ಬರೋಬ್ಬರಿ 450 ಕೋಟಿ ರೂ. ಹಗರಣವೊಂದಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಬೇಡಿಕೆಯ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುಜರಾತ್ ಸಿಐಡಿ ಸಮನ್ಸ್ ಜಾರಿ ಮಾಡಿದೆ.
ಪ್ರಸ್ತುತ ಗಿಲ್ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಕ್ರಿಕೆಟ್‌ನಲ್ಲಿ ಆಟವಾಡುತ್ತಿದ್ದು, ಆಸ್ಟ್ರೇಲಿಯಾದಲ್ಲಿದ್ದಾರೆ. ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಗಿಲ್ ಮಾತ್ರವಲ್ಲದೆ, ಐಪಿಎಲ್‌ನ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಹಾಗೂ ಮೋಹಿತ್ ಶರ್ಮಾ ಅವರಿಗೂ ಸಮನ್ಸ್ ನೀಡಲಾಗಿದೆ.
ಭೂಪೇಂದರ್ ಸಿಂಗ್ ಝಾಲಾ ಎಂಬವರ ನೇತೃತ್ವದಲ್ಲಿ ‘BZ ಫೈನಾನ್ಶಿಯಲ್ ಸರ್ವಿಸಸ್’ ಎಂಬ ಫೈನಾನ್ಸ್ ಕಂಪನಿಯನ್ನು ನಡೆಸಲಾಗುತ್ತಿದೆ. ಈ ಕಂಪನಿಯಲ್ಲಿ ಗಿಲ್ ಮತ್ತು ಇತರ ಮೂವರು ಕ್ರಿಕೆಟಿಕೆಗರು ಹೂಡಿಕೆ ಮಾಡಿದ್ದಾರೆ. ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಈ ಕಂಪನಿಯಲ್ಲಿ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ಹೂಡಿಕೆದಾರರಿಂದ ಹಣ ಹೂಡಿಕೆ ಮಾಡಿಸಿ, ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ವರದಿ ಓದಿದ್ದೀರಾ?: ಕೆಪಿಎಸ್‌ಸಿ ಕರ್ಮಕಾಂಡ | ಮರುಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಎಡವಟ್ಟು: ಬೇಜವಾಬ್ದಾರಿ ಅಧಿಕಾರಿಗಳ ತಲೆದಂಡವೇ ಸೂಕ್ತ ಕ್ರಮ?
ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಕಂಪನಿಯ ಮುಖ್ಯಸ್ಥ ಭೂಪೇಂದರ್ ಸಿಂಗ್ ಝಾಲಾ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
“ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಆಟವಾಡುವ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಹಾಗೂ ಮೋಹಿತ್ ಶರ್ಮಾ ಪೊಂಜಿ ಅವರು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈ ನಾಲ್ವರಿಗೂ ಕೂಡ ಹೆಚ್ಚಿನ ಬಡ್ಡಿಯನ್ನು ಕಂಪನಿ ಪಾವತಿಸಿಲ್ಲವೆಂದು ಆರೋಪಿ ಭೂಪೇಂದರ್ ಹೇಳಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.