ಜಿಲ್ಲೆಯಲ್ಲಿ ಕಬ್ಬಿಗೆ ಬೆಲೆ ನಿಗದಿಪಡಿಸುವುದು, ಅತಿವೃಷ್ಟಿ, ರೋಗ ಬಾಧೆಯಿಂದ ಹಾನಿಗೀಡಾದ ತೊಗರಿ ಬೆಳೆಗೆ ವಿಶೆಷ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಸಲ್ಲಿಸಿತು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತ್ರತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಕೋರಿದರು.
ʼರಾಜ್ಯದಲ್ಲಿ ಕೃಷಿ ಪ್ರಧಾನ ಜಿಲ್ಲೆ ಬೀದರ್ ಆಗಿದ್ದು, ಜಿಲ್ಲೆಯ ರೈತರು ಪ್ರತಿವರ್ಷ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಲ್ಲೆಯ ಎಲ್ಲಾ ಪಿಕೆಪಿಎಸ್ ಕೇಂದ್ರಗಳಲ್ಲಿ ಸೋಯಾಬಿನ್, ತೊಗರಿ ಮತ್ತು ಕಡಲೆ ಧಾನ್ಯಗಳನ್ನು ಖರೀದಿಸಿ ಸಕಾಲದಲ್ಲಿ ರೈತರ ಖಾತೆಗೆ ಹಣ ಪಾವತಿಸಬೇಕು. ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಒನ್ ಟೈಮ್ ಸೆಟಲ್‌ಮೆಂಟ್ ಮಾಡಿ ಕಾರ್ಖಾನೆ ಪುನಾರಂಭಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ʼಬೆಳೆ ವಿಮೆ ಪಾವತಿಸಿದ ರೈತರಿಗೆ ಪರಿಹಾರ ಪಾವತಿಸಲು ವಿಮಾ ಕಂಪನಿಗಳಿಗೆ ನಿರ್ದೇಶಿಸಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪರಿಹಾರ ಧನ ತ್ವರಿತವಾಗಿ ಪಾವತಿಸಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಹಲವೆಡೆ ಬೆಳೆ ಹಾನಿಯಾಗಿದೆ, ಅಂತಹ ರೈತರಿಗೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆಗೆ ಮುಂದಾಗುವುದು ಸೇರಿದಂತೆ ಇತರೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ನಾಲ್ವರ ಬಂಧನ
ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಖಾಸಿಂ ಅಲಿ, ಶಾಂತಮ್ಮಾ ಮೂಲಗೆ, ಕಾಶಿನಾಥ ಭೂರೆ, ವಿಠ್ಠಲರಾವ್ ಮೇತ್ರೆ, ಸಂಗಶೆಟ್ಟಿ ದಾನಾ, ವಿಠ್ಠಲ ರೆಡ್ಡಿ, ಮುಖಿಮೊದೀನ್ ಪಟೇಲ್, ಬಸವರಾಜ ಅಷ್ಟೂರ್, ರುದ್ರಯ್ಯ ಸ್ವಾಮಿ, ವಿಜಯಕುಮಾರ್ ಬಾವಗೆ, ನಾಗೇಂದ್ರ ತರನಳ್ಳಿ, ಖಾನ್ ಸಾಬ್, ವಿನೊದ ಚಿಂತಾಮಣಿ, ಭವರಾವ ನೆಲವಾಡೆ, ಗುಂಡೆರಾವ ಕುಲಕರ್ಣಿ, ಶಿವಕಾಂತ ಖಂಡೆ, ಭದ್ರಪ್ಪ ಬಾವಗಿ ಸೇರಿದಂತೆ ಮತ್ತಿತರಿದ್ದರು.