‘ಕರ್ನಾಟಕ-50’ ಸಂಚಿಕೆ | ‘ಮುಸ್ಲಿಮರೊಂದಿಗೆ ಮುಖಾಮುಖಿ’- ಮುಜಾಫರ್ ಅಸ್ಸಾದಿ ಅವರ ಕೊನೆಯ ಬರಹ

Date:

Advertisements
ಶನಿವಾರ ಅಗಲಿದ ಚಿಂತಕ ಪ್ರೊ.ಮುಜಾಫರ್ ಅಸ್ಸಾದಿಯವರು 'ಈದಿನ' ಹೊರತಂದಿರುವ 'ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ… ಮುಂದಿನ ದಿಕ್ಕು' ಸಂಚಿಕೆಗೆ ಬರೆದಿದ್ದರು. ಅವರ ಕೊನೆಯ ಬರೆಹವನ್ನು ಅವರ ಸ್ಮರಣಾರ್ಥ ಇಲ್ಲಿ ಪ್ರಕಟಿಸಲಾಗಿದೆ

ಕರ್ನಾಟಕದ 50 ವರುಷದ ಕಾಲಮಾನದಲ್ಲಿ ಮುಸ್ಲಿಮರು ತಮ್ಮ ಸ್ವಂತಿಕೆಯನ್ನು ಪರಿಪೂರ್ಣವಾಗಿ ಕಟ್ಟಿಕೊಳ್ಳದೆ ಬಡತನದ ಸಮುದಾಯವಾಗಿ ಉಳಿದುಬಿಟ್ಟರೆ? ಅವರಿಗೆ ತಮ್ಮದೇ ಆದ ಗುರುತನ್ನು ಅಥವಾ ಐಡೆಂಟಿಟಿಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲವೆ? ಸೌಹಾರ್ದ ಕರ್ನಾಟಕಕ್ಕೆ ಅವರ ಕೊಡುಗೆಗಳೇನು? ಕರ್ನಾಟಕದ ಮುಸ್ಲಿಮರನ್ನು ವ್ಯಾಪಕವಾಗಿ ಬಾಧಿಸಿದ ನರೆಟಿವ್(ಸಂಕಥನಗಳು)ಗಳು ಯಾವುವು? ರಾಷ್ಟ್ರೀಯ ನರೆಟಿವ್‌ಗಳು ಅಲ್ಪಸಂಖ್ಯಾತರನ್ನು ಹೇಗೆ ಚಿತ್ರಿಸಿವೆ? ಅಲ್ಪಸಂಖ್ಯಾತರಿಗೆ  ತೀವ್ರವಾಗಿ ಕಾಡುವ ಅಭದ್ರತೆ, ತಲ್ಲಣಗಳಿಗೆ ಈ ನರೆಟಿವ್‌ಗಳು ಹೇಗೆ ಸಾಕ್ಷಿಯಾಗಿವೆ?- ಇತ್ಯಾದಿ ಮೂಲ ಪ್ರಶ್ನೆಗಳೊಂದಿಗೆ ನಾವು ಮುಖಾಮುಖಿಯಾಗಬೇಕಾಗಿದೆ.

ಇತಿಹಾಸ, ಕೊಡುಗೆ ಮತ್ತು ನರೆಟಿವ್

ವಾಸ್ತವವಾಗಿ ಕರ್ನಾಟಕದ ಮುಸ್ಲಿಮರು/ಅಲ್ಪಸಂಖ್ಯಾತರು ಸಾಕಷ್ಟು ತಪ್ಪು ಕಲ್ಪನೆಗಳನ್ನು, ಪೂರ್ವಗ್ರಹಗಳನ್ನು ಎದುರಿಸುತ್ತಿರುವುದು ದಿಟ. `ಅವರು ಮೂಲತ: ಯಾವುದೇ ಪ್ರಗತಿಪರ ಚಳವಳಿಗಳಲ್ಲಿ ಭಾಗವಹಿಸಲಿಲ್ಲ; ಭಾಷಾ ಚಳವಳಿ, ರೈತ ಚಳವಳಿ, ಪರಿಸರ ಚಳವಳಿಗಳ ಮುಂಚೂಣಿಯಲ್ಲಿರಲಿಲ್ಲ; `ಅವರು ಮೂಲಭೂತವಾದ ಮತ್ತು ಧರ್ಮದಾಚೆ ಚಿಂತಿಸುವುದು ಬಹಳ ವಿರಳ. ಅವರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಬೆರೆಯಲು ಆಶಿಸುವುದಿಲ್ಲ’ ಎಂಬಂತಹ ನೆರೆಟಿವ್‌ಗಳು ಸರ್ವೇ ಸಾಮಾನ್ಯ ಮತ್ತು ಇದನ್ನು ಜನಸಾಮಾನ್ಯರ ಪ್ರಜ್ಞೆಗಳಲ್ಲಿ ಬಿತ್ತಲಾಗುತ್ತಿದೆ. ಈ ನರೆಟಿವ್ಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ವೈರುಧ್ಯಗಳನ್ನು, ಅವರಿರುವ ಸಮಾಜೋ-ಆರ್ಥಿಕ ಪರಿಸರ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನರೆಟಿವ್(ಸಂಕಥನಗಳು)ಗಳನ್ನು ಗಮನಿಸಬೇಕು.

Advertisements

ಮುಸ್ಲಿಮರು ಭಾಷಾ ಚಳವಳಿಯಲ್ಲಿ, ರೈತ ಚಳವಳಿಗಳ ಮಂಚೂಣಿಯಲ್ಲಿ ಇಲ್ಲದಿದ್ದದ್ದು ವಾಸ್ತವ. ಆದರೆ ಅವರೆಂದೂ ಈ ಚಳವಳಿಗಳನ್ನು ವಿರೋಧಿಸಲಿಲ್ಲ, ಅದಕ್ಕೆ ವಿರೋಧವಾಗಿ ಪ್ರತಿಭಟನೆಯನ್ನು ಮಾಡಲಿಲ್ಲ. ಯಾಕೆಂದರೆ ಅವರ ಪ್ರಾಥಮಿಕ ಕಾಳಜಿಗಳು ಪರಿಸರವಾಗಲಿ, ಭೂಮಿಯಾಗಲಿ ಅಥವಾ ಭಾಷೆಯಾಗಲಿ ಇರಲಿಲ್ಲ. ಆದಕಾರಣ ಮಾಪಿಳ್ಳ, ವಹಾಬಿ ಮತ್ತು ಫಕೀರ್-ಸನ್ಯಾಸಿಗಳಂತಹ ಚಳವಳಿಗಳು ಕರ್ನಾಟಕದಲ್ಲಿ ನಡೆಯಲಿಲ್ಲ. ಇಲ್ಲೆಲ್ಲ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಪ್ರಾಥಮಿಕವಾಗಿದ್ದವು. ಮಾಪಿಳ್ಳ ಅಥವಾ ಇನ್ನಿತರ ರೈತ ಚಳವಳಿಗಳಲ್ಲಿ ಒಂದೊ ಅವರು ರೈತರಾಗಿ ಶೋಷಣೆಗೊಳಗಾಗಿದ್ದರು, ಇಲ್ಲವೇ ಭೂಮಾಲೀಕರಾಗಿದ್ದರು. ಇಲ್ಲಿ ಧರ್ಮಕ್ಕಿಂತಲೂ ವರ್ಗ ಶೋಷಣೆ ಮುಖ್ಯವಾಗಿತ್ತು. ಇಂತಹ ಶೋಷಣೆಯ ನಿರ್ವಾತದಿಂದಾಗಿ ಕರ್ನಾಟಕದ ಮುಸ್ಲಿಮರು ಬಹಳ ಕಾಲ ದಲಿತರೊಂದಿಗೆ ಕೈಜೋಡಿಸಲಿಲ್ಲ, ಸಂಗಾತಿಗಳಾಗಲಿಲ್ಲ. ಮುಸ್ಲಿಮರಿಗೆ ಭೂಮಿ ಸಂಬಂಧೀ ವಿಷಯಗಳು ಪ್ರಾಥಮಿಕ ವಿಷಯಗಳೇ ಅಲ್ಲ ಎನ್ನಬಹುದು. ಉತ್ತರ ಕರ್ನಾಟಕದಲ್ಲಿ ಒಂದಿಷ್ಟು ರೈತರು, ಮಲೆನಾಡಿನಲ್ಲಿ ಒಂದಿಷ್ಟು ಕಾಫಿ ಪ್ಲಾಂಟರ್‌ಗಳು ಇದಕ್ಕೆ ಅಪವಾದವಾಗಿರಬಹುದು. ಬಹುಸಂಖ್ಯಾತ ಮುಸಲ್ಮಾನರಿಗೆ ಮಾರುಕಟ್ಟೆ ಪ್ರಥಮ ಸಂಗಾತಿ ಮತ್ತು ಸಂಗತಿ. ಗುಜರಿ ಅಂಗಡಿ, ಫಂಚರ್ ಅಂಗಡಿ, ಮಾಂಸದ ಅಂಗಡಿ, ಹಣ್ಣು ಹಂಪಲಿನ ಅಂಗಡಿಗಳು, ಮಾರುಕಟ್ಟೆಯ ಭಾಗ. ಅದು ಮಾರುಕಟ್ಟೆಯಲ್ಲಿ ಶೋಷಣಾ-ಶೋಷಕಾ ಕೊಂಡಿಗಳನ್ನು ನಿರ್ಮಿಸಿ, ಮಾರುಕಟ್ಟೆಯ ತೀವ್ರತೆಯನ್ನು ಅಲ್ಲೋಲ ಕಲ್ಲೋಲತೆಯನ್ನು ಎದುರಿಸುವಂತೆ ಮಾಡುತ್ತದೆ. ಮುಸ್ಲಿಮರು ವ್ಯವಹರಿಸುವ ಮಾರುಕಟ್ಟೆ ಸೀಮಿತ ಮಾರುಕಟ್ಟೆಯಲ್ಲ, ಅದು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಆಗಿರಬಹುದು. ಆದಕಾರಣ ಜಾಗತಿಕ ಆಗು-ಹೋಗುಗಳು ಮತ್ತು ವಿದ್ಯಮಾನದಿಂದ ಬಡತನದ ಸಮುದಾಯ ಪ್ರಭಾವಿತವಾಗುತ್ತದೆ ಹಾಗೂ ತಣ್ಣಗಾಗಿ, ಕೆಲವೊಮ್ಮೆ ತೀವ್ರತರವಾಗಿ ಪ್ರತಿಸ್ಪಂದಿಸುತ್ತದೆ(ಪಾಲೆಸ್ತೀನ್ ವಿಷಯದ ಕುರಿತು ನಡೆದ ಪ್ರತಿಭಟನೆ ಇದಕ್ಕೆ ಸಾಕ್ಷಿ). ಇದನ್ನು ಮುಸ್ಲಿಂ ಉನ್ಮಾದ ಭಾಗವಾಗಿ ಬಹಳ ಜನ ನೋಡುತ್ತಾರೆ. ಈ ಉನ್ಮಾದ ಅಥವಾ ತಣ್ಣಗಿನ ಪ್ರತಿಕ್ರಿಯೆಯ ಆಳದಲ್ಲಿ ಮಾರುಕಟ್ಟೆಯ ಕೈಚಳಕವನ್ನು ನೋಡಬೇಕು. ಹಿಜಾಬ್ ಪಾಶ್ಚಾತ್ಯ ಆಧುನಿಕತೆಯ ಪ್ರತಿರೋಧದ ಸಂಕೇತವಾಗಿ ಜನಿಸಿದರೂ, ಧರ್ಮ ಮತ್ತು ಮಾರುಕಟ್ಟೆಯ ಕುರುಹಾಗಿ ಪರಿವರ್ತಿತವಾಗಿದ್ದು ಗಮನಾರ್ಹ. ವಿಚಿತ್ರವೆಂದರೆ ಮಾರುಕಟ್ಟೆಯಲ್ಲಿ ಐಡೆಂಟಿಟಿ ಚಹರೆಗಳು ಕೆಲವೊಮ್ಮೆ ಧರ್ಮದ ಚಹರೆಗಳಂತೆ ಬಿಂಬಿತವಾಗುತ್ತವೆ. ಇದರ ಪರಿಣಾಮವೆಂದರೆ ಒಂದು ಸಾಧಾರಣ ನರೆಟಿವ್ ಕೂಡ ಮುಸ್ಲಿಮರನ್ನು ಧರ್ಮದ ಚೌಕಟ್ಟಿನಲ್ಲಿ ನೋಡುತ್ತದೆ ಮತ್ತು ಯಾವುದೇ ವೈವಿಧ್ಯಮಯವಿಲ್ಲದ ಸಮಗ್ರ ಸಮುದಾಯವಾಗಿ ನೋಡುತ್ತದೆ. ಎರಡನೆಯದಾಗಿ ಇದು ಸ್ಥಾನೀಯ-ರಾಷ್ಟ್ರೀಯ ಮತ್ತು ಜಾಗತಿಕ ವಿದ್ಯಮಾನಗಳ ನಡುವೆ ಕೊಂಡಿಯನ್ನು ಏರ್ಪಡಿಸಿ, ಎಲ್ಲೋ ನಡೆದ ಘಟನಾವಳಿಗೆ ಎಲ್ಲ ಮುಸ್ಲಿಮರು ಉತ್ತರದಾಯಿತ್ವರು ಎಂಬಂತೆ ಬಿಂಬಿಸುತ್ತದೆ. ಇವು ಅಭದ್ರತೆ, ಐಡೆಂಟಿಟಿ ಮತ್ತು ಸ್ವಂತಿಕೆಯ ನಡುವೆ ತಲ್ಲಣಗಳನ್ನು ಸೃಷ್ಟಿಸುತ್ತವೆಂದರೂ ತಪ್ಪಲ್ಲ.

ರಾಷ್ಟ್ರೀಯ ನರೆಟಿವ್‌ಗಳು ಮತ್ತು ಕರ್ನಾಟಕ

ರಾಷ್ಟ್ರೀಯ ನರೆಟಿವ್ ಮುಸ್ಲಿಮರನ್ನು ಹೇಗೆ ಆಪಾದಮಸ್ತಕವಾಗಿ ನೋಡುತ್ತದೆ? ರಾಷ್ಟ್ರ ಮಟ್ಟದ ನರೆಟಿವ್ ಎಲ್ಲೋ ಜೀವಿಸುವ ಮುಸ್ಲಿಂ ಜನಸಮುದಾಯವನ್ನು ಬೆಸೆಯುತ್ತಾ ಅವರಿಂದ ಯಾಕೆ ಮತ್ತು ಹೇಗೆ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತದೆ? ರಾಷ್ಟೀಯ-ಅಂತಾರಾಷ್ಟ್ರೀಯ ನೆರೆಟಿವ್‌ಗಳಿಂದ ಕರ್ನಾಟಕದ ಮುಸ್ಲಿಮರನ್ನು ವಿಭಿನ್ನವಾಗಿ ನೋಡಬಹುದೆ? ಕಳೆದ ಐವತ್ತು ವರುಷದಲ್ಲಿ ಮುಸ್ಲಿಮರು ರಾಷ್ಟ್ರೀಯ ನರೆಟಿವ್‌ಗಳಿಂದ ಅಬಾಧಿತರಾಗಿ, ಯಾವುದೇ ತಕರಾರುಗಳಿಲ್ಲದೆ, ಅಭದ್ರತೆಗಳಿಲ್ಲದ ತಣ್ಣಗಿನ ಸಮುದಾಯವಾಗಿ ಜೀವಿಸಿದರೆ ಎಂಬ ಇನ್ನೊಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಾಸ್ತವವಾಗಿ ರಾಷ್ಟ್ರ ಮಟ್ಟದ ಎಲ್ಲ ಘಟನಾವಳಿಗಳು ಕರ್ನಾಟಕದಲ್ಲಿ ಪುನರ್ ಸೃಷ್ಟಿಯಾಗದಿರಬಹುದು, ಆದರೆ ಕೆಲವು ಸೀಮಿತ ರಾಷ್ಟ್ರೀಯ ನರೆಟಿವ್‌ಗಳು ಕರ್ನಾಟಕದ ಮುಸ್ಲಿಮರನ್ನು ಪ್ರಭಾವಿಸುತ್ತಾ ಮುಸ್ಲಿಮರಲ್ಲಿ ಅಭದ್ರತೆ, ತಲ್ಲಣಗಳನ್ನು ನಿರ್ಮಿಸಿದ್ದು ದಿಟ. ಮತ್ತೆ ಮತ್ತೆ ನಿರ್ಮಾಣಗೊಳ್ಳುವ ನರೆಟಿವ್‌ಗಳ ಅಂತಿಮ ಉದ್ದೇಶವೇ ಬೇರೆ. ನಮ್ಮ ಗ್ರಹಿಕೆಯ ಭಾರತದ ಕಲ್ಪನೆಯನ್ನು ಬದಲಾಯಿಸುವುದು. ಅದರ ನಿರ್ಮಾಣಕ್ಕೆ ಒಂದು ಆಂತರಿಕ ವೈರಿ ಬೇಕೆ ಬೇಕು. ತಕ್ಷಣದಲ್ಲಿ ಸಿಗುವುದು ಮುಸ್ಲಿಮರು. ಯಾಕೆಂದರೆ ಅವರ ಆಳ್ವಿಕೆಯ ನೆನಪುಗಳಿವೆ, ಸಾಮ್ರಾಜ್ಯದ ವಿಸ್ತರಣೆಯಲ್ಲಿ ನಡೆದಿರುವ ಕ್ರೌರ್ಯದ ನೆನಪುಗಳಿವೆ, ಅವರು ಜಾರಿಗೆ ತಂದ ಬದಲಾವಣೆಗಳ ನೆನಪುಗಳಿವೆ, ಮತಾಂತರದ ನೆನಪುಗಳಿವೆ, ಅದಕ್ಕಿಂತಲೂ ಹೆಚ್ಚಾಗಿ ಭಾರತ ವಿಭಜನೆಯ ನೆನಪುಗಳಿವೆ. ಶತ್ರುವನ್ನು ಗುರುತಿಸುವುದು ಪ್ರಥಮ ಹಂತ. ಎರಡನೇ ಹಂತದಲ್ಲಿ ಅವರ ಕುರಿತಂತೆ ವ್ಯವಸ್ಥಿತವಾಗಿ ಪ್ರಬಲವಾದ ನರೆಟಿವ್‌ಗಳನ್ನು ನಿರ್ಮಿಸುವುದು ಮತ್ತು ಕೆಲವು ಇತಿಹಾಸದ ತಪ್ಪುಗಳನ್ನು ಸರಿಪಡಿಸುವುದು. ಇದರ ಮುಂದುವರಿಕೆಯಾಗಿ ಮುಸ್ಲಿಮರು ಭಾರತಕ್ಕೆ ನೀಡಿರುವ ಕೊಡುಗೆಗಳನ್ನು ಒಂದೋ ನಿರಾಕರಿಸುವುದು, ಜನಸಾಮಾನ್ಯರ ಗ್ರಹಿಕೆಗಳಿಂದ ಇಲ್ಲವೇ ಇತಿಹಾಸದ ಪುಟಗಳಿಂದ ಕಣ್ಮರೆಯಾಗುವಂತೆ ಮಾಡುವುದು, ಹೊಸ ನರೆಟಿವ್‌ಗಳ ಮೂಲಕ ಮುಸ್ಲಿಮರನ್ನು ವೈರಿಗಳನ್ನಾಗಿ, ಅನ್ಯರನ್ನಾಗಿ, ವಿದೇಶಿಯರನ್ನಾಗಿ ಚಿತ್ರಿಸುವುದು ಮತ್ತು ಮಧ್ಯಕಾಲೀನ ಘಟನಾವಳಿಗೆ, ಭಾರತದ ವಿಭಜನೆಗೆ, ಭಾರತದ ಪ್ರಸ್ತುತ ಬಡತನ, ನಿರುದ್ಯೋಗ ಮತ್ತು ಆರ್ಥಿಕ ಸೊರಗುವಿಕೆಗೆ ಅವರನ್ನು ಉತ್ತರದಾಯಿಗಳನ್ನಾಗಿಸುವುದು ಇದರಲ್ಲಿ ಸೇರಿದೆ. ಇದೊಂದು ತಾತ್ವಿಕತೆಯ ಸಂಘರ್ಷವೂ ಹೌದು.

ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

ಇತ್ತೀಚಿನ ರಾಷ್ಟ್ರ ಮಟ್ಟದ ಪ್ರವೃತ್ತಿಗಳನ್ನು ಗಮನಿಸಿದರೆ ಇದೊಂದು ವ್ಯವಸ್ಥಿತವಾಗಿ ನಡೆಯುತ್ತಿರುವ ಪ್ರಯತ್ನವೆಂದು ಹೇಳಬಹುದು. ಇದರ ಪ್ರಥಮ ಹಂತವಾಗಿ ಮುಸಲ್ಮಾನರ ಹೆಸರಿರುವ ಪಟ್ಟಣಗಳ ಹೆಸರು ಬದಲಾಗುತ್ತದೆ, ಮುಸ್ಲಿಂ ಅರಸರು ಕಟ್ಟಿಸಿದ ಪಟ್ಟಣಗಳು ಅಥವಾ ಅವರ ಹೆಸರುಗಳುಳ್ಳ ಊರು, ರಸ್ತೆ ಮತ್ತು ಪಟ್ಟಣಗಳ ಹೆಸರು ಕೂಡ ಬದಲಾವಣೆಯಾಗಿ “ಹಿಂದೂ”- ಹೆಸರಿಗೆ ಪರಿವರ್ತಿತವಾಗುತ್ತದೆ. ಇವುಗಳನ್ನು “ಹಿಂದೂ ಪುನರುತ್ಥಾನದ” ಹೆಸರಿನಲ್ಲಿ ಅನುಷ್ಠಾನಗೊಳಿಸಿದರೆ, ಇನ್ನು ಕೆಲವನ್ನು ನಿರ್ವಸಾಹತುಶಾಹಿಯ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರೊಂದಿಗೆ ರಸ್ತೆಗಳ, ರೈಲ್ವೆ ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಯಿತು.

ಎರಡನೇ ಪ್ರಯತ್ನದಲ್ಲಿ ಪಠ್ಯಪುಸ್ತಕ ಮತ್ತು ಇತಿಹಾಸವನ್ನು ಪರಿಷ್ಕರಿಸಲಾಯಿತು. ಪಠ್ಯ ಪುಸ್ತಕದ ವಿವಾದ ಹೊಸತೇನಲ್ಲ. 1977ರಲ್ಲಿಯೆ ಎನ್ ಸಿ ಇ ಆರ್ ಟಿ ಪ್ರಕಟಿಸುತ್ತಿದ್ದ ಇತಿಹಾಸದ ಪಠ್ಯ ಪುಸ್ತಕಗಳ ಕುರಿತು ವಿವಾದಗಳು ಮುನ್ನಲೆಗೆ ಬಂದಿದ್ದವು. ರೊಮಿಲಾ ಥಾಪರ್, ಆರ್.ಎಸ್ ಶರ್ಮ, ಬಿಪಿನ್ ಚಂದ್ರ ಮತ್ತು ಡೇ ಅವರ ಇತಿಹಾಸದ ಪುಸ್ತಕಗಳು ಈ ವಿವಾದದ ಕೇಂದ್ರ ಬಿಂದುಗಳಾಗಿದ್ದವು. ಅಂತಿಮ ವಿಶ್ಲೇಷಣೆಯಲ್ಲಿ ಈ ಪುಸ್ತಕಗಳು ಮಾರ್ಕ್ಸ್‌ ವಾದಿ ದೃಷ್ಟಿಕೋನದಿಂದ ಪ್ರೇರಿತವಾಗಿ, ಮುಸ್ಲಿಂ ಆಡಳಿತವನ್ನು ಉತ್ಪ್ರೇಕ್ಷೆ ಮಾಡುತ್ತಾ ಆಕ್ರಮಣಕಾರರ ಕುರಿತು ಗಟ್ಟಿಯಾದ ನಿಲುವುಗಳನ್ನು ತೆಗೆದುಕೊಳ್ಳಲಿಲ್ಲ ಎಂಬುದು ವಿರೋಧಕ್ಕೆ ಗ್ರಾಸವಾಯಿತು. ಇವುಗಳ ನಡುವೆಯೂ ಕೂಡ ಚಿಕ್ಕ ಪುಟ್ಟ ವಿವಾದಗಳಿದ್ದವು. 2014 ನಂತರ ಎನ್ ಸಿ ಇ ಆರ್ ಟಿ  ಪುಸ್ತಕಗಳು ಮತ್ತೊಮ್ಮೆ ವಿವಾದಕ್ಕೀಡಾದವು. ಅದಕ್ಕೆ ಪೂರಕವೆಂಬಂತೆ ಮೊಘಲರ ಇತಿಹಾಸದ ಕೆಲವು ಅಂಶಗಳನ್ನು, ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ದಂಗೆಗಳ ವಿವರಣೆಗಳನ್ನು ಕೈಬಿಡಲಾಯಿತು. ಇದರ ಮುಂದುವರಿಕೆಯಾಗಿ ಇನ್ನಿತರ ರಾಜ್ಯಗಳಲ್ಲಿ ಪಠ್ಯಪುಸ್ತಕಗಳನ್ನು ಕೂಡ ಪರಿಷ್ಕರಿಸಲಾಯಿತು. ಮೊಘಲ್ ಆಳ್ವಿಕೆಯನ್ನು ಅತ್ಯಂತ “ಕಗ್ಗತ್ತಲಿನ ಕಾಲ”, ಹಳದಿ ಘಾಟ್ ಯುದ್ಧದಲ್ಲಿ ಸೋತವನು ಅಕ್ಬರ್, ಅಕ್ಬರ್ ಶ್ರೇಷ್ಠ ಚಕ್ರವರ್ತಿವೆಂಬುದು ಒಂದು ಕಾಲ್ಪನಿಕ ವಿಷಯ, ರಾಣ ಪ್ರತಾಪ್ ಸಿಂಹ ಮಧ್ಯಕಾಲೀನ ಶ್ರೇಷ್ಠ ಚಕ್ರವರ್ತಿ ಇತ್ಯಾದಿ ಬದಲಾವಣೆಗಳನ್ನು ತರಲಾಯಿತು.

3 20

ಮೂರನೆಯದಾಗಿ ಕಾಲ ಕಾಲಕ್ಕೆ ತಕ್ಕಂತೆ ಹತ್ತು ಹಲವು ನರೆಟಿವ್‌ಗಳನ್ನು ಕಟ್ಟಲಾಯಿತು. ಬಹಳ ವರುಷಗಳ ಕಾಲ ಮುಸ್ಲಿಮರ ಮೂಲಭೂತ ಸಮಸ್ಯೆಗಳೆಂದರೆ ಆರ್ಥಿಕ ಸಮಸ್ಯೆಗಳಲ್ಲ, ಬದಲಾಗಿ ಕಾಶ್ಮೀರ ಸಮಸ್ಯೆ, ಆಲಿಘರ್ ವಿಶ್ವವಿದ್ಯಾನಿಲಯದ ಅಲ್ಪಸಂಖ್ಯಾತ ಸ್ಥಾನಮಾನ, ಗೋ ಹತ್ಯೆ, ಏಕರೂಪ ನಾಗರಿಕ ಸಂಹಿತೆ ಎಂದು ಬಿಂಬಿಸಲಾಯಿತು. ಮತೀಯ ಸಂಘರ್ಷದ ಸಂದರ್ಭದಲ್ಲಿ ಅವರನ್ನು ಪದೇ ಪದೇ ಅಪರಾಧಿಗಳನ್ನಾಗಿ ಬಿಂಬಿಸಲಾಯಿತು. ಸಂಘರ್ಷವನ್ನು ಹಿಂದೂ-ಮುಸ್ಲಿಂ ಬೈನರಿ ಮೂಲಕ ವಿಶ್ಲೇಷಿಸಲಾಯಿತೇ ಹೊರತು, ಅದರ ಆಳದಲ್ಲಿ ಆರ್ಥಿಕ ಬಿಕ್ಕಟ್ಟು, ಬಡತನ ಇತ್ಯಾದಿ ಇರುವುದನ್ನು ಗಮನಿಸಲಿಲ್ಲ. ಏಕರೂಪದ ನಾಗರಿಕತೆಯ ನರೆಟಿವ್ ಬಂದಾಗಲೆಲ್ಲ ಮುಸ್ಲಿಮರು ಪ್ರಗತಿ ವಿರೋಧಿಗಳು, ಸಮಾನತೆ ವಿರೋಧಿಗಳು, ತ್ರಿವಳಿ ತಲಾಖ್ ಕುರಿತು ನರೆಟಿವ್ ನಿರ್ಮಿಸಿದಾಗ ಮುಸ್ಲಿಮರು ಲಿಂಗ ಸಮಾನತೆಯ ಮತ್ತು ಆಧುನಿಕತೆಯ ವಿರೋಧಿಗಳು ಎಂದೆಲ್ಲ ಬಿಂಬಿಸಲಾಯಿತು. ಈ ನರೆಟಿವ್ ಗಳ ಉತ್ಕೃಷ್ಟ ಹಂತವೆಂದರೆ ಚುನಾವಣೆ ಕಾಲದಲ್ಲಿ – ಅವರನ್ನು ನುಸುಳುಕೋರರು, ದೇಶದ ಸಂಪತ್ತನ್ನು ಕಬಳಿಸುವವರು, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಬಳಿಸುವವರು ಇತ್ಯಾದಿಯಾಗಿ ಬಿಂಬಿಸಲಾದುದು. ಈ 2000ನೇ ದಶಕದ ಆದಿಯಲ್ಲಿ ʼಮಕ್ಕಳನ್ನು ಹುಟ್ಟಿಸುವ ಫ್ಯಾಕ್ಟರಿ’ಗಳು ಎಂದೂ ಕೂಡ ಚಿತ್ರಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಮಾರಾಟದ ಸರಕುಗಳೆಂದು ಬಿಂಬಿಸಿ, ಅದಕ್ಕೆ “ಭುಲ್ಲಿ ಬಾಯ್” ಎಂದು ಹೆಸರಿಡಲಾಯಿತು. ಇವುಗಳ ನಡುವೆ “ಲವ್ ಜಿಹಾದ್”ನೊಂದಿಗೆ “ಭೂ ಜಿಹಾದ್”, ”ಯುಪಿಎಸ್ಸಿ ಜಿಹಾದ್” ಇತ್ಯಾದಿ ನರೆಟಿವ್ ಗಳನ್ನು ಸೇರಿಸಲಾಯಿತು. ವಿಚಿತ್ರವೆಂದರೆ 1990 ದಶಕದಲ್ಲಿ ಜಾಗತಿಕವಾಗಿ ಪ್ರಚಲಿತವಿದ್ದ `ಭಯೋತ್ಪಾದಕರೆಲ್ಲರೂ ಮುಸಲ್ಮಾನರು’ ಎಂಬ ಅಮೆರಿಕನ್ ನರೆಟಿವ್ ಅನ್ನು ಭಾರತದ ಸಂದರ್ಭದಲ್ಲಿ ಸ್ವಲ್ಪ ತಿರುಚಿ- ಎಲ್ಲ ಮುಸಲ್ಮಾನರು ಭಯೋತ್ಪಾಕರಲ್ಲ- ಎಂಬುದನ್ನು ಅಳವಡಿಸಲು ಯತ್ನಿಸಲಾಯಿತು. ಇತ್ತೀಚಿನ ಗೋ ಮಾಂಸದ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳು, “ಬುಲ್ಡೋಜರ್” ಮೂಲಕ ಮನೆ, ಆಸ್ತಿ, ಬಡಾವಣೆಗಳನ್ನು ಧ್ವಂಸಗೊಳಿಸುವ ಪ್ರಭುತ್ವದ ನ್ಯಾಯ ಪದ್ಧತಿ ಇತ್ಯಾದಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ “ಇಸ್ಲಾಮೋಫೊಬಿಯಾ”ದ ಮುಂದುವರಿಕೆಯ ಭಾಗವಾಗಿ ಕೂಡ ನೋಡಬಹುದು ಮತ್ತು ಸಮುದಾಯವನ್ನು ಮತ್ತೆ ಮತ್ತೆ ಅಪರಾಧಿ ಸ್ಥಾನಕ್ಕೆ, ದೀರ್ಘಕಾಲಿಕ ಅಭದ್ರತೆಗೆ ತಳ್ಳುವ ಯೋಜನೆಯ ಭಾಗವಾಗಿ ಕೂಡ ನೋಡಬೇಕು.

ಒಂದೆಡೆ ಮತೀಯ ಗಲಭೆ ಮತ್ತು ಅದಕ್ಕೆ ಸಂಬಂಧಿಸಿದ ನರೆಟಿವ್ ಗಳು ದಿನನಿತ್ಯ ಪ್ರಭಾವಿಸಿದರೂ, ಎರಡು ನರೆಟಿವ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಕರ್ನಾಟಕದಲ್ಲಿ ಪ್ರಭಾವ ಬೀರಿದವು: ಒಂದು ಕೋವಿಡ್ ಕುರಿತಾದ ನರೆಟಿವ್ ಮತ್ತು ಎನ್ ಆರ್ ಸಿ ಮತ್ತು ಸಿ.ಎ.ಎ ಕುರಿತಾದ ನರೆಟಿವ್. ಕೋವಿಡ್ ನರೆಟಿವ್ ನಲ್ಲಿ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿರಿಸಲಾಯಿತು. ಮೇಲ್ನೋಟಕ್ಕೆ ದೆಹಲಿಯ ನಿಜಾಮಬಾದಿನಲ್ಲಿ ತಬ್ಲೀಕಿ ಜಮಾತ್ ಇಜ್ತೆಮಾ ಕಾರಣವೆನ್ನುತ್ತ, ತದನಂತರ ಇಡೀ ಸಮುದಾಯವೇ ಕೋವಿಡ್ ಹರಡುವಿಕೆಗೆ ಕಾರಣ, ಅವರೇ “ಸೂಪರ್ ಸ್ಪ್ರೆಡರ್”ಗಳು, ಅವರು ಮಾರುವ ಹಣ್ಣು ಹಂಪಲಿನ ಮೂಲಕ, ನಾಲಗೆಯ ಜೊಲ್ಲಿನಿಂದ ಈ ವೈರಸನ್ನು ಹರಡಿಸುತ್ತಾರೆ ಎಂಬ ಸುಳ್ಳು ನರೆಟಿವ್ ಗಳನ್ನು ನಿರ್ಮಿಸುತ್ತಾ ಹೋಗಲಾಯಿತು. ಈ ಕಾರಣದಿಂದ ಅವರೊಂದಿಗಿನ ಚಿಕ್ಕ-ಪುಟ್ಟ ವ್ಯಾಪಾರ, ವ್ಯವಹಾರ ಮತ್ತು ವಹಿವಾಟನ್ನು ಬಹಿಷ್ಕರಿಸಲಾಯಿತು. ಭಾರತದ ಉದ್ದಗಲಕ್ಕೂ, ಕರ್ನಾಟಕವೂ ಸೇರಿದಂತೆ ಉಳಿದೆಡೆ, ದೈಹಿಕ, ಮಾನಸಿಕ ಹಿಂಸೆಗೆ ಸಮುದಾಯ ಬಲಿಯಾಗಬೇಕಾಯಿತು. ಕೆಲವೆಡೆ ಇಡೀ ಸಮುದಾಯವನ್ನೇ ಬಹಿಷ್ಕರಿಸಲಾಯಿತು. “ಕೊರೊನಾ ಜಿಹಾದ್” ಎಂಬ ಹೊಸ ಶಬ್ದವನ್ನು ಉತ್ಪತ್ತಿ ಮಾಡುತ್ತಾ, ಜನಪ್ರಿಯಗೊಳಿಸಲಾಯಿತು. ಇದನ್ನು ಚಾಲ್ತಿಗೆ ತರಲು ರಾಷ್ಟ್ರೀಯ ಮತ್ತು ಕನ್ನಡದ ಮಾಧ್ಯಮಗಳು ಪೈಪೋಟಿಗೆ ನಿಂತವು. ಇದಕ್ಕೆ ಅಂದಿನ ಸರಕಾರವು ಕೂಡ ಬೆಂಬಲವನ್ನು ನೀಡಿತ್ತು. ಇದನ್ನು ಮಾನಸಿಕ ಹಿಂಸೆಯ ಪರಮಾವಧಿಯ ಕಾಲಘಟ್ಟವೆನ್ನಬಹುದು.

CAA Protest 1

ಹೆಚ್ಚು ಕಡಿಮೆ ಇದೇ ಕಾಲದಲ್ಲಿ ಎನ್ ಆರ್ ಸಿ ಮತ್ತು ಸಿ ಎ ಎ ವಿರುದ್ದ ಹಮ್ಮಿಕೊಂಡ ರಾಷ್ಟ್ರವ್ಯಾಪಿ ಪ್ರತಿಭಟನೆ ಒಂದು ಸಾಧಾರಣ, ಸಾಮಾನ್ಯವಾದ ಪ್ರತಿಭಟನೆಯಾಗಿರಲಿಲ್ಲ. ಇದು ಪ್ರಜೆಗಳನ್ನು, ದಾಖಲಾತಿಗಳ ನಡುವೆಯೂ ಅನ್ಯರು, ವಿದೇಶಿಯರನ್ನಾಗಿ ಘೋಷಿಸುವ ಅಂಶವನ್ನು ಹೊಂದಿತ್ತು. ಇದಕ್ಕೆ ಪ್ರಥಮವಾಗಿ ಮುಸ್ಲಿಮರು, ತದನಂತರ ಆದಿವಾಸಿಗಳು, ದಲಿತರು, ಕ್ರಿಸ್ತರು ಇತ್ಯಾದಿಯವರು ಬಲಿಪಶುಗಳಾಗುವ ಸಾಧ್ಯತೆಗಳಿದ್ದವು. ಇಲ್ಲಿಯೂ ಕೂಡ ಹೊಸ ನರೆಟಿವ್ ವೊಂದನ್ನು ಕಟ್ಟಲಾಗಿತ್ತು. “ಯಾರೆಲ್ಲಾ ಪ್ರತಿಭಟಿಸುತ್ತಿದಾರೆಯೋ ಅವರೆಲ್ಲ ಅಪರಾಧಿಗಳು, ವಿದೇಶಿಯರು”- ಈ ನರೆಟಿವ್ ಮೂಲಕ ಮುಸ್ಲಿಮರನ್ನು ವಿದೇಶಿಯರು, ಅನ್ಯರು, ಅಪರಾಧಿಗಳಾದವರು ಎಂದೆಲ್ಲ ಬಿಂಬಿಸಲಾಯಿತು. ಪ್ರತಿರೋಧ ನವದೆಹಲಿಗೆ ಮಾತ್ರ ಸೀಮಿತಗೊಳ್ಳಲಿಲ್ಲ, ಕರ್ನಾಟಕದ ವಿವಿಧ ನಗರಗಳಲ್ಲಿ, ಜಿಲ್ಲೆಗಳಲ್ಲಿ, ಪಟ್ಟಣಗಳಲ್ಲಿ ಪ್ರತಿಭಟನೆಗಳು ನಡೆದವು. ಈ ಹೋರಾಟದ ವಿಶಿಷ್ಟತೆಯೆಂದರೆ ಬುರ್ಕಾಧಾರಿ ಮಹಿಳೆಯರು ಒಂದು ಕೈಯಲ್ಲಿ ಸಂವಿಧಾನ ಮತ್ತೊಂದು ಕೈಯಲ್ಲಿ ಭಾರತದ ತ್ರಿವರ್ಣ ಬಾವುಟವನ್ನು ಹಿಡಿದುಕೊಂಡು ಭಾಗವಹಿಸಿದರು, ಇಲ್ಲಿ ಎರಡು ಅಂಶಗಳು ಬೆರೆತುಕೊಂಡಿದ್ದವು: ಭಯ ಮತ್ತು ನಿರ್ಭಯ. ಫೈಸ್ ಅಹ್ಮದ್ ಫೈಸ್ ಪಾಕಿಸ್ತಾನದ ಸಂದರ್ಭದಲ್ಲಿ ಬರೆದ “ಕಾಗಝ್ ನಹೀಂ ದಿಕಾಯೆಂಗೆ” ಎಂಬ ಪದ್ಯ ವೇದ ವಾಕ್ಯವಾಯಿತು.

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಈ ಎಲ್ಲ ನರೆಟಿವ್ ಗಳು ಕರ್ನಾಟಕದ ಮೂಲಕ ನಮ್ಮ “ಗ್ರಹಿಕೆಯ ಭಾರತ”ವನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲವೆಂದು ಕಂಡಾಗಲೆಲ್ಲ ಕಾಲ್ಪನಿಕ, ಸಂಕೇತಗಳನ್ನು ಉಪಯೋಗಿಸಿತ್ತು. ಈ ರೀತಿಯ ನೆರೆಟಿವ್ಗಳನ್ನು ಹುಟ್ಟುಹಾಕುವುದನ್ನು ಬಾಬಾ ಬುಡನ್‌ಗಿರಿ ಸಂದರ್ಭದಲ್ಲಿ ನೋಡಬಹುದು. ”ದತ್ತಾತ್ರೇಯ ಸ್ವಾಮಿಯವರು ಗುಹೆಗಳಿಂದ ಅದೃಶ್ಯ”ವಾದ ಕತೆಯನ್ನು ಐತಿಹ್ಯದ ಕುರುಹುವಾಗಿ ಕಲ್ಪಿಸುವುದನ್ನು ಇಲ್ಲಿ ನೋಡಬಹುದು. ಕಳೆದ ವಿಧಾನಸಭೆ ಚುನಾವಣೆಯ ಕಾಲದಲ್ಲಿ ಎರಡು ಕಾಲ್ಪನಿಕ ಹೆಸರುಗಳನ್ನು ತೇಲಿ ಬಿಡಲಾಗಿತ್ತು: ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಹೆಸರುಗಳು. ಈ ನೆರೆಟಿವ್ವನ್ನು ಚಾಲ್ತಿಗೆ ತಂದು ಜನಪ್ರಿಯಗೊಳಿಸುವ ಪ್ರಥಮ ಪ್ರಯತ್ನ ನಾಟಕ ರೂಪದಲ್ಲಿ ನಡೆಯಿತು. ಅಡ್ಡಂಡ ಕಾರಿಯಪ್ಪರ “ಟಿಪ್ಪುವಿನ ನಿಜ ಕನಸು”ಗಳು ಈ ಹೊಸ ನರೆಟಿವ್ ಗೆ ಸಾಕ್ಷಿಯಾಯಿತು. ಇದರ ಪೂರ್ವದಲ್ಲಿ ಕೂಡ ಟಿಪ್ಪುವಿನ ಕುರಿತು ನಾಟಕಗಳು, ಚರ್ಚೆಗಳು ಬಂದಿರಲಿಲ್ಲವೆಂದಲ್ಲ. 1990ರ ದಶಕದಲ್ಲಿ ಗಿರೀಶ್ ಕಾರ್ನಾಡ್ ರ ನಾಟಕ ”ಟಿಪ್ಪುವಿನ ಕನಸು”ಗಳು ತೆರೆ ಕಂಡಿತ್ತು, ಅದಕ್ಕೆ ಉಪಯೋಗಿಸಿದ ಆಕರಗಳು ಪರ್ಶಿಯನ್ ಮೂಲದಿಂದ ಬಂದಿದ್ದವು. ಅಡ್ಡಂಡರ ನಾಟಕ ನರೆಟಿವ್ ನಲ್ಲಿ ಟಿಪ್ಪು ಒಬ್ಬ ಮತಾಂಧ, ಕ್ರೂರಿ, ಪೀಡಕ, ಅಂಜುಬುರುಕ, ಹೇಡಿ. ಅವನು ರಾಷ್ಟ್ರೀಯವಾದಿಯಲ್ಲ(ವಿಚಿತ್ರವೆಂದರೆ ಸಾವರ್ಕರ್ ತಮ್ಮ `ಫಸ್ಟ್ ವಾರ್ ಆಫ್ ಇಂಡಿಪೆಂಡನ್ಸ್’ನಲ್ಲಿ ಟಿಪ್ಪುವಿನ ತಂದೆ ಹೈದರ್ ಆಲಿಯನ್ನು ಭಾರತೀಯ ರಾಷ್ಟ್ರೀಯತೆಯನ್ನು ಗುರುತಿಸಿದ ಪ್ರಥಮ ವ್ಯಕ್ತಿಗಳಲ್ಲಿ ಒಬ್ಬನೆಂದು ಗುರುತಿಸುತ್ತಾರೆ, ಭಾರತದ ಮೂಲ ಸಂವಿಧಾನದಲ್ಲಿ ಟಿಪ್ಪುವಿನ ಚಿತ್ರವಿದೆ). ಅಡ್ಡಂಡರ ನಾಟಕದಲ್ಲಿ ಟಿಪ್ಪುವನ್ನು ಕೊಂದವರು ಬ್ರಿಟಿಷರಲ್ಲ, ಮೈಸೂರು ರಾಣಿಯ ವಿಧೇಯ ಬಂಟರೂ, ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡರು ಎಂಬ ಕಾಲ್ಪನಿಕ ವ್ಯಕ್ತಿಗಳು. ಈ ನರೆಟಿವ್ ನಲ್ಲಿ ಒಕ್ಕಲಿಗ ನಾಯಕರನ್ನು ಚಿತ್ರಿಸಲು ಕಾರಣವಿತ್ತು: ಒಕ್ಕಲಿಗ ಪ್ರಾಂತ್ಯದಲ್ಲಿ ನೆಲೆಗಳನ್ನು ವಿಸ್ತರಿಸುವುದು ಮತ್ತು ಹಿಂದೂ-ಮುಸ್ಲಿಂ ಎಂಬ ಬೈನರಿಗಳನ್ನು ಕರ್ನಾಟಕದ ತುಂಬೆಲ್ಲ ನಿರ್ಮಿಸುವುದು ಆಗಿತ್ತು. ಈ ನರೆಟಿವ್ ಹೆಚ್ಚು ದಿನ ಬಾಳಲಿಲ್ಲ, ಮಂಡ್ಯದ ಕಮಾನೊಂದಕ್ಕೆ ಉರಿಗೌಡ ಮತ್ತು ನಂಜೇಗೌಡರ ಹೆಸರಿಟ್ಟರೂ ಫಲಕಾರಿಯಾಗಲಿಲ್ಲ. ಈ ನರೆಟಿವ್ ಸ್ವಾಭಾವಿಕವಾಗಿ ನೆಲ ಕಚ್ಚಿತ್ತು(ಇಲ್ಲಿ ಒಕ್ಕಲಿಗ ಸ್ವಾಮೀಜಿಯವರ ನಡವಳಿಕೆ ಅತ್ಯಂತ ಶ್ಲಾಘನೀಯವಾಗಿತ್ತು). ಟಿಪ್ಪುವಿನ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಕನಸು, ಅವನ ಭೂ ಸುಧಾರಣೆ, ಶ್ರೀರಂಗಪಟ್ಟಣದ ಧಾರ್ಮಿಕ ಸಹಬಾಳ್ವೆ, ದೇವಸ್ಥಾನಗಳಿಗೆ ಅವನು ನೀಡಿದ ಕೊಡುಗೆಗಳು ಇತ್ಯಾದಿಗಳು ಇಲ್ಲಿ ಕೆಲಸ ಮಾಡಿದವು.

ಇನ್ನೊಂದು ಯತ್ನ ಹಿಜಾಬ್, ಹಲಾಲ್ ಮತ್ತು ಆಜಾನ್- ಅಂಗಡಿಗಳ ಬಹಿಷ್ಕಾರಗಳ ಸಂದರ್ಭದಲ್ಲಿ ಮಾಡಲಾಯಿತು. ಹಲಾಲ್ ಆಹಾರ ಸಂಸ್ಕೃತಿಯ ಮೇಲೆ ಕೇಂದ್ರೀಕೃತವಾಗಿತ್ತು. ಹಲಾಲ್ ಮಾಂಸವನ್ನು ಬಹಿಷ್ಕರಿಸುತ್ತಾ ಅದಕ್ಕೆ ಪರ್ಯಾಯವೆಂಬಂತೆ ಜಟ್ಕಾ ಆಹಾರವನ್ನು ಸೂಚಿಸಲಾಯಿತು. ಇದು ಕೂಡ ಸೋತಿತ್ತು. ಅಜಾನ್ ಕೂಡ ಮಹತ್ತರ ವಿಷಯವಾಗಿ ಪರಿವರ್ತಿತವಾಗಲಿಲ್ಲ.

2 19

ಕೆಲವು ಸಂದರ್ಭದಲ್ಲಿ ಸಮುದಾಯ ಬಹಳ ಮೌನ ತಾಳಿದ್ದೂ ಇದೆ. ಇದನ್ನು ತಣ್ಣಗಿನ ಪ್ರತಿಕ್ರಿಯೆಯ ರೂಪಕವಾಗಿ ನೋಡಬಹುದು. ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪುನರ್ ರಚನೆಯಲ್ಲಿ ಟಿಪ್ಪುವಿನ ಅಂಶಗಳನ್ನು ಕೈಬಿಟ್ಟಾಗ, ಕೊಲ್ಲೂರಿನ ಮುಕಾಂಬಿಕ ದೇವಸ್ಥಾನ ಮತ್ತು ಮೇಲುಕೋಟೆಯ ದೇವಸ್ಥಾನದಲ್ಲಿ “ಸಲಾಂ” ಆರತಿಯನ್ನು ನಿಲ್ಲಿಸಿದಾಗಲೂ ತೀವ್ರತರ ಪ್ರತಿಭಟನೆಗಳು ಬರಲಿಲ್ಲ. ಈ ಹಿಂದೆ ಎಸ್.ಎಲ್. ಬೈರಪ್ಪನವರು `ಆವರಣ’ ಕಾದಂಬರಿ ಪ್ರಕಟಿಸಿದಾಗಲೂ ಗುರುತರ ಪ್ರತಿಕ್ರಿಯೆ ಬರಲಿಲ್ಲ. ಪ್ರತಿಕ್ರಿಯೆ ತಣ್ಣಗಿತ್ತು ಎಂದರೂ ತಪ್ಪಲ್ಲ.

ಇವುಗಳಲ್ಲಿ ಪರಿಣಾಮ ಬೀರಿದ್ದು ಹಿಜಾಬ್ ವಿವಾದ. ಕರಾವಳಿಯಲ್ಲಿ ಆರಂಭಗೊಂಡ ವಿವಾದ ರಾಷ್ಟ್ರ ಮಟ್ಟದ ವಿವಾದವಾಗಿ ಮಾರ್ಪಟ್ಟಿತ್ತು, ಸುಪ್ರಿಂಕೋರ್ಟ್ ಮೆಟ್ಟಲೇರಿತು. ಬಹಳಷ್ಟು ಶಾಲೆಗಳು ಹಿಜಾಬ್ ಅನ್ನು ನಿರ್ಬಂಧಿಸಿದವು, ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಬರದಂತೆ ಮುಖ್ಯ ದ್ವಾರಕ್ಕೆ ಬೀಗವನ್ನು ಜಡಿದು ಪ್ರವೇಶವನ್ನು ನಿಷೇಧಿಸಿದವು, ತರಗತಿಗೆ ಬರದಂತೆ ತಡೆಯೊಡ್ಡಿದವು. ಅಂತಿಮ ಪರೀಕ್ಷೆ ಬರೆಯಲು ನಿರಾಕರಿಸಿದವು. ಹಿಜಾಬ್ ಕುರಿತು ಹೊಸ ನರೆಟಿವ್ಗಳು ಹುಟ್ಟಿಕೊಂಡವು- ತೀವ್ರವಾದವನ್ನು ಪುರಸ್ಕರಿಸುವ ದೇಶಿಯ ಮತ್ತು ವಿದೇಶಿಯ ಸಂಘಟನೆಗಳು ಈ ವಿವಾದದ ಹಿನ್ನೆಲೆಯಲ್ಲಿವೆ ಹಾಗೂ ಅವು ಮತೀಯವಾದ ಬೆಳೆಯಲು ಹಿಜಾಬ್ ಅನ್ನು ಒಂದು ನೆಪವಾಗಿ ಅಥವಾ ಸಂಕೇತವಾಗಿ ಉಪಯೋಗಿಸುತ್ತಿದ್ದಾವೆ. ಹಿಜಾಬ್ ಧರಿಸುವುದು ತಮ್ಮ ಸಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿದರೂ, ಈ ಹೊಸ ನರೆಟಿವ್ ಗಳ ಮುಂದೆ ಅವುಗಳು ಕೀರಲು ಧ್ವನಿಗಳಾದವು. ಅದನ್ನು ಆಧುನಿಕತೆಯ ಪ್ರತಿರೋಧವಾಗಿ, ಗುರುತಿನ ಅಥವಾ ಅಸ್ಮಿತೆಯ ಕುರುಹುವಾಗಿ ಯಾರೂ ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ. ಹೈಕೋರ್ಟ್ ತೀರ್ಪು ಕೂಡ ಅವರ ಪರವಾಗಿ ಬರಲಿಲ್ಲ. ನೂರಾರು ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದರು, ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯ ಕನಸು ಕಂಡಿದ್ದ ಹೆಣ್ಣುಮಕ್ಕಳು ಮನೆಯಲ್ಲಿ ಮತ್ತೊಮ್ಮೆ ಕಾಯಂ ನೆಲೆನಿಂತು ಕಮರಿದ ಕನಸುಗಳೊಂದಿಗೆ ಬದುಕುವುದನ್ನು ಮುಂದುವರಿಸಿದರು. ಹಿಜಾಬ್ ವಿವಾದ ಸದ್ಯಕ್ಕೆ ತಣ್ಣಗಾಗಿದೆ, ಅದರರ್ಥ ವಿವಾದ ಮುಗಿದಿದೆ ಎಂದರ್ಥವಲ್ಲ.

ಕೆಲವು ಸಲ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಇದೆ. ಮತೀಯ ಘರ್ಷಣೆ ಸಂದರ್ಭದಲ್ಲಿ ಇದು ಸರ್ವೇ ಸಾಮಾನ್ಯ. ಹಾಗೆ ನೋಡಿದರೆ ಕರ್ನಾಟಕದಲ್ಲಿ ನಡೆದ ಮತೀಯ ಗಲಭೆಗಳ ಸಂಖ್ಯೆಗಳು ಮತ್ತದರ ತೀವ್ರತೆ ಸ್ವಲ್ಪ ಕಡಿಮೆ ಅನ್ನಬಹುದು. ಮತೀಯವಾದ ಒಂದು ತಾತ್ವಿಕ ಪ್ರಜ್ಞೆಯಾಗಿ ಗಟ್ಟಿಯಾಗಿರುವುದು ಕರಾವಳಿಯಲ್ಲಿ ಮತ್ತು ಹಳೆಯ ಬಾಂಬೆ ಪ್ರೆಸಿಡೆನ್ಸಿಯ ಕೆಲವು ಭಾಗದಲ್ಲಿ. ಕರ್ನಾಟಕದ ಇತಿಹಾಸದಲ್ಲಿ ಮತೀಯ ಸಂಘರ್ಷ ಪ್ರಪ್ರಥಮವಾಗಿ ದಾಖಲಾಗುವುದು 1920ರ ಸುಮಾರಿಗೆ. 1960-70ರ ದಶಕದಲ್ಲಿ ಒಂದೆರೆಡು ತಿಕ್ಕಾಟಗಳು ಮುನ್ನಲೆಗೆ ಬಂದರೂ, ಆತಂಕವನ್ನು ಸೃಷ್ಟಿಸಲಿಲ್ಲ. 1980-90ರ ದಶಕದ ನಂತರ ಕೆಲವು ರಾಷ್ಟ್ರ ಮಟ್ಟದ ನರೆಟಿವ್ಗಳೊಂದಿಗೆ ವಿವಾದಾತ್ಮಕ ವಿಷಯಗಳು ಕರ್ನಾಟಕದಲ್ಲಿ ಮತೀಯ ವಾದವನ್ನು, ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಿದವು, ಆದರೆ ಕರ್ನಾಟಕವನ್ನು ಸಂಪೂರ್ಣವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ತರಹ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಅಯೋಧ್ಯ ವಿವಾದ, ಗೋದ್ರಾ ಹತ್ಯಾಕಾಂಡ, ಪಾರ್ಲಿಮೆಂಟ್ ಮತ್ತು ಬೊಂಬಾಯಿ ದಾಳಿ ಇತ್ಯಾದಿಗಳು ಹೊರನೋಟದಲ್ಲಿ ಮತೀಯ ಸಂಘರ್ಷದ ಪ್ರಮುಖ ವಿಷಯವಾಗಿರದಿದ್ದರೂ, ಹಿನ್ನೆಲೆಯಲ್ಲಿ ಅವುಗಳ ಸುತ್ತಾ ನಿರ್ಮಿಸಿದ ನರೆಟಿವ್ಗಳ ಪ್ರಭಾವ ಇದ್ದೇ ಇತ್ತು. ಕರಾವಳಿಯಲ್ಲಿ ಮತೀಯವಾದ ದಿನನಿತ್ಯದ ವಿಷಯವಾಗಿ ಪರಿವರ್ತಿತವಾಯಿತು. ವಿಚಿತ್ರವೆಂದರೆ ಕರಾವಳಿಯಲ್ಲಿ ಮತೀಯವಾದ ಮತ್ತು ಬಂಡವಾಳ/ಮಾರುಕಟ್ಟೆ ಜೊತೆ ಜೊತೆಯಾಗಿ ಹೋದವು.

ಎಲ್ಲ ಸಂಘರ್ಷವನ್ನು ಮತೀಯ ಸಂಘರ್ಷದ ಮುಖಾಮುಖಿಯಾಗಿ ನೋಡಬಾರದು. 1980ರ ದಶಕದ ಅಂತ್ಯದಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ “ದಿ ಈಡಿಯಟ್” ಕತೆ, ಮತೀಯ ಘರ್ಷಣೆಯಲ್ಲ. ಬಾಬಾ ಬುಡನ್ ಗಿರಿ ವಿವಾದ ಹಿಂಸೆಯ ರೂಪಕ್ಕೆ ಪರಿವರ್ತನೆಯಾಗಲಿಲ್ಲದಿದ್ದರೂ ಅದು ಬಲಪಂಥೀಯರಿಗೆ ತಾತ್ವಿಕ ನೆಲೆಗಟ್ಟುಗಳನ್ನು ಕಲ್ಪಿಸಿತ್ತು. ವಿಚಿತ್ರವೆಂದರೆ ಒಂದು ಕಾಲದಲ್ಲಿ ಅತ್ಯಂತ ಪ್ರಗತಿಪರ ಚಿಂತನೆಗಳಿಗೆ ಮತ್ತು ಸಾಮಾಜಿಕ ಹೋರಾಟಗಳಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಗಳು ಆ ಚಿಂತನೆಗಳಿಂದ ಈಗ ದೂರ ಸರಿದಿವೆ, ಬಲಪಂಥೀಯರ ನೆಲೆಗಟ್ಟುಗಳಾಗಿ ಪರಿವರ್ತಿತವಾಗಿವೆ(ಉತ್ತರ ಕನ್ನಡ ಮತ್ತು ಶಿವಮೊಗ್ಗ). ಇಲ್ಲಿ ಮತೀಯವಾದ ಮತ್ತು ಸಂಘರ್ಷ ಸಮುದಾಯವನ್ನು `ಮನುಕುಲಕ್ಕಿರುವ ಅಪಾಯದ’ ರೂಪದಲ್ಲಿ ಚಿತ್ರಿಸುತ್ತದೆ.

ಇದನ್ನೂ ಓದಿರಿ: ನಾವು ಹಿಂದೂಗಳಷ್ಟೇ, ಕಾಂಗ್ರೆಸ್-ಬಿಜೆಪಿ ನಂತರದ ಮಾತು; ಮುಸ್ಲಿಂ ಭಯದ ಅಗ್ನಿಕುಂಡವಾದ ‘ಹಿಮಾಚಲ’

ತಣ್ಣಗಿನ ಪ್ರತಿಕ್ರಿಯೆಗೆ ಇತ್ತೀಚಿನ ಉತ್ತಮ ಉದಾಹರಣೆ ಎಂದರೆ ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಕೊನೆಗಾಣಿಸಿ, ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಿದಾಗ ಕಂಡುಬಂದಿದೆ. ಇದು ಕರ್ನಾಟಕದ ವಿಷಯವಾದರೂ, ಇದನ್ನು ರಾಷ್ಟ್ರೀಯ ಚುನಾವಣಾ ವಿಷಯವನ್ನಾಗಿ ಕೂಡ ಮಾಡಲಾಯಿತು. ಇಲ್ಲಿ ಕೆಲವು ನರೆಟಿವ್ ಗಳನ್ನು ಕಟ್ಟಲಾಯಿತು: ಮುಸ್ಲಿಮರು ಧರ್ಮಾಧಾರಿತವಾಗಿ ಮೀಸಲಾತಿಯನ್ನು ಪಡೆಯುತ್ತಿದ್ದಾರೆ, ಅದು ಸಂವಿಧಾನ ವಿರೋಧಿಯೂ ಆಗಿದೆ. ಎರಡನೆಯದಾಗಿ , ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಬುಡಕಟ್ಟುಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಕಬಳಿಸುತ್ತಿದ್ದಾರೆ, ಮೂರನೆದಾಗಿ ಅವರು ಹಿಂದುಳಿದ ವರ್ಗಗಳೇ ಅಲ್ಲ. ವಾಸ್ತವವಾಗಿ ಈ ನರೆಟಿವ್ಗಳಲ್ಲಿ ಬಹಳಷ್ಟು ಮಿಥ್ಯೆಗಳಿವೆ. ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿ ಹೊಸತೇನಲ್ಲ. ಹಳೆಯ ಮೈಸೂರು ಪ್ರಾಂತ್ಯದಲ್ಲಿ 1884ರಿಂದಲೂ ಚಾಲ್ತಿಯಲ್ಲಿದೆ. ಅದೇ ಸಂದರ್ಭದಲ್ಲಿ ಅವರನ್ನ ಹಿಂದುಳಿದ ವರ್ಗವೆಂದು ವಿಂಗಡಿಸಲಾಯಿತು. 1920ರ ಸುಮಾರಿಗೆ ಲೆಸ್ಲಿ ಮಿಲ್ಲರ್ ಸಮಿತಿ ಅವರನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಿತ್ತು. ಈ ಪಟ್ಟಿಗೆ ಸೇರಿಸುವಾಗ ಅವರನ್ನು ಧಾರ್ಮಿಕ ಸಮುದಾಯವಾಗಿ ಪರಿಗಣಿಸಲಿಲ್ಲ, ಬದಲಾಗಿ ಸಾಮಾಜಿಕ ಮತ್ತು  ಆರ್ಥಿಕತೆ ವಂಚಿತ ವರ್ಗವಾಗಿ ಪರಿಗಣಿಸಿದೆ. ಸ್ವಾತಂತ್ರ್ಯದ ನಂತರದ ಎಲ್ಲ ಹಿಂದುಳಿದ ವರ್ಗದ ಆಯೋಗಗಳು ಸಾಮಾಜಿಕ ಮತ್ತು ಹಿಂದುಳಿದ ವರ್ಗಗಳಾಗಿ ನೋಡಿದವೇ ಹೊರತು ಧಾರ್ಮಿಕ ಸಮುದಾಯವಾಗಿಯಲ್ಲ. ಚಿನ್ನಪ್ಪ ರೆಡ್ಡಿ ಆಯೋಗ ಅತ್ಯಂತ ಹಿಂದುಳಿದ ಜಾತಿಗಳನ್ನು ಪ್ರವರ್ಗ 1ರಲ್ಲಿ ಪಟ್ಟಿ ಮಾಡಿದರೆ, ಪ್ರವರ್ಗ 2ಬಿ ಇತರೇ ಮುಸ್ಲಿಮರನ್ನು ಗುರುತಿಸಲಾಯಿತು. ಇದು ಎರಡು ರೀತಿಯ ಪ್ರಭಾವವನ್ನು ಬೀರಿತ್ತು: ವರ್ಗದೊಂದಿಗೆ ಬೆಸೆದುಕೊಂಡಿರುವ ಜಾತಿಯನ್ನು ಗುರುತಿಸಲು ಸಾಧ್ಯವಾಯಿತು; ಎರಡನೆಯದಾಗಿ, ಅಭದ್ರತೆ, ಅಸಹನೆ ಮತ್ತು ರಾಷ್ಟ್ರೀಯ /ಪ್ರಾಂತೀಯ ನರೆಟಿವ್ ಗಳ ನಡುವೆ, ಸಮುದಾಯ ಬಿಹಾರ, ಉತ್ತರ ಪ್ರದೇಶಗಳಿಗೆ ಹೋಲಿಸಿದರೆ ತಕ್ಕ ಮಟ್ಟಿನ ಬೆಳವಣಿಗೆಯನ್ನು ಹೊಂದಲು ಸಾಧ್ಯವಾಯಿತು.

ಎರಡನೆಯದಾಗಿ, ಅಭದ್ರತೆ ನಡುವೆ ಆರ್ಥಿಕ ಬೆಳವಣಿಗೆಯ ಮುಖ್ಯ ವಾಹಿನಿ(ಮುಖ್ಯ ವಾಹಿನಿ ಎಂದರೆ ಏನು ಎಂಬುದು ಯಾರಿಗೂ ತಿಳಿದಿಲ್ಲ)ಯಲ್ಲಿ  ಹೇಗೆ ತಮ್ಮನ್ನು  ಗುರುತಿಸಿಕೊಂಡರು ಎಂಬುದು ಕೂಡ ಅತೀ ಮುಖ್ಯ. ಸಮುದಾಯವನ್ನು ಜನಸಾಮಾನ್ಯ ನೆರೆಟಿವ್ಗಳಲ್ಲಿ ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಭಿವೃದ್ಧಿ, ಆಧುನಿಕತೆಯನ್ನು ತಿರಸ್ಕರಿಸುವವರು ಎಂದೆಲ್ಲ ಬಿಂಬಿಸಲಾಗಿದೆ. ಇದು ವಾಸ್ತವವೂ ಹೌದು. ಸಾಚಾರ್ ವರದಿ, ರಂಗನಾಥ ಆಯೋಗದ ವರದಿ, ಗೋಪಾಲ್ ಸಿಂಗ್ ವರದಿಗಳು ಮುಸ್ಲಿಮರ ಬಡತನವನ್ನು ಅಂಕಿ ಅಂಶಗಳ ಮೂಲಕ ಸಾದರಪಡಿಸಿವೆ. ವಾಸ್ತವವಾಗಿ 2005ಕ್ಕೆ ಪ್ರಕಟಗೊಂಡ ಸಾಚಾರ್ ವರದಿ ಕರ್ನಾಟಕದ ಸಂದರ್ಭದಲ್ಲಿ ಸ್ವಲ್ಪ ವಿಭಿನ್ನವಾದ ಚಿತ್ರಣವನ್ನು ನೀಡುತ್ತದೆ. ಉತ್ತರ ಭಾರತ, ಅದರಲ್ಲೂ ಬಿಹಾರ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳನ್ನು ಕರ್ನಾಟಕದೊಂದಿಗೆ ತುಲನಾತ್ಮಕವಾಗಿ ನೋಡಿದರೆ, ಕರ್ನಾಟಕದ ಮುಸ್ಲಿಮರು ಸ್ವಲ್ಪ ಸ್ಥಿತಿವಂತರು, ಆದರೆ ಆರ್ಥಿಕವಾಗಿ ಬಲಾಢ್ಯರಲ್ಲ. ಬಹುಸಂಖ್ಯಾತರು ಈಗಲೂ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವುದು ದಿಟ. ಆದ ಕಾರಣ ಇದನ್ನು ಬಡತನದ ಸಮುದಾಯವೆನ್ನುವುದು ಸಹಜ. ಇದಕ್ಕೆ ಒಂದೆರಡು ಅಪವಾದಗಳಿವೆ. ದಕ್ಷಿಣ ಕನ್ನಡದ ಬ್ಯಾರಿಗಳು- ಒಂದು ಕಾಲದಲ್ಲಿ ಅತ್ಯಂತ ಬಡತನದಿಂದ ಬದುಕಿದ ವ್ಯಾಪಾರಿ ಸಮುದಾಯ- ಇವತ್ತು ತನ್ನದೇ ಆದ ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜನ್ನು ಮತ್ತು ಇನ್ನಿತರ ಕಾಲೇಜನ್ನು ಸ್ಥಾಪಿಸುವಷ್ಟು ಮುಂದುವರಿದಿದೆ. ವ್ಯಾಪಾರಸ್ಥರಾಗಿದ್ದ ಬೋಹ್ರಾಗಳು, ಖೋಜಾಗಳು ಇನ್ನಷ್ಟು ಆರ್ಥಿಕವಾಗಿ ಮುಂದುವರಿದ್ದಾರೆ. ಬ್ಯಾರಿಗಳ ಅಭಿವೃದ್ಧಿ ಸರಕಾರದಿಂದ ಪ್ರೇರಿತವಾದ ಬೆಳವಣಿಗೆಯಲ್ಲ, ಇವರಿಗೆ ಮೀಸಲಾತಿ ಒಂದಿಷ್ಟು ಸಹಾಯ ಮಾಡಿದೆಯೆ ಹೊರತು ಸಮಗ್ರ ಬೆಳವಣಿಗೆಯನ್ನಲ್ಲ. ಇದನ್ನು ಸ್ವಂತಿಕೆಯ ಬೆಳವಣಿಗೆ ಎನ್ನಬಹುದು. ಇದರ ಪ್ರಭಾವ ಶಿಕ್ಷಣ ಕ್ಷೇತ್ರದಲ್ಲೂ ಕಂಡು ಬರುತ್ತದೆ. ಆಲಿಘರ್ ಚಳವಳಿ ತಂದ ಶಿಕ್ಷಣ ಕ್ರಾಂತಿಯನ್ನು ಕರ್ನಾಟಕದಲ್ಲಿ ಪುನರ್ ಸೃಷ್ಟಿಸುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ-ಕರ್ನಾಟಕದಲ್ಲಿ ಇದನ್ನು ಅಲ್ ಅಮೀನ್, ಅಲ್ ಫಲಾ, ಶಾಹೀನ್, ಬ್ಯಾರಿ ಸಂಸ್ಥೆಗಳ ಹೆಸರಿನಲ್ಲಿ ಮುಂದುವರಿಸಲಾಗುತ್ತಿದೆ. ಇದು ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ.

ಒಂದೆಡೆ ನರೆಟಿವ್‌ಗಳು ಸೃಷ್ಟಿಸಿದ ತಲ್ಲಣಗಳಿಂದ, ಆತಂಕಗಳಿಂದ ಹೊರಬರಲು ತವಕ ಪಡುತ್ತಿದ್ದ ಸಮುದಾಯ ಬಹಳ ಕಾಲ ಆಂತರಿಕವಾಗಿ ವಿಮರ್ಶಿಸುವ ಅಥವಾ ಪ್ರಶ್ನಿಸುವ ವರ್ಗಗಳ ಕೊರತೆಯನ್ನು ಎದುರಿಸುತ್ತಿತ್ತು- ಲಿಂಗ ತಾರತಮ್ಯ, ಶೋಷಣೆ, ತಲಾಖ್, ಸಮಯ ಸಾಧಕ ಮದುವೆ ಇತ್ಯಾದಿ. 1980ರ ದಶಕದ ಪೂರ್ವದಲ್ಲಿ ಕೆ.ಎಸ್ ನಿಸ್ಸಾರ್ ಅಹಮದ್, ಅಕ್ಬರ್ ಅಲಿ ಇದ್ದರೂ ಅವರ ಬರವಣಿಗೆ ರೊಮ್ಯಾಂಟಿಕ್ ಸಾಹಿತ್ಯ ಅಥವಾ ಚುಟುಕು ಸಾಹಿತ್ಯಕ್ಕೆ ಸೀಮಿತವಾಗಿತ್ತು. 1980ರ ದಶಕದಲ್ಲಿ ಮುಸ್ಲಿಂ ಮಹಿಳಾ ಧ್ವನಿಗಳನ್ನು ಪ್ರತಿನಿಧಿಸುತ್ತಿದ್ದ ಬರಹಗಾರರು ಲಂಕೇಶ್ ಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳ ಮೂಲಕ ಮುನ್ನೆಲೆಗೆ ಬಂದರು. ಸಾರಾ ಅಬೂಬಕರ್, ಬಾನು ಮುಷ್ತಾಕ್, ಕೆ. ಶರೀಫಾ, ಸಬಿಹಾ ಭೂಮಿಗೌಡ ಇತ್ಯಾದಿಯವರನ್ನು ಸೇರಿಸಬಹುದು. ಇದಕ್ಕೆ ಪೂರಕವೆಂಬಂತೆ ಬೋಳುವಾರು ಮಹಮದ್ ಕುಂಞ, ಫಕೀರ ಮಹಮದ್ ಕಟಪಾಡಿ, ಬಿ.ಎಂ. ಹನೀಫ್, ಪೀರ್ ಬಾಶಾ ಬಾವಜಿ ಇತ್ಯಾದಿ ಮುಸ್ಲಿಂ ಸಮುದಾಯದ ಆಂತರಿಕ ವಿಮರ್ಶಕರಾದರು. ರಹಮತ್ ತರೀಕೆರೆಯವರು ಒಬ್ಬ ಗಂಭೀರ ಸಾಹಿತ್ಯ-ಸಮಾಜ ವಿಜ್ಞಾನಿಯಾದರು. ವಸಾಹತೋತ್ತರ ಕಾಲದ ಪ್ರಮುಖ ಚಿಂತಕರಾದರು. ಇವರೆಲ್ಲರ ಬರವಣಿಗೆ ಪ್ರಭಾವ ಸಮುದಾಯವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿತ್ತು. ಅವರ ರಾಜಕೀಯ ನಿಲುವುಗಳು ಶಾ ಬಾನು ಪ್ರಕರಣದಲ್ಲಿ ಶಾ ಬಾನುಗೆ ವ್ಯಕ್ತಪಡಿಸಿದ ಬೆಂಬಲ, ತ್ರಿವಳಿ ತಲಾಖ್ ಕಾನೂನಿಗೆ ನೀಡಿದ ನೈತಿಕ ಬೆಂಬಲ, ಎನ್ ಆರ್ ಸಿ ಗೆ ನೀಡಿದ ಬೆಂಬಲ- ಕೆಲವೊಮ್ಮೆ ಇರಿಸುಮುರಿಸಿಗೆ ದಾರಿ ಮಾಡಿಕೊಟ್ಟರೂ, ಸಾಹಿತ್ಯ ಮತ್ತು ಚಳವಳಿಗಳಲ್ಲಿ ಮುಸ್ಲಿಮರಿಗೆ ಸ್ವಂತಿಕೆಯನ್ನು ಕಟ್ಟುವಲ್ಲಿ ಸಹಾಯ ಮಾಡಿತ್ತು. ವಿಚಿತ್ರವೆಂದರೆ ಇವರೆಲ್ಲ ಕನ್ನಡದಲ್ಲಿ ಬರೆಯುವ ಬರಹಗಾರರು, ಅವರ ಮನೆಮಾತು ಒಂದೋ ಉರ್ದು, ಇಲ್ಲವೆ ಬ್ಯಾರಿ ಭಾಷೆಯಾಗಿತ್ತು. ಕನ್ನಡ ಭಾಷೆ ಅವರ್ಯಾರಿಗೂ ತೊಡಕಾಗಲಿಲ್ಲ. ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಹೊಸ ತಲೆಮಾರಿನ ಸಾಹಿತಿಗಳು, ಬರಹಗಾರರು ಈಗ ಮುನ್ನಲೆಗೆ ಬಂದಿರುವುದು ದಿಟ. ಅದರಲ್ಲಿ ಕೆಲವರು ಸ್ತ್ರೀವಾದಿಗಳಿರುವುದು ಅಷ್ಟೇ ಸತ್ಯ. ಈ ಸಂದರ್ಭದಲ್ಲಿ ಒಂದು ಸಾಹಿತ್ಯಕ ಪ್ರತಿಭಟನೆಯನ್ನು ದಾಖಲಿಸಬೇಕು. ಮುಸ್ಲಿಂ ಸಾಹಿತಿಗಳನ್ನು, ಬರಹಗಾರರನ್ನು ಹೊರಗಿಟ್ಟು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದಾಗ ಅದಕ್ಕೆ ಪ್ರತಿಭಟನೆಯ ರೂಪದಲ್ಲಿ ಪರ್ಯಾಯ ಸಮ್ಮೇಳನವನ್ನು ವರುಷದ ಹಿಂದೆ ಹಮ್ಮಿಕೊಳ್ಳಲಾಗಿತ್ತು.

ಮುಸಲ್ಮಾನರಿಗೆ ತಮ್ಮ ಸ್ವಂತಿಕೆಯನ್ನು ಕಟ್ಟಲು ಚುನಾವಣಾ ರಾಜಕೀಯ ಮತ್ತು ಗ್ರಹಿಕಾ ಸಾಮಾಜಿಕ ಸಮೀಕರಣ ಎಷ್ಟು ಅನುಕೂಲ ಮಾಡಿಕೊಟ್ಟಿತ್ತು ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ವಾಸ್ತವವಾಗಿ ಸಮುದಾಯವು ಚುನಾವಣಾ ರಾಜಕೀಯದಿಂದ ಅಥವಾ ಮತದಾನದ ರಾಜಕೀಯದಿಂದ ಯಾವತ್ತೂ ವಿಮುಖವಾಗಿರಲಿಲ್ಲ. ಗಟ್ಟೋಗಳಲ್ಲಿ ಬಡತನ, ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಬಳಲುತ್ತಿದ್ದರೂ ಚುನಾವಣೆಗಳನ್ನು ಯಾವತ್ತೂ ಬಹಿಷ್ಕರಿಸಲಿಲ್ಲ ಅಥವಾ ಬಹಿಷ್ಕರಿಸಿದ ಉದಾಹರಣೆಗಳಿಲ್ಲ. ಚುನಾವಣೆಗಳು ಬಂದಾಗಲೆಲ್ಲ ಎರಡು, ಮೂರು ನರೆಟಿವ್ ಗಳನ್ನು ಕಟ್ಟಲಾಗುತ್ತದೆ: ಮುಸ್ಲಿಮರು ಸಮಷ್ಟಿಯಾಗಿ ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುತ್ತಾರೆ ಮತ್ತು ಅದೇ ಪಕ್ಷಕ್ಕೆ ಗರಿಷ್ಠವಾಗಿ ಮತದಾನ ಮಾಡುತ್ತಾರೆ. ಎರಡನೆಯದು, ಚುನಾವಣಾ ರಾಜಕಾರಣದಲ್ಲಿ ಅವರ ಗೆಲುವು ಅನಿಶ್ಚಿತ, ಸೋಲು ನಿಶ್ಚಿತ; ಮೂರನೆದಾಗಿ, ಚುನಾವಣಾ ಸಭೆಗಳಲ್ಲಿ ಅವರ ಗುರುತುಗಳ ಪ್ರದರ್ಶನ ಪಕ್ಷಗಳಿಗೆ ಸಕಾರಾತ್ಮಕವಾಗಿಲ್ಲದೆ ನಕಾರಾತ್ಮಕವಾಗಿ ಪ್ರಭಾವಿಸುತ್ತದೆ, ಮತಗಳನ್ನು ವಿಭಜಿಸುತ್ತದೆ, ಸಮುದಾಯಗಳನ್ನು ಧ್ರುವೀಕರಣಗೊಳಿಸುತ್ತದೆ. ಇದು ಕರ್ನಾಟಕಕ್ಕೆ ಸೀಮಿತಗೊಂಡಿರುವ ನರೆಟಿವ್ ಅಲ್ಲ, ರಾಷ್ಟ್ರೀಯ ನರೆಟಿವ್‌ನ ಭಾಗ. ರಾಷ್ಟೀಯ ನರೆಟಿವ್ ಕೆಲವೊಮ್ಮೆ ಮುಸ್ಲಿಮರನ್ನು “ನುಸುಳಿಕೋರರು”, “ದೇಶದ ಸಂಪತ್ತನ್ನು ಕಬಳಿಸುವವರು” ಎಂದೆಲ್ಲ ಚಿತ್ರಿಸುತ್ತದೆ. ಕರ್ನಾಟಕದಲ್ಲೂ ಈ ರೀತಿಯ ನರೆಟಿವ್ಗಳೊಂದಿಗೆ, “ಅವರ ಮತಗಳ ಅವಶ್ಯಕತೆ ಇಲ್ಲ” ಎನ್ನುವ ವಾದವನ್ನು ಮುಂದಿಡುವ ಪ್ರಯತ್ನ ಇತ್ತೀಚಿನ ವರುಷಗಳಲ್ಲಿ ದಟ್ಟವಾಗಿ ಕಂಡು ಬರುತ್ತದೆ. ಇವುಗಳ ನಡುವೆ ಕೆಲವು ವಾಸ್ತವಗಳನ್ನು ಅರಿಯಬೇಕು: ಕರ್ನಾಟಕದ ಸ್ವಾತಂತ್ರ್ಯೋತ್ತರದ ಇತಿಹಾಸದಲ್ಲಿ ಒಂದು ನಿರ್ದಿಷ್ಟ ಪಕ್ಷವನ್ನು ಮುಸ್ಲಿಮರು ಕಾಯಂ ಆಗಿ ಬೆಂಬಲಿಸಲಿಲ್ಲವೆಂಬುದು ದಿಟ. ಅವರು ಸಮಾಜವಾದಿಗಳೊಂದಿಗೆ ಇದ್ದರು, ಕಾಂಗ್ರೆಸ್ನೊಂದಿಗೂ ಇದ್ದರು, ಜನತಾ ಪಕ್ಷ ಅಥವಾ ಜನತಾದಳದೊಂದಿಗೂ ಇದ್ದರು. ಮೋದಿಗೂ ಓಟು ಹಾಕಿದ್ದು ಇದೆ. ದುರಂತವೆಂದರೆ ಮುಸ್ಲಿಮರು ಹತ್ತು ಹಲವು ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದರೂ, ಅವರಿಗೆ ಜನಸಂಖ್ಯೆಯ ಅನುಪಾತದಲ್ಲಿ ಪ್ರಾತಿನಿಧ್ಯ ಸಿಗಲೇ ಇಲ್ಲ. ಇದರಲ್ಲಿ ಹಳೆಯ ಮೈಸೂರು ಸಂಸ್ಥಾನ ನಡವಳಿಕೆಯನ್ನು ಮಾದರಿ ಅನ್ನಬಹುದು. ಪ್ರಜಾ ಮಂಡಲಿ ಮತ್ತು ಸಭೆಯಲ್ಲಿ ಅದು ನಿರ್ದಿಷ್ಟ ಪ್ರಮಾಣದ ಮೀಸಲಾತಿಯನ್ನು ಗೊತ್ತುಪಡಿಸಿತ್ತು. ಏಕೀಕರಣದ ನಂತರ ಈ ರಾಜಕೀಯ ಮೀಸಲಾತಿಯನ್ನು ಕೊನೆಗೊಳಿಸಲಾಯಿತು. ದುರಂತವೆಂದರೆ 1972- 78, 1989- 94, 1999- 2004 ಈ ವರುಷಗಳನ್ನು ಹೊರತು ಪಡಿಸಿದರೆ ಅಸೆಂಬ್ಲಿಯಲ್ಲಿ ಅವರ ಪ್ರತಿನಿಧಿತ್ವ ಎರಡಂಕಿಯನ್ನು ಯಾವತ್ತೂ ದಾಟಲಿಲ್ಲ. ಇದೇ ಸ್ಥಿತಿ ಸರಕಾರದ ರಚನೆಯಲ್ಲೂ ಕಂಡು ಬರುತ್ತದೆ. ವಿರೋಧಾಭಾಸವೆಂದರೆ ರಚನೆಗೊಂಡ ಸರಕಾರಗಳು ಸಮುದಾಯದ ಬೆಳವಣಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದವು, ಆದರೆ ಪ್ರತಿನಿಧಿತ್ವದ ಪ್ರಶ್ನೆ ಬಂದಾಗಲೆಲ್ಲ ದೀರ್ಘ ಮೌನಕ್ಕೆ ಶರಣಾದವು. ಅವರಿಗಿರುವ ಒಂದು ಗ್ಯಾರಂಟಿ ಖಾತೆಯೆಂದರೆ “ವಕ್ಫ್ ಮತ್ತು ಹಜ್”, ಪ್ರಮುಖ ಖಾತೆಗಳು ಸಿಗುವುದೇ ಇಲ್ಲ. ಇವುಗಳ ನಡುವೆ ಕೆಲವು ಸರಕಾರದ ಮತ್ತು ಪಕ್ಷಗಳ ದಿಟ್ಟ ನಡೆಗಳು ಸಮುದಾಯದ ಬೆಳವಣಿಗೆಗೆ ಸ್ವಲ್ಪಮಟ್ಟಿಗೆ ಸಹಾಯ ಮಾಡಿದರೂ, ಪ್ರಬಲವಾದ ಮತೀಯ/ದೇಸಿಯ ನರೆಟಿವ್ಗಳು ಆತಂಕವನ್ನು, ಅಭದ್ರತೆಯನ್ನು ಕಡಿಮೆ ಮಾಡಲಿಲ್ಲ. ಆದಕಾರಣ ಸ್ವಂತಿಕೆಯ ಕಟ್ಟುವಿಕೆ ಪರಿಪೂರ್ಣವಾಗಿಲ್ಲ ಎನ್ನಬಹುದು. ದೇವರಾಜ್ ಅರಸ್ ಜಾರಿಗೆ ತಂದ ಮೀಸಲಾತಿ, ವೀರಪ್ಪ ಮೊಯ್ಲಿ ಮತ್ತು ದೇವೇಗೌಡರು ಮಾಡಿದ ಪ್ರವರ್ಗ ವರ್ಗೀಕರಣ, ಸಿದ್ಧರಾಮಯ್ಯನವರ ಅಹಿಂದ ಚಳವಳಿ ಇತ್ಯಾದಿಗಳು ಅಪರಿಪೂರ್ಣ ಸ್ವಂತಿಕೆಯ ಕಟ್ಟುವಿಕೆಗೆ ಒಂದಿಷ್ಟು ಪುಷ್ಟಿ ನೀಡಿದವು.

ಈ ಚುನಾವಣಾ ರಾಜಕಾರಣದಲ್ಲಿ ಗ್ರಹಿಕಾ ಸಾಮಾಜಿಕ ಸಮೀಕರಣವನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಮರು ಈಗ ಅಹಿಂದ ಸಾಮಾಜಿಕ ಸಮೀಕರಣದ ಭಾಗ. ಇದು ಹೊಸತೇನಲ್ಲ. ಬ್ರಾಹ್ಮಣೇತರ ಚಳವಳಿ ಸಂದರ್ಭದಲ್ಲಿ ಬ್ರಾಹ್ಮಣೇತರ ಸಮೀಕರಣದ ಭಾಗವಾಗಿದ್ದರು. 1970ರ ದಶಕದಲ್ಲಿ ದೇವರಾಜ ಅರಸ್ ಮುಖ್ಯಮಂತ್ರಿಯಾಗಿರುವಾಗ ಹಿಂದುಳಿದ ವರ್ಗ ಮತ್ತು ದಲಿತ ಸಮೀಕರಣದ ಭಾಗವಾಗಿದ್ದರು. 1990ರಲ್ಲಿ ದೇವೇಗೌಡರ ಅವಧಿಯಲ್ಲಿ ಅವರು ಒಕ್ಕಲಿಗರೊಂದಿಗೆ ಜೊತೆಗೂಡಿ, ಮುಸ್ಲಿಂ-ಒಕ್ಕಲಿಗರು-ಹಿಂದುಳಿದ ವರ್ಗಗಳು-ದಲಿತರು ಎಂಬ ಹೊಸ ಸಮೀಕರಣದ ಭಾಗವಾಗಿದ್ದರು. ತದನಂತರ ಈ ಸಮೀಕರಣ ಬದಲಾಗಿ “ಅಹಿಂದ”ವಾಗಿ ಪರಿವರ್ತಿತವಾಯಿತು. ಎರಡು ಸಲ- 2013/ 2023ರಲ್ಲಿ ಮುಸ್ಲಿಮರು ಗಟ್ಟಿಯಾಗಿ “ಅಹಿಂದ”ದ ಭಾಗವಾದರು. ಮೂಲತ: ನರೆಟಿವ್ಗಳು, ಮತೀಯ ಧ್ರುವೀಕರಣದ ಯತ್ನಗಳು, ಸೃಷ್ಟಿಸಿದ ಆತಂಕಗಳು, ತಲ್ಲಣಗಳು, ಅದರೊಂದಿಗೆ ಆಡಳಿತ ವಿರೋಧಿ ಅಲೆ, ಬೆಲೆ ಏರಿಕೆ ಇತ್ಯಾದಿ ಈ ನಿಟ್ಟಿನಲ್ಲಿ ಕೆಲಸ ಮಾಡಿತ್ತು. ಸದ್ಯಕ್ಕೆ ಅಭದ್ರತೆಯ ತೀಕ್ಷ್ಣತೆ ಸ್ವಲ್ಪ ಕಡಿಮೆಯಾದರೂ, ಆಗಾಗ್ಗೆ ಕಟ್ಟುತ್ತಿರುವ ನರೆಟಿವ್‌ಗಳು ಅಭದ್ರತೆ, ಆತಂಕವನ್ನು ಜೀವಂತವಾಗಿರಿಸಿದೆ. ಇದರ ಒಂದು ಫಲಶ್ರುತಿಯೆಂಬಂತೆ ಹೆಚ್ಚುತ್ತಿರುವ ಮುಸ್ಲಿಮರ ಗೆಟ್ಟೋಗಳ ಸಂಖ್ಯೆ.

ಮೂಲತ: ಗೆಟ್ಟೋಗಳೆಂದರೆ ಕೊಳಚೆ, ಕೊಂಪೆ, ದಲಿತರು ಮತ್ತು ಮುಸ್ಲಿಮರಿರುವ ಪ್ರದೇಶ, ಬಡಜನರಿರುವ, ಮೂಲಭೂತವಾದಿಗಳು, ಕ್ರಿಮಿನಲ್ ಗಳಿರುವ ಪ್ರದೇಶವೆಂದು ನರೆಟಿವ್ಗಳನ್ನು ತೇಲಿ ಬಿಡಲಾಗುತ್ತದೆ. ಕರ್ನಾಟಕದಲ್ಲಿ ಗೆಟ್ಟೋವಿಕರಣದ ಸಂಖ್ಯೆ ಹೆಚ್ಚಾದದ್ದು 1980ರ ದಶಕದ ನಂತರ, ಅಯೋಧ್ಯಾ ಘಟನೆಯ ನಂತರವೆಂದೇ ಹೇಳಬೇಕು. ಅದರ ಪೂರ್ವದಲ್ಲಿ ಮುಸ್ಲಿಂ ಬಾಹುಳ್ಯ ಪ್ರದೇಶಗಳಿರಲಿಲ್ಲವೆಂದಲ್ಲ. ಮೈಸೂರು ಅರಸರು ಮುಸಲ್ಮಾನರಿಗಾಗಿಯೆ ಜಾಗಗಳನ್ನು ಮೀಸಲಿಟ್ಟು ಬಡಾವಣೆಗಳನ್ನು ಕಟ್ಟಲು ಅನುವು ಮಾಡಿಕೊಟ್ಟಿದ್ದರು. ಈ ಬಡಾವಣೆಗಳು ಎಂದೂ ಕೂಡ ಅಭದ್ರತೆಯ ಕೋಟೆಯಾಗಿರಲಿಲ್ಲ. ಆದಕಾರಣ ಈ ಪ್ರದೇಶಗಳು ಕೋಮು/ಮತ ಗಲಭೆಗಳ ನರೆಟಿವ್ಗಳಿಗೆ ಅಥವಾ ಸಂಕಥನಗಳಿಗೆ ಬಲಿಯಾಗಲಿಲ್ಲ. 1980ರ ದಶಕದ ನಂತರ ಹೊಸ ಪ್ರಕ್ರಿಯೆ ಆರಂಭಗೊಂಡಿತ್ತು. ನರೆಟಿವ್‌ಗಳು ಬದಲಾದವು. ಕೋಮು ಅಥವಾ ಮತಗಳ ನಡುವಿನ ಸಂಘರ್ಷಗಳ ಸಂಖ್ಯೆ ಮತ್ತು ವ್ಯಾಪ್ತಿ ವಿಸ್ತರಿಸಿದಂತೆಲ್ಲ ಗೆಟ್ಟೋಗಳ ಸಂಖ್ಯೆಗಳು ಗಣನೀಯವಾಗಿ ಹೆಚ್ಚಾದವು, ಮುಸ್ಲಿಮೇತರ ಬಡಾವಣೆಗಳಲ್ಲಿದ್ದ ಮುಸಲ್ಮಾನರು, ಮುಸ್ಲಿಂ ಬಾಹುಳ್ಯ ಪ್ರದೇಶಕ್ಕೆ ತಮ್ಮ ವಾಸಸ್ಥಾನವನ್ನು ಬದಲಾಯಿಸಲು ಆರಂಭಿಸಿದರು. ಆಹಾರ ಭದ್ರತೆಗಿಂತಲೂ ಸಮಷ್ಟಿ ಸಮುದಾಯದ ಬದುಕಿನ ಭದ್ರತೆ ಇಲ್ಲಿ ಮುಖ್ಯ ವಿಷಯವಾಯಿತು. ಕೊಳಚೆ ಕೊಂಪೆ ಪ್ರದೇಶವೆಂದು ಹೇಳುತ್ತಿದ್ದ ಪ್ರದೇಶಗಳ ಅಂಚಿನಲ್ಲಿ ಮಧ್ಯಮ ಮತ್ತು ಶ್ರೀಮಂತ ಮುಸಲ್ಮಾನರು ನೆಲೆಗೊಂಡರು, ಮಂಗಳೂರಿನಂತಹ ಜಿಲ್ಲೆಯ ಕೇಂದ್ರ ಸ್ಥಾನಗಳಲ್ಲಿ ಮುಸ್ಲಿಂ-ಮುಸ್ಲಿಮೇತರ ಅಪಾರ್ಟ್‌ಮೆಂಟ್, ಫ್ಲಾಟ್ಗಳು ಎಂಬ ಬೈನರಿಗಳು ಹುಟ್ಟಿಕೊಂಡವು. ಇವು ಹೊಸ ರೂಪದ-ಅಪಾರ್ಟ್‌ಮೆಂಟ್- ಗೆಟ್ಟೋಗಳು. ಈ ಗೆಟ್ಟೋಗಳು ಕೆಲವು ಶಿಕ್ಷಣ ಸಂಸ್ಥೆಗಳನ್ನು ಬಿಡಲಿಲ್ಲ. ಮುಸ್ಲಿಂ ಮಕ್ಕಳಿಗಾಗಿಯೇ ಸೀಮಿತಗೊಂಡ, ಅರೆ ಆಧ್ಯಾತ್ಮಿಕ, ಅರೆ ಆಧುನಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಇವುಗಳ ಮಧ್ಯೆ ಭಾಷಾ ಕಲಿಕೆ ಇಂಗ್ಲಿಷ್, ಉರ್ದು, ಅರೆಬಿಕ್‌ಗೆ ಸೀಮಿತಗೊಂಡವು. ಇದು ಒಂದು ರೀತಿಯ ದ್ವಂದ್ವತೆಯನ್ನು ಎತ್ತಿತೋರಿಸುತ್ತದೆ: ಒಂದೆಡೆ ಶಿಕ್ಷಣ ರಂಗದಲ್ಲಿ ವಿಶ್ವದ್ಯಾನಿಲಯವನ್ನು ಕಟ್ಟುವಷ್ಟು ಮುಂದುವರಿದರೆ ಮತ್ತೊಂದೆಡೆ ಆಧಾತ್ಮಿಕ ಮತ್ತು ಆಧುನಿಕ ಶಿಕ್ಷಣ ನೀಡುವ ಮಾಧ್ಯಮಿಕ ಹಾಗೂ ಪ್ರಾಥಮಿಕ ಸಂಸ್ಥೆಗಳು ಸಾಂಸ್ಕೃತಿಕ- ಬೌದ್ಧಿಕ ಗೆಟ್ಟೋವಿಗೂ ಕಾರಣವಾದವು. ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿಯಿತು.

ಇದನ್ನೂ ಓದಿರಿ: ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?

ಇಷ್ಟೆಲ್ಲ ನರೆಟಿವ್, ಯತ್ನಗಳು, ಆತಂಕ, ಅಭದ್ರತೆಗಳ ನಡುವೆ ಕರ್ನಾಟಕ ಯಾಕೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ತರಹ ಪರಿವರ್ತನೆಗೊಂಡಿಲ್ಲ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಕರ್ನಾಟಕದ ಇತಿಹಾಸವನ್ನು ಕೆದಕಬೇಕು. ಕರ್ನಾಟಕಕ್ಕೆ ಭಾರತ ವಿಭಜನೆಯ ನೆನಪುಗಳಿಲ್ಲ, ನೋವುಗಳಿಲ್ಲ ಅಥವಾ ಅದರ ವೈಯಕ್ತಿಕ ಅನುಭವಗಳಿಲ್ಲ; ಕರ್ನಾಟಕದಲ್ಲಿ ನೆಲೆಯೂರಿದ ಸಂಕರ ಸಂಸ್ಕೃತಿ (ಇದರಲ್ಲಿ ತತ್ವ ಪದಕಾರರು, ಸೂಫಿ ದರ್ಗಾಗಳು, ವಚನ ಚಳವಳಿ, ದಾಸ ಚಳವಳಿ) ಮತ್ತು ಅದರೊಂದಿಗೆ ಬಹುತ್ವ ಬದುಕನ್ನು ಕಂಡುಕೊಂಡಿದ್ದ ಜನಸಮುದಾಯ; ಮೂರನೆದಾಗಿ,ಉತ್ತರ ಭಾರತದ ಮಧ್ಯಕಾಲೀನದ ಇತಿಹಾಸದಲ್ಲಿ ನಡೆದ ಘಟನಾವಳಿಗಳಾಗಲಿ, ಅಥವಾ ಆಳ್ವಿಕೆಯ ಪುನರಾವರ್ತನೆ ಕರ್ನಾಟಕದಲ್ಲಿ ಆಗದಿರುವುದು, ಕರ್ನಾಟಕದ ವೈವಿಧ್ಯಮಯ ಸಾಮಾಜಿಕ ಚಳವಳಿಗಳು ಮತ್ತು ಬಹುರೂಪಿ ಸಂಸ್ಕೃತಿ, ಕರ್ನಾಟಕದಲ್ಲಿ ಪ್ರಬಲವಾಗಿರುವ ಜಾತಿಯಾಧಾರಿತ  ಐಡೆಂಟಿಟಿಗಳು; ಕೊನೆಯದಾಗಿ ಉದಾರವಾದದ ನೆಲೆಗಟ್ಟಿನ ಸಹನಶೀಲ ಮತ್ತು ಎಲ್ಲರನ್ನು ಒಳಗೊಳ್ಳುವಿಕೆಯನ್ನು ಪ್ರತಿಪಾದಿಸಿದ ಮೈಸೂರು ಸಂಸ್ಥಾನ ಇತ್ಯಾದಿಗಳು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡಿವೆ. ಕರ್ನಾಟಕವನ್ನು ಕೆಲವೇ ದಿನಗಳಲ್ಲಿ ಅಥವಾ ತತ್‌ಕ್ಷಣವೇ ಉತ್ತರ ಪ್ರದೇಶದ ತರಹ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಲು ಅಸಾಧ್ಯ. ಅದೇನೇ ಇದ್ದರೂ ಮುಸ್ಲಿಮರು ನರೆಟಿವ್‌ಗಳಿಂದ ಮುಕ್ತಿ ಹೊಂದುವುದಿಲ್ಲ. ಹೊಸ ಹೊಸ ನರೆಟಿವ್ಗಳಿಗೆ ಬಲಿಪಶುಗಳಾಗುತ್ತಾ ಹೋಗುತ್ತಾರೆ. ಆತಂಕ, ಅಭದ್ರತೆ ನಡುವೆ ಒಟ್ಟಾರೆ ಬಡತನದ ಸಮುದಾಯವಾಗಿಯೇ ಉಳಿಯುತ್ತಾರೆ.

Assadi12
ಮುಜಾ‍ಫರ್ ಅಸ್ಸಾದಿ
+ posts

ಮುಜಾಫರ್ ಅಸ್ಸಾದಿಯವರು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿಂತಕರಾಗಿ ಗುರುತಿಸಿಕೊಂಡವರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮುಜಾ‍ಫರ್ ಅಸ್ಸಾದಿ
ಮುಜಾ‍ಫರ್ ಅಸ್ಸಾದಿ
ಮುಜಾಫರ್ ಅಸ್ಸಾದಿಯವರು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿಂತಕರಾಗಿ ಗುರುತಿಸಿಕೊಂಡವರು

2 COMMENTS

  1. ಏನೇ ಇದ್ದರೂ ವಿಶ್ವದೆಲ್ಲೆಡೆ ಆತಂಕವಾದ ಹಬ್ಬಿಸುತ್ತಿರುವವರು, ಎಲ್ಲರೊಳಗೆ ಒಂದಾಗಿ ದೇಶಕ್ಕೆ ಗೌರವ ಸಲ್ಲಿಸಲು ಹಿಂದೇಟು ಹಾಕುವವರು, ಜನಸಂಖ್ಯಾ ನಿಯಂತ್ರಣ ಇಲ್ಲದೆ ದೇಶದ ಮೇಲೆ ಹೊರೆಯಾಗುವವರು, ಹೆಣ್ಣ್ಣುಗಳಿಗೆ ಬುರ್ಖಾ ಹಾಕಿ ಬಂಧಿಸುವವರು ಇಸ್ಲಾಮೀಯರು.

  2. ಕೆಲವು ಸತ್ಯಗಳನ್ನ ನರೆಟಿವ್ ಅಂತ ನೀವು ನರೇಟ್ ಮಾಡುತ್ತಿದ್ದೀರಿ. ಇಸ್ಲಾಮೀಯರಿಂದ ಆದಂತಹ ಇಂದಿಗೂ ಆಗುತ್ತಿರುವ ಶೋಷಣೆಗಳು ನಿಮಗೆ ಕಾಣೋದಿಲ್ಲ. ದೇಶಕ್ಕೆ 1 ರೂಪಾಯಿ ಕೊಡುಗೆ ನೀಡಿ 1000 ರೂಪಾಯಿಯನ್ನು ಕೊಡುಗೆಯಾಗಿ ಹಿಂತಿರುಗಿ ಪಡೆಯುವ ಸಮಾಜ ಎಂದಿಗೂ ಆರ್ಥಿಕವಾಗಿ ದುರ್ಬಲವಾಗಿಯೇ ಉಳಿಯುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X