ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು ಸೇರಿದಂತೆ ದೇಶದ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜನರ ಮೇಲೆ ಸಂಕಷ್ಟಗಳನ್ನು ಹೇರುತ್ತಿರುವ ಕೇಂದ್ರ ಮತತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಬೃಹತ್ ಹೋರಾಟಗಳನ್ನು ರೂಪಿಸಬೇಕಿದೆ. ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮ್ಮೇಳನ ಡಿಸೆಂಬರ್ 29 ರಿಂದ ಡಿಸೆಂಬರ್ 31 ರವರೆಗೆ ತುಮಕೂರಿನಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಎಡ ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಮ್ಮೇಳನದಲ್ಲಿ ಸಿಪಿಐ(ಎಂ) ತಿರ್ಮಾನಿಸಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ ತಿಳಿಸಿದರು.
ಬೆಂಗಳೂರಿನ ಸಿಪಿಐ(ಎಂ) ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಆರ್ಥಿಕ ಸಾಮಾಜಿಕ ನೀತಿಗಳ ವಿಚಾರದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಧೋರಣೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗಿದೆ. ಕೃಷಿ, ಕೈಗಾರಿಕಾ, ಆರೋಗ್ಯ ಹೀಗೆ ಯಾವುದೇ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಧೋರಣೆಗಳು ಏಕಮುಖವಾಗಿ ಜನರ ಸಂಕಷ್ಟಗಳನ್ನ ಹೆಚ್ಚಿಸುತ್ತಿವೆ. ಮುಂದಿನ ದಿನಗಳಲ್ಲಿ ವಿಶಾಲವಾದ ತಳಹದಿಗಳ ಹೋರಾಟಗಳನ್ನು ಕಟ್ಟಬೇಕಿದೆ” ಎಂದರು.
“ಬಿಜೆಪಿ ಮತ್ತು ಕಾಂಗ್ರೆಸ್ ನೀತಿಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಇಂತಹ ಸಂದರ್ಭದಲ್ಲಿ ಎಡ ಪ್ರಜಾಸತ್ತಾತ್ಮಕ ಸಂಘಟನೆಗಳು ಮತ್ತು ಪಕ್ಷಗಳ ಪರ್ಯಾಯ ರಾಜಕಾರಣ ಕಟ್ಟಬೇಕೆಂದು ಸಿಪಿಐ(ಎಂ) ತಿರ್ಮಾನಿಸಿದೆ. ಎಡ ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನ ರೂಪಿಸುವುದು ಸಿಪಿಐ(ಎಂ)ನ ಪ್ರಮುಖವಾದ ಉದ್ದೇಶವಾಗಿದೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಕೃಷಿಕರ ಸಮಸ್ಯೆ ತೀವೃವಾಗುತ್ತಿವೆ. ಭೂ ಸ್ವಾಧಿನ ವಿಚಾರ ತೀವ್ರವಾಗುತ್ತಿವೆ. ರೈತರ ಭೂಮಿಯನ್ನ ಕಸಿದುಕೊಂಡು ಅದನ್ನ ಬಂಡವಾಳಶಾಹಿಗಳಿಗೆ ಕೊಡುವಂತಹ ಮೂರು ಕೃಷಿ ಕಾಯ್ದೆಗಳನ್ನ ಮೋದಿ ಸರ್ಕಾರ ತಂದಿತ್ತು. ಇದರ ವಿರುದ್ಧ ರೈತರು ಬೃಹತ್ ಪ್ರಮಾಣದಲ್ಲಿ ದೆಹಲಿಯಲ್ಲಿ ಹೊರಾಡಿದ್ದರು. ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಮ್ಮೆಟ್ಟಿದ್ದರು” ಎಂದು ವಿವರಿಸಿದರು.
“ಅದೇ ಸಮಯದಲ್ಲಿ ಕರ್ನಾಟಕದಲ್ಲಿ ತಿದ್ದುಪಡಿ ಮಾಡಿದ ಭೂ ಸುಧಾರಣೆ ಕಾಯ್ದೆಗಳು ರೈತರಿಂದ ಭೂಮಿಯನ್ನ ಕಿತ್ತುಕೊಳ್ಳುವ ಮತ್ತು ಕಾರ್ಪೋರೇಟರ್ ಕಂಪನಿಗಳು ನೇರವಾಗಿ ಕೃಷಿ ಭೂಮಿಯನ್ನ ಸ್ವಾಧಿನಪಡಿಸಿಕೊಳ್ಳುವ ಅವಕಾಶ ಮಾಡಿಕೊಳ್ಳುವ ತಿದ್ದುಪಡಿ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆದರೂ, ತಿದ್ದುಪಡಿಯಾಗಿರುವ ಕೃಷಿ ನೀತಿಗಳನ್ನು ಸರಿಪಡಿಸಿಲಿಲ್ಲ. ಬದಲಿಗೆ ರೈತರಿಂದ ಭೂ ಸ್ವಾಧಿನ ಮಾಡಿಕೊಳ್ಳಲು ಮುಂದಾಗಿದೆ. ಬಗರ್ ಹುಕಂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಅರಣ್ಯ ಕಾಯ್ದೆ ಹೆಸರಿನಲ್ಲಿ ರೈತರನ್ನ ಒಕ್ಕಲೆಬ್ಬಿಸಲಾಗುತ್ತಿದೆ. ವಸತಿ ನಿವೇಶನ ಇಲ್ಲ ಎಂದು ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಇವೆಲ್ಲ ಸಮಸ್ಯೆಗಳನ್ನ ಸರಿಪಡಿಸುವುದರ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ವಿರುದ್ಧ ರೈತರು, ಕೂಲಿ ಕಾರ್ಮಿಕರು ಫೆಬ್ರುವರಿಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಹೋರಾಟ ನಡೆಸಲಿದ್ದಾರೆ. ಈ ಹೋರಾಟಕ್ಕೆ ಸಿಪಿಐ(ಎಂ) ಬೆಂಬಲ ಸೂಚಿಸಲಿದೆ” ಎಂದರು.
“ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ, ಉದ್ಯೋಗ ಭದ್ರತೆಯನ್ನ ಸರ್ಕಾರ ಕೊಟ್ಟಿಲ್ಲ. ಬಹಳಷ್ಟು ಅಸಂಘಟಿತ ಕಾರ್ಮಿಕರಿಗೆ ಉದ್ಯೋಗದಲ್ಲಿ ಅನಿಶ್ಚಿತತೆಯಿದೆ. ಕೆಲಸದ ಲಭ್ಯತೆಗಳು ಕಡಿಮೆಯಾಗುತ್ತಿದೆ. ಒಂದು ಕಡೆ ಅನಗತ್ಯವಾದ ಯಾಂತ್ರೀಕರಣದ ಬಳಕೆಯೂ ಕೂಡ ಆಗುತ್ತಿದೆ. ಅಸಂಘಟಿತರಿಗೆ ಮುಖ್ಯವಾಗಿ ರಾಜ್ಯ ಸರ್ಕಾರ ಅವರ ಸಾಮಾಜಿಕ ಭದ್ರತೆಗಾಗಿ ಸಮಗ್ರವಾದ ಯೋಜನೆಗಳನ್ನ ರೂಪಿಸಬೇಕು. ಕಾರ್ಮಿಕರಿಗೆ ವಯಸ್ಸಾದ ಬಳಿಕ ಪಿಂಚಣಿ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸ ಸೌಲಭ್ಯ ಒದಗಿಸುವ ಯೋಜನೆಗಳನ್ನ ರೂಪಿಸಬೇಕು. ಅಲ್ಲದೆ, ಪ್ರತಿಭಟನೆಯನ್ನು ಮೊಟಕುಗೊಳಿಸುವ ‘ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಮಾತ್ರ ಹೋರಾಟ ನಡೆಸಬೇಕು’ ಎಂಬ ನೀತಿಯನ್ನೂ ಕೈಬಿಡಬೇಕು” ಎಂದು ಸಿಪಿಐ(ಎಂ)ನ ಸೈಯದ್ ಮುಜೀಬ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಬದುಕು ನಮಗೆ ಸ್ಫೂರ್ತಿಯಾಗಲಿ
“ಸಮಾಜದಲ್ಲಿ ಅಸಂಘಟಿತ ಹಲವು ಉದ್ಯಮಗಳು ನಶಿಸಿಹೋಗುತ್ತಿವೆ. ಹತ್ತಾರು ದಶಕದಿಂದ ಇರುವ ಬೀಡಿ ಉದ್ಯಮದಲ್ಲಿ 10 ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕರಿದ್ದರೂ, ಈ ಉದ್ಯಮ ಈಗ ನಶಿಸಿ ಹೋಗುತ್ತಿದೆ. ಆದರೆ, ಕಾರ್ಮಿಕರ ಪರಿಸ್ಥಿತಿ ಏನು? ತಂಬಾಕು ಮೇಲೆ ತೆರಿಗೆ ಅಪಾರ ಪ್ರಮಾಣದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಬೀಡಿ ಕಾರ್ಮಿಕರಿಗೆ ಇರುವ ಕಲ್ಯಾಣ ಯೋಜನೆಗಳನ್ನು ಸರ್ಕಾರ ನಿಲ್ಲಿಸಿದೆ. ಪರ್ಯಾಯ ಯೋಜನೆಗಳನ್ನು ಸಹ ರೂಪಿಸಿಲ್ಲ. ಹೀಗಾಗಿ, ಸರ್ಕಾರದ ಯೋಜನೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಸತತ ನಾಲ್ಕು ದಿನ ಪ್ರತಿಭಟನೆ ನಡೆಸಲಿದೆ. ಇದಕ್ಕೆ ಸಿಪಿಐ(ಎಂ) ಸಂಪೂರ್ಣ ಬೆಂಬಲ ಸೂಚಿಸಿದೆ” ಎಂದರು.
“ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಕೋಮುವಾದಿ ಮತ್ತು ಮನುವಾದಿಗಳ ದಾಳಿ ತೀವ್ರ ರೂಪದಲ್ಲಿ ನಮ್ಮ ದೇಶವನ್ನ ಕಬಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದೊಳಗಡೆ ನಮ್ಮ ಸಮ್ಮೇಳನ ಇಂತಹ ವಿಚಾರದಲ್ಲಿ ತೀವ್ರ ಹೋರಾಟವನ್ನ ನಡೆಸಲಿದೆ. ಜಾತಿ ತಾರತಮ್ಯ ವಿರುದ್ಧ ಜನಾಂದೋಲನ ರೂಪಿಸಲು ಸಿಪಿಐ(ಎಂ) ತಿರ್ಮಾನ ಮಾಡಿದೆ” ಎಂದು ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ ಹೇಳಿದರು.
