''ನಮ್ಮ ಮಗಳು ಬಾಣಂತನಕ್ಕೆ ಮನೆಗೆ ಬಂದಿದ್ಲು, ಆಕೆಯ ಆರೈಕೆ ಹಾಗೂ ಆಸ್ಪತ್ರೆಗೆ ತೋರಿಸುವ ಸಲುವಾಗಿ 3 ತಿಂಗಳ ಕಂತು ಬಾಕಿಯಿತ್ತು. ಆಕೆಗೆ ಹೆರಿಗೆಯಾಗಿ, 45 ದಿನಗಳ ಆಕೆಯ ಹಸುಗೂಸು ಇದೆ. ಮಗು-ಬಾಣಂತಿ ಬೆಚ್ಚಗಿರಬೇಕಾಗಿದೆ. ಇಂತಹ ಸಮಯದಲ್ಲಿ ನಮ್ಮ ಮನೆಗೆ ಫೈನಾನ್ಸಿನವರು ಪೊಲೀಸರನ್ನು ಕರೆದುಕೊಂಡು ಬಂದು, ನಮ್ಮ ಏಕೈಕ ಆಶ್ರಯವಾಗಿದ್ದ ಮನೆಯನ್ನು ಸೀಜ಼್ ಮಾಡಿದ್ದಾರೆ. ಹೊರಹಾಕಿದ್ದಾರೆ. ಚಳಿಯಲ್ಲಿ ನಡುಗುತ್ತಿದ್ದೇವೆ...''
ಫೈನಾನ್ಸ್ ಕಂಪನಿಯೊಂದು ನಡುರಾತ್ರಿ ಎನ್ನುವುದನ್ನೂ ನೋಡದೆ ಬಾಣಂತಿ ಸೇರಿದಂತೆ ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದ್ದು, ಕಂಪೆನಿಯ ಕೃತ್ಯಕ್ಕೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಚೆನ್ನೈ ಮೂಲದ ‘ಇಕ್ವಿಟಾಸ್ ಸ್ಮಾಲ್ ಫೈನಾನ್ಸ್’ ಕಂಪೆನಿಯಲ್ಲಿ ಎರಡು ವರ್ಷದ ಹಿಂದೆ ರೈತ ಶಂಕ್ರಪ್ಪ ಗದ್ದಾಡಿ ಹೈನುಗಾರಿಕೆ ಮಾಡಲು ₹5 ಲಕ್ಷ ಸಾಲ ಪಡೆದಿದ್ದರು. ಇದೀಗ ಸಾಲ ಮರುಪಾವತಿಸಿಲ್ಲವೆಂದು ಮನೆಯನ್ನು ಸೀಜ಼್ ಮಾಡಿದ್ದಾರೆ. ಶಂಕ್ರಪ್ಪನ ಮಗಳು ಬಾಣಂತಿ ಸಂಗೀತಾ ಅವರ ಮನವಿಗೂ ಸ್ಪಂದಿಸದ ಫೈನಾನ್ಸ್ ಸಿಬ್ಬಂದಿ ತೀರಾ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಕಂಪೆನಿಯ ಹೃದಯಹೀನ ಕೃತ್ಯಕ್ಕೆ ಇಡೀ ಕುಟುಂಬ ಕೊರೆಯುವ ಚಳಿಯಲ್ಲಿ ಮನೆಯಿಂದ ಹೊರಗೇ ಇದ್ದು, ರಾತ್ರಿ ಕಳೆದಿದೆ. ಬಾಣಂತಿ ಮಗುವಿಗೆ ಹಾಲುಣಿಸಲಾಗದೆ ಕಣ್ಣೀರು ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಎತ್ತಿನ ಗಾಡಿಯ ಚಕ್ರದಲ್ಲಿ ಸಿಲುಕಿ ಮಹಿಳೆ ಸಾವು
ರೈತ ಶಂಕ್ರಪ್ಪ ಮಾತನಾಡಿ, “ಈಗಾಗಲೇ ತಿಂಗಳಿಗೆ 14,390ರಂತೆ 37 ಕಂತುಗಳ ಮೂಲಕ 3 ಲಕ್ಷದ 16 ಸಾವಿರ ಸಾಲ ತೀರಿಸಲಾಗಿದೆ. ಮಿಕ್ಕ ಸಾಲ ಮರುಪಾವತಿಸಲು ಒಂದು ತಿಂಗಳು ಕಾಲಾವಕಾಶ ಕೇಳಿದರೂ ಫೈನಾನ್ಸ್‌ನವರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಇದೇ ಸಮಯದಲ್ಲಿ ನಮ್ಮ ಮಗಳು ಬಾಣಂತನಕ್ಕೆ ಮನೆಗೆ ಬಂದಿದ್ದಾಳೆ. ಆಕೆಯ ಆರೈಕೆ ಹಾಗೂ ಆಸ್ಪತ್ರೆಗೆ ತೋರಿಸುವ ಸಲುವಾಗಿ 3 ತಿಂಗಳ ಕಂತು ಬಾಕಿ ಉಳಿದಿತ್ತು. ಈಗ ಆಕೆಗೆ ಹೆರಿಗೆಯಾಗಿ, 45 ದಿನಗಳ ಆಕೆಯ ಹಸುಗೂಸು ಇದೆ. ಈ ಸಮಯದಲ್ಲಿ ಮಗು ಮತ್ತು ಬಾಣಂತಿ ಬೆಚ್ಚಗಿರಬೇಕಾಗಿದೆ. ಇಂತಹ ಸಮಯದಲ್ಲಿ ನಮ್ಮ ಮನೆಗೆ ಫೈನಾನ್ಸಿನವರು ಪೊಲೀಸರನ್ನು ಕರೆದುಕೊಂಡು ಬಂದು, ನಮ್ಮ ಏಕೈಕ ಆಶ್ರಯವಾಗಿದ್ದ ಮನೆಯನ್ನು ಸೀಜ಼್ ಮಾಡಿದ್ದಾರೆ. ಈಗ ನಮಗೆ ಇರಲು ಸೂರು ಇಲ್ಲದಂತಾಗಿದೆ” ಎಂದು ಅಳಲು ತೋಡಿಕೊಂಡರು.

ಈ ಕುರಿತು ಸ್ಥಳೀಯ ರೈತ ಮುಖಂಡ ಮಂಜುನಾಥ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಫೈನಾನ್ಸ್ ಕಂಪನಿಯ ನಡೆಯನ್ನು ವಿರೋಧಿಸಿ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
