ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಳ್ಳಾರಿ ನಗರದ ತಾಲೂಕು ಕಚೇರಿಯ ಬಳಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ವಿಶ್ವನಾಥ ಅವರ ಮೂಲಕ ರಾಜ್ಯಪಾಲರಿಗೆ ಬಿಜೆಪಿ ಪಕ್ಷದಿಂದ ಮನವಿ ಪತ್ರ ಸಲ್ಲಿಸಲಾಯಿತು.
ಬಿಜೆಪಿ ತಾಲೂಕಾಧ್ಯಕ್ಷ ಹೆಚ್.ಎಮ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸಚಿನ್ ಪಾಂಚಾಳ್ ಅವರ ಡೆತ್ ನೋಟಿನಲ್ಲಿ ಉಲ್ಲೇಖಿತವಾದಂತೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಬಸ್ಸು ಪ್ರಯಾಣ ದರ ಶೇ.15ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಮ್. ಎಸ್.ಸೋಮಲಿಂಗಪ್ಪ ಅವರು ಮಾತನಾಡಿ, ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಗ್ಯಾರಂಟಿ ನೀಡಿ ಪುರುಷರ ಜೇಬಿಗೆ ಕತ್ತರಿ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ತಾಲೂಕಿನಲ್ಲಿ ತಹಶೀಲ್ದಾರ್ ಕಛೇರಿ, ಸಬ್ ರಿಜಿಸ್ಟ್ರಾರ್, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಲ್ಲಿ ನಡೆಯುವ ಆನೈತಿಕ ದಂಧೆಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದವರ ಮೇಲೆ ಪೊಲೀಸ್ ಇಲಾಖೆಯ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಯುವ ಮುಖಂಡರಾದ ಟಿ.ಧರಪ್ಪ ನಾಯಕ ಮಾತನಾಡಿ, ಗ್ಯಾರಂಟಿ ಭಾಗ್ಯಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ತಾಲೂಕಿನಲ್ಲಿ ಪಡಿತರ ಮಾಫಿಯಾ, ಮಟ್ಕಾ, ಇನ್ನಿತರ ಅನೈತಿಕ ಚಟುವಟಿಕೆಗಳು ಇನ್ನಿತರ ದಂಧೆಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಕಾರ್ಯವೈಖರಿಯನ್ನು ಪ್ರಶ್ನಿಸಿದರಲ್ಲದೇ ಅವರು ಶಾಮೀಲಾಗಿರುವ ಬಗ್ಗೆ ಆರೋಪಿಸಿದರು.
ಇದನ್ನು ಓದಿದ್ದೀರಾ? ಮನೆಗೊಂದು ಕಲಾಕೃತಿ ಇರಲಿ: 22ನೇ ‘ಚಿತ್ರಸಂತೆ’ಗೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ
ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಮ್.ಎಸ್.ಸಿದ್ದಪ್ಪ ಮಾತನಾಡಿ, ಸರ್ಕಾರ ಗ್ಯಾರಂಟಿ ಅನುಷ್ಟಾನಕ್ಕಾಗಿ ಜನಸಾಮಾನ್ಯರಿಗೆ ಬಸ್ ದರ, ಸ್ಟಾಂಪ್ ದರ ಇನ್ನಿತರ ಬೆಲೆಯೇರಿಕೆಯ ಮೂಲಕ ಕಸಿಯುತ್ತಿದ್ದಾರೆ ಎಂದರು. ಇದೇ ವೇಳೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
