ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ದಾಖಲಾಗಿ ಸುಮಾರು 10 ತಿಂಗಳುಗಳಾಗಿವೆ. ಪ್ರಕರಣದ ತನಿಖೆ ತ್ವರಿತವಾಗಿ ನಡೆಯುತ್ತಿಲ್ಲ. ನ್ಯಾಯವೂ ಸಿಗುತ್ತಿಲ್ಲ. ನಿತ್ಯವೂ ನರಕಯಾತನೆಯಾಗಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಅಸಮಾಧಾನಗೊಂಡಿದ್ದಾರೆ. ಅಳಲು ತೋಡಿಕೊಂಡಿದ್ದಾರೆ.
ಇದೆಲ್ಲದರ ನಡುವೆ ತಮ್ಮ ವಿರುದ್ಧದ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜ.10ಕ್ಕೆ ಮುಂದೂಡಿದೆ.
ತಮ್ಮ ಮಗಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಪಡೆಯಲು ಸಹಾಯ ಕೇಳಲು ಹೋಗಿದ್ದಾಗ ತಮ್ಮ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಾಲಕಿಯ ಖಾಸಗಿ ಅಂಗ ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಸಿದ್ದರು. ಅವರ ದೂರಿನ ಆಧಾರದ ಮೇಲೆ 2024ರ ಮಾರ್ಚ್ 15ರಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಕಳೆದ ಹಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಎದುರು ನೋಡುತ್ತಿರುವ ಸಂತ್ರಸ್ತ ಬಾಲಕಿಯ ಕುಟುಂಬವು ತಮಗೆ ನಿತ್ಯವೂ ನರಕ ಯಾತನೆಯಾಗಿದೆ ಎಂದು ಅಳಲು ತೋಡಿಕೊಂಡಿದೆ. ಪ್ರಕರಣ ದಾಖಲಾದ ಬಳಿಕ ತಾವು ಅನುಭವಿಸುತ್ತಿರುವ ಸಂಕಷ್ಟಗಳು ಮತ್ತು ಯಡಿಯೂರಪ್ಪ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಸಂತ್ರಸ್ತೆಯ ಸಹೋದರ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, “ಅತೀವ ದುಃಖದಿಂದ ನಾನು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಪುಟ್ಟ ತಂಗಿ ಮೇಲಾದ ದೌರ್ಜನ್ಯದಿಂದಾಗಿ ನನ್ನ ಕುಟುಂಬ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾರಣ. ನಿಜಕ್ಕೂ ಯಡಿಯೂರಪ್ಪ ರೀತಿಯ ಜನರು ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ. ಅದೂ ಕೂಡ ಅವರ ಮೊಮ್ಮಕ್ಕಳಿಗಿಂತಲೂ ಚಿಕ್ಕವಳಾದ ನನ್ನ ಪುಟ್ಟ ತಂಗಿ ಮೇಲೆ ಇಂತಹ ಕೃತ್ಯ ನಡೆಸಿದ್ಜಾರೆ. ನನಗೆ ಮತ್ತು ನನ್ನ ಪುಟ್ಟ ತಂಗಿಗೆ ಇದು ನಿಜಕ್ಕೂ ಆಘಾತವಾಗಿದೆ” ಎಂದು ಸಂತ್ರಸ್ತೆಯ ಸಹೋದರ ಹೇಳಿಕೊಂಡಿದ್ದಾರೆ.
I am posting this video to seek justice for my sister, B.S.Yediyurappa should be jailed in this POCSO case !!@siddaramaiah @DKShivakumar pic.twitter.com/nr5gi4Megw
— need for justice (@neeed4justice) January 7, 2025
“ತನ್ನ ಮೇಲಾದ ದೌರ್ಜನ್ಯದಿಂದಾಗಿ ನನ್ನ ತಂಗಿ ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾಳೆ. ಅಂದು ನಡೆದ ಆ ಕೆಟ್ಟ ಘಟನೆಗಳು ಆಕೆಯನ್ನು ಕಾಡುತ್ತಿವೆ. ನನ್ನ ತಂಗಿಯ ಮೇಲಾದ ದೌರ್ಜನ್ಯದ ವಿರುದ್ಧದ ಹೋರಾಟ ನಡೆಸುತ್ತಿದ್ದ ನಮ್ಮ ತಾಯಿ ಕೂಡ ಸಾವನ್ನಪ್ಪಿದ್ದಾರೆ. ಅವರ ಸಾವು ನಮ್ಮನ್ನು ಮತ್ತಷ್ಟು ಆಘಾತಕ್ಕೀಡುಮಾಡಿದೆ” ಎಂದು ಹೇಳಿದ್ದಾರೆ.
“ನಮ್ಮ ತಾಯಿ ಸುಮಾರು 10 ವರ್ಷಗಳ ಹಿಂದೆ ಮೊದಲ ಪೋಕ್ಸೋ ಪ್ರಕರಣ ದಾಖಲಿಸಿದಾಗಿನಿಂದಲೂ ಹೋರಾಟ ನಡೆಸುತ್ತಿದ್ದರು. ನಮ್ಮ ತಾಯಿಯೇ ನಮಗೆ ಧೈರ್ಯವಾಗಿದ್ದರು. ಆದರೆ, ಅವರಿಲ್ಲ ನಾವು ಕಷ್ಟಪಡುತ್ತಿದ್ದೇವೆ. ನಮ್ಮ ಭಾವನೆ, ಆಕ್ರೋಶ ಎಲ್ಲವನ್ನೂ ನಮ್ಮೊಳಗೇ ಇಟ್ಟುಕೊಂಡು ಒದ್ದಾಡುತ್ತಿದ್ದೇವೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?
“ನ್ಯಾಯಕ್ಕಾಗಿ ನಮ್ಮ ತಾಯಿ ಹಲವು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಮನವಿ ಸಲ್ಲಿಸಿದ್ದರು. ಆದರೆ, ಯಾರಿಂದಲೂ ನ್ಯಾಯ ದೊರೆಯಲಿಲ್ಲ. ಆಕೆಯ ವಿರುದ್ಧವೇ ಸುಳ್ಳು ಪ್ರಕರಣಗಳು ದಾಖಲಾದವು. ಯಡಿಯೂರಪ್ಪರನ್ನು ರಕ್ಷಿಸಲು ನಮ್ಮ ತಾಯಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ನ್ಯಾಯ ಕೇಳಲು ಹೋದ ನಮ್ಮ ತಾಯಿಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಲು ಯತ್ನಿಸಿದ್ದರು. ಇಂತಹ ಕೃತ್ಯಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಯಡಿಯೂರಪ್ಪ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಲು ಬೆದರಿಕೆಗಳು ಬರುತ್ತಿವೆ. ನಮ್ಮ ಕುಟುಂಬ ನಡೆಸುವುದೇ ಸವಾಲಾಗಿದೆ” ಎಂದು ಹೇಳಿದ್ದಾರೆ.
“ನನ್ನ ತಂಗಿ ಜರ್ಜಿರಿತಳಾಗಿದ್ದಾಳೆ. ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದಾಳೆ. ಹೊರ ಹೋಗಲು ಭಯವಾಗುತ್ತಿದೆ ಎನ್ನುತ್ತಿದ್ದಾಳೆ. ನನ್ನ ತಂಗಿಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಅಪರಾಧಿಗೆ ಶಿಕ್ಷೆಯಾಗಬೇಕು. ಪ್ರಕರಣ ರದ್ದಾಗದಂತೆ ನೋಡಿಕೊಳ್ಳಬೇಕು. ನಮಗೆ ನ್ಯಾಯ ಕೊಡಿಸಿ, ನ್ಯಾಯಕ್ಕಾಗಿ ವಾದ ಮಂಡಿಸಲು ಒಳ್ಳೆಯ ವಕೀಲರನ್ನು ನೇಮಿಸಿಕೊಡಿ ಎಂದು ನಾನು ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.