ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಮೂಲಕ ದೆಹಲಿಯ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
“ದೆಹಲಿಯ ಕಲ್ಕಾಜಿ ಕ್ಷೇತ್ರದಲ್ಲಿ ಗೆದ್ದರೆ ಕ್ಷೇತ್ರದ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ ನುಣುಪಾಗಿ ನಿರ್ಮಿಸಲಾಗುವುದು” ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಶಾಸಕ ರಮೇಶ್ ಬಿಧುರಿ ಭಾನುವಾರ ವಿವಾದದಲ್ಲಿ ಸಿಲುಕಿದ್ದಾರೆ. ಅದಾದ ಬಳಿಕ ಮಾಧ್ಯಮಗಳ ಮುಂದೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾದ ರಸ್ತೆ ನಿರ್ಮಾಣ : ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಖಂಡನೆ
ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬಿಜೆಪಿ ನಾಯಕ ರಮೇಶ್ ಬಿಧುರಿ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಿದರು. ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಲಾಖ್ರಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
#WATCH | Delhi Youth Congress members protest outside the residence of BJP leader Ramesh Bidhuri over his purported statement against Congress MP Priyanka Gandhi Vadra. pic.twitter.com/OYsdKS4zjD
— ANI (@ANI) January 6, 2025
ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಿಧುರಿ ನಿವಾಸದ ಗೇಟ್ ಮೇಲೆ ಕಪ್ಪು ಪೇಂಟ್ ಬಳಸಿ ‘ಮಹಿಳಾ ವಿರೋಧಿ’ ಎಂದು ಬರೆದಿದ್ದಾರೆ. ಒಂದು ಹೆಣ್ಣಿನ ದೇಹದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಖಂಡನಾರ್ಹ ಎಂದು ಯುವ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಧುರಿ ಈ ಹಿಂದೆಯೂ ಇದೇ ರೀತಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂಬುದನ್ನು ಅಕ್ಷಯ್ ಲಾಖ್ರಾ ಒತ್ತಿ ಹೇಳಿದ್ದಾರೆ. “ಇಷ್ಟೊಂದು ಕೀಳಾಗಿ ಆಲೋಚಿಸಿರುವ ಬಿಧುರಿ ಕ್ಷಮೆಯಾಚಿಸಬೇಕು. ಬಿಜೆಪಿ ನಾಯಕ ಕ್ಷಮೆ ಕೇಳುವವರೆಗೂ ನಮ್ಮ ಹೋರಾಟ ನಿಲ್ಲದು” ಎಂದು ಎಚ್ಚರಿಕೆ ನೀಡಿದರು.
