ಆವಕಾಡೊ ಆರೋಗ್ಯಕರವಾದ ಹಣ್ಣೆಂದು ಪರಿಗಣಿಸಲಾಗುತ್ತದೆ ಮತ್ತು ಡಯೆಟ್ ಮಾಡುವವರ ಬೆಳಗಿನ ಉಪಾಹಾರ ಹೆಚ್ಚಾಗಿ ಆವಕಾಡೊ ಆಗಿರುತ್ತದೆ. ಆವಕಾಡೊ ಹಣ್ಣಿನ ಹಲವು ರೆಸಿಪಿಗಳಿವೆ. ಆದರೆ ಗುಜರಾತ್‌ನ ಬಾಣಸಿಗರೊಬ್ಬರು (ಚೆಫ್) ತಯಾರಿಸುವ ಈ ಆವಕಾಡೊ ರೆಸಿಪಿ ಮಾತ್ರ ಅತೀ ದುಬಾರಿ.
ಸಾಮಾನ್ಯವಾಗಿ ಆವಕಾಡೊ ದುಬಾರಿ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಈ ಆವಕಾಡೊವನ್ನು ಬಳಸಿ ಗುಜರಾತ್‌ನ ಸೂರತ್‌ನಲ್ಲಿ ತಯಾರಿಸಲಾಗುವ ಟೋಸ್ಟ್ ವಿಶ್ವದಲ್ಲೆ ಅತೀ ದುಬಾರಿ ಆವಕಾಡೊ ಟೋಸ್ಟ್ ಎಂದು ಪರಿಗಣಿಸಲಾಗುತ್ತದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಅಮೆರಿಕ ಅಧ್ಯಕ್ಷರ ಪತ್ನಿಗೆ ಪ್ರಧಾನಿ ಮೋದಿಯಿಂದ ದುಬಾರಿ ವಜ್ರದ ಉಡುಗೊರೆ
ಸೂರ್ತಿ ಮಯೂರ್‌ಕುಮಾರ್ ವಸಂತ್‌ಲಾಲ್ ಎಂಬ ಬ್ಲಾಗರ್ ತಮ್ಮ foodie_addicted_ ಎಂಬ ಖಾತೆಯಿಂದ ಬಾಣಸಿಗರೊಬ್ಬರು ಸೂರತ್‌ನಲ್ಲಿ 13 ಸಾವಿರ ರೂಪಾಯಿ ಬೆಲೆಯ ಆವಕಾಡೊ ಟೋಸ್ಟ್ ಅನ್ನು ತಯಾರಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
“ನಿಮ್ಮ ಶ್ರೀಮಂತ ಸ್ನೇಹಿತರಿಗೆ ಟ್ಯಾಗ್ ಮಾಡಿ! ಭಾರತದಲ್ಲಿ ಅತ್ಯಂತ ದುಬಾರಿ ಆವಕಾಡೊ ಟೋಸ್ಟ್ ಕೇವಲ 13,000 ರೂಪಾಯಿಗೆ ಲಭಿಸುತ್ತದೆ. ಈ ಟೋಸ್ಟ್‌ಗೆ ಸರ್ಬಿಯಾದಿಂದ ರಫ್ತು ಮಾಡಲಾದ ‘ಡಾಂಕಿ ಪುಲ್ ಚೀಸ್’ ಬಳಸಲಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.
ಈ ಟೋಸ್ಟ್‌ನ ಬೆಲೆ ಇಷ್ಟೊಂದು ದುಬಾರಿಯಾಗಲು ಕಾರಣ ಚೀಸ್ ಆಗಿದೆ. ಇದು ದುಬಾರಿ ಚೀಸ್ ಎಂದು ಹೇಳಲಾಗಿದೆ. ಒಂದು ಕೆಜಿ ಚೀಸ್ ಅನ್ನು ತಯಾರಿಸಲು ಸುಮಾರು 25 ಲೀಟರ್ ಹಾಲು ಬೇಕಾಗುತ್ತದೆ ಎಂದು ಬಾಣಸಿಗ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್‌ವೈ, ಶ್ರೀರಾಮುಲು ಭ್ರಷ್ಟಾಚಾರ!
ಈ ವೀಡಿಯೋವನ್ನು ಸದ್ಯ 600 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಸಾವಿರಾರು ಕಾಮೆಂಟ್‌ಗಳು ಬಂದಿದೆ. “ನಾವು ಆರೋಗ್ಯಕರ ಆಹಾರವನ್ನು ಅನಾರೋಗ್ಯಕರ ಆಹಾರವನ್ನು ಮಾಡುವುದು ಈ ರೀತಿಯೇ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇನ್ನೋರ್ವ ನೆಟ್ಟಿಗರು “ನೀವು ತಮಾಷೆ ಮಾಡುತ್ತಿದ್ದೀರಾ” ಎಂದು ಪ್ರಶ್ನಿಸಿದ್ದಾರೆ. “ಈ ಹಣದಲ್ಲಿ ನಮ್ಮ ಮನೆಗೆ ಎರಡು ತಿಂಗಳ ರೇಷನ್ ತರಬಹುದು” ಎಂದೂ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. “ವಿದೇಶದಲ್ಲಿಯೂ ಆವಕಾಡೊವನ್ನು ಇಷ್ಟೊಂದು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ” ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇನ್ನು ಹಲವು ನೆಟ್ಟಿಗರು “ನಾನು ಇದಕ್ಕಿಂತ ರುಚಿಯಾದ ಆವಕಾಡೊ ಟೋಸ್ಟ್ ಅನ್ನು ಬರೀ 150 ರೂಪಾಯಿಗೆ ತಯಾರಿಸಬಲ್ಲೆ. ಈ ಟೋಸ್ಟ್ ತಯಾರಿಗೆ ಬಳಸಿರುವ ಆಹಾರ ಪದಾರ್ಥಗಳೆಲ್ಲವನ್ನು ನೋಡಿದಾಗ ಇದೇನು 13 ಸಾವಿರ ರೂಪಾಯಿ ಬೆಲೆ ಬಾಳುವ ಟೋಸ್ಟ್ ಅಲ್ಲ ಅನಿಸುತ್ತದೆ. ಇದು ಅತೀ ದುಬಾರಿ ಬೆಲೆಯಾಯಿತು” ಎಂದೂ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
