ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹೊರಳವಾಡಿ ಹೊಸೂರಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಹಂದಿಜೋಗಿ ಜನಾಂಗದ ಎರಡು ಕುಟುಂಬಗಳನ್ನು ಭೂ ಮಾಲೀಕ ಕಾನೂನಿನ ಬಲದಲ್ಲಿ ವಾಸಿಸುತ್ತಿದ್ದ ಮನೆ ಸಮೇತ ನೆಲಕ್ಕುರುಳಿಸಿ ಹೊರ ಹಾಕಿದ್ದು, ಇಡೀ ಕುಟುಂಬ ಬೀದಿಪಾಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾಗೆ ಸೇರುವ ಸದರಿ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಅನ್ಯಾಯವಾಗಿದ್ದು, ಇದುವರೆಗೆ ಯಾರೊಬ್ಬರೂ ನೆರವಿಗೆ ಬಂದಿಲ್ಲ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಗ್ರಾಮಸ್ಥರಾಗಲಿ ಯಾರೂ ಕೂಡ ನೆರವಿಗೆ ಬಾರದಿರುವುದು ದುರದೃಷ್ಟಕರ ಸಂಗತಿ.
ಹಂದಿಜೋಗಿ ಕುಟುಂಬದಲ್ಲಿ ವಯಸ್ಸಾದ ವೃದ್ದೆ, ಒಂಬತ್ತು ತಿಂಗಳು ಮಗುವಿರುವ ಬಾಣಂತಿ, ಪುಟ್ಟ ಮಗು, ಓದುತ್ತಿರುವ ಯುವತಿ ಸೇರಿದಂತೆ ಒಟ್ಟು ಎಂಟು ಜನ ವಾಸವಿದ್ದಾರೆ. ಸರಿಸುಮಾರು ಎಪ್ಪತ್ತರಿಂದ 80 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಕುಟುಂಬಗಳು ವಾಸವಿದ್ದು, ಹಳೆಯ ತಲೆಮಾರಿನ ಹಿರಿಯರು ಇಲ್ಲಿಯೇ ಇದ್ದು ನಿಧನರಾಗಿದ್ದಾರೆ. ಈಗಿರುವವರು ಇಲ್ಲಿಯೇ ಹುಟ್ಟಿ ಬೆಳೆದು ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಇವರಿಗೆ ಗ್ರಾಮ ಪಂಚಾಯಿತಿಯಿಂದ ಮನೆ ನಂಬರ್ ಕೂಡ ನೀಡಲಾಗಿದೆ. ಕುಡಿಯುವ ನೀರಿನ ಸಂಪರ್ಕ ಹಾಗೂ ವಿದ್ಯುತ್ ಕಂಬದಲ್ಲಿ ಬಲ್ಬ್ ಅಳವಡಿಕೆ ಮಾಡಿಕೊಟ್ಟಿದ್ದಾರೆ. ಇಲ್ಲಿರುವುದಕ್ಕೆ ರೇಷನ್ ಕಾರ್ಡ್, ವೋಟರ್ ಐಡಿ,ಆಧಾರ್ ಸೇರಿದಂತೆ ಎಲ್ಲ ದಾಖಲೆ ಸಹ ಇದ್ದರೂ ಕೂಡ ಭೂ ಮಾಲೀಕನ ಪ್ರಭಾವ ಹಾಗೂ ಆಸ್ತಿ ವ್ಯಾಮೋಹಕ್ಕೆ ಬಡ ಕುಟುಂಬ ಇಂದು ರಸ್ತೆಗೆ ಬಿದ್ದಿದೆ.

ವಿದ್ಯೆ ಇರದ ಈ ಬಡ ಕುಟುಂಬವನ್ನು ಕಾನೂನಿನ ಚೌಕಟ್ಟಿನಲ್ಲಿ ಹೆಣೆದು, ಜಾಗ ಕೊಡುವ ಆಮಿಷ ಒಡ್ಡಿ,ಘನ ನ್ಯಾಯಾಲಯಕ್ಕೆ ದಲಿತ ಕುಟುಂಬದ ಯಾರೊಬ್ಬರೂ ಬಾರದಂತೆ ಪುಸಲಾಯಿಸಿ, ಏಕಪಕ್ಷೀಯವಾಗಿ ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಸವರ್ಣೀಯ ಜನಾಂಗದ ಶಿವಾನಂದ ಬಿನ್ ಲೇಟ್ ಪುಟ್ಟ ನಂಜಪ್ಪ ಪೊಲೀಸರ ನೆರವಿನೊಂದಿಗೆ ಗುಡಿಸಲು ತೆರವುಗೊಳಿಸಿ ತಂತಿ ಬೇಲಿ ಹಾಕಿಕೊಂಡು ದಲಿತ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡಿಸೆಂಬರ್ 27 ರಂದು ಬಿಳಿಗೆರೆ ಪೊಲೀಸ್ ಠಾಣೆಯ ಪೊಲೀಸರು ಉಮೇಶ್, ನಂಜುಂಡ ತಾಯಿ ಯಲ್ಲಮ್ಮ ಅವರಿಗೆ ನೋಟಿಸ್ ನೀಡಿ ಮೂರು ದಿನ ಗಡುವಿನಲ್ಲಿ ಮನೆ ತೆರವು ಮಾಡಿ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ. ಬಡ ಕುಟುಂಬ ಚಿಕ್ಕ ಚಿಕ್ಕ ಮಕ್ಕಳನ್ನು, ವೃದ್ಧರನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು ಎಂಬ ದಿಕ್ಕೇ ತೋಚದೆ ನೊಂದಿರುವ ಸಮಯದಲ್ಲಿ ಏಕಾಏಕಿ ಡಿಸೆಂಬರ್ 31ರಂದು ಪೊಲೀಸ್ ವಾಹನದ ಜೊತೆ ಬಂದು ಹಿಟಾಚಿ ಬಳಸಿ ಗುಡಿಸಲನ್ನು ನೆಲಸಮ ಮಾಡಿ, ಅಲ್ಲಿಂದ ದಲಿತ ಕುಟುಂಬ ಹೊರ ಹಾಕಲಾಗಿದೆ.

ಎಂಬತ್ತು ವರ್ಷದ ವೃದ್ದೆ ಕಣ್ಣೀರಿಡುತ್ತಿದ್ದು ಏನು ಮಾಡಬೇಕು? ಮುಂದೇನು ಗತಿ ನಮಗೆ ಅನ್ನುವ ನೋವಿನಲ್ಲಿದ್ದರೆ, ಬಾಣಂತಿ ಹಾಗೂ ಎಳೆ ಕೂಸನ್ನು ಬೇರೆಯವರ ಮನೆಗೆ ಕಲಿಸಿಕೊಟ್ಟು. ಈಗ ರಸ್ತೆ ಬದಿಯಲ್ಲಿ ಇಡೀ ಕುಟುಂಬ ಚಳಿಯನ್ನು ಲೆಕ್ಕಿಸದೆ, ಅಲ್ಲಿಯೇ ಅಡುಗೆ ಮಾಡಿ ಮಲಗುತ್ತಿದ್ದಾರೆ.
ಗ್ರಾಮ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಮಸ್ಥರು ಮಾನವೀಯತೆ ಮರೆತಿದ್ದು ಕೂಡ ವಿಷಾದನೀಯ.
ಎಲ್ಲರಿಗೂ ಬದುಕಲು, ವಾಸಿಸಲು ಹಕ್ಕಿರುವಾಗ, ಒಂದೇ ಸ್ಥಳದಲ್ಲಿ ದಶಕಗಳ ಕಾಲ ವಾಸಿಸುತ್ತಿರುವ ದಾಖಲೆ ಇದ್ದರೂ ಈ ಹಂದಿಜೋಗಿ ಕುಟುಂಬಗಳನ್ನು ಹೊರ ಹಾಕಿದ್ದು ಎಷ್ಟು ಸರಿ ಅನ್ನುವ ಪ್ರಶ್ನೆ ಎದುರಾಗಿದೆ.

ಕಾನೂನಿನ ಅರಿವಿರದೆ, ಆಮಿಷಕ್ಕೆ ಬಲಿಯಾಗಿ ಇಡೀ ಕುಟುಂಬ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿಲ್ಲ.
ಇದನ್ನೇ ಅಸ್ತ್ರ ಮಾಡಿಕೊಂಡ ಭೂ ಮಾಲೀಕ ಅದರ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡು ಇಡೀ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾನೆ.
ಸ್ನಾನ ಮಾಡಲು, ಶೌಚಕ್ಕೆ ಹೋಗಲು ಸಾಧ್ಯವಿರದೆ ಬಡ ಕುಟುಂಬನೊಂದಿದೆ. ಯುವತಿ, ಪುಟ್ಟ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರಿದೆ. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿದ್ದು ಈಗಲಾದರೂ, ಸಿದ್ದರಾಮಯ್ಯನವರು ಈ ಕುಟುಂಬದ ನೆರವಿಗೆ ಬರುವರೇ ಎಂದು ಕಾದು ನೋಡಬೇಕಿದೆ.
ಅಹಿಂದ ಮುಖಂಡ ಜವರಪ್ಪ ಈದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಇದು ಈಗ ನಡೆದಿರುವ ಘಟನೆ ಅಷ್ಟೇ ಅಲ್ಲ. ಈ ಹಿಂದೆಯೂ ಇಂತಹದೊಂದು ಘಟನೆ ನಡೆದು ಗುಡಿಸಲಿಗೆ ಬೆಂಕಿ ಇಟ್ಟಿದ್ದರು. ಆಗ ಅಟ್ರಾಸಿಟಿ ಕೇಸ್ ಆಗಿತ್ತು. ಆದ್ರೆ ಇವರಿಗೆ ವಕೀಲರ ನೇಮಿಸಿಕೊಳ್ಳುವಷ್ಟು ಅಕ್ಷರದ ಜ್ಞಾನ ಇಲ್ಲ. 2015ರಲ್ಲಿ ದಾಖಲಾದ ಪ್ರಕರಣದ ಮಾಹಿತಿ ಸಹ ಇಲ್ಲ. ಇವರಿಗೆ ಅದರ ಬಗ್ಗೆಯೇ ಗೊತ್ತಿಲ್ಲ” ಎಂದು ತಿಳಿಸಿದರು.

ಈಗಾಗಲೇ ಭೂ ಮಾಲೀಕ ದೌರ್ಜನ್ಯ ಎಸಗಿದ್ದಾನೆ. ಈಗ ಕಾನೂನಿನ ಮೂಲಕ ಏಕಪಕ್ಷೀಯವಾಗಿ ಆದೇಶ ತಂದು ಇಂತಹ ಕೀಳುಮಟ್ಟದ ಕೆಲಸ ಮಾಡಿದ್ದಾನೆ. ಇದನ್ನ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಕೀಲರ ನೇಮಿಸುವಂತೆ ಮನವಿ ಮಾಡಿದ್ದೇವೆ. ಮೇಲ್ಮನವಿ ಸಲ್ಲಿಸುವುದರ ಮೂಲಕ ಹೋರಾಟ ಆರಂಭಿಸುವುದಾಗಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವ, ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಅಂಬೇಡ್ಕರ್ ಸೇನೆ ಸಂಘಟನೆಯ ಮುಳ್ಳೂರು ಸ್ವಾಮಿ ಮಾತನಾಡಿ, “ಹಂದಿಜೋಗಿ ಕುಟುಂಬಕ್ಕೆ ಆಗಿರುವ ಅನ್ಯಾಯ ಸಹಿಸುವಂಥದ್ದು ಅಲ್ಲ. ಹಲವು ಬಾರಿ ಅಧಿಕಾರಿಗಳಿಗೆ,ಕಚೇರಿಗಳಿಗೆ ಅರ್ಜಿ ಕೊಟ್ಟು ನೆರವು ಕೋರಲಾಗಿತ್ತಾದರೂ ಈವರೆಗೆ ಸ್ಪಂದಿಸಲಿಲ್ಲ. ಈಗ ಏಕಾಏಕಿ ಕುಟುಂಬವನ್ನು ಹೊರ ಹಾಕಿ ಬೀದಿಪಾಲು ಮಾಡಿದ್ದಾರೆ. ಈಗ ಇವರು ರಸ್ತೆಯಲ್ಲಿ ಜೀವನ ಮಾಡುವಂತತಾಗಿದೆ. ಈ ಸಂಬಂಧ ಹೋರಾಟ ಮಾಡುವುದಾಗಿ, ನ್ಯಾಯ ಸಿಗುವತನಕ ಇಲ್ಲಿಯೇ ಕೂರುತ್ತೇವೆ” ಎಂದು ಹೇಳಿದರು.

ಸಂತ್ರಸ್ತ ಕುಟುಂಬದ ವೃದ್ದೆ ಎಲ್ಲಮ್ಮ ಮಾತನಾಡಿ, “ನಮಗೂ ವಯಸ್ಸಾಯಿತು. ಯಾವುದೂ ತಿಳಿಯಲ್ಲ. ಒಳ್ಳೇದು ಕೆಟ್ಟದ್ದು ಗೊತ್ತಿಲ್ಲ. ಇಲ್ಲೇ ಬದುಕಿ ಬಾಳಿದ್ದು, ಈಗ ಹೊರಗೆ ಹಾಕಿದ್ರು. ನನಗೆ ಕಾಲು ಮುರಿದಿದೆ ಓಡಾಡಲೂ ಕೂಡ ಆಗಲ್ಲ. ಮಲಗಲು ರಾತ್ರಿ ಚಳಿ. ತಡಿಯಲು ಆಗ್ತಿಲ್ಲ. ಹೀಗೆಲ್ಲ ಬದುಕೋದಕ್ಕಿಂತ ಸಾಯೋದೇ ಮೇಲು” ಅಂತೇಳಿ ಕಣ್ಣೀರಿಟ್ಟರು.
ಈ ಘಟನೆಗೆ ಸಂಬಂಧಿಸಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಂದಿಜೋಗಿ ಜನಾಂಗದ ಎರಡು ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವರೇ ಎಂದು ಕಾದುನೋಡಬೇಕಿದೆ.
