳುಗಳು’ ಇವರು. ಕಾಯಂ ಶಿಕ್ಷಕರ ನೇಮಕ ಮಾಡದಿರುವ ಸರ್ಕಾರದ ನೀತಿಯೇ ಈ ದುರವಸ್ಥೆಗೆ ಕಾರಣ. ಹೀಗಾಗಿ ಸರ್ಕಾರಿ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದರ ನೇರ ಪರಿಣಾಮ ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳ ಮೇಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳು ಹೆಚ್ಚು ಆಶ್ರಯಿಸುವುದು ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನೇ. ಉಪನ್ಯಾಸಕರು/ ಶಿಕ್ಷಕರಾಗಿ ಉದ್ಯೋಗ ಅರಸಿ ಬರುವವರಲ್ಲಿಯೂ ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚು. ಆದರೆ ಸರ್ಕಾರದ ಎಡವಟ್ಟು ನೀತಿಗಳಿಗೆ ಪಲಿಪಶುವಾಗುತ್ತಿರುವವರೂ ಇವರೇ ಎಂಬುದು ದುರಂತ.

ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆಗೊಳಿಸುವ ಆದೇಶವನ್ನು ಸರ್ಕಾರ ಆಯಾ ಕಾಲೇಜುಗಳ ಆಡಳಿತ ಮಂಡಳಿಗೆ ನೀಡಿದೆಯಂತೆ. ರಾಜ್ಯದಲ್ಲಿ 821 ಅನಿದಾನಿತ ಪದವಿಪೂರ್ವ ಕಾಲೇಜುಗಳಿವೆ. ಸರ್ಕಾರದ ನಿಯಮದಂತೆ ಕಾಯಂ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ವಿಷಯವಾರು ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 40 ಇರಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಈ ಕಾರಣದಿಂದ ಈಗ ಉಪನ್ಯಾಸಕರು ಈ ಅರೆಬರೆ ಉದ್ಯೋಗವನ್ನೂ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.

Advertisements

ರಾಜ್ಯಾದ್ಯಂತ ಅನುದಾನಿತ ಕಾಲೇಜುಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ನಿಧನ, ನಿವೃತ್ತಿ, ರಾಜೀನಾಮೆ ಕಾರಣಗಳಿಂದ ಖಾಲಿ ಇರುವ ವಿಷಯಗಳ ಉಪನ್ಯಾಸಕರನ್ನು ನೇಮಕ ಮಾಡಲು ಸರ್ಕಾರ ಸೂಚಿಸಿದ ಮೇರೆಗೆ ಕೆಲ ಕಾಲೇಜುಗಳಲ್ಲಿ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳ ಉಪನ್ಯಾಸಕರನ್ನು ಮನೆಗೆ ಕಳಿಸುತ್ತಿರುವುದು ಅಮಾನವೀಯ ನಡೆ. ವಿದ್ಯಾರ್ಥಿಗಳ ಕೊರತೆಯ ಕಾರಣದಿಂದಾಗಿ ಸುಮಾರು 426 ಕಾಲೇಜುಗಳ 379 ಉಪನ್ಯಾಸಕರ ವೇತನವನ್ನು ಕಳೆದ ಆರು ತಿಂಗಳಿನಿಂದ ತಡೆ ಹಿಡಿಯಲಾಗಿದೆಯಂತೆ.

ಒಂದು ಕಡೆ ಪದವಿ ಓದುವವರ ಸಂಖ್ಯೆಯೂ ಕುಸಿಯುತ್ತಿದೆ. ಗ್ರಾಮೀಣ ಭಾಗಗಳಲ್ಲಿಯೂ ಕಲಾ, ವಾಣಿಜ್ಯ ವಿಷಯದಲ್ಲಿ ಪಿಯು ಓದುವವರ ಸಂಖ್ಯೆ ಕುಸಿದಿದೆ. ಎಲ್ಲರೂ ವಿಜ್ಞಾನ ವಿಷಯ ತೆಗೆದುಕೊಂಡು ಎಂಜಿನಿಯರಿಂಗ್‌, ಮೆಡಿಕಲ್‌ ಅಥವಾ ಬೇರೆ ಯಾವುದಾದರೂ ತಾಂತ್ರಿಕ ಕೋರ್ಸ್‌ ಮಾಡುವುದರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ವಿಜ್ಞಾನ ಪದವೀಧರರನ್ನು ಖಾಸಗಿ ಕಂಪನಿಗಳು ನೇರವಾಗಿ ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿಯೇ ಒಂದು ದಶಕ ಸಮೀಪಿಸುತ್ತಿದೆ. ಈ ಮಧ್ಯೆ ವಾಣಿಜ್ಯ ಮತ್ತು ಕಲಾ ಪದವಿ ಓದುವುದು ಅಪ್ರಯೋಜಕ ಎಂಬ ಭಾವನೆ ಗ್ರಾಮೀಣ ಭಾಗದ ಕುಟುಂಬಗಳಲ್ಲಿ ಇದೆ. ಈಗ ಏನಿದ್ದರೂ ಓದು ಮುಗಿಯುತ್ತಿದ್ದಂತೆ ಕೈ ತುಂಬ ಸಂಬಳ ಬರುವ ಕೆಲಸ ಸಿಗಬೇಕು. ಆಗ ‘ಲೈಫ್‌ ಸೆಟಲ್‌’ ಆಯ್ತು ಎಂದು ಭಾವಿಸುವವರೇ ಹೆಚ್ಚು. ಸಾಹಿತ್ಯದ ಅಭಿರುಚಿ ಇರುವವರು, ಮಾನವಿಕ ವಿಭಾಗಗಳಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿಯಿಂದ ಬರುವವರು ತೀರಾ ಕಡಿಮೆ. ಹಾಗೆ ಬರುವ ವಿದ್ಯಾರ್ಥಿಗಳಿಗೆ ವಿಷಯವಾರು ಉಪನ್ಯಾಸಕರ ಕೊರತೆ ಎದುರಾದರೆ ಅವರ ಭವಿಷ್ಯವೇನು? ಇನ್ನು ಅನೇಕ ಖಾಸಗಿ ಕಾಲೇಜುಗಳಲ್ಲಿ ಕಲಾ ವಿಭಾಗವೇ ಇಲ್ಲ. ಅದು ಪ್ರಯೋಜನಕ್ಕೆ ಬಾರದ, ದಡ್ಡರಿಗೆ ಮಾತ್ರ ಸೀಮಿತವಾದ ವಿಭಾಗ ಎಂಬ ಅಸಡ್ಡೆಯಿದೆ. ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವನ್ನು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ನಿರ್ಧಾರಕ್ಕೆ ವಿವಿ ಆಡಳಿತ ಬಂದಿದೆ. ಹಲವು ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿದ್ದಾರೆ. ಆದರೆ ವಿದ್ಯಾರ್ಥಿಗಳ ಕೊರತೆ ಇದೆ. ಈ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಇಲ್ಲ. ಹೆಚ್ಚೆಂದರೆ ವರ್ಗಾವಣೆಯಾಗಬಹುದು. ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಕೊರತೆಯೇ ಕಂಟಕವಾಗಿದೆ. ವಿದ್ಯಾರ್ಥಿಗಳನ್ನು ಸೆಳೆಯುವುದು ಸುಲಭದ ಕೆಲಸವಲ್ಲ.

ಒಂದೆಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ. ವಿದ್ಯಾರ್ಥಿಗಳು ಇರುವೆಡೆ ಶಿಕ್ಷಕರ ಕೊರತೆ, ಎರಡೂ ಇದ್ದರೆ ಮೂಲಸೌಕರ್ಯದ ಕೊರತೆ,  ಹೀಗೆ ಸರ್ಕಾರಿ ಶಾಲೆ ಕಾಲೇಜುಗಳು ಇಂದೋ ನಾಳೆಯೋ ಕೊನೆಯುಸಿರೆಳೆಯುವ ಸ್ಥಿತಿಯಲ್ಲಿವೆ. ಲಂಗು ಲಗಾಮು ಇಲ್ಲದೇ ಖಾಸಗಿಯವರಿಗೆ ಶಾಲೆ ತೆರೆಯಲು ಬಿಟ್ಟು ಈಗ ಸರ್ಕಾರಿ ಶಾಲೆ, ಕಾಲೇಜುಗಳನ್ನು ಉಳಿಸಲು ಪೇಚಾಡುವಂತಾಗಿದೆ.

ನಿರುದ್ಯೋಗ ತಾಂಡವ ಆಡುತ್ತಿದ್ದರೂ, ಖಾಲಿಬಿದ್ದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ನೇಮಕಾತಿ ಮಾಡಿಕೊಳ್ಳುವ ಸರ್ಕಾರಗಳ ನಡೆ ಸರಿಯಲ್ಲ. ಅತಿಥಿ ಉಪನ್ಯಾಸಕರು ನಿರಂತರ ಧರಣಿ, ಪ್ರತಿಭಟನೆಗಳು ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ ಬಹಿಷ್ಕರಿಸಿ ಸರ್ಕಾರದ ಜೊತೆಗೆ ಕುಸ್ತಿಗಿಳಿಯುವುದು ನಡೆಯುತ್ತಲೇ ಇದೆ. ಈಗ ಅನುದಾನಿತ ಪಿಯು ಕಾಲೇಜು ಉಪನ್ಯಾಸಕರು ಬೀದಿಗಿಳಿಯುವ ಸ್ಥಿತಿ ಒದಗಿದೆ.

ಸರ್ಕಾರಿ ಶಾಲೆ -ಕಾಲೇಜುಗಳಿಗೆ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ನೀಡುವತ್ತ ಸರ್ಕಾರ ಪರಿಣಾಮಕಾರಿ ಹೆಜ್ಜೆಯಿರಿಸಿದ್ದರೆ ಖಾಸಗಿ ಶಾಲೆ, ಕಾಲೇಜುಗಳಿಗೆ ಅನುದಾನ ನೀಡುವ ಸಂದರ್ಭವೇ ಬರುತ್ತಿರಲಿಲ್ಲ.  ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸರ್ಕಾರದ ನೇರ ಹೊಣೆಗಾರಿಕೆಯಲ್ಲಿರುವ ಎರಡು ಪ್ರಮುಖ ಕ್ಷೇತ್ರಗಳು. ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರಗಳೂ ಹೌದು. ಎಂ ಎ, ಎಂಬಿಎ, ಎಂಜಿನಿಯರಿಂಗ್‌ ಪದವಿ ಪಡೆದವರು ಹತ್ತನೇ ತರಗತಿ ವಿದ್ಯಾರ್ಹತೆ ಬೇಡುವ ಅಡುಗೆ ಸಹಾಯಕ, ಡಿ ಗ್ರೂಪ್‌  ಹುದ್ದೆಗಳಿಗೆ ಅರ್ಜಿ ಹಾಕಿ ಸಂದರ್ಶನಕ್ಕೆ ಹಾಜರಾದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಬದುಕಿಗಾಗಿ ಒಂದು ಉದ್ಯೋಗ ಬೇಕೇ ಬೇಕು. ಸಣ್ಣದೇ ಆದರೂ ಸರ್ಕಾರಿ ಕೆಲಸ ಸುರಕ್ಷಿತ ಎಂಬ ಭಾವನೆ ಇದೆ. ಆದರೆ ಸರ್ಕಾರ ನಿಯಮಿತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿಲ್ಲ. ಹಣವಿದ್ದವರು ಅಡ್ಡದಾರಿಯಿಂದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ನೇಮಕಾತಿಗಳಲ್ಲೂ ರಾಜಕಾರಣಿಗಳ ಪ್ರಭಾವದಿಂದ ಬಡವರು, ದುರ್ಬಲರಿಗೆ ಅನ್ಯಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರೆ ಸರ್ಕಾರಿ ಉದ್ಯೋಗಕ್ಕೂ ಕುತ್ತು ಬಂದರೆ ಅವರ ಬದುಕು ಇನ್ನಷ್ಟು ಅತಂತ್ರವಾಗಲಿದೆ.

ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳುವಾಗ ಮುಂದೆ ಎದುರಾಗಬಹುದಾದ ಸಾಮಾಜಿಕ ಅಪಾಯಗಳತ್ತಲೂ  ಗಮನಹರಿಸಬೇಕಿದೆ. ಎಲ್ಲೆಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದೆಯೋ ಅಲ್ಲಿಗೆ ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಕೆಲಸ ಕಳೆದುಕೊಳ್ಳಲಿರುವ ಉಪನ್ಯಾಸಕರನ್ನು  ನಿಯೋಜನೆಗೊಳಿಸುವುದು ಮಾನವೀಯ ನಡೆಯಾದೀತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X