ಛತ್ತೀಸಗಢದ ಬಸ್ತರ್ ಸೀಮೆಯ ಕುರಿತು ಒಳನೋಟಗಳನ್ನು ಉಳ್ಳ ವರದಿಗಳನ್ನು ನೀಡುತ್ತಿದ್ದ ಯುವ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ನಿಗೂಢ ಹತ್ಯೆ ಜರುಗಿದೆ.
ಮಾವೋವಾದಿಗಳು ಅಪಹರಿಸಿದ ಪೊಲೀಸರು ಇಲ್ಲವೇ ಗ್ರಾಮಸ್ಥರನ್ನು ಬಿಡುಗಡೆ ಮಾಡಿಸುವಲ್ಲಿ ಮುಕೇಶ್ ಹಲವು ಸಲ ಮಹತ್ವದ ಪಾತ್ರ ವಹಿಸಿದ್ದರು.
ಸುರೇಶ್ ಚಂದ್ರಾಕರ್ ಎಂಬ ಗುತ್ತಿಗೆದಾರ ನಿರ್ಮಿಸಿದ್ದ ರಸ್ತೆ ಸಂಬಂಧದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಇತ್ತೀಚೆಗೆ ಎನ್.ಡಿ.ಟೀವಿಯಲ್ಲಿ ವರದಿಯೊಂದು ಪ್ರಸಾರವಾಗಿತ್ತು. ಈ ವರದಿಯ ನಂತರ ರಾಜ್ಯ ಬಿಜೆಪಿ ಸರ್ಕಾರ ರಸ್ತೆ ನಿರ್ಮಾಣ ಕುರಿತು ತನಿಖೆಗೆ ಆದೇಶ ನೀಡಿತ್ತು. ಮುಕೇಶ್ ಈ ಚಾನೆಲ್ ಗೂ ಕೆಲಸ ಮಾಡುತ್ತಿದ್ದರು.
‘ಬಸ್ತರ್ ಜಂಕ್ಷನ್’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮುಕೇಶ್ ಶವ ಹಳೆಯ ಸೆಪ್ಟಿಕ್ ಟ್ಯಾಂಕ್ ಒಂದರಲ್ಲಿ ಪತ್ತೆಯಾಗಿದೆ. ಶೇ.73ರಷ್ಟು ಆದಿವಾಸಿಗಳೇ ನೆಲೆಸಿರುವ ಬೀಜಾಪುರ ವ್ಯಾಪ್ತಿಯ ಸ್ಥಳವಿದು. ಭಾರೀ ಸ್ವರೂಪದ ಪೆಟ್ಟಿನ ಗುರುತು ಶವದ ಮೇಲೆ ಕಂಡು ಬಂದಿದೆ.
ಈ ನಿಗೂಢ ಹತ್ಯೆಯ ಕುರಿತು ರಾಜ್ಯದ ಆಳುವ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪರಸ್ಪರ ತೀವ್ರ ಕೆಸರೆರಚಾಟದಲ್ಲಿ ತೊಡಗಿವೆ. ಇದೇ ಜನವರಿ ಒಂದರ ಸಂಜೆ ಮನೆಯಿಂದ ಹೊರಬಿದ್ದಿದ್ದ ಮುಕೇಶ್ ನಾಪತ್ತೆಯಾಗಿದ್ದರು. ಸುದ್ದಿ ಸಂಗ್ರಹಕ್ಕಾಗಿ ಹೊರ ಹೋಗಿರಬಹುದೆಂದು ಭಾವಿಸಲಾಗಿತ್ತು. ಆದರೆ ಮರುದಿನವೂ ಅವರು ಸುತ್ತಮುತ್ತಲ ಯಾವುದೇ ಪ್ರದೇಶದಲ್ಲಿ ಕಾಣಬರಲಿಲ್ಲ. ಅವರ ಫೋನ್ ಕೂಡ ಬಂದ್ ಆಗಿತ್ತು. ಅಣ್ಣ ಯುಕೇಶ್ ಪೊಲೀಸರಿಗೆ ದೂರು ನೀಡಿದರು. ಗುತ್ತಿಗೆದಾರ ಚಂದ್ರಾಕರ್ ಸೋದರರ ಕೈವಾಡವನ್ನು ಯುಕೇಶ್ ಶಂಕಿಸಿದ್ದರು.
ಯುಕೇಶ್ ಹೇಳುವ ಪ್ರಕಾರ ಮುಕೇಶ್ ಜನವರಿ ಒಂದರ ಸಂಜೆ ಸುರೇಶ್ ಚಂದ್ರಾಕರ್ ಎಂಬ ಗುತ್ತಿಗೆದಾರನನ್ನು ಭೇಟಿಯಾಗುವುದಿತ್ತು. ಸುರೇಶ್ ಸಮೀಪದ ಸಂಬಂಧಿಕನೂ ಆಗಿದ್ದ. ಮುಕೇಶ್ ನಾಪತ್ತೆಯಾದ ನಂತರ ಆತನ ಲ್ಯಾಪ್ಟಾಪ್ ಮುಖಾಂತರ ಮೊಬೈಲ್ ಫೋನಿನ ಅಂತಿಮ ಲೊಕೇಶನ್ ಪತ್ತೆ ಮಾಡಲಾಯಿತು. ಈ ಲೊಕೇಶನ್ ಗುತ್ತಿಗೆದಾರರಾದ ದಿನೇಶ್, ಸುರೇಶ್ ಹಾಗೂ ರಿತೇಶ್ ಚಂದ್ರಾಕರ್ ಸೋದರರ ಕೂಲಿ ಕಾರ್ಮಿಕರ ವಾಸಕ್ಕಾಗಿ ನಿರ್ಮಿಸಲಾಗಿದ್ದ ಸ್ಥಳವಾಗಿತ್ತು ಎಂಬುದು ಯುಕೇಶ್ ಹೇಳಿಕೆ.
ಈ ಆವರಣದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದಾಗ, ಅವರಿಗೆ ಹೊಸದಾಗಿ ಮುಚ್ಚಳ ಹಾಕಿ ಸಿಮೆಂಟ್ ಮೆತ್ತಿದ್ದ ಹಳೆಯ ಸೆಪ್ಟಿಕ್ ಟ್ಯಾಂಕ್ ಕಂಡುಬಂದಿತು. ಈ ಸೆಪ್ಟಿಕ್ ಟ್ಯಾಂಕಿನಲ್ಲಿ ಪತ್ರಕರ್ತ ಮುಕೇಶ್ ಶವ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಮಾವೋವಾದಿಗಳ ವಿರುದ್ಧ ಛತ್ತೀಸಗಢ ಸರ್ಕಾರ ಪೊಲೀಸರ ರಕ್ಷಣೆಯಲ್ಲಿ ಸಂಘಟಿಸಿದ್ದ ‘ಸಲ್ವಾ ಜುಡೂಮ್’ ಎಂಬ ಅರೆಶಸ್ತ್ರ ಪಡೆಯಲ್ಲಿದ್ದ ಸುರೇಶ್ ಚಂದ್ರಾಕರ್ ಹಿನ್ನೆಲೆ ತೀರಾ ಬಡತನದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿ ಪ್ರಭಾವದ ಸೀಮೆಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಿಡಿದು ಬಸ್ತರ್ ನ ದೊಡ್ಡ ಗುತ್ತಿಗೆದಾರ ಕುಳ ಎನಿಸಿದ್ದ. 2021ರಲ್ಲಿ ಈತನ ಮದುವೆ ಭಾರೀ ಅದ್ದೂರಿಯಿಂದ ಜರುಗಿತ್ತು. ಮಾವನ ಮನೆಗೆ ಹೆಲಿಕಾಪ್ಟರಿನಲ್ಲಿ ಬಂದಿಳಿದಿದ್ದ. ಮದುವೆಯ ನೃತ್ಯಕ್ಕಾಗಿ ರಷ್ಯಾದಿಂದ ನರ್ತಕಿಯರ ತಂಡವನ್ನು ಕರೆಯಿಸಿದ್ದ. ಮದುವೆ ಔತಣಕೂಟವನ್ನು ಬೀಜಾಪುರದ ಸ್ಟೇಡಿಯಂ ನಲ್ಲಿ ಏರ್ಪಡಿಸಿದ್ದ. ಬಸ್ತರ್ ಹಿಂದೆಂದೂ ಕಂಡು ಕೇಳಿ ಅರಿಯದ ಮದುವೆಯಿದು ಎನ್ನಲಾಗಿದೆ.
ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಪ್ರದೇಶ ಕಾಂಗ್ರೆಸ್ ನ ಪರಿಶಿಷ್ಟ ಜಾತಿಯ ವಿಭಾಗದ ಉಪಾಧ್ಯಕ್ಷ. ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಲ್ಲಿ ನವಾಪುರ ವಿಧಾನಸಭಾ ಕ್ಷೇತ್ರಕ್ಕೆ ಈತನನ್ನು ನಿರೀಕ್ಷಕನನ್ನಾಗಿಯೂ ಕಾಂಗ್ರೆಸ್ ಪಕ್ಷ ನೇಮಿಸಿತ್ತು. ಮುಕೇಶ್ ಕೊಲೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮೂವರು ಯಾರೆಂದು ಹೆಸರಿಸಿಲ್ಲ.
“ಬಿಜೆಪಿ ಆಡಳಿತದಲ್ಲಿ ಪತ್ರಕರ್ತರ ಹತ್ಯೆಗಳು ಜರುಗಿವೆ. ಮುಕೇಶ್ ಚಂದ್ರಾಕರ್ ಶವ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದು ನಿಚ್ಚಳ ಗೋಚರ” ಎಂಬುದು ರಾಜ್ಯ ಕಾಂಗ್ರೆಸ್ ಟೀಕೆ.
“ಗುತ್ತಿಗೆದಾರನೇ ಅಥವಾ ಕಾಂಗ್ರೆಸ್ ಗುತ್ತಿಗೆ ಕೊಲೆಗಾರನೇ? ಹತ್ಯೆಯ ಮುಖ್ಯ ಆರೋಪಿ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಬೈಜ್ ಅವರ ನಡುವಣ ಆಪ್ತತೆ ಸರ್ವವೇದ್ಯ ಸಂಗತಿ. ಕಾಂಗ್ರೆಸ್ ಎಸ್ ಸಿ ಮೋರ್ಚಾಕ್ಕೆ ಈ ಗುತ್ತಿಗೆದಾರನನ್ನು ನೇಮಕ ಮಾಡಿದ್ದೇ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್. ರಾಹುಲ್ ಗಾಂಧೀ ಹೇಳುವ ಕಾಂಗ್ರೆಸ್ಸಿನ ಮೊಹಬ್ಬತ್ ಕೀ ದುಕಾನದಲ್ಲಿ ಬಗೆಬಗೆಯ ಅಪರಾಧಗಳ ಮಾರಾಟಗಾರರು ಇದ್ದಾರೆ” ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ