ನುಡಿ ನಮನ | ಶರಾವತಿ, ವರದೆಯ ಮಗ ನಾ ಡಿಸೋಜ

Date:

Advertisements

ನಾ ಡಿಸೋಜರ ಅವರ ಬಗ್ಗೆ ಮಾತನಾಡಬೇಕು ಎಂದರೆ ಸಾಗರ ತಾಲ್ಲೂಕಿನಲ್ಲಿ ಹರಿಯುವ ಎರಡು ನದಿಗಳ ಬಗ್ಗೆ ಹೇಳಬೇಕು. ಸಾಗರ ಎರಡು ನದಿಗಳ ದಂಡೆಯ ಮೇಲಿದೆ. ಒಂದು ನಾಡಿಗೆ ಬೆಳಕು ಕೊಟ್ಟ ಶರಾವತಿ ನದಿಯಾದರೆ, ಇನ್ನೊಂದು ಬಯಲು ಗದ್ದೆಗಳಿಗೆ ನೀರುಣಿಸಿದ ವರದಾ ನದಿ. ನಾ ಡಿಸೋಜ ಅವರು ಎರಡು ನದಿಯ ದಂಡೆಯ ಮೇಲಿನ ಜನಜೀವನದ ಬಗ್ಗೆ ಬರೆದವರು.


ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರವನ್ನು ಪರಿಚಯ ಮಾಡಿಸಿದವರಲ್ಲಿ ನಾ ಡಿಸೋಜ ಪ್ರಮುಖರು. ನಾ ಡಿಸೋಜ ಅವರು ಡಿಸೆಂಬರ್ ಐದರ ರಾತ್ರಿ 7.50ಕ್ಕೆ ವಯೋಸಹಜ ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಈ ದಿನ.ಕಾಮ್ ಮೂಲಕ ಸಂತಾಪ ಸೂಚಿಸುತ್ತಾ ಈ ನುಡಿ ನಮನವನ್ನು ಸಲ್ಲಿಸುತ್ತಿದ್ದೇನೆ.

ನಾ ಡಿಸೋಜರ ಅವರ ಬಗ್ಗೆ ಮಾತನಾಡಬೇಕು ಎಂದರೆ ಸಾಗರ ತಾಲ್ಲೂಕಿನಲ್ಲಿ ಹರಿಯುವ ಎರಡು ನದಿಗಳ ಬಗ್ಗೆ ಹೇಳಬೇಕು. ಸಾಗರ ಎರಡು ನದಿಗಳ ದಂಡೆಯ ಮೇಲಿದೆ. ಒಂದು ನಾಡಿಗೆ ಬೆಳಕು ಕೊಟ್ಟ ಶರಾವತಿ ನದಿಯಾದರೆ, ಇನ್ನೊಂದು ಬಯಲು ಗದ್ದೆಗಳಿಗೆ ನೀರುಣಿಸಿದ ವರದಾ ನದಿ. ಶರಾವತಿ ನದಿಯು ಕಣಿವೆಯಲ್ಲಿ ಹರಿದು ಉತ್ತರ ಕನ್ನಡದ ಹೊನ್ನಾವರದ ಬಳಿ ಸಮುದ್ರವನ್ನು ಸೇರುತ್ತದೆ. ವರದಾ ನದಿಯು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹರಿದು ತುಂಗೆಯನ್ನು ಸೇರುತ್ತದೆ. ನಾ ಡಿಸೋಜ ಅವರು ಎರಡು ನದಿಯ ದಂಡೆಯ ಮೇಲಿನ ಜನಜೀವನದ ಬಗ್ಗೆ ಬರೆದವರು. ಶರಾವತಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿದಾಗ ಆದ ಸಾವು ನೋವು, ಯಾತನೆಗಳ ಬಗ್ಗೆ ಹಲವಾರು ಕಥೆಗಳನ್ನು ಕಾದಂಬರಿಗಳನ್ನು ಬರೆದವರು. ಅದರಲ್ಲಿ ಒಂದು ದ್ವೀಪ. ಇದು ಸಿನಿಮಾವಾಗಿ ಅಭಿವೃದ್ಧಿ ಯೋಜನೆಯಿಂದಾಗಿ ಒಂದು ಭೌಗೋಳಿಕ ಪ್ರದೇಶದ ಜನರು ಮತ್ತು ಪ್ರಾಣಿ ಪಕ್ಷಿಗಳು ಏನೇನು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಜಗತ್ತಿಗೆ ತಿಳಿಯುವಂತೆ ಹೇಳಿದವರು ನಾಡಿ. ಇವರು ಬರೆದಂತಹ ಮುಳುಗಡೆ ದ್ವೀಪದಂಥ ಕಾದಂಬರಿಗಳು ಶರಾವತಿ ಹಿನ್ನೀರಿನ ಪ್ರದೇಶದ ಪರಿಸರದ ಮೇಲೆ ಮತ್ತು ಜನಜೀವನದ ಮೇಲೆ ಬೀರಿದ ಭೀಕರ ಪರಿಣಾಮಗಳು ಏನೆಂಬುದು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.

Advertisements

ಶರಾವತಿ ಹಿನ್ನೀರಿನ ಜಲವಿದ್ಯುತ್ ಯೋಜನೆಯಿಂದಾಗಿ ಮುಳುಗಡೆಯಾಗಿರುವ ಸಾವಿರಾರು ರೈತರು, ಕೃಷಿ ಕೂಲಿ ಕಾರ್ಮಿಕರು ಇಂದಿಗೂ ಕೂಡ ತಮ್ಮ ಸಮಸ್ಯೆಯಿಂದ ಹೊರ ಬಂದಿಲ್ಲ. ನಾಡಿಯವರು ಈ ಕುರಿತು ತಮ್ಮ ಕಥೆ ಕಾದಂಬರಿ ಬರಹಗಳಲ್ಲಿ 50 ವರ್ಷಗಳ ಹಿಂದೆಯೇ ದಾಖಲಿಸಿದ್ದರು. ಇದು ಬರಹಗಾರರೊಬ್ಬರಿಗೆ ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ವರದಾ ನದಿ ದಂಡೆಯ ಮೇಲೆ ವಾಸಿಸುತ್ತಿರುವ ಬಹುತೇಕರು ಭತ್ತ ತರಕಾರಿ ಬೆಳೆಯುವ ರೈತರಾಗಿದ್ದಾರೆ (ಹಾಲಿ ಬದಲಾಗಿದೆ). ಇವರು ಬರೆಯುವ ಕಾಲಕ್ಕೆ ವರದಾ ನದಿ ದಂಡೆಯ ಮೇಲಿರುವ ಬಹುತೇಕ ರೈತರು ಭೂಮಾಲೀಕರ ಗೇಣಿದಾರರಾಗಿದ್ದರು.

ಭೂಮಾಲೀಕರ ಹೊಲದಲ್ಲಿ ನಡುಬಗ್ಗಿಸಿ ಬೆವರು ಸುರಿಸಿ ದುಡಿಯುವ ರೈತರಿಗೆ ದಕ್ಕುತಿದ್ದದ್ದು ಅತ್ಯಂತ ಅಲ್ಪ ಪ್ರಮಾಣದ ಬೆಳೆ. ಎಲ್ಲವೂ ಭೂ ಮಾಲೀಕರ ಮನೆಯ ಕಣಜಕ್ಕೆ ಸೇರುತ್ತಿದ್ದವು. ಇಂತಹ ಹೊತ್ತಿನಲ್ಲಿ ಈ ಭಾಗದಲ್ಲಿ ಭತ್ತವನ್ನು ಅಳೆಯುವ ಕೊಳಗಳ ಪ್ರಶ್ನೆಯನ್ನು ಕಾಗೋಡು ಗೇಣಿ ರೈತ ಹೋರಾಟದ ರೂವಾರಿ ಡಾ ಹೆಚ್ ಗಣಪತಿಯಪ್ಪನವರು ಬಂಡಾಯವೆದ್ದು, ರೈತರಲ್ಲಿ ಜಾಗೃತಿ ಮೂಡಿಸುವ ಕಾಲದಲ್ಲಿ ನಾಡಿಯವರು ಎಲ್ಲವನ್ನು ಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಳಗ ಎನ್ನುವ ಕಾದಂಬರಿ ದುಡಿಯುವ ರೈತ ಕೂಲಿ ಕಾರ್ಮಿಕರ ಕಥನವಾಗಿ ಹೊರಬಂದಿತು. ಐತಿಹಾಸಿಕವಾಗಿ ದ್ವೀಪ ಮತ್ತು ಕೊಳಗ ಈ ಪ್ರಾಂತ್ಯದ ಸಮಸ್ಯೆಯನ್ನು ಜಗತ್ತಿಗೆ ತೋರಿಸಿದ ಅಪರೂಪದ ಕಾದಂಬರಿಗಳು. ಡಿಸೋಜ ಅವರ ಬರವಣಿಗೆಯ ಹರವು ಬಹಳ ವಿಸ್ತಾರವಾದದ್ದು ಕಥೆ ಕಾದಂಬರಿ ಪ್ರಬಂಧ ನಾಟಕ ಬಾಲ ಸಾಹಿತ್ಯ ಲೇಖನಗಳು ಹೀಗೆ ಬೆಳೆಯುತ್ತಾ ಹೋಗುತ್ತದೆ.

ಉದಾಹರಿಸುವುದಾದರೆ ಕುಂಜಾಲು ಕಣಿವೆಯ ಕೆಂಪು ಹೂವು, ಮಂಜಿನ ಕಾನು, ಈ ನೆಲ ಈ ಜಲ ಹೀಗೆ ಹಲವನ್ನು ಉದಾಹರಿಸಬಹುದು. ಇಗರ್ಜಿಯ ಸುತ್ತಲಿನ ಹತ್ತು ಮನೆಗಳು ಅವರು ಬರೆದ ಇನ್ನೊಂದು ಅಪರೂಪದ ಕಾದಂಬರಿ. ಮುಳುಗಡೆ ಊರಿಗೆ ಬಂದವರು ಎಂಬ ಕಥೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಬಂದಿರುವುದನ್ನು ಇಲ್ಲಿ ನೆನಪಿಸಬಹುದು. ನಾ ಡಿಸೋಜ ಅವರು ತಾವು ಬಾಳಿ ಬದುಕಿದ ಪ್ರದೇಶದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯನ್ನು ಒಬ್ಬ ಸಾಮಾನ್ಯ ಸರ್ಕಾರಿ ನೌಕರರಾಗಿ ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರತಿಭಟಿಸಿದವರು. ಹೀಗಾಗಿ ಹಲವು ತರದ ಸಮಸ್ಯೆಯನ್ನು ಕೂಡ ಅನುಭವಿಸಿದವರು ಕೂಡ.

ನಾ ಡಿಸೋಜ

ನಿವೃತ್ತಿಯಾದ ಮೇಲೆ ತಮ್ಮ ಬರವಣಿಗೆ ಕಾಯಕವನ್ನು ಮುಂದುವರಿಸಿಕೊಂಡು ಬಂದವರು. ಹಾಗೆ ಹಲವಾರು ಜನ ಚಳವಳಿಯಲ್ಲಿ ನೇರವಾಗಿ ಗುರುತಿಸಿಕೊಂಡವರು. ಅದರಲ್ಲಿ ಮುಖ್ಯವಾಗಿ ಸ್ಥಗಿತವಾಗಿದ್ದ ರೈಲು ಸಂಚಾರವನ್ನು ಮತ್ತೆ ಸಾಗರಕ್ಕೆ ಬರುವಂತೆ ಮಾಡಲು ವಿಶೇಷವಾಗಿ ಶ್ರಮಿಸಿದವರು. ಕೆಲವು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರವು ಶರಾವತಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಒಯ್ಯುವ ಯೋಜನೆಯನ್ನು ರೂಪಿಸಿದಾಗ ಅಂದು ರೂಪುಗೊಂಡ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಹೀಗೆ ಸಮಾಜಮುಖಿಯಾಗಿರುವ ಯಾವುದೇ ಹೋರಾಟವಿರಲಿ ಹಮ್ಮು ಬಿಮ್ಮು ಇಲ್ಲದೆ ಗುರುತಿಸಿಕೊಳ್ಳುವ ಗುಣ ಇವರದು.

ಇದನ್ನೂ ಓದಿ ನುಡಿ ನಮನ | ನಾ ಡಿಸೋಜರ ಬರಹಗಳು ಎಷ್ಟು ವಿನೂತನವೋ, ಅಷ್ಟೇ ಸುಂದರ ಅವರ ಬದುಕು

ಸಾಹಿತಿಗಳ ಪೈಕಿ ಬಹುತೇಕರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬರೆದು ತಮ್ಮ ಸಾಮಾಜಿಕ ಜವಾಬ್ದಾರಿ ಮುಗಿಯಿತು ಎನ್ನುವ ಸಂದರ್ಭ ಇರುವಾಗ ನಾಡಿಯವರು ಬರೆಯುತ್ತಲೇ ಬೀದಿ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ಹಲವಾರು ಹೋರಾಟಗಳಲ್ಲಿ ಇವರ ಹಾಜರಾತಿ ಸರ್ಕಾರವನ್ನು ನಡುಗಿಸಿದ್ದೂ ಇದೆ. ನಾ ಡಿಸೋಜರವರು ಬರವಣಿಗೆ ಮತ್ತು ವೇದಿಕೆ ವಿಚಾರದಲ್ಲಿ ಮಡಿವಂತಿಕೆ ಮಾಡುವುದಿಲ್ಲ ಎನ್ನುತ್ತಿದ್ದರು. ಇವರ ಈ ಧೋರಣೆಯಿಂದಾಗಿ ಹಲವು ಬಾರಿ ಇವರು ಧರ್ಮ, ಜಾತಿ, ಲಿಂಗ ತಾರತಮ್ಯವನ್ನು ಪ್ರತಿಪಾದಿಸುವ ಸಂಸ್ಥೆಯ ವೇದಿಕೆಯಲ್ಲಿ ಮತ್ತು ಪತ್ರಿಕೆಯಲ್ಲಿ ಮಾತನಾಡಿದ್ದು ಮತ್ತು ಬರೆದದ್ದು ಉಂಟು. ಇವರ ಇಂತಹ ಧೋರಣೆಯಿಂದಾಗಿ ಜೀವ ವಿರೋಧಿ ಕೃತ್ಯ ನಡೆಸುವ ವೇದಿಕೆಗಳಿಗೆ ಮತ್ತು ಪತ್ರಿಕೆಗಳಿಗೆ ಮಾನ್ಯತೆ ದೊರಕುವಂತಾಗುತ್ತಿತ್ತು. ಹೀಗಾಗಿ ಇವರ ಇಂತಹ ಧೋರಣೆಗಳಿಂದಾಗಿ
ಎಡಧಾರೆಯ ಚಿಂತಕರು ಮತ್ತು ವಿಮರ್ಶಕರಿಂದ ಟೀಕೆಗೆ ಒಳಗಾಗಿದ್ದು ಉಂಟು. ಆದರೆ ನಾಡಿಯವರು ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಹಳ ಕಡಿಮೆ. ಜನಸಾಮಾನ್ಯ ಓದುಗ ವಲಯವನ್ನೇ ಮೆಚ್ಚಿಕೊಂಡು ಸಾವಿರಾರು ಪುಟಗಳ ಸಾಹಿತ್ಯ ಬರೆದ ಇವರು ಕೆಲವೊಂದು ವಿಚಾರಗಳಲ್ಲಿ ಗಟ್ಟಿ ಧೋರಣೆಯನ್ನು ಪಡೆದು ಬರೆದಿದ್ದರೆ ಮಾತನಾಡಿದ್ದರೆ ನಾಡಿಯವರ ವ್ಯಕ್ತಿತ್ವ ಇನ್ನಷ್ಟು ವಿಶಾಲವಾಗುತ್ತಿತ್ತೇನೋ? ಆದರೆ ಇಂತಹ ಪ್ರಯತ್ನಕ್ಕೆ ಕೈ ಹಾಕದೆ ತಮ್ಮ ಪಾಡಿಗೆ ತಮಗೆ ಅನಿಸಿದ್ದನ್ನು ಬರೆಯುತ್ತಲೇ ಹೋದರು.

ಇದನ್ನೂ ಓದಿ ಸಾಗರದಷ್ಟು ಬರೆದು ಮುಗಿಸಿದ್ದರು ನಾ ಡಿಸೋಜ

ಇರಲಿ ನಾ ಡಿಸೋಜ ನಮ್ಮನ್ನು ಅಗಲಿದ್ದಾರೆ, ಮಲೆನಾಡಿನ ಸಂಕಷ್ಟಗಳನ್ನು ಗಟ್ಟಿ ದನಿಯಲ್ಲಿ ದಾಖಲಿಸುವ ಕಥೆಗಾರ, ಕಾದಂಬರಿಕಾರ ನಾ ಡಿಸೋಜ ಇಲ್ಲವೆಂಬುದು ಮಲೆನಾಡಿನ ಸೆರಗಿನ ಭಾಗವಾದ ಸಾಗರ -ತೀರ್ಥಹಳ್ಳಿ -ಹೊಸನಗರ ಭಾಗದ ಜನರಿಗೆ ದೊಡ್ಡ ನಷ್ಟವೇ ಸರಿ. ಹೋಗಿ ಬನ್ನಿ ನಾಡಿ ಅವರೇ ನಿಮ್ಮ ಕಥೆ ಕಾದಂಬರಿ ಮತ್ತು ಸಾಮಾಜಿಕ ಹೋರಾಟಗಳ ಮೂಲಕ ಎಂದೆಂದಿಗೂ ನೀವು ನಮ್ಮ ನಡುವೆಯೇ ಇರುತ್ತೀರಿ.

ರಾಘವೇಂದ್ರ ಚಾರ್ವಾಕ
ಚಾರ್ವಾಕ ರಾಘವೇಂದ್ರ, ಸಾಗರ
+ posts

ಪತ್ರಕರ್ತ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚಾರ್ವಾಕ ರಾಘವೇಂದ್ರ, ಸಾಗರ
ಚಾರ್ವಾಕ ರಾಘವೇಂದ್ರ, ಸಾಗರ
ಪತ್ರಕರ್ತ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X