ಮುಸ್ಲಿಂ ಹೆಸರು ಬಳಸಿಕೊಂಡು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಿಹಾರದ ಪುರ್‌ನಿಯಾದ ಆಯುಶ್ ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಈತ ಸಾಮಾಜಿಕ ಮಾಧ್ಯಮದಲ್ಲಿ ‘ನಾಸೀರ್ ಪಠಾಣ್’ ಎಂಬ ಸುಳ್ಳು ಹೆಸರನ್ನು ಬಳಸಿಕೊಂಡು ಕುಂಭಮೇಳವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಡಿಸೆಂಬರ್ 31ರಂದು ಆಯುಶ್ ಪೋಸ್ಟ್ ಪ್ರಕಟಿಸಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಆನ್‌ಲೈನ್‌ನಲ್ಲಿ ಪೋಸ್ಟ್ ಪ್ರಕಟವಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಉತ್ತರ ಪ್ರದೇಶ ಹಾಗೂ ಕೊಲ್ಕತ್ತಾದ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆಯುಶ್ ಕುಮಾರ್ ಜೈಸ್ವಾಲ್‌ನನ್ನು ಬಂಧಿಸಲಾಗಿದೆ. ಆರೋಪಿಯು ಅಪಾಯಕಾರಿ ಮನಸ್ಥಿತಿಯುಳ್ಳವನಾಗಿದ್ದು, ಅಪರಾಧ ಹಿನ್ನೆಲೆಯುಳ್ಳವರ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಪೋಸ್ಟ್ ಪ್ರಕಟಿಸಿದ ನಂತರ ಆರೋಪಿ ಆಯುಶ್ ನೇಪಾಳಕ್ಕೂ ಭೇಟಿ ನೀಡಿದ್ದು, ಅಲ್ಲಿ ಯಾರ್ಯಾರನ್ನು ಭೇಟಿ ಮಾಡಿದ್ದಾನೆ ಎಂಬುದನ್ನು ಕೂಡ ತನಿಖೆ ನಡೆಸುತ್ತಿದ್ದೇವೆ. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2025ರ ಜನವರಿ 13 ರಿಂದ ಫೆಬ್ರವರಿ 26ರ ತನಕ ಮಹಾ ಕುಂಭಮೇಳ ನಡೆಯಲಿದೆ. ಇದಕ್ಕೆ ಭರದ ಸಿದ್ಧತೆ ನಡೆದಿದೆ. ಈ ನಡುವೆ ಎದುರಾಗುತ್ತಿರುವ ಸುಳ್ಳು ಸುದ್ದಿ, ಸೈಬರ್ ಬೆದರಿಕೆಗಳನ್ನು
ತಡೆಯಲು ರಾಜ್ಯ ಪೊಲೀಸ್ ಇಲಾಖೆ ಡಿಜಿಟಲ್ ವಾರಿಯರ್ಸ್ ಅನ್ನು ನಿಯೋಜಿಸಿದೆ.
