ಇತ್ತೀಚೆಗೆ ಹೈದಾರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪಾ 2 ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡ ಬಾಲಕನನ್ನು ಸಿನಿಮಾ ನಟ ಅಲ್ಲು ಅರ್ಜುನ್ ಆಸ್ಪತ್ರೆಯಲ್ಲಿ ಭೇಟಿಯಾಗಲು ಮುಂದಾಗಿದ್ದರು. ಈ ಬೆನ್ನಲ್ಲೇ ಪೊಲೀಸರು ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಿದ್ದಾರೆ.
ಗಾಯಗೊಂಡಿರುವ ಬಾಲಕನನ್ನು ನೋಡಲು ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡದಂತೆ ಹೈದರಾಬಾದ್‌ನ ರಾಮಗೋಪಾಲ್‌ಪೇಟೆ ಪೊಲೀಸ್ ಠಾಣೆಯು ನಟ ಅಲ್ಲು ಅರ್ಜುನ್‌ಗೆ ನೋಟಿಸ್ ಜಾರಿ ಮಾಡಿದೆ.
ಇದನ್ನು ಓದಿದ್ದೀರಾ? ಪುಷ್ಪಾ 2 ಕಾಲ್ತುಳಿತ | ಅಭಿಮಾನಿಗಳ ಜವಾಬ್ದಾರಿ ಸೆಲೆಬ್ರೆಟಿಗಳದ್ದು, ಯಾವುದೇ ರಾಜಿಯಿಲ್ಲ: ರೇವಂತ್ ರೆಡ್ಡಿ
“ನೀವು ಆಸ್ಪತ್ರೆಗೆ ಭೇಟಿ ನೀಡುವುದರಿಂದ ಆಸ್ಪತ್ರೆಯ ಕಾರ್ಯಾಚರಣೆಗಳಿಗೆ, ಇತರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಭೇಟಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಶಿಫಾರಸು ಮಾಡುತ್ತೇವೆ” ಎಂದು ರಾಮಗೋಪಾಲಪೇಟೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಹೊರಡಿಸಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಜಾಮೀನು ಷರತ್ತಿನ ಪ್ರಕಾರ ಭಾನುವಾರ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಹಾಜರಾದ ನಂತರ ಆಸ್ಪತ್ರೆಗೆ ಭೇಟಿ ನೀಡಲು ನಟ ನಿರ್ಧರಿಸಿದ್ದರು. ಆದರೆ ನೋಟೀಸ್ ಬಂದ ನಂತರ ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡುವ ನಿರ್ಧಾರವನ್ನು ನಟ ಕೈಬಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಪುಷ್ಪಾ 2 ಕಾಲ್ತುಳಿತ ಪ್ರಕರಣ | ನಟ ಅಲ್ಲು ಅರ್ಜುನ್‌ಗೆ ಸಮನ್ಸ್
ಆಸ್ಪತ್ರೆಯ ಶಾಂತಿಯುತ ಪರಿಸರಕ್ಕೆ ಭಂಗ ತರುವಂತಹ ಯಾವುದೇ ಸಾರ್ವಜನಿಕರು/ ಮಾಧ್ಯಮಗಳು ಆವರಣದಲ್ಲಿ ಸೇರುವುದನ್ನು ತಡೆಯಲು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ಅಲ್ಲು ಅರ್ಜುನ್ ಅವರಿಗೆ ಸೂಚಿಸಲಾಗಿದೆ. ಹಾಗೆಯೇ ಈ ಸೂಚನೆ ಹೊರತಾಗಿಯೂ ಆಸ್ಪತ್ರೆಗೆ ಭೇಟಿ ನೀಡಿ ಏನೇ ಸಂಭವಿಸಿದರೂ ಅದಕ್ಕೆ ನಟನೇ ಕಾರಣರಾಗಿರುತ್ತಾರೆ ಎಂದು ನಟನಿಗೆ ಎಚ್ಚರಿಕೆ ನೀಡಲಾಗಿದೆ.
ಪುಷ್ಪಾ 2 ಶೋ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಓರ್ವ ಬಾಲಕ ಚೇತರಿಸಿಕೊಂಡಿದ್ದು ಇನ್ನೋರ್ವ ಬಾಲಕ ಇನ್ನೂ ಆಸ್ಪತ್ರೆಯಲ್ಲೇ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ಹೇಳಲಾಗಿದೆ. ಥಿಯೇಟರ್‌ಗೆ ನಟ ದಿಢೀರ್ ಭೇಟಿ ನೀಡಿರುವುದೇ ಈ ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ.
