ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೃತರನ್ನು ನಿರ್ಮಲ (50) ಎಂದು ಗುರುತಿಸಲಾಗಿದೆ.
ಇನ್ನು ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಜನವರಿ 10 ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಉಚಿತ ಟಿಕೆಟ್ ವಿತರಣೆ ಹಿನ್ನೆಲೆ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದೆ.
ಟಿಟಿಡಿಯಿಂದ ಒಟ್ಟು 7 ಲಕ್ಷ ಟಿಕೆಟ್ ವಿತರಣೆ ಕಾರ್ಯ ನಡೆಯುತ್ತಿತ್ತು. ಉಚಿತ ಟಿಕೆಟ್ ಪಡೆಯುವ ಸಲುವಾಗಿ ಏಕಾಏಕಿ ಸಾಗರೋಪಾದಿಯಲ್ಲಿ ಭಕ್ತರು ಕೌಂಟರ್ ಬಳಿ ಸೇರಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ
ಗುರುವಾರದಿಂದ ತಿರುಪತಿಯ 9 ಕೇಂದ್ರಗಳಲ್ಲಿ 94 ಕೌಂಟರ್‌ಗಳ ಮೂಲಕ ವೈಕುಂಠ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ಆದರೆ, ಬುಧವಾರ ಸಂಜೆ ಟೋಕನ್‌ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ಭಕ್ತರೊಬ್ಬರು ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಖ್ಯ ಗೇಟ್ ತೆರೆಯಲಾಗಿತ್ತು. ಆಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆ ಗೇಟ್ ಮೂಲಕ ಧಾವಿಸಿದರು. ಇದರಿಂದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ನೆರವು ನೀಡುವಂತೆ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಮನವಿ
ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ತೀವ್ರ ದುಃಖ ತಂದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ತಿರುಪತಿಯಲ್ಲಿ ಸಂಭವಿಸಿದ ದುರಂತ ತೀವ್ರ ದುಃಖವನ್ನುಂಟುಮಾಡಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಿರುವ ಎಲ್ಲ ನೆರವು ನೀಡಿ’ ಎಂದು ಬರೆದುಕೊಂಡಿದ್ದಾರೆ.