ಆಮರಣಾಂತ ಉಪವಾಸ ನಡೆಸುತ್ತಿರುವ ಜನ್ ಸೂರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಪಾಂಡೆ ಅವರ ಆರೋಗ್ಯ ಹದಗೆಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಶಾಂತ್ ಕಿಶೋರ್ ಅವರನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದರು. ಪಾಟ್ನಾ ಹೈಕೋರ್ಟ್ ಆದೇಶದ ಪ್ರಕಾರ ನಗರದ ಗರ್ದಾನಿ ಬಾಗ್ ಪ್ರದೇಶ ಹೊರತುಪಡಿಸಿ ಬೇರೆಡೆ ಧರಣಿ, ಪ್ರತಿಭಟನೆ, ಉಪವಾಸ ಮೊದಲಾದವು ಮಾಡುವಂತಿಲ್ಲ. ಈ ಕಾರಣದಿಂದಾಗಿ ಪ್ರಶಾಂತ್ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಹಾರ| ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
ಅದಾದ ಬಳಿಕ ಬೇಷರತ್ತು ಜಾಮೀನಿನ ಮೇಲೆ ಪ್ರಶಾಂತ್ ಕಿಶೋರ್ ಬಿಡುಗಡೆ ಮಾಡಲಾಗಿದ್ದು, ನಿನ್ನೆ ರಾತ್ರಿ ಅವರ ಆರೋಗ್ಯ ಹದಗೆಟ್ಟ ಕಾರಣ ಪಾಟ್ನಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಪಾಟ್ನಾ ನ್ಯಾಯಾಲಯದ ಮುಂದೆ ಪ್ರಶಾಂತ್ ಕಿಶೋರ್ ಹಾಜರಾಗಿದ್ದು ಷರತ್ತಿನೊಂದಿಗೆ ಜಾಮೀನು ನೀಡಲಾಗಿದೆ. ಕಾನೂನುಬಾಹಿರ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕಿತ್ತು. ಆದರೆ ಇದಕ್ಕೆ ಒಪ್ಪದ ಪ್ರಶಾಂತ್ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಅದಾದ ಬಳಿಕ ಸಂಜೆ ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಿದರು.
ಇದನ್ನು ಓದಿದ್ದೀರಾ? ಜನ್ ಸುರಾಜ್ ಪಕ್ಷ ಪ್ರಾರಂಭಿಸಿದ ಪ್ರಶಾಂತ್ ಕಿಶೋರ್: ಬಿಹಾರ ಚುನಾವಣೆ ಮೇಲೆ ಚಿತ್ತ
ಪೂರ್ಣಾವಧಿಯಾಗಿ ರಾಜಕೀಯಕ್ಕೆ ಧುಮುಕುವ ಮುನ್ನ ಚುನಾವಣಾ ತಂತ್ರಜ್ಞರಾಗಿದ್ದ ಪ್ರಶಾಂತ್ ಕಿಶೋರ್ ತನ್ನ ಕೆಲವು ನಿಖರ ಚುನಾವಣಾ ಭವಿಷ್ಯ ಮತ್ತು ಹೆಚ್ಚಾಗಿ ತಪ್ಪಾದ ಚುನಾವಣಾ ಭವಿಷ್ಯದ ಮೂಲಕವೇ ಸುದ್ದಿಯಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ ಹೇಳಿ ನಗೆಪಾಟಲಿಗೀಡಾಗಿದ್ದರು.
ಬಿಜೆಪಿ 300ರಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಬಿಜೆಪಿ 240ರಷ್ಟು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದಾದ ಬಳಿಕ ತೀವ್ರ ಮುಖಭಂಗಕ್ಕೆ ಒಳಗಾದ ಪ್ರಶಾಂತ್ “ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ” ಎಂದರು. ಬಳಿಕ ತನ್ನದೇ ಆದ ಪಕ್ಷ ಕಟ್ಟಿಕೊಂಡು ರಾಜಕೀಯಕ್ಕೆ ಧುಮುಕ್ಕಿದ್ದಾರೆ.
