ಸ್ವಾಮೀಜಿಯವರ ಹೇಳಿಕೆಗಳಲ್ಲಿ ಮಾದಿಗ ಸಮುದಾಯವನ್ನು ಕೋಮು ಹತಾರವಾಗಿಸುವ ಸೂಚನೆಗಳಿವೆ ಎಂದು ಸಮುದಾಯ ಭಾವಿಸುವಂತಾಗಿರುವುದಕ್ಕೆ ಐತಿಹಾಸಿಕ ಕಾರಣಗಳಿವೆ ಎಂಬುದನ್ನು ಸ್ವಾಮೀಜಿ ಅಲ್ಲಗಳೆಯಬಾರದು
ಹೊಸಪೇಟೆಯಲ್ಲಿ ಸಾಮಾಜಿಕ ಸಾಮರಸ್ಯ ವೇದಿಕೆ ಹೆಸರಿನ ಸಂಸ್ಥೆಯಿಂದ ಆಯೋಜನೆಯಾಗಿದ್ದ ‘ಕರ್ನಾಟಕ ಉತ್ತರಪ್ರಾಂತ ಕಾರ್ಯಕರ್ತರ ಸಮಾವೇಶ’ದ ಉದ್ಘಾಟನೆಯಲ್ಲಿ ಮಾತನಾಡಿರುವ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ನೀಡಿರುವ ಹೇಳಿಕೆಗಳು ಆತಂಕಕಾರಿಯಾಗಿಯೂ ಆಘಾತಕಾರಿಯಾಗಿಯೂ ಕಾಣಿಸುತ್ತಿವೆ.
‘ಜಾತಿ ತಾರತಮ್ಯ, ಮತಾಂತರದ ಬಗ್ಗೆ ಎಷ್ಟೇ ಹೇಳಿದರೂ ಅರ್ಥವಾಗುತ್ತಿಲ್ಲ. ಇಂತಹ ನಿರ್ಲಕ್ಷ್ಯ ಮುಂದುವರಿದರೆ ಹಸಿರು ಬಾವುಟ ಹಾರುವುದು ಮೊದಲು ಮಠಗಳ ಮೇಲೆಯೇ ಎಂಬುದನ್ನು ಮರೆಯಬಾರದು’ ಎಂದು ಸ್ವಾಮೀಜಿ ಪ್ರಚೋದನಾಕಾರಿ ಮಾತನ್ನು ಆಡಿದ್ದಾರೆ.
ಮುಂದುವರಿದು, ‘ಹಿಂದೂಗಳಲ್ಲಿ ಜಾತಿಗಳಿರಲಿ, ಅವು ಮನೆಯೊಳಗೆಯೇ ಇರಬೇಕು, ಹೊರಗೆ ಬಂದಾಗ ನಾವೆಲ್ಲ ಒಂದು ಎಂಬ ಭಾವನೆ ಮೂಡಿರಬೇಕು. ಅಂತಹ ಭಾವನೆ ಸೃಷ್ಟಿಸಲು ನಾವು ವಿಫಲರಾಗಿರುವುದರಿಂದಲೇ ಮತಾಂತರ ಜಾಸ್ತಿಯಾಗಿದೆ. ಅಸ್ಪೃಶ್ಯರು, ತೀರಾ ಹಿಂದುಳಿದವರು, ದಲಿತರು ಮತಾಂತರ ಆಗುತ್ತಿದ್ದಾರೆಂದು ಹೇಳುವ ಸ್ಥಿತಿ ಈಗ ಇಲ್ಲ. ಸಮಾಜದ ಮುಖ್ಯ ವಾಹಿನಿಯಲ್ಲಿರುವ ಮೇಲ್ಜಾತಿ ಎನಿಸಿಕೊಂಡವರೂ ಈಗ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಏಕೆ ಹೀಗಾಗುತ್ತಿದೆ. ಇದಕ್ಕೆ ಕಾರಣವೇನು? ಯಾರ ಮೇಲೆ ಇದರ ಹೊಣೆ ಹಾಕಬೇಕೆಂದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಹೇಳುತ್ತಾ ಅಸ್ಪೃಶ್ಯತೆಯ ಆಚರಣೆ ಈಗಲೂ ಅಲ್ಲಲ್ಲಿ ಜೀವಂತವಾಗಿದೆ ಎಂದೂ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
‘ಸಾಮರಸ್ಯ ನಡಿಗೆಯನ್ನು ನಾನು ನಡೆಸುತ್ತಲೇ ಇದ್ದೇನೆ. ಎಷ್ಟೇ ಟೀಕೆ ಬಂದರೂ ನಾನು ಅದನ್ನು ನಿಲ್ಲಿಸುವುದಿಲ್ಲ. ನನಗೆ ಈ ವಿಚಾರದಲ್ಲಿ ಉಡುಪಿ ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶ ತೀರ್ಥ ಶ್ರೀಗಳೇ ಪ್ರೇರಣೆ. ರಾಷ್ಟ್ರೀಯತೆ, ಧರ್ಮ, ಮಠ, ಪೀಠ ವಿಚಾರ ಬಂದಾಗ ರಾಷ್ಟ್ರೀಯತೆಯೇ ನನಗೆ ಮುಖ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ಅಸ್ಪೃಶ್ಯತೆ ಕುರಿತು ಕಳವಳ ವ್ಯಕ್ತಪಡಿಸುತ್ತಿರುವುದು ಸ್ವಾಗತಾರ್ಹ. ಆದರೆ ಅವರು ಆಡಿರುವ ಕೆಲವು ಮಾತುಗಳು ಪ್ರಶ್ನಾರ್ಹವಾಗಿವೆ. “ಮತಾಂತರ ಮುಂದುವರಿದರೆ, ಮಠಗಳ ಮೇಲೆ ಹಸಿರು ಬಾವುಟ ಹಾರಿಸುತ್ತಾರೆ” ಎಂದು ಹೇಳಿರುವುದು ಏತಕ್ಕೆ? ಹಸಿರು ಬಾವುಟವು ಸಾಮಾನ್ಯವಾಗಿ ಮುಸ್ಲಿಮರನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ ಇಸ್ಲಾಂಗೆ ಮತಾಂತರ ಮಾಡಿಕೊಳ್ಳುವ ಜಾಲ ಹಬ್ಬಿದೆ ಎಂದು ಸ್ವಾಮೀಜಿ ಹಸಿಹಸಿ ಸುಳ್ಳನ್ನು ಹೇಳುತ್ತಿದ್ದಾರಾ ಎಂದು ಪ್ರಶ್ನಿಸಬೇಕಿದೆ.
ಯಾವ ಸ್ವಾಮೀಜಿ, ಯಾವ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಬಹಳ ಮುಖ್ಯ. ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಇತ್ತೀಚಿನ ದಿನಗಳಲ್ಲಿ ಸಂಘಪರಿವಾರದ ವೇದಿಕೆಗಳಲ್ಲಿ ಗುರುತಿಸಿಕೊಂಡು ಭಾರೀ ಟೀಕೆಗೆ ಒಳಗಾಗಿದ್ದಾರೆ. ಸಮುದಾಯದ ಹೋರಾಟಗಾರರು, ‘ಸಂವಿಧಾನವನ್ನೇ ಬದಲಿಸುವ ಮುಕ್ತ ಅಜೆಂಡಾದ ಮಾತುಗಳನ್ನಾಡಿರುವ ಪಕ್ಷ ಮತ್ತು ಸಿದ್ಧಾಂತದ ಜೊತೆ ಸ್ವಾಮೀಜಿ ಗುರುತಿಸಿಕೊಂಡು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಗೆ ಮಾದಾರ ಚೆನ್ನಯ್ಯ ಸ್ವಾಮೀಜಿ ದ್ರೋಹ ಎಸಗುತ್ತಿದ್ದಾರೆ, ಸ್ವಾಮೀಜಿ ಪೀಠವನ್ನು ತೊರೆದು, ಬಿಜೆಪಿಗೆ ಸೇರಿಕೊಳ್ಳಲಿ’ ಎಂಬ ಆಗ್ರಹಗಳನ್ನು ಇತ್ತೀಚೆಗೆ ಮಾಡಿದ್ದಾರೆ. ಈ ಹೊತ್ತಿನಲ್ಲೇ ಸ್ವಾಮೀಜಿ ‘ಹಸಿರು’ ಬಣ್ಣವನ್ನು ಪ್ರಸ್ತಾಪಿಸಿ ಮಾತನಾಡಿರುವುದು ಸಮುದಾಯದ ಹೋರಾಟಗಾರರ ಆತಂಕವನ್ನು ಹೆಚ್ಚಿಸುವಂತೆಯೂ ಇದೆ. ಮಾದಿಗ ಸಮುದಾಯದ ಸ್ವಾಮೀಜಿಯೊಬ್ಬರ ಬಾಯಿಯಲ್ಲಿ ಈ ಮಾತು ಬರುವುದರ ಮೂಲಕ ಮಾದಿಗ ವರ್ಸಸ್ ಮುಸ್ಲಿಂ ಎಂದು ಬಿಂಬಿಸುವ ಅಪಾಯವಿದೆ ಎಂಬುದನ್ನು ಮರೆಯಬಾರದು. ಹೀಗಾಗಿ ಸ್ವಾಮೀಜಿಯಾದವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾರನ್ನೂ ನೋಯಿಸದ, ಯಾರಿಗೂ ದ್ರೋಹ ಬಗೆಯದ, ಅತ್ಯಂತ ಹಿಂದುಳಿದಿರುವ ಸಮುದಾಯದೊಳಗೆ ದ್ವೇಷ ಮಾತುಗಳು ಬರುವುದು ಭವಿಷ್ಯದ ದೃಷ್ಟಿಯಲ್ಲಿ ಒಳಿತು ಉಂಟು ಮಾಡುವುದಿಲ್ಲ.
ಪೇಜಾವರ ಮಠದ ವಿಶ್ವೇಶ ತೀರ್ಥರು ತಮಗೆ ಮಾದರಿ ಎಂದಿದ್ದಾರೆ ಮಾದಾರ ಚೆನ್ನಯ್ಯ ಸ್ವಾಮೀಜಿ. ಆದರೆ ವಿಶ್ವೇಶ ತೀರ್ಥರು ಹಿಂದೊಮ್ಮೆ ಟಿ.ವಿ. ಸಂದರ್ಶನ ವೇಳೆ, “ಹಿಂದುತ್ವ ಬೇರೆ, ಬ್ರಾಹ್ಮಣತ್ವ ಬೇರೆ. ಹಿಂದುತ್ವ ಎಲ್ಲರಿಗೂ ಬ್ರಾಹ್ಮಣತ್ವ ಬ್ರಾಹ್ಮಣರಿಗೆ ಮಾತ್ರ” ಎಂದಿದ್ದರು. ಅಂದರೆ ಹಿಂದೂ ನಾವೆಲ್ಲ ಒಂದು ಎನ್ನುವುದು ಕೇವಲ ಬಾಯಿಮಾತಿನ ಪ್ರಚಾರ. ವಾಸ್ತವದಲ್ಲಿ ಇಲ್ಲಿರುವುದು ಜಾತಿ ತರತಮಗಳೆಂಬುದನ್ನು ಮುಚ್ಚಿಡಲಾಗದು. ಹಿಂದುತ್ವಕ್ಕಾಗಿ ಹೋರಾಡುವ ಸಂಘಪರಿವಾರವು ಎಂದಾದರೂ ಜಾತಿ ದೌರ್ಜನ್ಯಗಳನ್ನು ಖಂಡಿಸಿ, ದಲಿತರ ಮೇಲಾದ ಭೀಕರ ಹಲ್ಲೆಗಳನ್ನು ಖಂಡಿಸಿ ಹೇಳಿಕೆ ಕೊಟ್ಟಿದ್ದನ್ನು ಮಾದಾರ ಚನ್ನಯ್ಯ ಸ್ವಾಮೀಜಿ ನೋಡಿದ್ದಾರಾ?
ಡಾ.ಬಿ.ಆರ್.ಅಂಬೇಡ್ಕರ್ ಅವರು ಆರಂಭದ ದಿನಗಳಲ್ಲಿ ದೇವಾಲಯ ಪ್ರವೇಶ, ಸಾರ್ವಜನಿಕ ಕೆರೆಗಳಲ್ಲಿ ನೀರು ಕುಡಿಯುವ ಹೋರಾಟಗಳನ್ನು ನಡೆಸಿದ್ದರು. ಆದರೆ ಅಂದಿನ ಬ್ರಾಹ್ಮಣಶಾಹಿ ಕಾಂಗ್ರೆಸ್ ಮುಖಂಡರು ಮತ್ತು ಹಿಂದೂ ಮಹಾಸಭಾದಂತಹ ಸನಾತನಿಗಳು ಅಂಬೇಡ್ಕರ್ ಅವರ ವಿರುದ್ಧ ಕಿಡಿಕಾರಿದರು. ದಲಿತರ ಹೋರಾಟಗಳನ್ನು ಹತ್ತಿಕ್ಕಿದರು. ಹಲ್ಲೆಗಳನ್ನು ನಡೆಸಿದರು. ನಾವು ಎಲ್ಲರಂತೆ ಮನುಷ್ಯರೆಂಬುದನ್ನು ಈ ಜಗತ್ತಿಗೆ ತೋರಿಸಲು ದೇವಾಲಯ ಪ್ರವೇಶ ಚಳವಳಿಯನ್ನು ಅಂಬೇಡ್ಕರ್ ಬೆಂಬಲಿಸಿದ್ದರು. ಆದರೆ ಇಂತಹ ಕ್ರಮಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂದು ಭಾವಿಸಿದ ಅವರು ಕೊನೆಗೆ, “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲ” ಎಂದು ಘೋಷಿಸಿದರು. ಬೌದ್ಧಧಮ್ಮಕ್ಕೆ ಮರಳಿದರು. ಅಂಬೇಡ್ಕರ್ ಅವರು ತಮ್ಮ ಬಿಡುಗಡೆಯ ಹಾದಿಯಾಗಿ ಕಂಡುಕೊಂಡಿದ್ದು, ಸಾಂಸ್ಕೃತಿಕ ಗುರುತಾಗಿ ಪ್ರತಿಪಾದಿಸಿದ್ದು- ಬೌದ್ಧಧಮ್ಮವನ್ನು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಅಂಬೇಡ್ಕರ್ ಅವರು ತೋರಿದ ಬಹುದೊಡ್ಡ ಬಿಡುಗಡೆಯ ಮಾರ್ಗದ ಕುರಿತು ಮಾದಾರ ಚೆನ್ನಯ್ಯ ಸ್ವಾಮೀಜಿ ಏನು ಹೇಳುತ್ತಾರೆ? ಅದನ್ನೂ ಮತಾಂತರ ಎನ್ನುತ್ತಾರೆಯೇ? ವಾಸ್ತವದಲ್ಲಿ ಇಂದು ದೊಡ್ಡ ಮಟ್ಟಿಗಿನ ದಲಿತರು ಇಸ್ಲಾಮಿಗೋ, ಕ್ರಿಶ್ಚಿಯಾನಿಟಿಗೋ ಹೋಗುತ್ತಿಲ್ಲ. ಅಂಬೇಡ್ಕರ್ ವಿಚಾರಧಾರೆಗಳನ್ನು ಓದಿಕೊಂಡ ಹೊಸ ತಲೆಮಾರು- ‘ಬೌದ್ಧಧಮ್ಮ’ಕ್ಕೆ ಮರಳುತ್ತಾ, ತಮ್ಮ ಮನೆಗಳ ಮೇಲೆ ನೀಲಿ ಬಾವುಟ ಹಾರಿಸುತ್ತಿದ್ದಾರೆ. ಇದನ್ನು ಸ್ವಾಮೀಜಿ ಹೇಗೆ ನೋಡುತ್ತಾರೆ? ಅಷ್ಟಕ್ಕೂ ತಮಗೆ ಬೇಕಾದ ಧರ್ಮವನ್ನು ಆಯ್ದುಕೊಂಡು ಆಚರಿಸುವುದು ಈ ದೇಶದ ನಾಗರಿಕನಿಗೆ ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕು. ಇದಕ್ಕೆ ವಿರುದ್ಧವಾಗಿ ಮತಾಂತರವನ್ನು ತಡೆಯುವ ಕಾಯ್ದೆಯನ್ನು ತರುವುದು, ವ್ಯಕ್ತಿಯು ಸ್ವ ಇಚ್ಛೆಯಿಂದ ಮತಾಂತರ ಆಗುವುದನ್ನು ವಿರೋಧಿಸುವುದು ಸಂವಿಧಾನ ಬಾಹಿರ ಕೃತ್ಯವಲ್ಲವೇ?
ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮತೀಯವಾದಿ ಸಿದ್ಧಾಂತಕ್ಕೆ ಪೂರಕವಾಗಿ ಮಾತನಾಡುವುದು, ಈವರೆಗೆ ದಲಿತ ಸಮುದಾಯ ಬೆಳೆಸಿಕೊಂಡು ಬಂದಿರುವ ಸೌಹಾರ್ದತೆ, ಸಮಾನತೆ, ಪ್ರೀತಿ, ಬಾಂಧವ್ಯಕ್ಕೆ ಹಾಕುವ ಕೊಡಲಿ ಪೆಟ್ಟಾಗುತ್ತದೆ. ಗುರುವಾದವರು ಸಮುದಾಯವನ್ನು ಒಳ್ಳೆಯ ದಿಕ್ಕಿನತ್ತ ಕರೆದೊಯ್ಯಬೇಕಾಗುತ್ತದೆ. ಈ ರೀತಿಯ ವಿಷಕಾರಿ ಹೇಳಿಕೆಗಳನ್ನು ನೀಡುವುದು ಅಪಾಯಕಾರಿಯಾಗುತ್ತದೆ. ಸಂಘಪರಿವಾರದ ಕಾರ್ಯಸೂಚಿಗಳನ್ನು ಬಲ್ಲ ಅನೇಕ ಚಿಂತಕರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಗುಜರಾತ್‌ನಲ್ಲಿ 2002ರಲ್ಲಾದ ಕೋಮುಗಲಭೆಯನ್ನು ಉಲ್ಲೇಖಿಸುವ ಹೋರಾಟಗಾರರು, “ಈ ಹಿಂಸಾಚಾರದಲ್ಲಿ ಜೈಲಿಗೆ ಹೋದ ಬಹುತೇಕರು ದಲಿತರು. ಆದರೆ ಪ್ರಚೋದಿಸಿದವರು ಮಾತ್ರ ಬಚಾವಾದರು” ಎನ್ನುತ್ತಾರೆ. ಸ್ವಾಮೀಜಿಯವರ ಹೇಳಿಕೆಗಳಲ್ಲಿ ಮಾದಿಗ ಸಮುದಾಯವನ್ನು ಕೋಮು ಹತಾರವಾಗಿಸುವ ಸೂಚನೆಗಳಿವೆ ಎಂದು ಸಮುದಾಯ ಭಾವಿಸುವಂತಾಗಿರುವುದಕ್ಕೆ ಐತಿಹಾಸಿಕ ಕಾರಣಗಳಿವೆ ಎಂಬುದನ್ನು ಸ್ವಾಮೀಜಿ ಅಲ್ಲಗಳೆಯಬಾರದು. ಮಾದಿಗ ಸಮುದಾಯವನ್ನು ಹಿಂಸಾಚಾರಕ್ಕೆ ದೂಡುವ ಷಡ್ಯಂತ್ರದ ಭಾಗವಾಗಿ ಸ್ವಾಮೀಜಿ ಬಿಂಬಿತವಾಗದಿರಲಿ ಎಂದು ಆಶಿಸೋಣ.
