ಹಿಂದುತ್ವದ ಅಮಲಿನಲ್ಲಿರುವ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಪ್ರವಾದಿ ಮೊಹಮದ್ ಬಗ್ಗೆ ಅವಹೇಳನಾಕಾರಿ ಕೇಳಿ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದ ರಾಮಗಿರಿ ಮಹಾರಾಜ್, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ರಾಷ್ಟ್ರಗೀತೆ ಮತ್ತು ಕವಿ ರವೀಂದ್ರನಾಥ ಠಾಗೋರ್ ಅವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಾಮಗಿರಿ ಮಹಾರಾಜ್, “ಜನ, ಗಣ, ಮನ ಬದಲು ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕು. ಭವಿಷ್ಯದಲ್ಲಿ ವಂದೇ ಮಾತರಂಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಹೋರಾಟ ಮಾಡಬೇಕು” ಎಂದು ಹೇಳಿದ್ದಾರೆ.
“ನಾವು ರಾಷ್ಟ್ರಗೀತೆಯನ್ನು ಕೇಳುತ್ತೇವೆ. ಆದರೆ, ನಮ್ಮ ರಾಷ್ಟ್ರಗೀತೆಯ ಇತಿಹಾಸ ಎಷ್ಟು ಜನರಿಗೆ ತಿಳಿದಿದೆ ಎಂಬುದು ಗೊತ್ತಿಲ್ಲ. ಆದರೆ ಇಂದು ನಾನು ಸತ್ಯ ಹೇಳುತ್ತಿದ್ದೇನೆ, ರವೀಂದ್ರನಾಥ ಠಾಗೋರ್ ಅವರು 1911ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಜ್ ವಿ ಅವರನ್ನು ಬೆಂಬಲಿಸಿ ಈ ಹಾಡನ್ನು ಹಾಡಿದ್ದರು. ಅಂದು ಭಾರತವು ಸ್ವತಂತ್ರ ರಾಷ್ಟ್ರವಾಗಿರಲಿಲ್ಲ” ಎಂದು ಠಾಗೋರ್ ಅವರನ್ನು ನಿಂದಿಸಿ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಜಾರ್ಜ್ ವಿ ಯಾರು? ಆತ ಬ್ರಿಟಿಷ್ ದೊರೆ. ಆತ ಭಾರತೀಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಆತನನ್ನು ಬೆಂಬಲಿಸಿ ಹಾಡಿದ್ದ ‘ಜನ, ಗಣ, ಮನ’ ಭಾರತದ ಜನರಿಗಾಗಿ ಬರೆದದ್ದಲ್ಲ. ಆದ್ದರಿಂದ, ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯಾಗಬೇಕು. ಅದಕ್ಕಾಗಿ, ನಾವು ಹೋರಾಟ ಮಾಡಬೇಕು” ಎಂದು ಹೇಳಿದ್ದು, ವಿವಾದ ಸೃಷ್ಟಿಸಿದ್ದಾರೆ.
ಅಂದಹಾಗೆ, ‘ಜನ ಗಣ ಮನ’ ಗೀತೆಯನ್ನು ರವೀಂದ್ರನಾಥ ಠಾಗೋರ್ ಬರೆದದ್ದು 1911ರ ಡಿಸೆಂಬರ್ 11ರಂದು. ಈ ಗೀತೆಗೆ ಅವರು ಇಟ್ಟಿದ್ದ ಹೆಸರು ‘ಭಾರತೊ ಭಾಗ್ಯೊ ಬಿಧಾತ’. ಈ ಗೀತೆಯನ್ನು ಠಾಗೋರರು ಮೊದಲು ಹಾಡಿದ್ದು, 1911ರ ಡಿಸೆಂಬರ್ 27ರಂದು ಕೋಲ್ಕತಾದಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ. ಈ ಗೀತೆಗೆ ಸಮ್ಮೇಳನದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆ ನಂತರ, 1919ರ ಫೆಬ್ರವರಿ 28ರಂದು ಠಾಗೋರ್ ಅವರು ಬೆಸೆಂಟ್ ಥಿಯೊಸೊಫಿಕಲ್ ಕಾಲೇಜಿನಲ್ಲಿ ಹಾಡಿದ್ದರು. ಈ ಹಾಡು ಹಲವಾರು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿತ್ತು. ಭಾರತ ಸ್ವಾತಂತ್ರ್ಯಗೊಂಡ ನಂತರ, ಈ ಗೀತೆಯನ್ನು ಭಾರತದ ಸಂವಿಧಾನ ರಚನಾಸಭೆಯು 1950 ಜನವರಿ 24ರಂದು ರಾಷ್ಟ್ರಗೀತೆಯೆಂದು ಘೋಷಿಸಿತು.