ರಾಷ್ಟ್ರೀಯತೆಯನ್ನು ಬೆಳೆಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಐತಿಹಾಸಿಕ ಇಂಡಿಯಾ ಗೇಟ್ ಅನ್ನು ‘ಭಾರತ್ ಮಾತಾ ದ್ವಾರ’ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
‘ಮೊಘಲ್ ಆಕ್ರಮಣಕಾರರು’ ಮತ್ತು ‘ಬ್ರಿಟಿಷ್ ದರೋಡೆಕೋರರು’ ಉಂಟು ಮಾಡಿದ ಗಾಯಗಳನ್ನು ಗುಣಪಡಿಸಲು, ನಾವು ಭಾರತೀಯ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ಹಿಡಿಯಲು ಭಾರತೀಯ ಸಾಂಸ್ಕೃತಿಕ ಮೌಲ್ಯ ಮರುನಾಮಕರಣ ಮಾಡುವ ಅಗತ್ಯವಿದೆ ಎಂದು ಸಿದ್ದಿಕಿ ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದಿಕಿ, “ಇಂಡಿಯಾ ಗೇಟ್ ಅನ್ನು ಭಾರತ್ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವುದರಿಂದ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸಾವಿರಾರು ದೇಶಭಕ್ತರಿಗೆ ನಿಜವಾದ ಗೌರವ ನೀಡಿದಂತೆ ಆಗುತ್ತದೆ” ಎಂದು ತಿಳಿಸಿದರು.
ಹಲವು ನಿದರ್ಶನಗಳನ್ನು ಉಲ್ಲೇಖಿಸಿದ ಅವರು ಮೋದಿ ಸರ್ಕಾರವು ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದೆ. ಇಂಡಿಯಾ ಗೇಟ್ ಬಳಿ ಕಿಂಗ್ ಜಾರ್ಜ್ Vರ ಪ್ರತಿಮೆಯನ್ನು ಹೊಂದಿದ್ದ ಮೇಲಾವರಣದಲ್ಲಿ ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇರಿಸಿದೆ ಎಂದಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಬಿಜೆಪಿ ಆಡಳಿತವಿರುವ ಪ್ರದೇಶದಲ್ಲಿ ಸ್ಥಳಗಳ ಹೆಸರನ್ನು ಬದಲಾಯಿಸಲಾಗುತ್ತಿದೆ. ಇದು ನಮ್ಮ ದೇಶದ ವೈವಿಧ್ಯಮಯ ಪರಂಪರೆಯನ್ನು ಅಳಿಸಿಹಾಕಿ, ಬರೀ ಒಂದು ಕೋಮು ಕೇಂದ್ರಿತ ದೇಶವನ್ನಾಗಿ ಬಿಂಬಿಸುವ ಹುನ್ನಾರ ಎಂದು ವಿಪಕ್ಷಗಳು, ಪ್ರಗತಿಪರರು ಆರೋಪಿಸಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣಗಳ ಹೆಸರನ್ನೇ ಬದಲಾಯಿಸಲು ಹೊರಟಿರುವುದು ತೀವ್ರ ಟೀಕೆಗೀಡು ಮಾಡಿದೆ.
