ತಮಿಳುನಾಡಿನ ಪಟಾಕಿ ತಯಾರಿಕಾ ಘಟಕದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಿರುದನಗರ ಸಮೀಪದ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಟಾಕಿ ತಯಾರಿಕೆ ವೇಳೆ ರಾಸಾಯನಿಕ ಬೆರೆಸುವ ಪ್ರಕ್ರಿಯೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಇದರಿಂದ ಕಾರ್ಖಾನೆಯ ಒಂದು ಕೊಠಡಿ ಧ್ವಂಸವಾಗಿದೆ. ಬೆಂಕಿ ಹೊತ್ತಿಕೊಂಡ ಕಾರಣ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ರಾಸಾಯನಿಕಗಳನ್ನು ಬೆರೆಸುವ ಸಮಯದಲ್ಲಿ ಸ್ಫೋಟ ಸಂಭವಿಸಿದ್ದರಿಂದ ನಾಲ್ಕು ಕೊಠಡಿಗಳನ್ನು ಒಡೆದು ಚೆಲ್ಲಾಪಿಲ್ಲಿಯಾಗಿದೆ. ಸದ್ಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವಿರುದುನಗರ ಜಿಲ್ಲೆಯ ಚತುರ್ ಬಳಿಯ ಅಪ್ಪನಾಯಕನಪಟ್ಟಿ ಪಂಚಾಯಿತಿ ವ್ಯಾಪ್ತಿಯ ಪೊಮೈಯಾಪುರಂ ಗ್ರಾಮದ ಸಾಯಿನಾಥ್ ಪಟಾಕಿ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಎಂದಿನಂತೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪಟಾಕಿ ತಯಾರಿಸಲು ಬಳಸುವ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ರಾಸಾಯನಿಕ ಬದಲಾವಣೆ ಮತ್ತು ಘರ್ಷಣೆ ಭೀಕರ ಸ್ಫೋಟಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದು ಬಂದ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳನ್ನು ತೆಗೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಭೀಕರ ಅಪಘಾತದಲ್ಲಿ ವೇಲ್ಮುರುಗನ್, ನಾಗರಾಜ್, ಕಣ್ಣನ್, ಕಾಮರಾಜ್, ಶಿವಕುಮಾರ್ ಮತ್ತು ಮೀನಾಕ್ಷಿಸುಂದರಂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಇಬ್ಬರನ್ನು ಶೇ.90ರಷ್ಟು ಸುಟ್ಟ ಗಾಯಗಳೊಂದಿಗೆ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ವಿರುದುನಗರ ಮತ್ತು ಮಧುರೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.