ಕೋಲಾರದಿಂದ ಓಂ ಶಕ್ತಿಗೆ ತೆರಳಿದ್ದ ‘ಓ ಶಕ್ತಿ ಮಾಲಾಧಾರಿ’ಗಳಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತಕ್ಕೀಡಾಗಿದ್ದ ಐವರು ಮೃತಪಟ್ಟಿರುವ ಘಟನೆ ತಮಿಳುನಾಡಿನ ರಾಣಿಪೇಟೆ ಬಳಿ ನಡೆದಿದೆ.
ಮೃತರನ್ನು ಕೋಲಾರದ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ನಿವಾಸಿಗಳಾದ ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ರೈತ ಕೃಷ್ಣಪ್ಪ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎಂದು ಗುರುತಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ನಲ್ಲೂರು ಗ್ರಾಮದ ಸ್ವರಸ್ವತಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೋಲಾರದ ಮುಳಬಾಗಿಲು ತಾಲೂಕಿನ ನಲ್ಲೂರು ಗ್ರಾಮದ ಸುಮಾರು 50 ಮಂದಿ ಓಂ ಶಕ್ತಿ ಮಾಲಾಧಾರಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಪೂಜೆ ಮುಗಿಸಿ ತಮ್ಮೂರಿಗೆ ವಾಪಸ್ ಆಗುತ್ತಿದ್ದರು. ತರಕಾರಿ ತುಂಬಿದ ಕ್ಯಾಂಟರ್ ಸೀಗೆಹಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು. ಈ ವೇಳೆ, ರಾಣಿಪೇಟೆ ಬಳಿ ಬಸ್ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ.
ಬಸ್‌ನಲ್ಲಿದ್ದ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರನ್ನು ವೇಲೂರಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಣಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.