ಬಿಜೆಪಿ ಸರ್ಕಾರ ಅನುಮೋದಿಸಿದ್ದ ಕಾಮಗಾರಿಗಳನ್ನು ಕೈಗೊಳ್ಳದಂತೆ ಹಾಗೂ ಮುಗಿದಿರುವ ಕಾಮಗಾರಿಗಳ ಬಾಕಿ ಮೊತ್ತವನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರು 40% ಕಮಿಷನ್ ಪಡೆಯುತ್ತಿದ್ದಾರೆಂದು ಗುತ್ತಿಗೆದಾರರು ಆರೋಪಿಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಪೇ-ಸಿಎಂ’ ಅಭಿಯಾನವನ್ನೂ ನಡೆಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಕಮಿಷನ್ ದಂಧೆಗೆ ಕಡಿವಾಣ ಹಾಕಲು, ಹಿಂದಿನ ಸರ್ಕಾರದ ಎಲ್ಲ ಕಾಮಗಾರಿಗಳಿಗೂ ತಡೆಯೊಡ್ಡಿದೆ. ಆದರೆ, ಇದರಿಂದ ಗುತ್ತಿಗೆದಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಗುತ್ತಿಗೆದಾರರ ಸಂಘ ಹೇಳಿಕೊಂಡಿದೆ.
ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಗುತ್ತಿಗೆದಾರರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. “ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳ ಕಾಮಗಾರಿಗಳನ್ನು ತಡೆಹಿಡಿಯುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡದಂತೆಯೂ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರಿಂದ ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗುವುದರ ಜತೆಗೆ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ” ಎಂದು ಸಂಘವು ಹೇಳಿದೆ.
ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಕೆ ಎಚ್ ಮುನಿಯಪ್ಪ: ದಲಿತ ರಾಜಕಾರಣದ ಅನಪೇಕ್ಷಿತ ಮಾದರಿಯೇ?
“ಕಾಮಗಾರಿಗಳನ್ನು ನಿಲ್ಲಿಸಿದರೆ ಗುಣಮಟ್ಟ ಕಾಪಾಡಿಕೊಳ್ಳಲು ಅಸಾಧ್ಯವಾಗುತ್ತದೆ. ಅಲ್ಲದೇ, ರಾಜ್ಯದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತದೆ. ಕಾನೂನುಬದ್ಧವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಲು ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಬಿಡುಗಡೆ ಮಾಡಲು ಯಾವುದೇ ತಡೆಯೊಡ್ಡಬಾರದು” ಎಂದು ಮನವಿ ಮಾಡಿದೆ.
“ಸರ್ಕಾರ ಹೊರಡಿಸಿರುವ ಕಾಮಗಾರಿ ತಡೆಯ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಬೇಕು” ಎಂದು ನಿಯೋಗ ಮನವಿ ಮಾಡಿಕೊಂಡಿದೆ.