ವೀರಶೈವ ಸಮಾಜ, ಪಾರ್ವತಿ ವೀರಶೈವ ಲಿಂಗಾಯಿತ ಮಹಿಳಾ ಸಮಾಜ ಹಾಗೂ ಗುಬ್ಬಿ ನಗರ ವೀರಶೈವ ಯುವಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಧನುರ್ಮಾಸದ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನಡೆಸಿಕೊಟ್ಟರು.
ಶನಿವಾರ ಬೆಳಿಗ್ಗೆ ಪಟ್ಟಣದ ವೀರಶೈವ ಸಮಾಜದ ಕಚೇರಿ ಆವರಣದಲ್ಲಿ ನಡೆದ ಇಷ್ಟಲಿಂಗ ಪೂಜೆ ವಿಧಿವತ್ತಾಗಿ ನಡೆಸಿದ ಶ್ರೀಗಳು ಗೋಸಲ ಶ್ರೀ ಚನ್ನಬಸವೇಶ್ವರರ ಪುಣ್ಯಕ್ಷೇತ್ರದಲ್ಲಿ ಈ ವಿಶೇಷ ಪೂಜೆ ಸಾರ್ಥಕ ಕಾರ್ಯವಾಗಿದೆ ಎಂದರು.
ವೀರಶೈವ ಲಿಂಗಾಯಿತ ಧರ್ಮ ವಿಶ್ವಮಾನ್ಯ ಪಡೆದುಕೊಂಡು ತನ್ನದೇ ವೈಶಿಷ್ಟ್ಯತೆ ಗಳಿಸಿಕೊಂಡಿದೆ. ನಮ್ಮ ಸಮಾಜ ಲಿಂಗ ಪೂಜೆ, ಜಂಗಮ ಪೂಜೆ ಮೂಲಕವೇ ಲೋಕ ಕಲ್ಯಾಣ ಕಾರ್ಯ ಮಾಡಿದೆ. ಶರಣರ ಮಾರ್ಗಾನುಸಾರ ಸಾಮಾಜಿಕ ಮನ್ನಣೆಯನ್ನು ಧಾರ್ಮಿಕ ಕಾರ್ಯ ಮೂಲಕವೇ ಗಳಿಸಿದ್ದೇವೆ. ಗುರು ಪರಂಪರೆಯನ್ನು ಎಂದೂ ಮರೆಯದ ವೀರಶೈವ ಲಿಂಗಾಯಿತ ಸಮಾಜ ಗುರುಪೀಠಗಳನ್ನು ಸಹ ಆರಾಧಿಸಿ ಅರ್ಥಪೂರ್ಣ ಬದುಕು ನಡೆಸಿದ್ದಾರೆ. ಈ ಹಿನ್ನಲೆ ನಮ್ಮ ಧರ್ಮ ಆಚರಣೆ, ಪೂಜೆ ಪುನಸ್ಕಾರಗಳನ್ನು ನಿಲ್ಲಿಸಿದೆ ಮುಂದುವರೆಸಬೇಕು. ಈ ಕಾರ್ಯ ಗುಬ್ಬಿಯಲ್ಲಿ ಯುವಕರು ನಡೆಸಿಕೊಂಡು ಬಂದಿರುವುದು ಗಮನಾರ್ಹ ವಿಚಾರ ಎಂದರು.
ತ್ರಿವಿಧ ದಾಸೋಹ ಮೂಲಕವೇ ನಮ್ಮ ಸಮಾಜ ವಿಶೇಷವಾಗಿ ಗುರುತಿಸಿಕೊಂಡಿದೆ. ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಅಕ್ಷರ, ಅನ್ನ, ಆಶ್ರಯ ಮೂರು ದಾಸೋಹ ನಡೆದೇ ನಡೆಯುತ್ತದೆ. ಹೀಗೆ ಸಮಾಜದ ಮುಖ್ಯವಾಹಿನಿಗೆ ಬಂದ ವೀರಶೈವ ಲಿಂಗಾಯಿತ ಸಮುದಾಯ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ನಮ್ಮ ಆಚರಣೆ ಪದ್ಧತಿ ಸಂಸ್ಕೃತಿ ಬೆಳೆಸಿಕೊಂಡು ಹೋಗುವ ರೀತಿ ಸಂಸ್ಕಾರ ಕಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಸಮಾಜದ ಮುಖಂಡರಾದ ಮಂಜುನಾಥ್, ಕಾಂತರಾಜು, ಕಾಯಿ ಸುರೇಶ್, ಗಂಗಾಧರ್, ಅನಿಲ್ ಇತರರು ಇದ್ದರು.
