“ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಲಕ್ಷ್ಮೀನಾರಾಯಣ ನಾಗವಾರ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ” ಎಂದು ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಬೇಸರ ವ್ಯಕ್ತಪಡಿಸಿದರು.
ಗದಗ ಪಟ್ಟಣದ ಕಬ್ಬಿಗರ ಕೂಟ ಭವನದಲ್ಲಿ ನಡೆದ ʼಲಕ್ಷ್ಮೀನಾರಾಯಣ ನಾಗವಾರ ಅವರ ನುಡಿ ನಮನʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಲಕ್ಷ್ಮೀ ನಾರಾಯಣ ಅವರು, ಪ್ರತಿಯೊಬ್ಬ ಕಾರ್ಯಕರ್ತರಲ್ಲಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುತ್ತಿದ್ದ ಮಾತೃ ಹೃದಯಿ ನಾಯಕ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು” ಎಂದರು.
“70ರ ದಶಕದಲ್ಲಿ ಪ್ರಗತಿಪರ ಲೇಖಕರಾದ ಬಿ ಬಸಲಿಂಗಪ್ಪನವರ ಬೂಸಾ ಚಳವಳಿ ಮೂಲಕ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಆರಂಭವಾಯಿತು. ಈ ಸಮಿತಿ ಸ್ವಾಭಿಮಾನದ ಜೊತೆಗೆ ದಲಿತ ಸಮುದಾಯದಲ್ಲಿ ಧೈರ್ಯ ತುಂಬುವ ಹಾಗೂ ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತ ಬಂತು. ನಂತರದ ದಿನಗಳಲ್ಲಿ ದಲಿತ ಚಳುವಳಿಗೆ ದೇವನೂರು ಮಹದೇವ, ಸಿದ್ದರಾಮಯ್ಯರಂತಹ ಅನೇಕ ನಾಯಕರ ಜೊತೆಗೆ ಲಕ್ಷ್ಮೀನಾರಾಯಣ ನಾಗವಾರ ಅವರ ಕೊಡುಗೆ ಅಪಾರವಾದದ್ದು” ಎಂದು ನೆನಪಿಸಿಕೊಂಡರು.
“ಲಕ್ಷ್ಮೀನಾರಾಯಣ ಅವರು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ನಾಯಕತ್ವ ಬೆಳೆಸಿಕೊಂಡವರು. ಈ ನಾಯಕತ್ವವನ್ನು ಗುರುತಿಸಿ ಮಾವಳ್ಳಿ ಶಂಕರ್ ಅವರು ಗದಗ ಜಿಲ್ಲಾ ಸಂಚಾಲಕರನ್ನಾಗಿ ಮಾಡುತ್ತಾರೆ. ಆಗ ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ, ಶಿಬಿರಗಳನ್ನು ಮಾಡುತ್ತಾ ನಾಯಕತ್ವದ ಗುಣಗಳನ್ನು ಬೆಳೆಸುತ್ತಾ ಬಂದರು. ಸಮ ಸಮಾಜದ ಕನಸು ಹೊಂದಿ ಜನರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ಅಂಬೇಡ್ಕರ್ ಅವರ ತಾತ್ವಿಕ ವಿಚಾರದ ಅಡಿಯಲ್ಲಿ ಸಾಗುವ ಬದಲು ಅದರಿಂದ ಬಹಳ ದೂರ ಸಾಗುತ್ತಿದ್ದೇವೆ. ಅಂಬೇಡ್ಕರ್ ಅವರು ವೈಯಕ್ತಿಕ ಬದುಕಿನ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಸಮಾಜ, ಜನರ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ಧ ಹೋರಾಟ ನಡೆಸುತ್ತಾ ಬಂದವರು. ಆದರೆ ಈಗ ಸಮುದಾಯ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿ ಹೆಚ್ಚಾಗಿದೆ. ಅಷ್ಟೇ ಅಲ್ಲ ನಾವು ನಮ್ಮ ಮನಸ್ಸುಗಳನ್ನು ಒಡೆದುಕೊಂಡು ಬದುಕುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ: ಶಾಸಕ ರಾಜು ಕಾಗೆ
ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅರ್ಜುನ್ ಗೋಳಸಂಗಿ, ಹಿರಿಯ ಸಾಹಿತಿ ಬಿ ವಿ ಬಡಿಗೇರ್, ಡಿ ಎಸ್ ಎಸ್ ಹಿರಿಯ ಮುಖಂಡ ಟಿ ರತ್ನಾಕರ, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಬಾಲರಾಜ್ ಅರಬರ್, ಆನಂದ ಶಿಂಗಾಡಿ, ಬಸವರಾಜ್ ಕಡೆಮನಿ, ಮುತ್ತು ಬಿಳಿಯಲಿ, ಶರೀಫ್ ಬಿಳಿಯಲಿ, ಎಚ್ ಡಿ ಪೂಜಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
