ಕೃಷಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಖರೀದಿಸಬೇಕು. ಎಂಎಸ್‌ಪಿಯನ್ನು ಶಾಸನಬದ್ದಗೊಳಿಸಬೇಕು ಮತ್ತು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ದಲ್ಲೇವಾಲ್ ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಬಿ.ಆರ್ ಪಾಟೀಲ್ ಒತ್ತಾಯಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿ.ಆರ್ ಪಾಟೀಲ್ ಏಕಾಂಗಿ ಸತ್ಯಾಗ್ರಹ ನಡೆಸಿದ್ದಾರೆ. “ಪ್ರೊ. ಎಂ.ಎಸ್ ಸ್ವಾಮಿನಾಥನ್ ವರದಿಯ ಅನ್ವಯ ರೈತರ ಬೆಳೆಗಳಿಗೆ ಸಿ2+50% ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಜಗತ್ ಸಿಂಗ್ ದಲ್ಲೇವಾಲ್ ಅವರು 2024ರ ನವೆಂಬರ್ 26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ತೀವ್ರಹದಗೆಟ್ಟಿದೆ. ಆದರೂ, ಕೇಂದ್ರ ಸರ್ಕಾರ ಹೋರಾಟಕ್ಕೆ ಸ್ಪಂದಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ದಲ್ಲೇವಾಲ್ ಅವರನ್ನು ಪಂಜಾಬ್ ಪಕ್ಕದ ಖನೌರಿ ಬಾರ್ಡರ್ ಆಸ್ಪ್ರತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಸರ್ಕಾರವು ದಲ್ಲೇವಾಲ್ ಅವರ ಹಕ್ಕೊತ್ತಾಯಕ್ಕೆ ಸ್ಪಂದಿಸಬೇಕು. ದಲ್ಲೇವಾಲ್ ಅವರನ್ನು ಉಳಿಸಿ, ರೈತರಿಗೆ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಿ ರೈತರನ್ನು ಉಳಿಸಿಬೇಕು” ಎಂದು ಒತ್ತಾಯಿಸಿದ್ದಾರೆ.
ಬಿ.ಆರ್ ಪಾಟೀಲ್ ಅವರು ಸತ್ಯಾಗ್ರಹದಲ್ಲಿ ವಿಧಾನ ಪರಿಷತ್ ಸದಸ್ಯ ಕಾಂ. ಮೋಹನ್ ಕುಮಾರ್ ಕೊಂಡಜ್ಜಿ, ರೈತ ಹೋರಾಟಗಾರ ವೀರಸಂಗಯ್ಯ ಕೂಡ ಭಾಗಿಯಾಗಿದ್ದಾರೆ.