ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಮುಡಬಿ ಠಾಣೆಯಲ್ಲಿ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜ.1ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಖೋರಾ ಗ್ರಾಮದ ಐದು ಜನ ಯುವಕರು ಡಿಸೆಂಬರ್ ಕೊನೆ ವಾರದಲ್ಲಿ ಅದೇ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ತುಳಿದು, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಬಳಿಕ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಜನವರಿ1ರಂದು ಮುಡಬಿ ಠಾಣೆಯ ಪೊಲೀಸ್ ಪೇದೆಯೊಬ್ಬರು ಹೊಸ ವರ್ಷದ ಬಂದೋಬಸ್ತ್ ಕರ್ತವ್ಯ ನಿಮಿತ್ತ ಕಲಖೋರಾ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ಕುರಿತು ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿ ದೂರು ಕೊಡಲು ಠಾಣೆಗೆ ಬರುವುದಾಗಿ ಹೇಳಿದ್ದರು.
ಘಟನೆ ಸಂಬಂಧ ಯಾರೂ ದೂರು ನೀಡದ ಕಾರಣ ಜ.1ರಂದು ಪೊಲೀಸರೇ ಐದು ಜನ ಆರೋಪಿಗಳ ವಿರುದ್ಧ ಕಲಂ 189(2), 353(2), 298, 190 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ಸಂಬಂಧ ಈಗಾಗಲೇ ಓರ್ವ ಯುವಕ ಸೇರಿ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವ ಆರೋಪಿ ಗ್ರಾಮದಲ್ಲಿ ಇಲ್ಲ ಎಂದು ಮುಡಬಿ ಠಾಣೆ ಪಿಎಸ್ಐ ಜಯಶ್ರೀ ವಿ. ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.