‘ನೀವೇ ಹೀಗಾದರೆ ಯಾರನ್ನು ನಂಬಲಿ?’; ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಭಾಸ್ಕರ್ ಪ್ರಸಾದ್ ಪತ್ರ

Date:

Advertisements

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಿರುದ್ಧ ನಿಲುವು ತಾಳಿದ ಮಾದಿಗರ ಮೇಲೆ ಸ್ವಾಮೀಜಿಯ ಭಕ್ತರು ಪೊಲೀಸ್ ದೂರುಗಳನ್ನು ನೀಡುತ್ತಿರುವ ಕ್ರಮಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಅವರು ಸ್ವಾಮೀಜಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಬೇರೆ ಸಮುದಾಯದ ಮಠಾಧೀಶರ ವಿರುದ್ಧ ಆಯಾ ಸಮುದಾಯದ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರನ್ನು ಕರೆದು ಸ್ವಾಮೀಜಿಗಳು ಮಾತನಾಡುತ್ತಾರಲ್ಲವೇ? ಆತಂಕವೇನೆಂದು ಕೇಳಿ ತಿಳಿದುಕೊಂಡು ಅವರ ಆತಂಕದ ಕಾರಣವನ್ನು ಅರ್ಥ ಮಾಡಿಕೊಂಡು ಸಮಾಲೋಚಿಸಿ ಸಮಾಜವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರಲ್ಲ, ಹಾಗೆಯೇ ತಾವು ಮಾಡಬೇಕಿರುವುದು ಎಂದು ಪ್ರಶ್ನಿಸಿದ್ದಾರೆ.

ಭಾಸ್ಕರ್ ಪ್ರಸಾದ್ ಅವರ ಪತ್ರದ ಪೂರ್ಣ ಪಠ್ಯ

Advertisements

ಗೌರವಾನ್ವಿತ ಶಿವಶರಣ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳೇ,

ಸಮುದಾಯದ ಕಾಳಜಿ ಇರುವ ಯಾರೇ ಆದರೂ ನಿಮ್ಮ ಮೇಲೆ ಕೆಲವು ಆರೋಪ ಮಾಡುವ ಮೂಲಕ ಸಮುದಾಯ ಪರವಾದ ಆತಂಕವನ್ನು ವ್ಯಕ್ತಪಡಿಸಿದಾಗ, ಸಮುದಾಯದ ಹಿರಿಯರು ಮಾರ್ಗದರ್ಶಕರೂ ಆಗಿ ತಾವು ಅವರ ಆತಂಕವನ್ನು ಅರ್ಥ ಮಾಡಿಕೊಂಡು ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆಗೆ ಮುಂದಾಗಬೇಕು.

ಒಕ್ಕಲಿಗ ಸಮುದಾಯದ ಕೆಲವು ಪ್ರಗತಿಪರ ಚಿಂತಕರು ಕೆಲವು ಸಾರಿ ಯಾವುದೋ ಕಾರಣಕ್ಕಾಗಿ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರ ಮೇಲೆ ಮುನಿಸಿಕೊಂಡಾಗ, ಲಿಂಗಾಯತ ಅಥವಾ ಪಂಚಮಸಾಲಿಗಳು ತಮ್ಮ ಗುರುಗಳ ವಿರುದ್ಧ ಕೋಪ ಮಾಡಿಕೊಂಡು ಹೇಳಿಕೆಗಳನ್ನು ಕೊಟ್ಟಾಗ, ಆಯಾ ಸಮುದಾಯದ ಗೌರವಾನ್ವಿತ ಸ್ವಾಮೀಜಿಗಳು ಅವರನ್ನು ಕರೆದು ಮಾತಾಡಿ ಅವರುಗಳ ಆತಂಕವೇನೆಂದು ಕೇಳಿ ತಿಳಿದುಕೊಂಡು, ಆತಂಕದ ಕಾರಣವನ್ನು ಅರ್ಥ ಮಾಡಿಕೊಂಡು ಸಮಾಲೋಚಿಸಿ ಸಮಾಜವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರಲ್ಲ, ಹಾಗೆಯೇ ತಾವು ಮಾಡಬೇಕಿರುವುದು? ಆದರೆ ತಾವು, ತಮ್ಮ ಮೇಲಿನ ಆರೋಪದ ಹಿಂದಿನ ಸಕಾರಣವನ್ನು, ಸಮುದಾಯ ಪರವಾದ ಆತಂಕದ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಥವಾ ಆ ಬಗ್ಗೆ ಪರಸ್ಪರ ಸಮಾಲೋಚಿಸುವಲ್ಲಿ ಸೋತಿದ್ದೀರಿ. ಬದಲಾಗಿ ತಾವೇ ಮುಂದಾಗಿ ಯುದ್ಧ ಘೋಷಿಸುವ ಉತ್ಸಾಹ ತೋರಿದಂತೆ ಕಾಣುತ್ತಿದ್ದೀರಿ.

ಮಗುವನ್ನು ನಾಡಿನ ಸತ್ಪ್ರಜೆಯಾಗಿ ಬೆಳೆಸುವಲ್ಲಿ ಗುರು ಮತ್ತು ತಂದೆಯ ಜವಾಬ್ದಾರಿ ಬೇರೆ ಬೇರೆ ಅಲ್ಲ ಎಂದು ನಾನು ಭಾವಿಸಿರುತ್ತೇನೆ. ಇಲ್ಲಿ ಮಗು, ಗೊತ್ತಿದ್ದೂ ಗೊತ್ತಿಲ್ಲದೆಯೋ ತಪ್ಪು ಮಾಡಬಹುದು. ಕಾರಣ ಅದಿನ್ನೂ ಬೆಳೆಯುವ ಪೈರು. ಆದರೆ ತಾವು ಗುರುಗಳಾಗಿ ಗೊತ್ತಿದ್ದು ತಪ್ಪು ಮಾಡಬಾರದು. ತಮ್ಮ ಯಾವುದೇ ಒಂದು ನಡೆ ತಪ್ಪಾಗಿದೆ ಎಂದು ಸಮುದಾಯದ ಯಾರಿಗಾದರೂ ಅನ್ನಿಸಿ ಅದನ್ನು ವ್ಯಕ್ತಪಡಿಸಿದಾಗ ತಂದೆ ಸಮಾನರಾದ ತಾವುಗಳು ಅದನ್ನು ಗುರುವಿನ ಅಂತಃಕರಣದ ಹೃದಯದಿಂದ ನೋಡಬೇಕು. ಆದರೆ ತಾವು ಸಂಘಪರಿವಾರದ ಕನ್ನಡಕದಿಂದ ನೋಡಿದ್ದು ನಮ್ಮಲ್ಲಿ ಅತೀವವಾದ ನೋವನ್ನುಂಟು ಮಾಡಿದೆ.

ಇದರ ಅರ್ಥ- ತಮ್ಮ ಮೇಲೆ ಆರೋಪ ಮಾಡಿದವರ ಮೇಲೆ ತಾವು ಪೊಲೀಸ್ ದೂರು ನೀಡಿಸಿದ ಮಾತ್ರಕ್ಕೆ, ಯಾರಾದರೂ ತಮ್ಮ ಮೇಲಿನ ಆರೋಪದಿಂದ ಹಿಂದೆ ಸರಿಯುತ್ತಾರೆ, ಹೆದರುತ್ತಾರೆ ಅಥವಾ ಹೋರಾಟವನ್ನು ಕೈ ಬಿಟ್ಟು ಬಿಡುತ್ತಾರೆ ಎಂದಲ್ಲ. ಅವರು ಹಾಗೆ ಹಿಂದೆ ಸರಿಯುವಂತೆ ನಾವು ಅವರನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವವರೂ ಅಲ್ಲ. ನಮ್ಮ ದುಃಖ ಏನೆಂದರೆ ಸಮುದಾಯದ ಗುರುಗಳೇ ಹೀಗೆ ಅಧೀರರಾದರೆ, ಸಮುದಾಯದ ಮಾರ್ಗದರ್ಶಕರೇ ಹೀಗೆ ವಿವೇಚನೆ ಕಳೆದುಕೊಂಡರೆ, ಕೈ ಹಿಡಿದು ನಡೆಸಬೇಕಾದವರೇ ಹೀಗೆ ದಾರಿ ತಪ್ಪಿದರೆ, ‘ಕಾಯುವವನೇ ಕೊಲ್ಲಲು ನಿಂತನೇ?’ ಎನ್ನುವಂತೆ ತಂದೆಯೇ ಹೀಗೆ ಕ್ರೂರನು ಅಸಹಾಯಕನು ಆಗಿಹೋದರೆ, ಗುರುವನ್ನೂ ತಂದೆಯಂತೆಯೇ ಕಾಣುವ ಸಮುದಾಯವಾದರೂ ಯಾರನ್ನು ನಂಬಬೇಕು? ಯಾರನ್ನು ಪೊರೆಯಬೇಕು?

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿಕೆ ಅಪಾಯಕಾರಿ

ಸರ್ವರಿಂದಲೂ ಒಂದೊಂದು ಕಲಿತು ಸರ್ವಜ್ಞ ತಾನಾದನೆಂಬಂತೆ, ಮಾದಾರ ಚೆನ್ನಯ್ಯ ಗುರು ಮಠವು ಸಮುದಾಯದ ಜನರಿಂದ ಆಗಿದ್ದೇ ಹೊರತು, ಮಠದಿಂದ ಜನರ ಸೃಷ್ಟಿ ಆಗಲಿಲ್ಲ ಎಂಬುದನ್ನು ಸಮುದಾಯದ ಗುರುಗಳಾಗಿ ತಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹ ಸೂಕ್ಷ್ಮಗಳನ್ನು ನಾನು ತಮಗೆ ಅರ್ಥ ಮಾಡಿಸುವ ಸಂದರ್ಭ ಬಂದಿದ್ದಕ್ಕಾಗಿ ನನಗೆ ಅತೀವ ನೋವಾಗಿದೆ.

ಮಾದಿಗ ಸಮುದಾಯದವರೇ ಆದ ಯತಿರಾಜ್ ಬ್ಯಾಲಹಳ್ಳಿ ಅವರು ಬರೆದಿರುವ ಬಹಿರಂಗ ಪತ್ರವು ಕೇವಲ ಅವರ ವೈಯಕ್ತಿಕ ಪತ್ರವಾಗಿರುವುದಿಲ್ಲ. ಆ ಪತ್ರ ಮತ್ತು ಅದರಲ್ಲಿ ನಾವು ತಮ್ಮ ಮೇಲೆ ಮಾಡಿರುವ ಆರೋಪ ಹಾಗೂ ಹಕ್ಕೊತ್ತಾಯವು ಸಮುದಾಯ ಪರವಾಗಿ ಚಿಂತಿಸುವ ನಮ್ಮೆಲ್ಲರ ಒಪ್ಪಿಗೆಯಿಂದಲೇ ಬರೆದಿರುವ ಪತ್ರವಾಗಿರುತ್ತದೆ. ಸಂಬಂಧಿಸಿದಂತೆ ತಾವುಗಳು ಯಾವಾಗಲಾದರೂ ಸರಿ, ನಾವು ತಮ್ಮೊಡನೆ ಮಾತು ಕತೆಗೆ ಸಿದ್ಧರಾಗಿದ್ದೇವೆ. ತಾವುಗಳು ದಯಮಾಡಿ ನಮ್ಮ ಆತಂಕ ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡು ಕೂಡಲೇ ಮಾತುಕತೆಗೆ ಮುಂದಾಗಬೇಕು ಮತ್ತು ಸಮುದಾಯವನ್ನು ಅಭಿವೃದ್ಧಿಯೆಡೆಗೆ ಒಟ್ಟಿಗೆ ಕೊಂಡೊಯ್ಯುವ ಮನಸ್ಸು ಮಾಡಬೇಕು ಎಂದು ವಿನಂತಿಸುತ್ತೇನೆ. ಅಥವಾ ತಾವು ನಮ್ಮ ಮನವಿಗೆ ಸ್ಪಂದಿಸದೆ, ಸಂಘರ್ಷಕ್ಕೇ ಇಳಿಯುತ್ತೇವೆ ಎನ್ನುವುದಾದರೆ ಇಂತಹದ್ದೇ ನಮ್ಮ ಹಕ್ಕೊತ್ತಾಯದ ಪತ್ರಗಳು, ಹೋರಾಟಗಳು, ಘೇರಾವುಗಳು ಹಾಗೂ ಇನ್ನಿತರೆ ಕಠಿಣ ಮಾದರಿಯ ನಮ್ಮ ಹೋರಾಟದ ಕಾರಣಗಳಿಂದಾಗಿ ತಾವು ನಮ್ಮ ಮೇಲೆ ಮತ್ತಷ್ಟು FIR ಗಳನ್ನು ಹಾಕಿಸಲು ಸಿದ್ದರಾಗಿರಿ ಎಂದು ತಮ್ಮಲ್ಲಿ ಅಷ್ಟೇ ಗೌರವದಿಂದ ವಿನಂತಿಸುತ್ತಿದ್ದೇವೆ.

ಗೌರವಗಳೊಂದಿಗೆ
ಜೈ ಭೀಮ್‌
ಬಿ.ಆರ್.ಭಾಸ್ಕರ್ ಪ್ರಸಾದ್

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X