ರಾಜ್ಯದಲ್ಲಿ ಆರು ಮಂದಿ ನಕ್ಸಲರಿಗೆ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ? ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿಯಾಗಿದೆ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ
ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿಯೂ ಆಗಿದ್ದ ತಣ್ಣಗಿನ ಮಲೆನಾಡು ಭಾಗದಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ ಸಿದ್ದರಾಮಯ್ಯನವರೇ? ಇದರಿಂದ ಪೊಲೀಸರ ಆತ್ಮಸ್ಥೈರ್ಯ ಏನಾಗಬೇಡ ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ನಕ್ಸಲ್ ಹೋರಾಟಗಾರರು ಸರ್ಕಾರದ ಎದುರು ಶರಣಾಗುವುದು, ಪ್ರಜಾತಾಂತ್ರಿಕವಾಗಿ ಹೋರಾಟ ಮಾಡಲು ಮುಖ್ಯವಾಹಿನಿಗೆ ಬರುವುದು ಅಂತ್ಯಂತ ಸ್ವಾಗತಾರ್ಹ ವಿಚಾರ ಎಂಬುದನ್ನು ಸಮಾಜ ಗಮನದಲ್ಲಿಟ್ಟುಕೊಳ್ಳಬೇಕು. ಏಕೆಂದರೆ, ನಕ್ಸಲ್ ಅಥವಾ ಮಾವೋವಾದಿ ಹೋರಾಟಗಾರರು ದೇಶದಲ್ಲಿ, ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಬೇಕೆಂದು ಸಶಸ್ತ್ರ ಹೋರಾಟಕ್ಕಿಳಿದವರಲ್ಲ. ಅವರು ದಲಿತರು, ಬಡವರು, ಆದಿವಾಸಿಗಳು ಹಾಗೂ ಮಹಿಳೆಯರ ಮೇಲಾಗುವ ದೌರ್ಜನ್ಯ, ದಮನಗಳ ವಿರುದ್ಧದ ಹೋರಾಟಗಾರರು. ಸಮಾಜದಲ್ಲಿ ಸಮಾನತೆ ಜಾರಿಗೆ ಬರಬೇಕೆಂಬ ಆಶಯದೊಂದಿಗೆ ತಮ್ಮ ವೈಯಕ್ತಿಯ ಜೀವನವನ್ನು ತ್ಯಜಿಸಿ ಹೋರಾಟದ ಹಾದಿ ಹಿಡಿದು ಕಾಡಿಗೆ ಹೋದವರು. ಆದರೆ, ಅವರು ಆಯ್ಕೆ ಮಾಡಿಕೊಂಡ ಹೋರಾಟದ ಹಾದಿ ಮಾತ್ರವೇ ತಪ್ಪು. ಸಶ್ತ್ರಾಸ್ತ್ರಗಳ ಮೂಲಕ ಸಮಾಜವನ್ನು ತಿದ್ದಲು, ಸರಿದಾರಿಗೆ ತರಲು, ತಳವರ್ಗದ ಮೇಲಿನ ದಮನವನ್ನು ತೊರೆದುಹಾಕಲು ಸಾಧ್ಯವಿಲ್ಲ. ಅದು ಪ್ರಜಾತಾಂತ್ರಿಕ ಹೋರಾಟದಿಂದ ಮಾತ್ರವೇ ಸಾಧ್ಯ.
ಹೀಗಾಗಿಯೇ, ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈ ರೀತಿಯಲ್ಲಿ ಮುಖ್ಯವಾಹಿನಿಗೆ ಬಂದ ನಕ್ಸಲ್ ಹೋರಾಟಗಾರರು ಜನರ ನಡುವೆ, ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಜನ ಚಳುವಳಿ ಕಟ್ಟುತ್ತಿದ್ದಾರೆ. ಸಮಾಜಕ್ಕಾಗಿ, ಜನರಿಗಾಗಿ ಜೀವ-ಜೀವನವನ್ನು ಮುಡಿಪಿಟ್ಟ ನಕ್ಸಲ್ ಹೋರಾಟಗಾರರು ಶರಣಾಗುವುದು ಮತ್ತು ಶರಣಾಗತಿಗೆ ಸರ್ಕಾರಗಳು ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಯಾರನ್ನೂ ಬೆಚ್ಚಿ ಬೀಳಿಸುವುದಿಲ್ಲ!