ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್‌ ಹೇಳಿಕೆ ಅಪಾಯಕಾರಿ

Date:

Advertisements
ಮಹಿಳೆಯರು ನ್ಯಾಯವನ್ನು ಪಡೆಯುವಲ್ಲಿ ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳನ್ನು ನ್ಯಾಯಾಂಗವು ಗುರುತಿಸಬೇಕು. ಹೆಚ್ಚಿನ ಸಹಾನುಭೂತಿಯಿಂದ ಮಾತನಾಡಬೇಕು. ಆಗ ಮಾತ್ರವೇ, ಸಂವಿಧಾನದ ಆಶಯದಂತೆ ಲಿಂಗ ಸಮಾನತೆ ತರಲು ಮತ್ತೊಂದು ಹೆಜ್ಜೆ ಮುಂದಿಡಬಹುದು.

ಇತ್ತೀಚೆಗೆ, ಪ್ರಕರಣವೊಂದರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಆಘಾತಕಾರಿ ಹೇಳಿಕೆ ನೀಡಿದೆ. ‘ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ರಕ್ಷಣೆ’ಗಾಗಿ ಜಾರಿಯಲ್ಲಿರುವ ಐಪಿಸಿ ಸೆಕ್ಷನ್‌ 498A ಅನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಈ ಸೆಕ್ಷನ್‌ಅನ್ನು ಮಹಿಳೆಯರು ವೈಯಕ್ತಿಕ ಸಾಧನವಾಗಿ ಬಳಸಿಕೊಳ್ಳುವ ಮೂಲಕ ಪತಿ ಮತ್ತು ಅತ್ತೆಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ ಎಂದು ನ್ಯಾಯಮೂರ್ತಿ ಬಿ ನಾಗರತ್ನ ಮತ್ತು ಕೋಟೀಶ್ವರ್ ಸಿಂಗ್‌ ಅವರಿದ್ದ ಪೀಠ ಹೇಳಿದೆ. ಸಾರಾಸಗಟಾಗಿ ಇಂತಹ ಹೇಳಿಕೆ ನೀಡುವಾಗ, ಸಮಾಜದಲ್ಲಿ ಭವಿಷ್ಯದಲ್ಲಿ ಎದುರಾಗುವ ಆಪತ್ತು ಮತ್ತು ಕೌಟುಂಬಿಕ ಕಾನೂನುಗಳ ದುರ್ಬಲತೆಗೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್‌ ಮರೆತಂತಿದೆ.

ನಿರ್ದಿಷ್ಟ ಆ ಪ್ರಕರಣದಲ್ಲಿ, ಮಹಿಳೆಯೊಬ್ಬರು ಫೆಬ್ರವರಿ 2022ರಲ್ಲಿ ಸೆಕ್ಷನ್ 498A ಅಡಿಯಲ್ಲಿ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯಡಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಆಕೆಯ ಪತಿ ಮತ್ತು ಆತನ ಕುಟುಂಬದ ಆರು ಮಂದಿಯನ್ನು ಆರೋಪಿಗಳೆಂದು ಹೆಸರಿಸಿದ್ದರು. ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ನಲ್ಲಿ ಅಸ್ಪಷ್ಟ ಆರೋಪಗಳು ಮತ್ತು ಪುರಾವೆಗಳಿದ್ದುದ್ದರಿಂದ ಸುಪ್ರೀಂ ಕೋರ್ಟ್‌ ಸೂಕ್ಷ್ಮವಾಗಿ ಪ್ರಕರಣವನ್ನು ವಿಚಾರಣೆ ನಡೆಸಿತು. ಅಸ್ಪಷ್ಟ ಆರೋಪಗಳ ಕಾರಣಕ್ಕಾಗಿ ತನ್ನ ಪತಿಯ ಕುಟುಂಬದ ವಿರುದ್ಧ ಮಹಿಳೆ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂಬ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಬಂದಿತು. ಪ್ರಕರಣವನ್ನು ರದ್ದುಗೊಳಿಸಿತು.

ಈ ತೀರ್ಪು ಬರುವುದಕ್ಕೂ ಮುನ್ನ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ವಿರುದ್ಧ ಅವರ ಪತ್ನಿ ನಿಖಿತಾ ಸುಳ್ಳು ಆರೋಪಗಳನ್ನು ಮಾಡಿ, ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದರು. ‘ನಿಖಿತಾ ಮತ್ತು ಆಕೆಯ ಕುಟುಂಬದ ನಿರಂತರ ಕಿರುಕುಳ ನೀಡಿದ್ದಾರೆ. ತನ್ನ ಮಗುವನ್ನು ಭೇಟಿ ಮಾಡಲು ಬಿಡುತ್ತಿಲ್ಲ. ಗರಿಷ್ಠ ಮೊತ್ತದ ಜೀವನಾಂಶ ಕೇಳುತ್ತಿದ್ದಾರೆ. ಅವರ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅತುಲ್ ಹೇಳಿದ್ದರು.

Advertisements

ಸಮಾಜದಲ್ಲಿ ಇಂತಹ ಕಾನೂನು ದುರುಪಯೋಗದ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತವೆ. ಅದು ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧದ ಕಾನೂನುಗಳು ಮಾತ್ರವಲ್ಲದೆ, ಯಾವುದೇ ಕಾನೂನು ದುರುಪಯೋಗದಿಂದ ಹೊರತಾಗಿಲ್ಲ. ಆದರೆ, ಅಂತಹ ದುರುಪಯೋಗವನ್ನು ತಡೆದು, ಆ ಕಾನೂನುಗಳನ್ನು ಮತ್ತಷ್ಟು ಭದ್ರಗೊಳಿಸುವುದೇ ಕಾರ್ಯಾಂಗ ಮತ್ತು ನ್ಯಾಯಾಂಗದ ಜವಾಬ್ದಾರಿ.

ಇಂತಹದೊಂದು ಕಾನೂನು ದುರುಪಯೋಗ ಪ್ರಕರಣದ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್‌, ಸಾರಾಸಗಟಾಗಿ ಮಾತನಾಡುವುದು ಭವಿಷ್ಯದಲ್ಲಿ ಅಪಾಯವನ್ನು ತಂದೊಡ್ಡುತ್ತದೆ. ಅಂತಹದ್ದೇ ಒಟ್ರಾಸೆ ಮಾತುಗಳನ್ನು ಸುಪ್ರೀಂ ಕೋರ್ಟ್‌ ಸೆಕ್ಷನ್ 498Aರ ದುರುಪಯೋಗದ ಬಗ್ಗೆ ಹೇಳಿದೆ. ಮಹಿಳೆಯರು ವೈಯಕ್ತಿಕ ಅಸ್ತ್ರವನ್ನಾಗಿ ಕಾನೂನನ್ನು ಬಳಸುತ್ತಾರೆ ಎಂದು ಹೇಳಿದೆ.

ಈ ವರದಿ ಓದಿದ್ದೀರಾ?: ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ

ಸುಪ್ರೀಂ ಕೋರ್ಟ್‌ನ ಇಂತಹ ಹೇಳಿಕೆಯು ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ. ಮುಖ್ಯವಾಗಿ, ಭಾರತವು ಪಿತೃಪ್ರಭುತ್ವ, ಪಿತೃಪ್ರಧಾನತೆಯನ್ನು ಜೀವಾಳವಾಗಿಸಿಕೊಂಡು, ಅದನ್ನೇ ಉಂಡು-ಬೆಳೆದಿರುವ ರಾಷ್ಟ್ರ. ಭಾರತದ ಸಮಾಜದಲ್ಲಿ ಸಾಂವಿಧಾನಿಕ ಹಕ್ಕುಗಳು, ಕಾನೂನಿನ ರಕ್ಷಣೆಗಳ ಹೊರತಾಗಿಯೂ ಮಹಿಳೆಯನ್ನು ಎರಡನೇ ದರ್ಜೆಯ ಮನುಷ್ಯರಂತೆಯೇ ನೋಡಲಾಗುತ್ತಿದೆ. ಹೆಣ್ಣು ಗಂಡಿನ ಗುಲಾಮಳು ಎಂಬ ಗಂಡು ಅಹಮಿಕೆಯ ಧೋರಣೆ ಬೇರು ಬಿಟ್ಟಿದೆ.

ಭಾರತೀಯ ಸಮಾಜದೊಳಗೆ ದೌರ್ಜನ್ಯಕ್ಕೊಳಗಾದ ಹೆಣ್ಣು, ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ಮಾತನಾಡುವುದೇ ಕಷ್ಟವಾಗಿದೆ. ದೌರ್ಜನ್ಯಗಳ ವಿರುದ್ಧ ಕಾನೂನು ಹೋರಾಟಕ್ಕಿಳಿಯುವ ಸಂತ್ರಸ್ತೆಯರು ಪೊಲೀಸ್ ಠಾಣೆಗಳಲ್ಲಿ ‘ಸಮಾಲೋಚನೆ’ ನಡೆಯುವಾಗ ಹೇಗೆಲ್ಲ ಒತ್ತಡಕ್ಕೆ ಒಳಗಾಗುತ್ತಾರೆ. ಸಮಾಜವು ಸಂತ್ರಸ್ತೆಯರನ್ನೇ ಹೇಗೆ ಅಪರಾಧಿಗಳಂತೆ ನೋಡುತ್ತದೆ ಎಂಬುದೂ ಗೊತ್ತಿದೆ. ಯಾವುದೇ ದೌರ್ಜನ್ಯ ಪ್ರಕರಣಗಳಿದ್ದರೂ ಮಹಿಳೆಯದ್ದೇ ತಪ್ಪಿರುತ್ತದೆ ಎಂಬ ಕೊಳಕು ಭಾವನೆ ಹರಡಿಕೊಂಡಿದೆ.

ಆ ಕಾರಣದಿಂದಲೇ, ಅತುಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಭಾರತದಲ್ಲಿರುವ ಗಂಡು ಅಹಮಿಕೆ, ಪಿತೃಪ್ರಭುತ್ವ ಕ್ಷಣಗಳಲ್ಲಿ ಜಾಗೃತಗೊಂಡಿತು. #ಮೀಟೂ ರೀತಿಯಲ್ಲಿ #ಮೆನ್‌ಟೂ ಹ್ಯಾಷ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸಲಾರಂಭಿಸಿದವು. ಪುರುಷರ ಆತ್ಮಹತ್ಯೆಯಂತಹ ಸಾವುಗಳಿಗೆ ಮಹಿಳೆಯರೇ ಕಾರಣವೆಂಬ ಆರೋಪಗಳು ಗರಿಗೆದರಿದವು. ಎಲ್ಲ ಕೆಡುಕಿಗೂ ಹೆಣ್ಣೇ ಕಾರಣವೆಂದು ದೂರುವ ಸಮಾಜಕ್ಕೆ ಅತುಲ್ ಪ್ರಕರಣ ಅಸ್ತ್ರವಾಯಿತು. #ಮೆನ್‌ಟೂ ಮೂಲಕ ಭಾರತದ ಗಂಡು ಮನಸ್ಥಿತಿಯು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಹಿಂಸೆಗಳನ್ನೂ ಸಮರ್ಥಿಸಿಕೊಳ್ಳಲಾರಂಭಿಸಿತು.

ಅತುಲ್ ಪ್ರಕರಣವು ಸಮಾಜದಲ್ಲಿನ ಪಿತೃಪ್ರಭುತ್ವವು ಇಡೀ ಹೆಣ್ಣು ಕುಲವನ್ನೇ ಹೇಗೆ ನೋಡುತ್ತದೆ ಎಂಬುದಕ್ಕೆ ಕನ್ನಡಿ ಹಿಡಿಯಿತು. ಇದೇ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ ನೀಡಿರುವ ಹೇಳಿಕೆ, ನ್ಯಾಯಾಲಯವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಚರ್ಚೆಗಳ ‘ಟ್ರ್ಯಾಪ್‌’ಗೆ ಬಿದ್ದಿತೇ ಎಂಬ ಸಂಶಯವನ್ನು ಹುಟ್ಟುಹಾಕುತ್ತದೆ.

ಅದರಲ್ಲೂ, ವರದಕ್ಷಿಣೆ ಆರೋಪಗಳನ್ನು ನ್ಯಾಯಾಲಯ ವಜಾಗೊಳಿಸಿರುವುದು ಅಷ್ಟೇ ಆತಂಕಕಾರಿ. ಮದುವೆಯ ಸಮಯದಲ್ಲಿ ಭಾರತದಲ್ಲಿ ಬಹುತೇಕ ಹೆಣ್ಣು ಮಕ್ಕಳು ವರದಕ್ಷಿಣೆ ನೀಡಿಯೇ ವಿವಾಹವಾಗಿರುತ್ತಾರೆ ಎಂಬುದು ಗೊತ್ತಿರದ ಸತ್ಯವೇನೂ ಅಲ್ಲ. ಅಂತೆಯೇ, ಚರ್ಚಿತ ಪ್ರಕರಣದಲ್ಲಿಯೂ ದೂರುದಾರೆ ತಾವು ವರದಕ್ಷಿಣೆಯ ಒತ್ತಡಕ್ಕೆ ಒಳಗಾಗಿದ್ದಾಗಿಯೂ ಆರೋಪಿಸಿದ್ದಾರೆ. ಆದರೆ, ಆಕೆಯ ಹೇಳಿಕೆಗಳ ಹೊರತಾಗಿಯೂ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸುವ ಬದಲು ಅಸ್ಪಷ್ಟ ಆರೋಪಗಳ ಮೇಲೆ ಕೇಂದ್ರೀಕರಿಸಿ, ಪ್ರಕರಣವನ್ನು ವಜಾಗೊಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (2022) ಪ್ರಕಾರ, ಭಾರತದಲ್ಲಿ ಪ್ರತಿದಿನ 18 ಮಹಿಳೆಯರು ಕೌಟುಂಬಿಕ ದೌರ್ಜನ್ಯಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ವರದಕ್ಷಿಣೆಯ ಪಾತ್ರ ಬಹುದೊಡ್ಡದಿದೆ. ಹೀಗಿರುವಾಗ, ನ್ಯಾಯಾಲಯವು ‘ವರದಕ್ಷಿಣ ನಿಷೇಧ ಕಾಯ್ದೆ’ಯನ್ನು ಬಲಗೊಳಿಸಲು ಆ ಪ್ರಕರಣವನ್ನು ಬಳಸಿಕೊಳ್ಳಬಹುದಿತ್ತು. ಕಾನೂನು ಬೆಂಬಲವನ್ನು ಪಡೆಯುವಲ್ಲಿ ಮಹಿಳೆಯರು ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳ ಬಗ್ಗೆ ಗಮನ ಹರಿಸಬಹುದಿತ್ತು. ಆದರೆ, ಆ ಅವಕಾಶವನ್ನು ಸುಪ್ರೀಂ ಕೋರ್ಟ್‌ ಕೈಚೆಲ್ಲಿದೆ. ಮಾತ್ರವಲ್ಲ, ಭವಿಷ್ಯದ ಪ್ರಕರಣಗಳಿಗೆ ಅಪಾಯಕಾರಿ ಪೂರ್ವನಿದರ್ಶನವನ್ನು ನೀಡುವಂತಹ ತೀರ್ಪು ನೀಡಿದೆ.

ಜಸ್ಟಿಸ್ ಕೃಷ್ಣ ಅಯ್ಯರ್ ಅವರು, “ಸಾಮಾಜಿಕವಾಗಿ ಸಂವೇದನಾಶೀಲ ನ್ಯಾಯಾಧೀಶರು ಸಂಕೀರ್ಣ ಶಾಸನದ ದೀರ್ಘ ಷರತ್ತುಗಳ ಹೊರತಾಗಿಯೂ ಲಿಂಗ ಆಕ್ರೋಶದ ವಿರುದ್ಧದ ಶಾಸನಬದ್ಧ ರಕ್ಷಾಕವಚವಾಗಿದ್ದಾರೆ” ಎಂದಿದ್ದರು. ಆದರೆ, ಪ್ರಸ್ತುತ ಸುಪ್ರೀಂ ಕೋರ್ಟ್‌ ಹೇಳಿಕೆ ಮತ್ತು ನಡೆಯು ನಮ್ಮ ನ್ಯಾಯಾಂಗದಲ್ಲಿ ಅಂತಹ ಸೂಕ್ಷ್ಮತೆಯನ್ನು ಸಾಧಿಸಲು ನಾವು ಬಹಳ ದೂರದಲ್ಲಿದ್ದೇವೆ ಎಂಬುದನ್ನು ತೋರಿಸುತ್ತದೆ. ಮಹಿಳೆಯರು ನ್ಯಾಯವನ್ನು ಪಡೆಯುವಲ್ಲಿ ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳನ್ನು ನ್ಯಾಯಾಂಗವು ಗುರುತಿಸಬೇಕು. ಹೆಚ್ಚಿನ ಸಹಾನುಭೂತಿಯಿಂದ ಮಾತನಾಡಬೇಕು. ಆಗ ಮಾತ್ರವೇ, ಸಂವಿಧಾನದ ಆಶಯದಂತೆ ಲಿಂಗ ಸಮಾನತೆ ತರಲು ಮತ್ತೊಂದು ಹೆಜ್ಜೆ ಮುಂದಿಡಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X