- ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅಜ್ಜಿಯ ಕೊಲೆ
- ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 82 ವರ್ಷದ ವಯಸ್ಸಾದ ಅಜ್ಜಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿದ್ಧರಾಜು, ಅಶೋಕ ಸೇರಿ ಮೂವರು ಬಂಧಿತ ಆರೋಪಿಗಳು. ಕಮಲಮ್ಮ ಕೊಲೆಯಾದ ದುರ್ದೈವಿ.
ಚಿನ್ನಕ್ಕಾಗಿ ಅಜ್ಜಿಯ ಕೊಲೆ
ಮಹಾಲಕ್ಷ್ಮಿ ಲೇಔಟ್‌ನ ಪೋಸ್ಟ್ ಆಫೀಸ್ ಹತ್ತಿರದ ಮನೆಯಲ್ಲಿ 82 ವರ್ಷದ ಅಜ್ಜಿಯೊಬ್ಬರು ನೆಲೆಸಿದ್ದರು. ಅವರ ಹೆಸರು ಕಮಲಮ್ಮ. ಇವರ ಪತಿ ಕಳೆದ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ನಗರದಲ್ಲಿ ಬೇರೆಡೆ ನೆಲೆಸಿದ್ದರು. ಹೀಗಾಗಿ, ಮನೆಯಲ್ಲಿ ಅಜ್ಜಿ ಒಬ್ಬರೇ ಒಂಟಿಯಾಗಿ ವಾಸಿಸುತ್ತಿದ್ದರು.
ಮೇ 27ರಂದು ಸಂಜೆ ಏಳು ಗಂಟೆ ಸುಮಾರಿಗೆ ನೆರೆಮನೆಯವರು ಅಜ್ಜಿಯನ್ನು ಮಾತನಾಡಿಸಲು ಬಂದಾಗ ಬಾಗಿಲು ತೆರೆದಿರುವುದನ್ನು ಕಂಡು ಮನೆ ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ, ಅಜ್ಜಿಯ ಕೈ-ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಲಾಗಿತ್ತು. ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ನೆರೆಹೊರೆಯವರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಆರೋಪಿಗಳ ಹೆಡೆಮುರಿ ಕಟ್ಟಿದ್ದ ಪೊಲೀಸರು
ಅಜ್ಜಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ ಎಂಬುದನ್ನು ಅರಿತ ಆರೋಪಿಗಳು ಅಜ್ಜಿಯನ್ನು ಹತ್ಯೆಗೈದು, ಮನೆಯಲ್ಲಿರುವ ಚಿನ್ನಾಭರಣ ದೋಚಿದ್ದರು.
ಆರೋಪಿ ಸಿದ್ದರಾಜು ಪ್ಲಂಬರ್ ಕೆಲಸ ಮಾಡುತ್ತಿದ್ದನು. ಕಳೆದ ಮೂರು ತಿಂಗಳ ಹಿಂದೆ ಅಜ್ಜಿಯ ಮನೆಯಲ್ಲಿ ಪ್ಲಂಬರ್ ಕೆಲಸ ಮಾಡಿದ್ದನು. ಅಜ್ಜಿ ಮನೆಯಲ್ಲಿ ಒಬ್ಬಳೇ ಇರುವುದಾಗಿ ಹಾಗೂ ಅವರ ಬಳಿ ಸಾಕಷ್ಟು ಬಂಗಾರವಿದೆ ಎಂಬುದನ್ನು ಅರಿತ ಆತ ಈ ಬಗ್ಗೆ ತನ್ನ ಸ್ನೇಹಿತ ಅಶೋಕ್‌ಗೆ ತಿಳಿಸಿ, ಬಂಗಾರವನ್ನು ದೋಚಲು ಇಬ್ಬರು ಉಪಾಯ ಹೂಡಿದ್ದರು.
ಕೊಲೆ ನಡೆದ ದಿನ ಅಜ್ಜಿಯ ಮನೆಗೆ ಇಬ್ಬರು ಆರೋಪಿಗಳು ಎರಡು ಬಾರಿ ತೆರಳಿದ್ದಾರೆ. ಮೊದಲು ಸಂಜೆ ನಾಲ್ಕು ಗಂಟೆಗೆ ಮನೆ ಬಳಿ ತೆರಳಿ, ಖಾಲಿ ಇರುವ ಮನೆಯನ್ನೂ ಬಾಡಿಗೆ ಕೊಡಿ ಅಲ್ಲಿ ಬಿಸ್ಕಟ್ ಗೋಡನ್ ಮಾಡುತ್ತೇವೆ ಎಂದು ಕೇಳಿದ್ದಾರೆ. ಈ ವೇಳೆ, ಅಜ್ಜಿ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿ ಬಾಗಿಲು ತೆಗೆದಿಲ್ಲ. ಬಳಿಕ ಸಂಜೆ ಆರು ಗಂಟೆಗೆ ಮತ್ತೆ ಮನೆಯ ಬಳಿ ಹೋಗಿದ್ದಾರೆ. ಈ ವೇಳೆ ಅಜ್ಜಿ ಈ ಹಿಂದೆ ಬಂದಿದ್ದವರೇ ಎಂದು ಬಾಗಿಲು ತೆಗೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಲಾಲ್‌ಬಾಗ್ ಬಳಿ ಸರಣಿ ಅಪಘಾತ
ಬಾಗಿಲು ತೆಗೆಯುತಿದ್ದಂತೆ ಆರೋಪಿಗಳು ಅಜ್ಜಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಕೊಲೆಯಾದ ಅಜ್ಜಿಯ ಮನೆಯ ಸುತ್ತಮುತ್ತಲ ನಿವಾಸಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆಯನ್ನು ತೀವ್ರಗೊಳಿಸಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿ ಸೆರೆಗೆ ಬಲೆ ಬಿಸಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆರೋಪಿಗಳು ಕೊಲೆ ಮಾಡಿ ಮೈಸೂರಿನಲ್ಲಿ ತಲೆಮರಿಸಿಕೊಂಡಿರುವ ಬಗ್ಗೆ ಮಾಹಿತಿ ಕಲೆಹಾಕಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.