ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಈಗಾಗಲೇ ಸಿದ್ದರಾಮಯ್ಯನವರಿದ್ದು, ಅವರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ಹಾಗಾಗಿ ಸಿಎಂ ಬದಲಾವಣೆ ಚರ್ಚೆಯೂ ಅಗತ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಚಿವ ಎನ್ ಎಸ್ ಬೋಸರಾಜು ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, “ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಬಿಟ್ಟು ಯಾವುದೇ ರಹಸ್ಯ ಸಭೆಯನ್ನು ಮಾಡಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಯಂತಹ ವಿಷಯಗಳ ಚರ್ಚೆಗಳ ಬಗ್ಗೆ ನಡೆಸಿಲ್ಲ. ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ. ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದು, 2028ಕ್ಕೆ ನಾನೇ ಸಿಎಂ ಅಭ್ಯರ್ಥಿ ಎಂಬುದು ಭವಿಷ್ಯದಲ್ಲಿ ಏನಾಗುತ್ತೋ ನೋಡೋಣ” ಎಂದರು.
“ರಾಜ್ಯದಲ್ಲಿ ಶೇ.60 ಪರ್ಸೆಂಟ್ ಸರ್ಕಾರವಿದೆ ಎನ್ನುವ ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ. ಬೀದರ್ ಗುತ್ತಿಗೆದಾರನ ಡೆತ್ ನೋಟ್‌ನಲ್ಲಿ ಖರ್ಗೆಯವರ ಆಪ್ತರ ಹೆಸರಿದೆ. ಆದರೆ ಸಂತೋಷ್ ಎಂಬ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಈಶ್ವರಪ್ಪನವರದ್ದೇ ಹೆಸರಿತ್ತು. ಆಪ್ತರ, ಪಿಎಗಳ ಹೆಸರಿದೆಯೆಂದ ಮಾತ್ರಕ್ಕೆ ಸಚಿವರು ನೇರವಾಗಿ ಹೊಣೆಗಾರರಾಗುವುದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ” ಎಂದರು.
ಸಾರಿಗೆ ಬಸ್ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್‌ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು. ಕೇಂದ್ರ ಹಣಕಾಸು ಸಚಿವೆ ಹಳೆಗಾಡಿಗಳಿಗೆ ಶೇ.18ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಸಕ್ಕರೆ, ಕಾರು ಸೇರಿದಂತೆ ಇತರೆ ಅಗತ್ಯ ವಸ್ತುಗಳಿಗೆ ಶೇ.12ರಷ್ಟು ಜಿಎಸ್‌ಟಿ ಹೇರಿದ್ದಾರೆ. ಇದರ ವಿರುದ್ಧ ಬಿಜೆಪಿಗರು ಮಾತನಾಡುವುದಿಲ್ಲ. ಬರೀ ಬಸ್ ದರದ ಕುರಿತು ವಿರೋಧ ವ್ಯಕ್ತಪಡಿಸಿದರೆ ಹೇಗೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಐತಿಹಾಸಿಕ ದಾಖಲೆ ಬರೆದ ಕೆಆರ್‌ಎಸ್ ಜಲಾಶಯ: 156 ದಿನಗಳಿಂದ ಅಣೆಕಟ್ಟು ಭರ್ತಿ
“ಹಣಕಾಸಿನ ಸಮತೋಲನೆಯಿಲ್ಲದೆ ಕೆಲಸ ಮಾಡಿದ್ದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳಿಗೆ ಹಣ ಬಿಡುಗಡೆಯಾಗಿಲ್ಲ. ಈ ಹಿಂದೆ ಆಡಳಿತ ನಡೆಸಿದ ಸರ್ಕಾರದ ಅಸಮತೋಲನ ಬಜೆಟ್ ಅಡಿಯಲ್ಲಿ ಕೆಲಸ ಮಾಡಿದ್ದರಿಂದ ಇದೀಗ ಆ ಕಾಮಗಾರಿಗಳಿಗೆ ದುಡ್ಡು ಕೊಡಬೇಕಾಗಿದ್ದು, ಹೆಚ್ಚುವರಿ ಹಣವನ್ನು ಹೊಂದಿಸಲಾಗುತ್ತಿದೆ. ಸಾವಿರ ಕೋಟಿ ಬಜೆಟ್ ಇದೆಯೆಂದರೆ ಆ ಮೊತ್ತದಲ್ಲಿಯೇ ಕೆಲಸವಾಗಿದ್ದರೆ ಹಣ ಬಿಡುಗಡೆ ಮಾಡಬಹುದು. ಆದರೆ ಸಾವಿರ ಕೋಟಿ ಬಜೆಟ್ ಇಟ್ಟು, 3 ಸಾವಿರ ಕೋಟಿ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಆರ್ಥಿಕ ನೆರವಿಲ್ಲದೇ ಕೆಲಸಗಳನ್ನು ಮಾಡಿದ್ದರಿಂದ ಬಿಲ್ ಕೊಡಲು ತಡವಾಗುತ್ತಿದೆ. ಹಾಗಾಗಿ ದರ ಏರಿಕೆಯಾಗುತ್ತಿದೆ” ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಸಚಿವ ಎನ್ ಎಸ್ ಬೋಸರಾಜು, ಸಂಸದ ಕುಮಾರ ನಾಯಕ, ಮುಖಂಡ ಮೊಹಮ್ಮದ್ ಶಾಲಂ ಇದ್ದರು.
